ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿತ್ರೋಡಾ ಸಮಿತಿ ವರದಿ ಇಂದು ಸಲ್ಲಿಕೆ

Last Updated 26 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ರೈಲ್ವೆ ಆಧುನೀಕರಣಕ್ಕೆ ಸಂಬಂಧಿಸಿದಂತೆ ನೇಮಿಸಲಾಗಿದ್ದ ಸ್ಯಾಮ್ ಪಿತ್ರೋಡಾ ನೇತೃತ್ವದ ತಜ್ಞರ ಸಮಿತಿ ಸೋಮವಾರ ಸರ್ಕಾರಕ್ಕೆ ತನ್ನ ವರದಿ ಸಲ್ಲಿಸಲಿದೆ.

ರೈಲ್ವೆ ಇಲಾಖೆಯ ಸಂವಹನ ವ್ಯವಸ್ಥೆಯಲ್ಲಿ ಭಾರಿ ಬದಲಾವಣೆ ತರುವಂತೆ ಸೂಚಿಸಲಿರುವ ಸಮಿತಿ, ದೆಹಲಿಯ ರೈಲ್ವೆ ಭವನದಲ್ಲಿ ಕುಳಿತು ಇಡೀ ದೇಶದ ರೈಲ್ವೆ ಜಾಲದ ಮೇಲೆ ನಿಗಾ ಇಡುವಂತಹ ಕೇಂದ್ರೀಕೃತ ನಿಯಂತ್ರಣ ವ್ಯವಸ್ಥೆ ಅಳವಡಿಸುವಂತೆ ಶಿಫಾರಸು ಮಾಡಲಿದೆ.

ಪ್ರಮುಖ ಹಾಗೂ ದಟ್ಟಣೆ ಇರುವ ರೈಲು ಮಾರ್ಗಗಳಲ್ಲಿ ಅವಘಡಗಳನ್ನು ತಪ್ಪಿಸುವ ನಿಟ್ಟಿನಲ್ಲಿ ರೈಲಿನ ಚಾಲಕ ಮತ್ತು ನಿಯಂತ್ರಣ ಕೊಠಡಿಯ ನಡುವೆ ನಿರಂತರ ಸಂವಹನಕ್ಕಾಗಿ `ಎಂಟಿಆರ್‌ಸಿ~ (ನಿಸ್ತಂತು ರೈಲು ರೇಡಿಯೊ ಸಂವಹನ) ಅಳವಡಿಸುವಂತೆ ಸಮಿತಿ ಸಲಹೆ ನೀಡಲಿದೆ. ಯಾವುದೇ ಮಾರ್ಗದಲ್ಲಿ ರೈಲು ಸಂಚರಿಸುತ್ತಿದೆಯೇ ಎಂದು ಪತ್ತೆ ಹಚ್ಚಲು ವ್ಯವಸ್ಥೆಯೊಂದನ್ನು ಅಳವಡಿಸುವಂತೆ ಸಹ ಸಮಿತಿ ನಿರ್ದೇಶಿಸಲಿದೆ.

ರೈಲ್ವೆ ಇಲಾಖೆಯ ಆಮೂಲಾಗ್ರ ಬದಲಾವಣೆಗೆ ಬೃಹತ್ ಆರ್ಥಿಕ ಸಂಪನ್ಮೂಲದ ಅಗತ್ಯವಿರುವುದರಿಂದ, ಇಲಾಖೆ ಬಳಿ ಇರುವ ಹೆಚ್ಚುವರಿ ಭೂಮಿಯನ್ನು ವಾಣಿಜ್ಯ ಚಟುವಟಿಕೆಗಳಿಗೆ ಬಳಸಿಕೊಳ್ಳುವಂತೆ ಸಮಿತಿ ಸಲಹೆ ನೀಡಲಿದೆ. ಖಾಸಗಿ ಸಹಭಾಗಿತ್ವದಲ್ಲಿ ರೈಲ್ವೆ ನಿಲ್ದಾಣಗಳಲ್ಲಿ ಇರುವ ಖಾಲಿ ಜಾಗಗಳಲ್ಲಿ ಶಾಪಿಂಗ್ ಕೇಂದ್ರ, ರೆಸ್ಟೊರೆಂಟ್ ಹಾಗೂ ಖಾಸಗಿ ಕಚೇರಿಗಳಿಗೆ ಅವಕಾಶ ಮಾಡಿಕೊಡುವಂತೆ ಹೇಳಲಾಗಿದೆ.

ಮೊದಲ ಹಂತದಲ್ಲಿ 100 ನಿಲ್ದಾಣಗಳಲ್ಲಿ ಈ ಯೋಜನೆಯನ್ನು ಪ್ರಾಯೋಗಿಕವಾಗಿ ಅಳವಡಿಸುವಂತೆ ಹಾಗೂ ನಂತರ ಅದನ್ನು ವಿಸ್ತರಿಸುವಂತೆ ಸಮಿತಿ ಶಿಫಾರಸು ಮಾಡುವ ನಿರೀಕ್ಷೆಯಿದೆ.

ಖಾಸಗಿ ಸಹಭಾಗಿತ್ವದಲ್ಲಿ ಇಂಧನ ಉಳಿತಾಯ ಯೋಜನೆ ಕೈಗೆತ್ತಿಕೊಳ್ಳುವಂತೆ ಹಾಗೂ ರೈಲುಗಳಲ್ಲಿ ಪರಿಸರ ಸ್ನೇಹಿ ಶೌಚಾಲಯ ವ್ಯವಸ್ಥೆ ಕಲ್ಪಿಸುವಂತೆ ಸಮಿತಿ ಸೂಚಿಸಲಿದೆ. ಸಾಧ್ಯವಾದಷ್ಟು ರೈಲುಗಳಲ್ಲಿ ಇಂಟರ್‌ನೆಟ್ ಸೌಲಭ್ಯ ಅಳವಡಿಸುವಂತೆಯೂ ಹೇಳಲಾಗಿದೆ.

ಇಲಾಖೆಯ ಆಮೂಲಾಗ್ರ ಬದಲಾವಣೆಗೆ ಭಾರಿ ಮೊತ್ತದ ಹಣ ಬೇಕಿರುವುದರಿಂದ ಬಜೆಟ್ ಅನುದಾನವನ್ನು ತ್ರಿಗುಣಗೊಳಿಸುವಂತೆ ಸಮಿತಿ ಸರ್ಕಾರಕ್ಕೆ ಶಿಫಾರಸು ಮಾಡಲಿದೆ. ಕಳೆದ ವರ್ಷ ರೈಲ್ವೆಗೆ 20 ಸಾವಿರ ಕೋಟಿ ರೂಪಾಯಿ ಮೀಸಲಿಡಲಾಗಿತ್ತು.

ಇಲಾಖೆಯನ್ನು ಸಂಪೂರ್ಣವಾಗಿ ಆಧುನೀಕರಣಗೊಳಿಸಲು ಸರ್ಕಾರ 5 ಲಕ್ಷ ಕೋಟಿ ರೂಪಾಯಿ ವ್ಯಯಿಸಬೇಕು ಎಂದೂ ಸಮಿತಿ ಹೇಳಿದೆ.

ಮುಂದಿನ ಆರ್ಥಿಕ ವರ್ಷದಿಂದ ಆರಂಭವಾಗಲಿರುವ 12ನೇ ಪಂಚ ವಾರ್ಷಿಕ ಯೋಜನೆಯಲ್ಲಿ ರೈಲ್ವೆಗಾಗಿ 1.83 ಲಕ್ಷ ಕೋಟಿ ರೂಪಾಯಿ ಇಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT