ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಹಾರ ನೀಡಲು ಕಬ್ಬು ಬೆಳೆಗಾರರ ಆಗ್ರಹ

Last Updated 23 ಸೆಪ್ಟೆಂಬರ್ 2011, 4:35 IST
ಅಕ್ಷರ ಗಾತ್ರ

ಹಳಿಯಾಳ: ಪ್ರಸಕ್ತ ಸಾಲಿನಲ್ಲಿ ಹುಲ್ಲಟ್ಟಿಯ ಪ್ಯಾರಿ ಸಕ್ಕರೆ ಕಾರ್ಖಾನೆಯವರು ಕಬ್ಬಿನ ದರ ನಿಗದಿ ಪಡಿಸಿ ಪ್ರಸಕ್ತ ಸಾಲಿನ ಕಂತಾಗಿ ರೂಪಾಯಿ ಮೂರು ಸಾವಿರವನ್ನು ನೀಡಬೇಕು. ಮುಂದೆ ಸರ್ಕಾರದ ದರ ನಿಗದಿಯಾದ ನಂತರ ಸರ್ಕಾರದ ದರದಂತೆ ಹಣವನ್ನು ಪಾವತಿಸಬೇಕೆಂದು ಕಬ್ಬು ಬೆಳೆಗಾರರ ಸಂಘ ಒತ್ತಾಯಿಸಿದೆ.

ಗುರುವಾರ ಮಧ್ಯಾಹ್ನ ಸ್ಥಳಿಯ ಪಟ್ಟಣ ಪಂಚಾಯಿತಿ ಸಭಾಭವನದಲ್ಲಿ ಸಹಾಯಕ ಆಯುಕ್ತ ಓಂ ಕಿಶನ್‌ಚಂದ್ ಅವರ ಅಧ್ಯಕ್ಷತೆಯಲ್ಲಿ ಕಬ್ಬು ಬೆಳೆಗಾರರ ಮತ್ತು ಹುಲ್ಲಟ್ಟಿಯ ಪ್ಯಾರಿ ಸಕ್ಕರೆ ಕಾರ್ಖಾನೆಯ ಅಧಿಕಾರಿಗಳ ಸಭೆಯಲ್ಲಿ ಕಬ್ಬು ಬೆಳೆಗಾರರು ಈ ಬೇಡಿಕೆ ಮಂಡಿಸಿದರು.

ಇ.ಎಮ್.ಡಿ ಪ್ಯಾರಿ ಸಕ್ಕರೆ ಕಾರ್ಖಾನೆ ಪ್ರಸಕ್ತ ಸಾಲಿನಲ್ಲಿ ನಷ್ಟ ದಲ್ಲಿರುವುದರಿಂದ ಕಬ್ಬು ಬೆಳೆಗಾರರು 2011-2012 ನೇ ಸಾಲಿನ ಕಬ್ಬಿನ ದರ ನಿಗದಿ ಪಡಿಸಿ ಸಾಲಿನ ಕಂತಾಗಿ ಮೂರು ಸಾವಿರ ರೂಪಾಯಿ ನೀಡಬೇಕೆಂದು ಕೋರಿದ್ದನ್ನು ತಮಗೆ ಪಾವತಿ ಮಾಡಲು ಆಗುವುದಿಲ್ಲ ಎಂದು ಸಕ್ಕರೆ ಕಾರ್ಖಾನೆಯ  ಮುಖ್ಯಸ್ಥ ಟಿ.ಕಣ್ಣನ್ ಹೇಳಿದರು.

ಎರಡನೇ ಕಂತಾಗಿ ರೂ. 700 ನೀಡಬೇಕು. 2010-11ನೇ ಸಾಲಿನ ಕಬ್ಬು ಲಾವಣಿ ಮಾಡಿದ ಜನರಿಗೆ ಸಹಾಯ ಧನ ನೀಡಬೇಕು, ಕಬ್ಬು ಕಟಾವು ಮಾಡಲು ತಾಲ್ಲೂಕಿನ ರೈತರಿಗೆ ಆದ್ಯತೆ ನೀಡಬೇಕು, ಕಬ್ಬು ಕಟಾವ್ ಮಾಡುವ ತಂಡವನ್ನು ಹಾಗೂ ವಾಹನವನ್ನು ಕಾರ್ಖಾನೆಯವರೇ ವ್ಯವಸ್ಥೆ ಮಾಡಬೇಕು.

ಕಬ್ಬು ನಾಟಿ ಮಾಡುವ ರೈತರಿಗೆ ಕಬ್ಬಿನ ಸಸಿಯನ್ನು ಉಚಿತವಾಗಿ ಪೂರೈಸಬೇಕು, ಗದ್ದೆಗಳಿಗೆ ಆಕಸ್ಮಿಕ ಬೆಂಕಿ ಬಿದ್ದು ಬೆಳೆ ನಾಶವಾದಲ್ಲಿ ಕೂಡಲೇ ಪರಿಹಾರ ನೀಡಬೇಕು. ಎಸ್.ಎ.ಪಿ ಕಾಯ್ದೆ ಜಾರಿಯಾಗಬೇಕು. ಆನೆಗಳ ಹಾವಳಿಯಿಂದ ಕಬ್ಬಿನ ಬೆಳೆ ಹಾಳಾಗಿ ಸೂಕ್ತ ಪರಿಹಾರ ನೀಡಬೇಕು ಎಂದು ಸಭೆಯಲ್ಲಿ ಕಬ್ಬು ಬೆಳೆಗಾರರ ಸಂಘದವರು ಬೇಡಿಕೆಯಿತ್ತರು.

ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿ ಕಬ್ಬು ಬೆಳೆಗಾರರ ಮನವಿಗೆ ಸ್ಪಂದಿಸಿ ಕಟಾವಿಗಾಗಿ ಈಗಾಗಲೇ ನಾಟಿ ಮತ್ತು ಕುಳೆ ಮಾಡಿದಂತಹ ಕಬ್ಬಿನ ದಿನಾಂಕವನ್ನು ಆಯಾ ಪಂಚಾಯತದಲ್ಲಿ ತಿಂಗಳವಾರು ಯಾದಿ ಫಲಕವನ್ನು ಅಂಟಿಸಲಾಗಿದೆ.
 
ಏನಾದರೂ ವ್ಯತ್ಯಾಸ ಕಂಡು ಬಂದಲ್ಲಿ ಕಾರ್ಖಾನೆಯ ಸಿಬ್ಬಂದಿಗೆ ತಿಳಿಸಿ ಸೂಕ್ತ ತಿದ್ದು ಪಡಿ ಮಾಡಲಾಗುವುದು. ಆಕಸ್ಮಿಕವಾಗಿ ಸುಟ್ಟ ಕಬ್ಬುಗಳನ್ನು 30 ಗಂಟೆಯೊಳಗಾಗಿ ಕಾರ್ಖಾನೆಗೆ ತೆಗೆದುಕೊಂಡು ಬನ್ನಿ. ಸರ್ಕಾರ ದರ ನಿಗದಿ ಪಡಿಸಿದ ನಂತರವೇ ತಾವು ದರದ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ ಎಂದರು.

ತಹಸೀಲ್ದಾರ ಅಜೀಜ ಆರ್. ದೇಸಾಯಿ.ಕಲಘಟಗಿ ತಹಸೀಲ್ದಾರ ವಿಜಯಕುಮಾರ ಹೊಸ್ಕೇರಿ, ಮುಂಡ ಗೋಡ ತಹಸೀಲ್ದಾರ ಎನ್.ವಿ. ಕಲ್ಲೂರಮಠ, ಪ್ಯಾರಿ ಸಕ್ಕರೆ ಕಾರ್ಖಾನೆಯ ಅಧಿಕಾರಿಯಾದ ಬಾಲಕೃಷ್ಣ ರೆಡ್ಡಿ, ಬಿ.ಬಿ.ಪಾಟೀಲ ಮತ್ತಿತರರ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

ಕಬ್ಬು ಬೆಳೆಗಾರರ ಮುಖಂಡರಾದ ಉಡಚಪ್ಪಾ ಬೊಬಾಟಿ,ಸುಭಾಷ ಪಾಟೀಲ, ಎಸ್.ಕೆ.ಗೌಡ, ಎಮ್.ವಿ. ಪಾಟೀಲ, ಅಶೋಕ ಮೇಟಿ, ಶಂಕರ ಕಾಜಗಾರ, ನಾಗೇಂದ್ರ ಜಿವೋಜಿ, ಆರ್.ಎಸ್.ಅರಶಿಣಗೇರಿ, ಅಪ್ಪಾರಾವ ಪೂಜಾರಿ, ಕಲಘಟಗಿಯ ನಿಜಗುಣ ಕಲಗೇರಿ, ಬಿ.ಸಿ.ಪಾಟೀಲ, ಮುಂಡಗೋಡದ ಸಾತು ಬನ್ಸೋಡೆ, ಬಿ.ಕೆ.ಪಾಟೀಲ, ವಿ.ಡಿ.ಆಲದಕಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT