ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಯಿಂಟ್ ಪಟ್ಟಿಯಲ್ಲಿ ಖಾತೆ ತೆರೆಯುವುದೇ?

Last Updated 7 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಪರ್ತ್: ಉಭಯ ತಂಡಗಳ ಕಷ್ಟ ಒಂದೇ! ಪುಟಿದೇಳುವ ಚೆಂಡನ್ನು ಧೈರ್ಯದಿಂದ ಎದುರಿಸುವುದು. ಆಸ್ಟ್ರೇಲಿಯಾ ಎದುರಾದರೆ ಭಾರಿ ಸವಾಲು. ಆದರೆ ಏಕರೂಪದ ಬ್ಯಾಟಿಂಗ್ ಗುಣ ಹೊಂದಿರುವ ಭಾರತ ಹಾಗೂ ಶ್ರೀಲಂಕಾ ಆಡುವಾಗ ಅದೇ ವೇಗದ ಅಂಗಳ ಬಲವನ್ನು ತೂಗಿನೋಡುವ ತಕ್ಕಡಿ.

ಕಾಂಗರೂಗಳ ನಾಡಿಗೆ ಬಂದಾಗಿನಿಂದ ಕೆಸರಿಗೆ ಸಿಕ್ಕ ಚಕ್ಕಡಿಯಂತೆ ಆಗಿರುವ ಮಹೇಂದ್ರ ಸಿಂಗ್ ದೋನಿ ಪಡೆಗೆ ತ್ರಿಕೋನ ಸರಣಿಯ ಆರಂಭದಲ್ಲಿಯೇ ಆಘಾತವಾಗಿದೆ. ಟ್ವೆಂಟಿ-20 ಸರಣಿಯ ಎರಡನೇ ಪಂದ್ಯ ಗೆದ್ದು ಹಿಗ್ಗಿದ್ದ ಭಾರತ ಏಕದಿನ ಪಂದ್ಯಗಳ ಸರಣಿಯಲ್ಲಿಟ್ಟ ಮೊದಲ ಹೆಜ್ಜೆಯಲ್ಲಿಯೇ ಮುಗ್ಗರಿಸಿತು. ಆಸ್ಟ್ರೇಲಿಯಾ ಮತ್ತೆ ಕಬ್ಬಿಣದ ಕಡಲೆ ಆಗಿದೆ. ಆದ್ದರಿಂದ ಶ್ರೀಲಂಕಾ ಎದುರೇ ಗೆಲುವಿನ ಹಾದಿಯಲ್ಲಿ ನಡೆದು ಫೈನಲ್ ತಲುಪಬೇಕು. ಅದೊಂದೇ ಸ್ವಲ್ಪ ಸುಲಭವೆನ್ನಿಸುವ ದಾರಿ.

ವಿಶ್ವಕಪ್ ಫೈನಲ್‌ನಲ್ಲಿ ಭಾರತಕ್ಕೆ ಮಣಿದಿದ್ದ ಶ್ರೀಲಂಕಾ ಕಳೆದ ಎಂಟು ತಿಂಗಳಲ್ಲಿ ಬದಲಾವಣೆಗೊಂಡಿದೆ. ಕೆಲವು ಹೊಸಬರು ತಂಡ ಪ್ರವೇಶಿಸಿದ್ದಾರೆ. ಅವರಿಗೆ ಆಸ್ಟ್ರೇಲಿಯಾದಲ್ಲಿ ಆಡುವುದು ಹೊಸ ಅನುಭವ. ಇದು `ಮಹಿ~ ಬಳಗಕ್ಕೆ ಒಂದಿಷ್ಟು ಪ್ರಯೋಜನಕಾರಿ ಆಗುವ ಅಂಶ. ಈಗಾಗಲೇ ಟೆಸ್ಟ್ ಸರಣಿಯಲ್ಲಿ ಆಡಿ ಅನುಭವ ಹೆಚ್ಚಿಸಿಕೊಂಡಿರುವ ಭಾರತದವರು ಮಾಹೇಲ ಜಯವರ್ಧನೆ ನೇತೃತ್ವದ ತಂಡಕ್ಕೆ ಕಷ್ಟವಾಗುವಂತೆ ಮಾಡಲು ಸಾಧ್ಯ. ಆದರೂ ಕಾಗದದ ಮೇಲೆ ಮಾಡಿರುವ ಈ ಲೆಕ್ಕಾಚಾರಕ್ಕೆ ಅಂಗಳದಲ್ಲಿಯೂ ಫಲ ಸಿಗುತ್ತದೆಂದು ಹೇಳಲಾಗದು.

ಯುವಕರನ್ನು ಕಟ್ಟಿಕೊಂಡು ಬಂದಿದ್ದರೂ ಶ್ರೀಲಂಕಾ ಏಕದಿನ ಪಂದ್ಯಗಳಲ್ಲಿ ಯಾವುದೇ ತಂಡಕ್ಕೆ ಸವಾಲಾಗಿ ನಿಲ್ಲುವಂಥ ವಿಶ್ವಾಸ ಹೊಂದಿದೆ. ಕಳೆದ ಐದು ತಿಂಗಳಲ್ಲಿ ಲಂಕಾ ತಂಡದಲ್ಲಿನ ಹೊಸಬರೂ ಅಂಗಳದಲ್ಲಿನ ಅದ್ಭುತ ಆಟದಿಂದ ಸುದ್ದಿ ಮಾಡಿದ್ದಾರೆ. ಆದ್ದರಿಂದ ಭಾರತಕ್ಕೆ ಸುಲಭದ ತುತ್ತಾಗುವ ಲಕ್ಷಣವಂತೂ ಇಲ್ಲ. ವಿಶ್ವಕಪ್ ರನ್ನರ್‌ಅಪ್ ತಂಡವು ಚಾಂಪಿಯನ್ನರು ಚಡಪಡಿಸುವಂತೆ ಮಾಡಿದರೂ ಅಚ್ಚರಿಯಿಲ್ಲ. ಏಕೆಂದರೆ ಸಿಂಹಳೀಯರ ವೇಗದ ಬೌಲಿಂಗ್ ಅಸ್ತ್ರಗಳು ಶಕ್ತಿಯುತ. ಮಾಹೇಲ ಜಯವರ್ಧನೆ, ಕುಮಾರ ಸಂಗಕ್ಕಾರ, ತಿಲಕರತ್ನೆ ದಿಲ್ಶಾನ್ ಅವರು ಬ್ಯಾಟಿಂಗ್ ಬಲವಾಗಿ ನಿಲ್ಲುವಂಥ ಸಮರ್ಥರು.

ಸವಾಲುಗಳು ಏನೇ ಇರಲಿ ಭಾರತಕ್ಕಿದು ಸತ್ವಪರೀಕ್ಷೆಯ ಪಂದ್ಯ. ಆತಿಥೇಯ ಆಸ್ಟ್ರೇಲಿಯಾ ಎದುರು ಮಾತ್ರ ಸಮಸ್ಯೆಯಾಗುತ್ತಿದೆ, ಬೇರೆ ತಂಡದ ಎದುರು ಕಷ್ಟವಿಲ್ಲ ಎನ್ನುವುದನ್ನು ಸಾಬೀತು ಮಾಡಬೇಕು. ಚೆಂಡು ಪುಟಿದೇಳದ ಪಿಚ್‌ಗಳಲ್ಲಿಯೇ ಹೆಚ್ಚು ಆಡಿರುವ ಶ್ರೀಲಂಕಾ ವಿರುದ್ಧ ಗೆಲುವು ಸಾಧಿಸಿದರೆ ಅನುಮಾನಗಳು ದೂರವಾಗುತ್ತವೆ. ಪರಿಸ್ಥಿತಿಗೆ ಬೇಗ ಹೊಂದಿಕೊಂಡು ಪ್ರದರ್ಶನ ಮಟ್ಟ ಹೆಚ್ಚಿಸಿಕೊಂಡರೆ ಜಯದ ನಿರೀಕ್ಷೆ ಸಾಧ್ಯ. ವಿಫಲಗೊಂಡರೆ ನಿಜವಾಗಿಯೂ ಆಟದ ಗುಣಮಟ್ಟ ಕುಸಿದು ಹೋಗಿದೆ ಎಂದು ಕ್ರಿಕೆಟ್ ಪ್ರೇಮಿಗಳು ಖಂಡಿತವಾಗಿ ನಿರ್ಣಯಿಸುತ್ತಾರೆ.

ಆಸ್ಟ್ರೇಲಿಯಾ ಎದುರು ಸೋತರೆ ಕಾರಣ ನೀಡಿ ಅಭಿಮಾನಿಗಳನ್ನು ತಣ್ಣಗಾಗಿಸಬಹುದು. ಆದರೆ ಅದೇ ಶ್ರೀಲಂಕಾಕ್ಕೆ ಮಣಿದರೆ ನೆಪ ಹೇಳಿ ನುಣುಚಿಕೊಳ್ಳಲು ಸಾಧ್ಯವೇ ಇಲ್ಲ. ಏಕೆಂದರೆ ಲಂಕಾಕ್ಕೆ ಕೂಡ ಇಲ್ಲಿನ ಪಿಚ್ ಅಚ್ಚುಮೆಚ್ಚಿನದಲ್ಲ. ಈ ತಂಡದ ಬ್ಯಾಟ್ಸ್‌ಮನ್‌ಗಳಿಗೂ ಪುಟಿದೇಳುವ ಚೆಂಡು ಭಯವಾಗಿ ಕಾಡುತ್ತದೆ. ಇದೊಂದು ಅಂಶವು ಭಾರತ ಹಾಗೂ ಶ್ರೀಲಂಕಾ ತಂಡಗಳನ್ನು ಸಮನಾಗಿ ನಿಲ್ಲಿಸುತ್ತದೆ. ಬುಧವಾರದ ಪಂದ್ಯದಲ್ಲಿ ಫಲಿತಾಂಶ ಬಂದ ನಂತರ ತಕ್ಕಡಿಯ ತಟ್ಟೆಗಳು ಮೇಲೆ-ಕೆಳಗೆ ಆಗುವುದಂತೂ ನಿಜ.

ಒಮ್ಮೆ ಪಾಯಿಂಟುಗಳ ಪಟ್ಟಿಯಲ್ಲಿ ಖಾತೆ ತೆರೆಯಲು ಸಾಧ್ಯವಾದರೆ ನಂತರ ಮುನ್ನುಗ್ಗಲು ಉತ್ಸಾಹ ದೊರೆಯುತ್ತದೆ. ಶ್ರೀಲಂಕಾವನ್ನು ಹಿಂದೆ ಉಳಿಯುವಂತೆ ಮಾಡಿದರೆ ಮುಂದೆ ಫೈನಲ್ ಹಾದಿ ಸುಗಮ; ಇಲ್ಲದಿದ್ದರೆ ದುರ್ಗಮ. ತ್ರಿಕೋನ ಸರಣಿಯ ಲೀಗ್ ಹಂತದಲ್ಲಿ ಆತಿಥೇಯ ಆಸ್ಟ್ರೇಲಿಯಾಕ್ಕೆ ಆತಂಕವೇ ಇಲ್ಲ. ಅದು ಮೂರು ಪಂದ್ಯಗಳ ಫೈನಲ್ ತಲುಪುವುದಕ್ಕೆ ಅಗತ್ಯ ಇರುವಷ್ಟು ಪಂದ್ಯ ಗೆಲ್ಲುವ ಸತ್ವವುಳ್ಳ ತಂಡ. ಆದ್ದರಿಂದ ಲೀಗ್‌ನಲ್ಲಿ ಪೈಪೋಟಿ ಇರುವುದು ಶ್ರೀಲಂಕಾ ಹಾಗೂ ಭಾರತದ ನಡುವೆ. ಈ ಎರಡೂ ತಂಡಗಳ ನಡುವಣ ಹಣಾಹಣಿಯ ಫಲಿತಾಂಶಗಳಿಗೆ ಹೆಚ್ಚು ಮಹತ್ವ.

ಫೈನಲ್‌ನಲ್ಲಿ ಸ್ಥಾನ ಖಚಿತ ಆಗುವವರೆಗೆ ಇವೆರಡೂ ತಂಡಗಳ ನಡುವಣ ಪ್ರತಿಯೊಂದು ಪಂದ್ಯವೂ ಆಸಕ್ತಿಕರ. ಇತ್ತೀಚೆಗೆ ಭಾರತ ಹಾಗೂ ಶ್ರೀಲಂಕಾ ಆಡಿದ ಹತ್ತು ಪಂದ್ಯಗಳ ಕಡೆಗೆ ತಿರುಗಿ ನೋಡಿದರೆ ತಲಾ ಐದು ಪಂದ್ಯ ಗೆದ್ದು ಸಮಬಲ ಸಾಧಿಸಿದ್ದು ಗಮನ ಸೆಳೆಯುತ್ತದೆ. ಆದರೆ ಆಸ್ಟ್ರೇಲಿಯಾದಲ್ಲಿ ಏಷ್ಯಾದ ಈ ತಂಡಗಳು ಎದುರಾದ ಪಂದ್ಯಗಳ ಫಲಿತಾಂಶ ನೋಡಿದರೆ ಭಾರತದ ತೂಕ ಅಧಿಕ. ಆದರೆ ಅದೇ ಅಂಕಿ-ಸಂಖ್ಯೆ ನಿರ್ಣಾಯಕವೆಂದು ನಿರೀಕ್ಷೆ ಮಾಡುವುದು ಅಚ್ಚರಿ ಹಾಗೂ ಅನಿರೀಕ್ಷಿತಗಳ ಕ್ರಿಕೆಟ್‌ನಲ್ಲಿ ಸಾಧ್ಯವಿಲ್ಲ.

ಸವಾಲು ಏನೇ ಇದ್ದರೂ, ಗೆಲುವಿನ ಕಡೆಗೆ ನೋಡುತ್ತಿದೆ ಭಾರತ. ಮೊದಲ ಪಂದ್ಯದ ಮಟ್ಟಿಗೆ ವಿಶ್ರಾಂತಿ ಪಡೆದಿದ್ದ ವೀರೇಂದ್ರ ಸೆಹ್ವಾಗ್ ತಂಡಕ್ಕೆ ಹಿಂದಿರುಗಿದ್ದಾರೆ. ಆದ್ದರಿಂದ ಆಕ್ರಮಣಕಾರಿ ಬ್ಯಾಟಿಂಗ್‌ನಿಂದ ಇನಿಂಗ್ಸ್‌ಗೆ ಅದ್ಭುತ ಆರಂಭ ಸಿಗುವ ಆಸೆಯ ಕಿರಣವೂ ಪ್ರಖರ. ಬೌಲಿಂಗ್ ವಿಭಾಗದಲ್ಲಿ ವೇಗಕ್ಕೆ ಆದ್ಯತೆ ಸಿಗುವ ನಿರೀಕ್ಷೆಯಿದೆ. ಆದ್ದರಿಂದ ರವೀಂದ್ರ ಜಡೇಜಾ ಹಾಗೂ ರವಿಚಂದ್ರನ್ ಅಶ್ವಿನ್ ಹನ್ನೊಂದರ ಪಟ್ಟಿಯಿಂದ ಹೊರಗೆ ಉಳಿಯಬಹುದು. ಉಮೇಶ್ ಯಾದವ್ ಹಾಗೂ ಜಹೀರ್ ಖಾನ್ ಅವರನ್ನು ಅಂಗಳಕ್ಕೆ ಇಳಿಸುವ ಯೋಚನೆ ತಂಡದ ಆಡಳಿತಗಾರರ ಮನದಲ್ಲಿ ಮೊಳಕೆಯೊಡೆದಿದೆ. ಆದ್ದರಿಂದ ಈ ಎರಡು ಬದಲಾವಣೆಗಳು ಅಚ್ಚರಿ ಮೂಡಿಸುವುದಿಲ್ಲ.

ತಂಡಗಳು

ಭಾರತ: ಮಹೇಂದ್ರ ಸಿಂಗ್ ದೋನಿ (ನಾಯಕ), ಸಚಿನ್ ತೆಂಡೂಲ್ಕರ್, ವೀರೇಂದ್ರ  ಸೆಹ್ವಾಗ್, ಗೌತಮ್ ಗಂಭೀರ್, ವಿರಾಟ್ ಕೊಹ್ಲಿ, ರೋಹಿತ್ ಶರ್ಮ, ಸುರೇಶ್ ರೈನಾ, ಉಮೇಶ್ ಯಾದವ್, ರಾಹುಲ್ ಶರ್ಮ, ಪ್ರವೀಣ್ ಕುಮಾರ್, ಆರ್.ವಿನಯ್ ಕುಮಾರ್, ರವಿಚಂದ್ರನ್ ಅಶ್ವಿನ್, ಜಹೀರ್ ಖಾನ್, ಮನೋಜ್ ತಿವಾರಿ ಮತ್ತು ಇರ್ಫಾನ್ ಪಠಾಣ್.

ಶ್ರೀಲಂಕಾ: ಮಾಹೇಲ ಜಯವರ್ಧನೆ (ನಾಯಕ), ಆ್ಯಂಜೆಲೊ ಮ್ಯಾಥ್ಯೂಸ್, ಕುಮಾರ ಸಂಗಕ್ಕಾರ, ತಿಲಕರತ್ನೆ ದಿಲ್ಶಾನ್, ಫರ್ವೇಜ್ ಮಹಾರೂಫ್, ಲಸಿತ್ ಮಾಲಿಂಗ, ದಿನೇಶ್ ಚಂಡಿಮಾಲ, ತಿಸ್ಸಾರ ಪೆರೆರಾ, ಸಚಿತ್ರ ಸೇನನಾಯಕೆ, ಲಾಹಿರು ತಿರುಮನ್ನೆ, ಉಪುಲ್ ತರಂಗ, ಚನಕ ವೆಲೆಗೆಡೆರಾ, ಧಮಿಕಾ ಪ್ರಸಾದ್, ತಿಲಾನ್ ಸಮರವೀರ, ರಂಗನ ಹೆರಾತ್ ಮತ್ತು ನುವಾನ್ ಕುಲಶೇಖರ.
ಅಂಪೈರ್‌ಗಳು: ನೈಜಿಲ್ ಲಾಂಗ್ (ಇಂಗ್ಲೆಂಡ್) ಮತ್ತು ಪಾಲ್ ರಿಫೀಲ್ (ಆಸ್ಟ್ರೇಲಿಯಾ); ಮೂರನೇ ಅಂಪೈರ್: ಬ್ರೂಸ್ ಆಕ್ಸೆನ್‌ಫೋರ್ಡ್ (ಆಸ್ಟ್ರೇಲಿಯಾ).
ಮ್ಯಾಚ್ ರೆಫರಿ: ಆ್ಯಂಡಿ ಪಿಕ್ರಾಫ್ಟ್ (ಜಿಂಬಾಬ್ವೆ).
ಪಂದ್ಯ ಆರಂಭ (ಭಾರತೀಯ ಕಾಲಮಾನ): ಬೆಳಿಗ್ಗೆ 9.50ಕ್ಕೆ.  ನೇರ ಪ್ರಸಾರ: ಸ್ಟಾರ್ ಕ್ರಿಕೆಟ್
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT