ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಕಾಸೊ ಚಂಡೆಮದ್ದಳೆ

Last Updated 18 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬಿಂಬವನ್ನು ಮುರಿದು ಕಟ್ಟುವ, ಆ ಮೂಲಕ ಹೊಸತನ್ನು ಧ್ವನಿಸುವ ಕ್ಯೂಬಿಸಂ ಚಳವಳಿಯ ಅಗ್ರ ನೇತಾರ ಪಾಬ್ಲೊ ಪಿಕಾಸೊ. ಕಲೆಯಲ್ಲಿ ಮೂಡಿದ ಈ ಚಳವಳಿ ನಂತರ ಸಾಹಿತ್ಯ, ಸಂಗೀತ, ವಾಸ್ತುಶಿಲ್ಪಕ್ಕೂ ವಿಸ್ತರಿಸಿದ್ದು ವಿಶೇಷ. ಇಪ್ಪತ್ತನೇ ಶತಮಾನದ ಕಲಾಚರಿತ್ರೆಯಲ್ಲಿ ಪಿಕಾಸೊ ಹೆಸರನ್ನು ಅಜರಾಮರಗೊಳಿಸಿದ್ದು ಇದೇ ಕ್ಯೂಬಿಸಂ.

ಬಣ್ಣಗಳ ಒಡನಾಟ ಸ್ಪೇನ್‌ನ ಈ ಕಲಾವಿದನಿಗೆ ಹೊಸತೇನೂ ಆಗಿರಲಿಲ್ಲ. ಅಪ್ಪ ಜೋಸ್ ರಿಯುಸ್ ಬ್ಲಾಸ್ಕೊ ಚಿತ್ರಕಲೆಯ ಪ್ರೊಫೆಸರ್. ಸುಮಾರು ಹತ್ತು ವರ್ಷದವನಿದ್ದಾಗಲೇ ಚಿತ್ರ ಬರೆಯುವ ಹುಚ್ಚು. ಅಪ್ಪನ ಗೆಳೆಯರೊಂದಿಗೆ ಒಡನಾಡುವ ಅವಕಾಶ.

ಪಿಕಾಸೊಗೆ ಅರಿವಿಲ್ಲದೆಯೇ ಅವನೊಳಗೊಬ್ಬ ಕಲಾವಿದ ಅರಳುತ್ತಿದ್ದ. ಆದರೆ ಪಿಕಾಸೊ ಶೈಲಿ ಮಹ್ವತ್ವದ ರೀತಿಯಲ್ಲಿ ಬದಲಾಗಿದ್ದು 20ನೇ ಶತಮಾನದ ಮೊದಲ ದಶಕದಲ್ಲಿ. ವಿವಿಧ ಸಿದ್ಧಾಂತ, ತಂತ್ರ ಹಾಗೂ ಹೊಳಹುಗಳನ್ನು ಬಳಸಿಕೊಂಡು ಆಗ ಆತ ನಡೆಸಿದ ಪ್ರಯೋಗಗಳು ಅನೇಕ. ತೈಲವರ್ಣ, ಶಿಲ್ಪಕಲೆ, ವಾಸ್ತುಶಿಲ್ಪ ರೇಖಾಚಿತ್ರ ಹೀಗೆ ವೈವಿಧ್ಯಮಯ ಮಾಧ್ಯಮಗಳ ಮೂಲಕ ಪ್ರಯೋಗ ನಡೆಸತೊಡಗಿದ.

ಗೆಳೆಯ ಜಾರ್ಜ್ ಬ್ರಾಕ್‌ನೊಂದಿಗೆ ಸ್ಟುಡಿಯೋದಲ್ಲಿ ಕುಳಿತು ಕೆಲಸ ಮಾಡತೊಡಗಿದ ಪಿಕಾಸೊ ಜತೆಯೇ ಕ್ಯೂಬಿಸಂ ಕುಡಿಯೊಡೆದಿತ್ತು. ಮೊದಮೊದಲು ರಚಿಸಿದ ವಾಸ್ತವವಾದದ ಕೃತಿಗಳಿಗಿಂತಲೂ ಭಿನ್ನವಾದುದನ್ನು ತರುವ ಅವನ ಯತ್ನ ಯಶಸ್ವಿಯಾಯಿತು.

ಸರ‌್ರಿಯಲಿಸಂನ ಪ್ರಭಾವಕ್ಕೆ ಒಳಗಾಗಿದ್ದರೂ ಅದರಿಂದ ಪೂರ್ಣ ಬೇರೆಯೇ ಆಗಿ ನಿಂತದ್ದು ಪಿಕಾಸೊನ ಸ್ವೋಪಜ್ಞತೆಗೆ ಸಾಕ್ಷಿ. ರಸಿಕ ವೃಂದ ಮಾತ್ರವಲ್ಲದೇ ಜನ ಸಾಮಾನ್ಯರು ಕೂಡ ಆತನ ಕಲಾಕೃತಿಗಳನ್ನು ಸವಿಯತೊಡಗಿದರು.
 

ಈತನಷ್ಟು ಜನಪ್ರಿಯತೆ ಗಳಿಸಿದ ಆಧುನಿಕ ಚಿತ್ರಕಲಾವಿದ ಮತ್ತೊಬ್ಬನಿಲ್ಲ. ಹಾಗೆಯೇ ಅನೇಕ ಗಾಸಿಪ್, ಟೀಕೆ, ಅಪ್ರಿಯತೆ, ಹಾಗೂ ಮಿತಿಯೇ ಇಲ್ಲದ ಚರ್ಚೆಗೆ ಗ್ರಾಸವಾದ ಕಲಾವಿದ ಕೂಡ ಈತನೇ. ಮಕ್ಕಳಿಗಾಗಿ ಚಿತ್ರಗಳನ್ನು ಬರೆದ ಪಿಕಾಸೊ, `ದೇವತೆಗಳು ಇಲ್ಲವೇ ಡೋರ್‌ಮ್ಯಾಟ್‌ಗಳು~ ಎಂದು ಹೆಂಗಳೆಯರನ್ನು ಕರೆದು ಸ್ತ್ರೀವಾದಿಗಳ ಕೆಂಗಣ್ಣಿಗೂ ಗುರಿಯಾಗಿದ್ದ.

ಜರ್ಮನಿಯ ನಾಜಿಗಳು ಆತನ ಕಲಾಕೃತಿಗಳನ್ನು `ಅಪಾಯಕಾರಿ~ ಎಂದು ಪರಿಗಣಿಸಿದ್ದರು. ಆದರೆ ಪಿಕಾಸೊನ ಜನಪ್ರಿಯತೆಯೇ ಅವನ ಕಲಾಕೃತಿಗಳನ್ನು ರಕ್ಷಿಸಿದವು. ಜನರ ವಿರೋಧ ಕಟ್ಟಿಕೊಳ್ಳಬೇಕೆಂಬ ಭಯದಿಂದಲೋ ಏನೊ ನಾಜಿಗಳು ಆತನ ಕಲಾಕೃತಿಗಳನ್ನು ವಶಪಡಿಸಿಕೊಳ್ಳಲು ಹಿಂಜರಿದರು.
 

ಆದರೆ ಹಿಟ್ಲರ್‌ನಂತೆಯೇ ಸರ್ವಾಧಿಕಾರಿಯಾಗಿದ್ದ ಜೋಸೆಫ್ ಸ್ಟಾಲಿನ್‌ನನ್ನು ಪಿಕಾಸೊ ಸಮರ್ಥಿಸಿಕೊಂಡದ್ದು ಸಾಂಸ್ಕೃತಿಕ ಲೋಕದಲ್ಲಿ ಅಲ್ಲೋಲ ಕಲ್ಲೋಲವನ್ನೇ ಸೃಷ್ಟಿಸಿತ್ತು. ಸಮತಾವಾದದಿಂದ ಬಹಳಷ್ಟು ಪ್ರಭಾವಿತನಾಗಿದ್ದು ಈ ಪ್ರೀತಿಗೆ ಕಾರಣ ಎನ್ನಲಾಗಿದೆ.

1900-1904ರ ನಡುವೆ ಈತ ಬಿಡಿಸಿದ ಕಲಾಕೃತಿಗಳ ಕಾಲವನ್ನು `ನೀಲಿ ಅವಧಿ~ ಎಂತಲೂ 1904-06ರವರೆಗೆ ಈತ ರಚಿಸಿದ ಕಲಾಕೃತಿಗಳ ಕಾಲವನ್ನು `ಗುಲಾಬಿ ಅವಧಿ~ ಎಂತಲೂ ವಿಮರ್ಶಕರು ಗುರುತಿಸುತ್ತಾರೆ.

ಮೊದಲ ಅವಧಿಯಲ್ಲಿ ನೀಲವರ್ಣ ಆಚ್ಛಾದಿತ ಕಲಾಕೃತಿಗಳನ್ನು ರಚಿಸಿದ ಈತ ನಂತರ ಹೊರಳಿದ್ದು ಗುಲಾಬಿವರ್ಣ ಹಿನ್ನೆಲೆಯ ಕಲಾಕೃತಿಗಳತ್ತ. `ಲೆಸ್ ಡೆಮೊಯಿಸೆಲೆಸ್ ಡಿ ಆವಿಗ್ನಾನ್~ (ಆವಿಗ್ನಾನ್‌ನ ತರುಣಿಯರು), `ಗೆರ್ನಿಕಾ~, `ದಿ ವೀಪಿಂಗ್ ವುಮನ್~ ಈತನನ್ನು ಮತ್ತೆ ಮತ್ತೆ ನೆನಪಿಸುವ ಅಪೂರ್ವ ಕಲಾಕೃತಿಗಳು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT