ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾರದರ್ಶಕ ನೀತಿ ಜಾರಿಗೆ ಒತ್ತಾಯ

Last Updated 21 ಫೆಬ್ರುವರಿ 2011, 19:25 IST
ಅಕ್ಷರ ಗಾತ್ರ

ಚಿತ್ರದುರ್ಗ: ಚುನಾವಣೆಯಲ್ಲಿ ಎಲ್ಲ ರೀತಿಯ ಅಕ್ರಮಗಳಿಗೆ ಕಡಿವಾಣ ಹಾಕುವ ಪಾರದರ್ಶಕ ನೀತಿಯನ್ನು ಜಾರಿಗೊಳಿಸಬೇಕು ಎಂದು ಬಹು ಜನ ಸಮಾಜ ಪಕ್ಷ ಒತ್ತಾಯಿಸಿದೆ.

ಸೋಮವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ನಡೆಸಿದ ಪಕ್ಷದ ಕಾರ್ಯಕರ್ತರು, ಕೇಂದ್ರ ಚುನಾವಣಾ ಆಯೋಗ ಮತ್ತು ರಾಜ್ಯ ಚುನಾವಣಾ ಆಯೋಗಗಳು ಆಟಕ್ಕೆ ಉಂಟು ಲೆಕ್ಕಕ್ಕೆ ಇಲ್ಲದಂತಾ ಗಿವೆ ಎಂದು ದೂರಿದರು.

ಇದುವರೆಗೆ ನಡೆದಿರುವ ವಿಧಾನಸಭೆ, ಲೋಕಸಭೆ ಚುನಾವಣೆ ಸೇರಿದಂತೆ ಎಲ್ಲ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಈ ದೇಶದ ಶೇ. 85ರಷ್ಟಿರುವ ಬಹುಸಂಖ್ಯಾತ ಬಡಜನರ ಮತಗಳನ್ನು ಆಸೆ, ಆಮಿಷ ತೋರಿಸಿ ಖರೀದಿಸಲಾಗುತ್ತಿದೆ. ಆದ್ದರಿಂದ ಈಗಿರುವ ಚುನಾವಣಾ ನೀತಿ ಸಂಹಿತೆಯನ್ನು ತೆಗೆದುಹಾಕಿ ಪಾರದರ್ಶಕ ನೀತಿಯನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ಅಕ್ರಮ ನಡೆಯುತ್ತಿದ್ದರೂ ಜಿಲ್ಲೆಗಳಲ್ಲಿರುವ ಚುನಾವಣಾಧಿಕಾರಿಗಳು ಜಾಣ ಕುರುಡರಂತೆ ವರ್ತಿಸುತ್ತಾರೆ. ಇಂತಹವರ ವಿರುದ್ಧ ಚುನಾವಣಾ ಆಯೋಗ ಕ್ರಮ ಕೈಗೊಂಡು ಅನ್ಯಾಯ ತಡೆಯಬೇಕು ಎಂದು ಚುನಾವಣಾ ಆಯೋಗ ಮತ್ತು ರಾಜ್ಯಪಾಲರಿಗೆ ಜಿಲ್ಲಾಧಿಕಾರಿ ಮೂಲಕ ಮನವಿ ಸಲ್ಲಿಸಿದರು.

ಕರಾಜ್ಯದಲ್ಲಿ ದಲಿತರಿಗೆ ಮತ್ತು ಬಡಜನರಿಗೆ ವಿವಿಧ ಇಲಾಖೆಗಳನ್ನು ಸ್ಥಾಪಿಸಿದ್ದರೂ ನಿಜವಾದ ಫಲಾನುಭವಿಗಳಿಗೆ ಸೌಲಭ್ಯ ದೊರೆಯುತ್ತಿಲ್ಲ. ಜಿಲ್ಲೆಯಲ್ಲಿನ ಆಯಾ ಕ್ಷೇತ್ರದ ಶಾಸಕರ ಜತೆ ಇರುವ ಬೆಂಬಲಿಗರಿಗೆ ಹಾಗೂ ಆಯಾ ಪಕ್ಷದ ಕಾರ್ಯಕರ್ತರಿಗೆ ಮತ್ತು ಹಣವಂತರಿಗೆ ಸೌಲಭ್ಯ ಹಂಚಿಕೆಯಾಗುತ್ತಿವೆ ಎಂದು ದೂರಿದರು.

ಆದ್ದರಿಂದ ಶಾಸಕರಿಗೆ ನೀಡಿರುವ ಅಧಿಕಾರವನ್ನು ಕಡಿತಗೊಳಿಸಿ ಜಿಲ್ಲೆ ಮತ್ತು ತಾಲ್ಲೂಕುಮಟ್ಟದ ಅಧಿಕಾರಿಗಳಿಗೆ ಅಥವಾ ವ್ಯವಸ್ಥಾಪಕರಿಗೆ ಹೆಚ್ಚಿನ ಜವಾಬ್ದಾರಿ ನೀಡಬೇಕು ಎಂದರು.

ಧರಣಿಯಲ್ಲಿ ಬಿ. ಮಹಂತೇಶ್ ಕೂನಬೇವು, ಜಿ.ಆರ್. ಪಾಂಡುರಂಗಪ್ಪ, ಕೆ. ತಿಮ್ಮಪ್ಪ, ಜಿ.ಟಿ. ಸುಂದರೇಶ್, ಎಸ್. ವೆಂಕಟೇಶ್, ಎಂ. ತಿಪ್ಪೇಸ್ವಾಮಿ, ಕೆ.ಎನ್. ದೊಡ್ಡೇಟಪ್ಪ, ಕೆ. ರಾಮಸ್ವಾಮಿ, ಶ್ರೀನಿವಾಸ ಮೂರ್ತಿ, ಕೆ.ಬಿ. ನಾಗರಾಜ್, ಗುರುಶಾಮಯ್ಯ ಮತ್ತಿತರರು ಪಾಲ್ಗೊಂಡಿದ್ದರು.


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT