ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರೀಕ್ಷೆ-ನಿರೀಕ್ಷೆ

Last Updated 6 ಮಾರ್ಚ್ 2011, 19:30 IST
ಅಕ್ಷರ ಗಾತ್ರ


ಪರೀಕ್ಷೆ ಎಂದ ಕೂಡಲೇ ಪ್ರತಿಯೊಬ್ಬರಿಗೂ ಒಂದು ರೀತಿಯ ಭಯ ಉಂಟಾಗುವುದು ಸಹಜ. ಆದರೆ ಸರಿಯಾದ ಅಧ್ಯಯನ, ಉತ್ತಮ ತಯಾರಿ ಹಾಗೂ ಆತ್ಮವಿಶ್ವಾಸವಿದ್ದರೆ ಯಾರೂ  ಭಯಪಡಬೇಕಾಗಿಲ್ಲ.  ಆರ್ಥಪೂರ್ಣ ಅಭ್ಯಾಸಕ್ಕೆ ಸಹನೆ, ಪ್ರಶಾಂತವಾದ ಮನಸ್ಸು ಓದುವ ಕಾತುರ ಹಾಗೂ ಓದಬೇಕೆನ್ನುವ ದಾಹ ಇರಬೇಕು, ಇಲ್ಲದಿದ್ದರೆ ಓದು ಪ್ರಯೋಜನವಾಗುವುದಿಲ್ಲ. ಇಲ್ಲಿ ಕೆಲವು  ಸಲಹೆಗಳನ್ನು ನೀಡಲಾಗಿದೆ.  ಇದನ್ನು ಅಳವಡಿಸಿಕೊಂಡರೆ ಕೆಲವೇ ದಿನಗಳಲ್ಲಿ ನಿಮ್ಮಲ್ಲಿ ಉತ್ತಮ ಬದಲಾವಣೆ ನಿರೀಕ್ಷಿಸಬಹುದು.

ಅಧ್ಯಯನ ಕ್ರಮ:
*ವೇಳಾಪಟ್ಟಿಯಂತೆ ಅಭ್ಯಾಸ
*ಕಷ್ಟದ ವಿಷಯಗಳಿಗೆ ಹೆಚ್ಚಿನ ಮಹತ್ವ ನೀಡಿ.
*ಓದಿದ್ದನ್ನು ಪದೇ ಪದೇ ಬರೆದು ತಪ್ಪುಗಳನ್ನು ನೀವೇ ತಿದ್ದಿಕೊಳ್ಳಿ.
*ಭಾಷೆ ಮತ್ತು ಸಮಾಜವನ್ನು ಓದುವಾಗ ಬರೆಯುವುದನ್ನು ಅಭ್ಯಾಸ ಮಾಡಿಕೊಳ್ಳಿ.
*ಬಲವಂತಕ್ಕೆ ಬೆಳಗಿನ ಜಾವ ಅಥವಾ ರಾತ್ರಿ ವೇಳೆಯಲ್ಲಿ ತೂಕಡಿಸಿಕೊಂಡು ಓದಬೇಡಿ.
*ಗಣಿತದ ಸಮಸ್ಯೆಗಳನ್ನು, ಚಿತ್ರಗಳನ್ನು, ನಕಾಶೆಗಳನ್ನು ರಾತ್ರಿ ಸಮಯದಲ್ಲಿ ಸ್ಲೇಟ್ ಅಥವಾ ಕಪ್ಪು ಹಲಗೆಯ ಮೇಲೆ ಬರೆದು ಅಭ್ಯಾಸ ಮಾಡಿ.
*ಓದಿದ್ದನ್ನು ನೆನಪು ಮಾಡಿಕೊಳ್ಳಿ. ಏಕಾಗ್ರತೆ ಹೆಚ್ಚಿಸಿಕೊಳ್ಳಿ.
*ಆತ್ಮ ಸ್ಥೈರ್ಯ ಇರಲಿ.
*ಪರೀಕ್ಷೆ ಹತ್ತಿರ ಬರುತ್ತಿದ್ದ ಹಾಗೆ ಅನಾವಶ್ಯಕವಾದ ವಿಷಯಗಳ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ.
*ಗುಂಪು ಚರ್ಚೆ ಮಾಡಿ.
ಪರೀಕ್ಷೆಗೆ ತಯಾರಾಗುವುದು:
*ಬಹುಮುಖ್ಯವಾದ ಪ್ರಶ್ನೆಗಳನ್ನು ಚೀಟಿಗಳಲ್ಲಿ ಬರೆದು ಲಾಟರಿ ಎತ್ತಿ ಬಂದ ಪ್ರಶ್ನೆಗಳಿಗೆ ನೋಡಿಕೊಳ್ಳದೇ ಉತ್ತರ ಬರೆಯುವುದನ್ನು ಅಭ್ಯಾಸ ಮಾಡಿ.
*ಯಾವ ಪ್ರಶ್ನೆ ಕೊಟ್ಟರೂ ಅದಕ್ಕೆ ಉತ್ತರ ಬರೆಯುತ್ತೇನೆ ಎಂಬ ಸದೃಢ ತೀರ್ಮಾನವಿರಲಿ.
*ದೈಹಿಕ ವ್ಯಾಯಾಮ, ಯೋಗ, ಕ್ರೀಡೆ, ಸಂಗೀತ, ಚಿತ್ರ ಬಿಡಿಸುವುದು ಮುಂತಾದ ಚಟುವಟಿಕೆಗಳಿಂದ ಏಕಾಗ್ರತೆ ಹೆಚ್ಚಿಸಿಕೊಂಡು ಮಾನಸಿಕ ಒತ್ತಡಗಳಿಂದ ಮುಕ್ತರಾಗಿ. 
*ಪೂರ್ವ ಸಿದ್ಧತಾ ಪರೀಕ್ಷೆಗಳನ್ನು ಮುಖ್ಯ ಪರೀಕ್ಷೆಗಳಂತೆಯೇ ಪರಿಗಣಿಸಿ ಸೀರಿಯಸ್ಸಾಗಿ ಪರೀಕ್ಷೆ ಬರೆಯಿರಿ ಹಾಗೂ ತಪ್ಪುಗಳನ್ನು ತಿದ್ದಿಕೊಳ್ಳಿ.
*ನಿಮಗೆ ಅರ್ಥವಾಗದಿರುವ ಪ್ರಶ್ನೆ ಅಥವಾ ಲೆಕ್ಕವನ್ನು ನಿಮ್ಮ ಸ್ನೇಹಿತರು ಅಥವಾ ಶಿಕ್ಷಕರನ್ನು ಕೇಳಿ ತಕ್ಷಣವೇ ಪರಿಹಾರ ಪಡೆಯಿರಿ.
*ನಿಮ್ಮ ಸಾಮರ್ಥ್ಯಗಳ ಬಗ್ಗೆ ವಿಶ್ವಾಸ ಇರಲಿ, ನ್ಯೂನತೆಗಳ ಬಗ್ಗೆ ಗಮನವಿರಲಿ.
*ಪರೀಕ್ಷೆ  ದಿನಗಳಲ್ಲಿ ಪ್ರತಿ ವಿಷಯಕ್ಕೂ  ಇರುವ ಸಾಮಗ್ರಿಗಳು ಅಂದರೆ ಪಠ್ಯ ಪುಸ್ತಕ, ನೋಟ್ಸ್, ಇತ್ಯಾದಿ ವಿಷಯಾವಾರು ಪ್ರತ್ಯೇಕವಾಗಿಟ್ಟುಕೊಂಡು ಆಯಾ ದಿನಗಳಲ್ಲಿ ಒಮ್ಮೆ ಗ್ಲ್ಯಾನ್ಸ್ ಮಾಡಿ.
 ಪರೀಕ್ಷೆ ಎದುರಿಸುವುದು ಹೇಗೆ?
*ಪರೀಕ್ಷೆಗೆ ತಯಾರಾಗುವುದು ಎಷ್ಟು ಮುಖ್ಯವೋ ಪರೀಕ್ಷೆ ಬರೆಯುವುದು ಅಷ್ಟೇ ಮುಖ್ಯ.  ಉತ್ತಮ ಅಂಕಗಳನ್ನು ಪಡೆಯುವುದು ಇನ್ನೂ ಮುಖ್ಯ
*ಪರೀಕ್ಷೆ ನಾಳೆ ಪ್ರಾರಂಭವಾಗುತ್ತೆ ಅಂದರೆ, ಇಂದು ರಾತ್ರಿ 10 ಗಂಟೆ ಒಳಗೆ ಅಭ್ಯಾಸ ಹಾಳೆಗಳನ್ನು ಗ್ಲ್ಯಾನ್ಸ್ ಮಾಡಿ.
*ಚೆನ್ನಾಗಿ ಬರೆಯುವ ಎರಡು ಪೆನ್ನು, ಪೆನ್ಸಿಲ್ಲು, ರಬ್ಬರು, ಜಾಮಿಟ್ರಿ ಬಾಕ್ಸ್, ಒಂದು ನೀರಿನ ಬಾಟಲ್ಲು ಹಾಗೂ ಪ್ರವೇಶ ಪತ್ರ ತಯಾರು ಮಾಡಿಕೊಳ್ಳಿ.
*ಅರ್ಧ ಗಂಟೆ ಮುಂಚಿತವಾಗಿ ಪರೀಕ್ಷಾ ಕೇಂದ್ರಕ್ಕೆ ಹೋಗಿ.
ಪರೀಕ್ಷಾ ಕೊಠಡಿಯಲ್ಲಿ:
*ಪರೀಕ್ಷಾ ಕೊಠಡಿಯನ್ನು ವಿಶ್ವಾಸದಿಂದ ಪ್ರವೇಶಿಸಿ.
*ಪ್ರಶ್ನೆ ಪತ್ರಿಕೆಯನ್ನು ಒಂದು ಸಾರಿ ಓದಿಕೊಂಡು ಓದುವಾಗ ಚೆನ್ನಾಗಿ ಉತ್ತರ ಗೊತ್ತಿರುವ ಪ್ರಶ್ನೆಗಳು, ಅರ್ಧ ಉತ್ತರ ಬರುವ ಪ್ರಶ್ನೆಗಳು ಹಾಗೂ ಉತ್ತರ ಗೊತ್ತಿರದ ಪ್ರಶ್ನೆಗಳು ಯಾವುವು ಎಂಬುದನ್ನು 3 ಗುಂಪುಗಳನ್ನಾಗಿ ಗುರ್ತಿಸಿಕೊಳ್ಳಿ.
*ಯಾವ ಪ್ರಶ್ನೆಗಳನ್ನು ಬಿಡದೇ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ.
*ಬರವಣಿಗೆ ಉತ್ತಮವಾಗಿರಲಿ, ಹಾಗೆಯೇ ಸಮಯದ ಕಡೆ ಗಮನವಿರಲಿ.
*ಮುಖ್ಯವಾದ ಉತ್ತರದ ಅಂಶದ ಕೆಳಗೆ ಉತ್ತರ ಬರೆಯುವಾಗ ಗೆರೆ ಹಾಕಿ.
*ಒಂದು ಪರೀಕ್ಷೆ ಮುಗಿದ ಕೂಡಲೇ ಸಮಯ ಹಾಳು ಮಾಡದೇ ಕೂಡಲೇ ಮನೆಗೆ ಬಂದು ಮುಗಿದ ವಿಷಯದ ಬಗ್ಗೆ ತಲೆ ಕೆಡಿಸಿಕೊಳ್ಳದೇ ಮುಂದಿನ ವಿಷಯನ್ನು ಓದಲು ಪ್ರಾರಂಭಿಸಿ.

ಪೋಷಕರಿಗೆ/ಶಿಕ್ಷಕರಿಗೆ ಸಲಹೆಗಳು
* ಪರೀಕ್ಷಾ ಸಮಯದಲ್ಲಿ ಯಾವುದೇ ವಿದ್ಯಾರ್ಥಿಗಳಲ್ಲಿ ಮಾನಸಿಕ ಒತ್ತಡ ಉಂಟಾಗುತ್ತದೆ.  ಇದನ್ನು ನಿರ್ವಹಿಸಲು ಅವರೊಬ್ಬರಿಂದಲೇ ಕೆಲವೊಮ್ಮೆ ಸಾಧ್ಯವಾಗುವುದಿಲ್ಲ.  ಆಗ ಮನೆಯಲ್ಲಿ ಪೋಷಕರು, ಶಾಲೆಯಲ್ಲಿ ಶಿಕ್ಷಕರು, ಪ್ರೀತಿಯಿಂದ ಅವರಿಗೆ ಮಾರ್ಗದರ್ಶನ ಮಾಡಬೇಕಾದ ಅವಶ್ಯಕತೆ ಇರುತ್ತದೆ.

ಪೋಷಕರ ಪಾತ್ರ:
* ನಿಮ್ಮ ಮಗುವಿಗೆ ಉತ್ತೇಜನ ನೀಡಿ ಓದಲು ಪ್ರಚೋದಿಸಿ.
* ಮನೆಯಲ್ಲಿ ಶಾಂತ ವಾತಾವರಣವನ್ನು ಉಂಟು ಮಾಡಿ.
* ನಿಮ್ಮ ಮಗುವಿನೊಂದಿಗೆ ಸ್ನೇಹದೊಂದಿಗೆ ವರ್ತಿಸಿ.
* ಪರೀಕ್ಷೆಗೆ ಇನ್ನೂ ಸಮಯವಿರುವಾಗಲೇ ಒಂದು ವೇಳಾಪಟ್ಟಿಯನ್ನು ತಯಾರಿಸಿಕೊಂಡು ಅಧ್ಯಯನ ಮಾಡಲು ಉತ್ತೇಜಿಸಿ.
* ಯಾವಾಗಲಾದರೂ ನಿಮ್ಮ ಮಗು ಓದಲು ಆಸಕ್ತಿ ತೋರಿಸದಿದ್ದಲ್ಲಿ ಬಯ್ಯಬೇಡಿ. ದೈಹಿಕವಾಗಿ ದಂಡಿಸಬೇಡಿ.
* ನಿಮ್ಮ ಕನಸುಗಳನ್ನು ಮಕ್ಕಳ ಮೇಲೆ ಹೇರಬೇಡಿ.  ಅವರಿಗೆ ಕನಸುಗಳನ್ನು ಕಟ್ಟಿಕೊಳ್ಳಲು ಪ್ರೋತ್ಸಾಹಿಸಿ. ಯಶಸ್ವಿಗಳಾದವರ ಉದಾಹರಣೆಗಳನ್ನು ಕೊಡಿ.
* ಪ್ರತಿಯೊಂದು ಮಗುವೂ ವಿಭಿನ್ನ, ಯಾರೊಂದಿಗೂ ಹೋಲಿಸಬೇಡಿ.
* ಶಾಲೆಯಲ್ಲಿ ಶಿಕ್ಷಕರ ಸಂಪರ್ಕವನ್ನಿಟ್ಟುಕೊಂಡು, ಮಗುವಿನ ಅಗತ್ಯತೆಗಳನ್ನು ಪೂರೈಸಲು ಪ್ರಯತ್ನಿಸಿ.

ಶಿಕ್ಷಕರ ಪಾತ್ರ:
* ಮಕ್ಕಳು ಸಂದೇಹಗಳನ್ನು ನಿವಾರಣೆ ಮಾಡಿಕೊಳ್ಳಲು ಬಂದಾಗ ಇಷ್ಟು ದಿವಸ ಏನು ಮಾಡುತ್ತಿದ್ದೆ? ಎಂದು ಪ್ರಶ್ನಿಸಬೇಡಿ.ಇನ್ನೂ ಒಂದು ನಾಲ್ಕು ದಿನ ಬಿಟ್ಟು ಬಂದಿದ್ದರೆ ಚೆನ್ನಾಗಿತ್ತು ಎಂದು ಮೂದಲಿಸಬೇಡಿ.ಸೌಹಾರ್ದಯುತವಾಗಿ ಮಾತನಾಡಿಸಿ.  ಏನನ್ನು ಬೇಕಾದರೂ ಹೇಳಿಕೊಡುತ್ತೇನೆ ಎಂದು ಧೈರ್ಯ ತುಂಬಿ.
* ವಿಷಯವನ್ನು ಸುಲಭವಾಗಿ ಆರ್ಥ ಮಾಡಿ ಕೊಳ್ಳುವುದು ಹೇಗೆ ಎಂದು ಸೂಚಿಸಿ.
* ಯಾವಾಗಲೂ ಸಮಸ್ಯೆ ಉಂಟಾದಾಗ ಪುನ: ಬನ್ನಿ ಎಂದು ತಿಳಿಸಿ.
* ಬೇರೆ ಯಾವ ವಿದ್ಯಾರ್ಥಿಯೊಂದಿಗೂ ಅವರನ್ನು ಹೋಲಿಸಬೇಡಿ.
* ನಿನಗೆ ಪರೀಕ್ಷೆಯಲ್ಲಿ ಉತ್ತರಿಸಲು ಸಾಧ್ಯ ಎಂದು ಧೈರ್ಯ ತುಂಬಿ.
* ಯಾವುದಾದರೂ ವಿಷಯದಲ್ಲಿ ಪೂರ್ಣವಾಗಿ ಉತ್ತರಿಸಲು ಸಾಧ್ಯವಾಗದಿದ್ದಲ್ಲಿ ಚಿಂತಿಸಬೇಡಿ ಎಂದು ಹೇಳಿ.
* ಹಳೆಯ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳು ಇದ್ದಲ್ಲಿ ಅದನ್ನು ತೋರಿಸಿ, ಉತ್ತರಿಸುವುದು ಹೇಗೆ ಎಂದು ವಿವರಿಸಿ.
* ಉತ್ತರ ಬರೆಯುವಾಗ ಯಾವ ಯಾವ ತಪ್ಪುಗಳನ್ನು ವಿದ್ಯಾರ್ಥಿಗಳು ಮಾಡುತ್ತಾರೆ ಎಂಬುದನ್ನು ಗಮನಿಸಲು ತಿಳಿಸಿ.

ಒಟ್ಟಿನಲ್ಲಿ ಪರೀಕ್ಷೆ-ಒಂದು ನಿರೀಕ್ಷೆ.  ನಿರೀಕ್ಷೆ ಹುಸಿಯಾಗದೆ-ಹಸಿಯಾಗಿರುವಂತೆ ಮಾಡಿ ಫಲಕಾರಿಯಾಗಬೇಕಾದರೆ ವಿದ್ಯಾರ್ಥಿಯೊಬ್ಬರೇ ಏನನ್ನೂ ಮಾಡಲು ಸಾಧ್ಯವಿಲ್ಲ.  ತಂದೆ-ತಾಯಿ, ಸ್ನೇಹಿತರು, ಮನೆ ಮಂದಿ, ಶಾಲೆ ಹಾಗೂ ಶಿಕ್ಷಕರೆಲ್ಲರೂ ಸೇರಿ ವಿದ್ಯಾರ್ಥಿಗಳನ್ನು (ನಮ್ಮ ಮಕ್ಕಳನ್ನು) ಪರೀಕ್ಷೆಗೆ ತಯಾರಾಗುವಂತೆ ನೋಡಿಕೊಳ್ಳಬೇಕಾದದ್ದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.

ಪರೀಕ್ಷೆಗೆ ಉತ್ತರಿಸಲು ಸನ್ನದ್ಧರಾಗಿರುವ ಎಲ್ಲಾ ವಿದ್ಯಾರ್ಥಿಗಳಿಗೂ ಶುಭವಾಗಲಿ.
       
    
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT