ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಣೆ ಬಾಂಬ್ ಸ್ಫೋಟ ಪ್ರಕರಣ:ಮೂವರು ಐ.ಎಂ ಉಗ್ರರ ಬಂಧನ

Last Updated 11 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಎರಡು ತಿಂಗಳ ಹಿಂದೆ ಪುಣೆಯಲ್ಲಿ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ಭಾಗಿಯಾಗಿದ್ದರು ಎಂಬ ಅನುಮಾನದ ಮೇಲೆ ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯ ಮೂವರು ಭಯೋತ್ಪಾದಕರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತರು ದೆಹಲಿ ಮತ್ತು ಬಿಹಾರದ ಬೋಧಗಯಾದಲ್ಲಿ ಹಬ್ಬದ ಸಂದರ್ಭದಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸಿದ್ದರು ಎಂದು ಪೋಲಿಸರು ತಿಳಿಸಿದ್ದಾರೆ.ಸಂಘಟನೆಯ ಮುಖ್ಯಸ್ಥ ಯಾಸಿನ್ ಭಟ್ಕಳ್‌ಗೆ ಇವರು ಆಪ್ತರಾಗಿದ್ದರು. ಬಂಧಿತರಿಂದ ಮದ್ದುಗುಂಡು, ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಳೆದ ಆಗಸ್ಟ್‌ನಲ್ಲಿ ಪುಣೆಯಲ್ಲಿ ಸಂಭವಿಸಿದ ಕಡಿಮೆ ಸಾಮರ್ಥ್ಯದ ನಾಲ್ಕು ಬಾಂಬ್ ಸ್ಫೋಟ ಪ್ರಕರಣದಲ್ಲಿ ಈ ಮೂವರ ಕೈವಾಡವಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಯರವಾಡ ಜೈಲಿನಲ್ಲಿ ಜೂನ್ 8ರಂದು ನಡೆದ ಭಯೋತ್ಪಾದಕ ಸಿದ್ದಿಕಿ ಕೊಲೆಗೆ ಪ್ರತೀಕಾರವಾಗಿ ಪುಣೆಯಲ್ಲಿ ಬಾಂಬ್ ಸ್ಫೋಟಿಸಲಾಗಿತ್ತು ಎಂದು ಈ ಭಯೋತ್ಪಾದಕರು ತಪ್ಪೊಪ್ಪಿಕೊಂಡಿದ್ದಾರೆ. ಮುಂಬೈ ಅಥವಾ ಯರವಾಡ ಜೈಲಿನ ಮೇಲೆ ಬಾಂಬ್ ದಾಳಿ ನಡೆಸಲು ಮೊದಲು ಇವರು ಯೋಚಿಸಿದ್ದರು. ಕೊನೆ ಗಳಿಗೆಯಲ್ಲಿ ಯೋಜನೆಯನ್ನು ಬದಲಿಸಿ ಪುಣೆಯಲ್ಲಿ ಬಾಂಬ್ ಸ್ಫೋಟ ನಡೆಸಿದ್ದರು.

ಬಂಧಿತರಿಗೆ ಆಶ್ರಯ ನೀಡುವಂತೆ ಯಾಸಿನ್ ಭಟ್ಕಳ್ ದೆಹಲಿಯ ರಾಜು ಭಾಯಿ ಎಂಬಾತನಿಗೆ ಸೂಚಿಸಿದ್ದನೆಂದು ದೆಹಲಿ ಪೊಲೀಸ್ ಕಮಿಷನರ್ ನೀರಜ್ ಕುಮಾರ್ ತಿಳಿಸಿದ್ದಾರೆ.
ರಾಜು ಭಾಯಿ ಮತ್ತು ಇನ್ನಿಬ್ಬರಿಗಾಗಿ ಪೊಲೀಸರು ಹುಡುಕುತ್ತಿದ್ದಾರೆ.
 
ಈ ಭಯೋತ್ಪಾದಕರಿಗೆ ಹವಾಲಾ ಮೂಲಕ ಹಣ ಸಂದಾಯವಾಗುತ್ತಿತ್ತು. ವಿದೇಶದಲ್ಲಿ ಇರುವ ಇಂಡಿಯನ್ ಮುಜಾಹಿದ್ದೀನ್ ಏಜೆಂಟ್ ಇತ್ತೀಚೆಗೆ ಹವಾಲಾ ಮೂಲಕ ಮೂರು ಲಕ್ಷ ರೂಪಾಯಿಗಳನ್ನು ಕಳುಹಿಸಿದ್ದ ಎಂದು ಕುಮಾರ್ ತಿಳಿಸಿದ್ದಾರೆ.

ಇಕ್ಬಾಲ್ ಮತ್ತು ಭಟ್ಕಳ್‌ನ ಆದೇಶದ ಮೇರೆಗೆ ದೆಹಲಿಗೆ ಬಂದಿದ್ದ ಈ ಭಯೋತ್ಪಾದಕರು, ವಿಧ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸಿದ್ದರು. ಮಾರ್ಚ್ 27ರಂದು ಪೊಲೀಸರು ಭಟ್ಕಳ್‌ನ ಇನ್ನೊಬ್ಬ ಸಹಚರ ಅಸ್ಸಾದ್‌ಉಲ್ಲಾ ರೆಹಮಾನ್‌ನನ್ನು ದೆಹಲಿಯಲ್ಲಿ ಬಂಧಿಸಿ ಒಂದು ಕಿಲೊ ಸ್ಫೋಟಕ ಮತ್ತು ದೂರ ನಿಯಂತ್ರಣ ಸಾಧನ ವಶಪಡಿಸಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT