ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಯುಸಿ, ಸಿಇಟಿ ಪರೀಕ್ಷಾ ಸಿದ್ಧತೆ

Last Updated 4 ಫೆಬ್ರುವರಿ 2012, 5:40 IST
ಅಕ್ಷರ ಗಾತ್ರ

ಬೀದರ್: ಹೌದು. ಇನ್ನು ವಿದ್ಯಾರ್ಥಿಗಳು ದೂರದರ್ಶನದ ಮೂಲಕವೂ ದ್ವಿತೀಯ ಪಿಯುಸಿ ಹಾಗೂ ಸಿಇಟಿ ಪರೀಕ್ಷೆ ಸಿದ್ಧತೆ ಕೈಗೊಳ್ಳಬಹುದು.

ಬರುವ ಮಾರ್ಚ್‌ನಲ್ಲಿ ನಡೆಯಲಿರುವ ದ್ವಿತೀಯ ಪಿಯುಸಿ ಹಾಗೂ ಸಿಇಟಿ ಪರೀಕ್ಷೆಗಳನ್ನು ಗಮನದಲ್ಲಿರಿಸಿಕೊಂಡು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಪದವಿಪೂರ್ವ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಇಂಥದ್ದೊಂದು ವ್ಯವಸ್ಥೆ ಮಾಡಿದೆ.

ಪರೀಕ್ಷಾ ಸಿದ್ಧತೆ ಕುರಿತು ಈಗಾಗಲೇ ದೂರದರ್ಶನದ ಚಂದನ ವಾಹಿನಿಯಲ್ಲಿ 42 ದಿನಗಳ ಸಿದ್ಧತಾ ತರಬೇತಿ ಕಾರ್ಯಕ್ರಮ ಶುರುವಾಗಿದೆ. ತರಬೇತಿಯ ಒಟ್ಟು ಅವಧಿ 87 ಗಂಟೆ 30 ನಿಮಿಷ ಆಗಿದೆ. ಮೊದಲ ಹಂತದ ತರಬೇತಿ ಕಾರ್ಯಕ್ರಮ ಜನವರಿ 30 ರಿಂದ ಮಾರ್ಚ್ 11ರ ವರೆಗೆ ಪ್ರಸಾರವಾಗಲಿದೆ.

ಪರೀಕ್ಷೆಯಲ್ಲಿ ಕೇಳುವ ಪ್ರಶ್ನೆಗಳಿಗೆ ನಿಖರ ಉತ್ತರ ಬರೆಯುವುದು ಹೇಗೆ? ಯಾವ ಅಂಶಗಳನ್ನು ಬರೆದಾಗ ಉತ್ತರ ಪರಿಪೂರ್ಣ ಆಗುತ್ತದೆ? ಎಂಬಿತ್ಯಾದಿ ವಿಷಯಗಳ ಕುರಿತು ಮಾರ್ಗದರ್ಶನ ನೀಡುವುದು ಮತ್ತು ಕೆಲ ಪ್ರಮುಖ ವಿಷಯಗಳನ್ನು ವಿದ್ಯಾರ್ಥಿಗಳಿಗೆ ಪುನರ್ ಮನನ ಮಾಡುವುದು ತರಬೇತಿಯ ಉದ್ದೇಶ ಆಗಿದೆ.

ದ್ವಿತೀಯ ಪಿಯುಸಿ ಮತ್ತು ಸಿಇಟಿ ತರಬೇತಿ ಸಂಬಂಧ ಒಟ್ಟು 12 ವಿಷಯಗಳಲ್ಲಿ `ವಿಕಸನ~ ಶಿಕ್ಷಣ ಮಾಲೆ ವಿಶೇಷ ತರಬೇತಿ ಪ್ರಸಾರ ಆಗಲಿದೆ. ಬೋಧನಾ ವಿಷಯಗಳಲ್ಲಿ ಇಂಗ್ಲಿಷ್, ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ವಾಣಿಜ್ಯಶಾಸ್ತ್ರ, ಲೆಕ್ಕಶಾಸ್ತ್ರ, ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ, ಜೀವಶಾಸ್ತ್ರ, ಪರೀಕ್ಷಾ ದುಗುಡ, ಭಯ, ಒತ್ತಡ ಕಡಿಮೆ ಮಾಡಲು ತೆಗೆದುಕೊಳ್ಳಬೇಕಾದ ಕ್ರಮಗಳು ಹಾಗೂ ನಾಲ್ಕು ವಿಜ್ಞಾನ ವಿಷಯಗಳಲ್ಲಿ ಸಿಇಟಿ ತರಬೇತಿ ಇದರಲ್ಲಿ ಸೇರಿವೆ.
 
ಶೇ. 70 ರಷ್ಟು ತರಗತಿಗಳು ಪಿಯುಸಿ ಪಠ್ಯಕ್ರಮಕ್ಕೆ ಸಂಬಂಧಿಸಿವೆ. ಇನ್ನುಳಿದ ಶೇ. 30 ರಷ್ಟು ತರಗತಿಗಳನ್ನು ಸಿಇಟಿ ಪರೀಕ್ಷೆಗೆ ಮೀಸಲಿಡಲಾಗಿದೆ.ಎರಡನೇ ಹಂತದ ತರಬೇತಿ ಕಾರ್ಯಕ್ರಮ ಸಂಪೂರ್ಣ ಸಿಇಟಿ ತರಬೇತಿ ಸಂಬಂಧಿಸಿದ್ದಾಗಿದೆ.ಈ ಕಾರ್ಯಕ್ರಮ ಏಪ್ರಿಲ್ 1 ರಿಂದ 30 ರ ವರೆಗೆ ನಡೆಯಲಿದೆ. ರಾಜ್ಯ ವಿವಿಧೆಡೆಯ ಪದವಿ ಹಾಗೂ ಪದವಿಪೂರ್ವ ಕಾಲೇಜುಗಳ ಪರಿಣಿತ ಉಪನ್ಯಾಸಕರನ್ನು ಸಂಪನ್ಮೂಲ ವ್ಯಕ್ತಿಗಳನ್ನಾಗಿ ಆಯ್ಕೆ ಮಾಡಲಾಗಿದೆ.

ಪರಿಣಿತರು ಪರೀಕ್ಷಾ ದೃಷ್ಟಿಯಿಂದ ತಮ್ಮ ಅಧ್ಯಾಯಕ್ಕೆ ಸಂಬಂಧಿಸಿದ ಪರಿಕಲ್ಪನೆ, ವಿಷಯಗಳನ್ನು ಪ್ರಸ್ತಾಪಿಸಿ ಉದಾಹರಣೆ ಸಹೀತ ವಿವರಿಸಲಿದ್ದಾರೆ. ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ನೀಲನಕ್ಷೆ ಪ್ರಕಾರ ವಿವಿಧ ಅಂಕಗಳ ಪ್ರಶ್ನೆಗಳಿಗೆ ಯಾವ ರೀತಿಯಲ್ಲಿ ನಿಖರವಾದ ಉತ್ತರ ಬರೆಯಬೇಕು ಎನ್ನುವ ಕುರಿತು ಚರ್ಚೆ ನಡೆಸಲಿದ್ದಾರೆ.

ಸಾಮಾನ್ಯವಾಗಿ ವಿದ್ಯಾರ್ಥಿಗಳು ಉತ್ತರ ಬರೆಯುವಾಗ ಮಾಡುವ ತಪ್ಪುಗಳ ಕುರಿತು ಗಮನ ಸೆಳೆಯಲಿದ್ದಾರೆ. ಇದರ ಜೊತೆಗೆ ಆ ಅಧ್ಯಾಯಕ್ಕೆ ಸಂಬಂಧಿಸಿದ ಎಕ್ಸಾಸ್ಟೀವ್ ಪ್ರಶ್ನೆಗಳನ್ನು ಮನೆ ಕೆಲಸ ಆಗಿ ನೀಡಲಿದ್ದಾರೆ ಎಂದು ಪದವಿಪೂರ್ವ ಮತ್ತು ವೃತ್ತಿ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.
ಎಲ್ಲ ರೀತಿಯ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಕಾರ್ಯಕ್ರಮ ಸಿದ್ಧಪಡಿಸಲಾಗಿದೆ ಎಂದು ಹೇಳಿದ್ದಾರೆ.

ಮೊದಲ ಹಂತದ ತರಬೇತಿ ಕಾರ್ಯಕ್ರಮ ದೂರದರ್ಶನದ ಚಂದನ ವಾಹಿನಿಯಲ್ಲಿ ಪ್ರತಿ ದಿನ ಬೆಳಿಗ್ಗೆ 7 ರಿಂದ 7.40 ರವರೆಗೆ, ರಾತ್ರಿ 9.30 ರಿಂದ 10 ಗಂಟೆಯವರೆಗೆ ವೀಕ್ಷಿಸಬಹುದು. ಭಾನುವಾರ, ಸೋಮವಾರ, ಮಂಗಳವಾರ ಮತ್ತು ಬುಧವಾರ ರಾತ್ರಿ 10 ರಿಂದ 10.30 ಗಂಟೆವರೆಗೆ, ಶನಿವಾರ ಮಧ್ಯಾಹ್ನ 1.30 ರಿಂದ 3 ಗಂಟೆವರೆಗೆ, ಭಾನುವಾರ ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆವರೆಗೆ, ಶನಿವಾರ ಮತ್ತು ಭಾನುವಾರ ಮಧ್ಯಾಹ್ನ 3 ರಿಂದ 3.30 ರವರೆಗೆ ವೀಕ್ಷಿಸಬಹುದು. ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯುವಂತೆ ಮನವಿ ಮಾಡಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT