ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಶ್ಚಿಮ ಘಟ್ಟ ಕಾರ್ಯಪಡೆಯಿಂದ ಸರ್ಕಾರಕ್ಕೆ ಶಿಫಾರಸು ಸಲ್ಲಿಕೆ

Last Updated 22 ಫೆಬ್ರುವರಿ 2011, 16:35 IST
ಅಕ್ಷರ ಗಾತ್ರ

ಬೆಂಗಳೂರು: ‘ಮಲೆನಾಡಿನ ಸಮಗ್ರ ಮತ್ತು ಸುಸ್ಥಿರ ಅಭಿವೃದ್ಧಿ ಕುರಿತು’ ಪಶ್ಚಿಮ ಘಟ್ಟ ಕಾರ್ಯಪಡೆ ಸರ್ಕಾರಕ್ಕೆ ಮಂಗಳವಾರ ತನ್ನ ಶಿಫಾರಸುಗಳನ್ನು ಸಲ್ಲಿಸಿತು.ಕಾರ್ಯಪಡೆಯ ಅಧ್ಯಕ್ಷ ಅನಂತ ಹೆಗಡೆ ಆಶೀಸರ ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಶಿಫಾರಸುಗಳ ಪಟ್ಟಿಯನ್ನು ಹಸ್ತಾಂತರಿಸಿದರು.

ಮಲೆನಾಡಿನ ಸುಸ್ಥಿರ ಅಭಿವೃದ್ಧಿ ಕುರಿತು ಶಿವಮೊಗ್ಗ ಜಿಲ್ಲೆ ಸಾಗರದಲ್ಲಿ ಇದೇ 12ರಂದು ನಡೆದ ಸಮ್ಮೇಳನದಲ್ಲಿ ಚರ್ಚೆಯಾದ ವಿಷಯಗಳ ಆಧಾರದಲ್ಲಿ ಈ ಶಿಫಾರಸುಗಳನ್ನು ಮಾಡಲಾಗಿದೆ ಎಂದು ಆಶೀಸರ ಅವರು ತಿಳಿಸಿದರು.ಪ್ರಮುಖ ಶಿಫಾರಸುಗಳು: ಮಲೆನಾಡು ಸೂಕ್ಷ್ಮ ಪರಿಸರ ಹೊಂದಿರುವ ಕಾರಣ ಆ ಪ್ರದೇಶದಲ್ಲಿ ಸಹನಶೀಲ ಅಭಿವೃದ್ಧಿ ಯೋಜನೆಗಳನ್ನು ರೂಪಿಸಬೇಕು. ಸಮಗ್ರ ಭೂ ಬಳಕೆ ನೀತಿ ಜಾರಿಗೆ ತರಬೇಕು. ಮಲೆನಾಡಿಗೆ ಸೂಕ್ತವಾದ ಸಂರಕ್ಷಣೆ ಮತ್ತು ಅಭಿವೃದ್ಧಿ ಕಾರ್ಯಕ್ರಮಗಳನ್ನು ಈ ನೀತಿಯ ಆಧಾರದ ಮೇಲೆ ರೂಪಿಸಬೇಕು ಎಂದು ಶಿಫಾರಸು ಮಾಡಲಾಗಿದೆ.

‘ಬೃಹತ್ ಗಣಿಗಾರಿಕೆ ನಿಷೇಧಿಸಿ’: ಪಶ್ಚಿಮ ಘಟ್ಟದಲ್ಲಿ ಬೃಹತ್ ಗಣಿಗಾರಿಕೆ ನಿಷೇಧಿಸಿ ಆದೇಶ ಹೊರಡಿಸಬೇಕು.ಮಲೆನಾಡಿನ ಅರಣ್ಯ ಅತಿಕ್ರಮಣವನ್ನು ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು, ಮಲೆನಾಡಿನ ವನವಾಸಿ ಹಳ್ಳಿಗಳಲ್ಲಿ ಶಿಕ್ಷಣ ಸೌಲಭ್ಯ ನೀಡಲು ಪ್ರತ್ಯೇಕ ಯೋಜನೆ ರೂಪಿಸಬೇಕು ಎಂದು ಸ್ಪಷ್ಟವಾಗಿ ಆಗ್ರಹಿಸಲಾಗಿದೆ.

ತೋಟಗಾರಿಕೆ, ಹೈನುಗಾರಿಕೆ, ಪರಿಸರ ಪ್ರವಾಸೋದ್ಯಮಗಳನ್ನು ಆದ್ಯತಾ ಕ್ಷೇತ್ರಗಳೆಂದು ಪರಿಗಣಿಸಿ ಅವುಗಳ ಪ್ರೋತ್ಸಾಹಕ್ಕೆ ಕಾರ್ಯಕ್ರಮ ರೂಪಿಸಬೇಕು. ಹಳ್ಳಿಯ ಯುವಕರಿಗೆ ರೈತ ಸಂಪರ್ಕ ಕೇಂದ್ರ ಮತ್ತು ರುಡ್‌ಸೆಟ್ ಸಂಸ್ಥೆಗಳ ಸಹಾಯದೊಂದಿಗೆ ಕೃಷಿ ಮತ್ತು ಕೃಷಿ ಉತ್ಪನ್ನಗಳ ಗುಣವರ್ಧನೆ ಕುರಿತು ನಿರಂತರ ತರಬೇತಿ ನೀಡಬೇಕು ಎಂದು ಶಿಫಾರಸಿನಲ್ಲಿ ಹೇಳಲಾಗಿದೆ.

ಮಲೆನಾಡಿನ ಎಲ್ಲ ಹಳ್ಳಿಗಳಿಗೆ ಸೂಕ್ತ ಮತ್ತು ಸರ್ವಋತು ರಸ್ತೆ ಒದಗಿಸಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಲೆನಾಡಿನ ಜಲಮೂಲಗಳು, ನದಿಗಳ ಜಲಸಂವರ್ಧನೆಗೆ ನೀರಾವರಿ ಯೋಜನೆಗಳ ಶೇಕಡ 20ರಷ್ಟು ಹಣವನ್ನು ಮೀಸಲಿಡಬೇಕು ಎಂದು ಆಗ್ರಹಿಸಲಾಗಿದೆ.

ಜನಸಂಖ್ಯೆಯ ಆಧಾರದಲ್ಲಿ ಅನುದಾನ ನೀಡುವ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ನೀತಿಯಲ್ಲಿ ಮಲೆನಾಡು ಪ್ರದೇಶಕ್ಕೆ ನ್ಯಾಯ ಸಿಗುತ್ತಿಲ್ಲ ಎಂದು ಶಿಫಾರಸಿನಲ್ಲಿ ದೂರಲಾಗಿದ್ದು, ಅರಣ್ಯ ವಾಸಿಗಳು ಮತ್ತುಮಲೆನಾಡಿನ ಹಳ್ಳಿಗಳ ಅಭಿವೃದ್ಧಿಗೆ ವಿಶೇಷ ಅನುದಾನ ನೀಡಬೇಕು ಎಂದು ಕೋರಲಾಗಿದೆ.

ನಕ್ಸಲ್ ಪೀಡಿತ ಪ್ರದೇಶಗಳೂ ಸೇರಿದಂತೆ ಎಲ್ಲೆಡೆ ವನವಾಸಿಗಳನ್ನು ಅರಣ್ಯ ರಕ್ಷಣೆ ಮತ್ತು ಅಭಿವೃದ್ಧಿ ಯೋಜನೆಗಳಲ್ಲಿ ತೊಡಗಿಸಿಕೊಳ್ಳುವತ್ತ ಗಮನಹರಿಸಬೇಕು ಎಂದು ಶಿಫಾರಸು ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT