ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಎಚ್‌ಸಿಗಳಲ್ಲಿ ಆಯುಷ್ ವಿಭಾಗ

Last Updated 9 ಫೆಬ್ರುವರಿ 2012, 19:10 IST
ಅಕ್ಷರ ಗಾತ್ರ

ಬೆಂಗಳೂರು: `ರಾಷ್ಟ್ರದಾದ್ಯಂತ ಪ್ರಾಥಮಿಕ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಆಯುಷ್ ವಿಭಾಗವನ್ನು ಪ್ರಾರಂಭಿಸಿ, ಬಡ ಜನರಿಗೆ ಕಡಿಮೆ ವೆಚ್ಚದಲ್ಲಿ ಭಾರತೀಯ ಪಾರಂಪರಿಕ ಔಷಧಿಯನ್ನು ಒದಗಿಸಲು ಅವಕಾಶ ಮಾಡಿಕೊಡಲಾಗುವುದು~ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ರಾಜ್ಯ ಸಚಿವ ಎಸ್. ಗಾಂಧಿಸೆಲ್ವನ್ ತಿಳಿಸಿದರು.

ಆಯುಷ್ ಇಲಾಖೆಯು ನಗರದ ಅರಮನೆ ಮೈದಾನದಲ್ಲಿ ಗುರುವಾರ ಆಯೋಜಿಸಿದ್ದ ಅಂತರರಾಷ್ಟ್ರೀಯ ಯೋಗ, ಪ್ರಕೃತಿ ಚಿಕಿತ್ಸೆ ಮತ್ತು ಆರೋಗ್ಯ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.
`ದೇಶದಲ್ಲಿ ಆರು ಲಕ್ಷ ಮಂದಿ  ಭಾರತೀಯ ಪಾರಂಪರಿಕ ಔಷಧ ಪದ್ದತಿಯನ್ನು ಅನುಸರಿಸುವ ವೈದ್ಯರಿದ್ದಾರೆ. ಆದರೆ ಹೆಚ್ಚುತ್ತಿರುವ ಆರೋಗ್ಯ ಸಮಸ್ಯೆಗಳಿಗೆ ಪಾರಂಪರಿಕ ಪದ್ದತಿಯಲ್ಲಿ ಪರಿಹಾರ ಕಂಡುಕೊಳ್ಳಬೇಕಿದೆ~ ಎಂದರು.

`ದೇಶದಲ್ಲಿ ಒಟ್ಟು 488 ಆಯುಷ್ ಕಾಲೇಜುಗಳಿದ್ದು, ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಬೇಕು~ ಎಂದರು.
ಸಚಿವ ಎಸ್.ಎ.ರಾಮದಾಸ್, `ರಾಜ್ಯದಲ್ಲಿ ಯೋಗ, ಪ್ರಕೃತಿ ಚಿಕಿತ್ಸೆಗೆ ಸಂಬಂಧಪಟ್ಟಂತೆ ಡಿಪ್ಲೊಮಾ ಕೋರ್ಸ್ ಹಾಗೂ ಸಂಶೋಧನೆ ಕೈಗೊಳ್ಳಲು ಕೇಂದ್ರ ಸರ್ಕಾರ ಸಂಪೂರ್ಣ ನೆರವು ನೀಡಬೇಕು~ ಎಂದು ಕೋರಿದರು.
ವಿಧಾನ ಪರಿಷತ್ತಿನ ಸಭಾಪತಿ ಡಿ.ಎಚ್. ಶಂಕರಮೂರ್ತಿ ಮಾತನಾಡಿದರು. ರಮಾಮಣಿ ಅಯ್ಯಂಗಾರ್ ಸ್ಮಾರಕ ಯೋಗ ಸಂಸ್ಥೆಯ ಡಾ.ಬಿ.ಕೆ.ಎಸ್. ಅಯ್ಯಂಗಾರ್, ಶಾಸಕ ಡಾ.ಸಿ.ಎನ್. ಅಶ್ವತ್ಥ್‌ನಾರಾಯಣ, ಯುವಜನ ಸೇವಾ ಇಲಾಖೆಯ ಪ್ರಧಾನ ಕಾರ್ಯದರ್ಶಿ  ಐ.ಆರ್.ಪೆರುಮಾಳ್ ಇದ್ದರು.
 

300 ಸಂಶೋಧನಾ ಪ್ರಬಂಧ ಮಂಡನೆ

ಮೇಳವು ಫೆ.13ರ ವರೆಗೆ ನಡೆಯಲಿದ್ದು, ಯೋಗ ಮತ್ತು ಪ್ರಕೃತಿ ಚಿಕಿತ್ಸೆಗೆ ಸಂಬಂಧಪಟ್ಟಂತೆ 300 ಸಂಶೋಧನಾ ಪ್ರಬಂಧಗಳು ಮಂಡನೆಯಾಗಲಿವೆ. ಜಪಾನ್, ಕೊರಿಯಾ, ಅಮೆರಿಕ, ಜರ್ಮನಿ ಸೇರಿದಂತೆ 30 ದೇಶಗಳ ಪ್ರತಿನಿಧಿಗಳು ಭಾಗವಹಿಸಿದ್ದಾರೆ.

ಮೇಳದಲ್ಲಿದ್ದ ಸ್ಥಾಪಿಸಿರುವ ಮಳಿಗೆಗಳಲ್ಲಿ ವಿವಿಧ ಔಷಧೀಯ ಕಂಪೆನಿಗಳು ಯೋಗ ಮತ್ತು ಪ್ರಕೃತಿ ಚಿಕಿತ್ಸೆಯ ಮಹತ್ವದ ಬಗ್ಗೆ ಗ್ರಾಹಕರಿಗೆ ಮಾಹಿತಿ ನೀಡಿದವು. ಚರ್ಮ ರಕ್ಷಣೆ, ಕೇಶ ರಕ್ಷಣೆ, ಸ್ಥೂಲ ಕಾಯಕ್ಕೆ ಪರಿಹಾರ, ಮಧುಮೇಹ, ರಕ್ತದೊತ್ತಡ, ಬೊಜ್ಜು ನಿವಾರಣೆ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಒಟ್ಟು 250ಕ್ಕೂ ಹೆಚ್ಚು ಔಷಧೀಯ ಮಳಿಗೆಗಳನ್ನು ತೆರೆಯಲಾಗಿದೆ. ವಿವಿಧ ಕಾಲಘಟ್ಟದಲ್ಲಿ ಜನರು ಅನುಸರಿಸುತ್ತಿದ್ದ ಯೋಗ ಪದ್ದತಿಗಳ ಕುರಿತು ಮಣ್ಣಿನ ಶಿಲ್ಪವನ್ನು ವಿವಿಧ ಭಂಗಿಗಳಲ್ಲಿ ತಯಾರಿಸಲಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT