ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುತ್ರನ ಮರುಜೀವಕ್ಕೆ ಮಹಾ ಅವ್ವನ ಕಿಡ್ನಿ

Last Updated 2 ಜನವರಿ 2012, 8:25 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಈ ಕುಟುಂಬಕ್ಕೆ ಎರಡು ವರ್ಷಗಳಿಂದ ಹಬ್ಬ-ಹರಿದಿನ, ಹೊಸ ವರ್ಷದ ಆನಂದವಿಲ್ಲ. ಪರಿಸ್ಥಿತಿಯ ಸುಂಟರಗಾಳಿಗೆ ಸಿಕ್ಕಿ ಓಲಾಡುವ ಹಡಗಿಗೆ ದಿಕ್ಕು ತೋರಿಸಲು ಪರದಾಡುತ್ತಿದ್ದಾರೆ ತಂದೆ-ತಾಯಿ ಹಾಗೂ ಇಬ್ಬರು ಮಕ್ಕಳು. ಇಡೀ ಕುಟುಂಬದ ಶ್ರಮ ಈಗ ಅಂತಿಮ ಹೋರಾಟದ `ದಡ~ ಸೇರುವ ಹಂತದಲ್ಲಿದೆ;

ಪ್ರೀತಿಯ ಪುತ್ರನ ಪ್ರಾಣ ಉಳಿಸಲು ತಾಯಿ `ಆ~ ನಿರ್ಧಾರ ತೆಗೆದುಕೊಂಡಿದ್ದಾರೆ. ಆತನಿಗೆ ಕಿಡ್ನಿ ನೀಡಿ ಮರುಜೀವ ತುಂಬಲು, ತನ್ನ ತಾಯ್ತನವನ್ನು ಸಾರ್ಥಕ ಮಾಡಿಕೊಳ್ಳಲು ಮುಂದಾಗಿದ್ದಾರೆ.

ಇದು ನಗರದ ವಿಜಯನಗರ ಬಡಾವಣೆಯ ಅಧ್ಯಾಪಕ ನಗರದಲ್ಲಿ ವಾಸವಾಗಿರುವ ವೀರಭದ್ರಯ್ಯ-ಮಹಾಂತವ್ವ ಕುಟುಂಬದ ವ್ಯಥೆಯ ಕಥೆ. ಎರಡೂ ಕಿಡ್ನಿಗಳು ವಿಫಲಗೊಂಡು ಎರಡು ವರ್ಷಗಳಿಂದ ಹಾಸಿಗೆ ಹಿಡಿದಿರುವ ಕಿರಿಯ ಪುತ್ರ ಅಮರನಾಥನ ಜೀವ ಉಳಿಸಲು ಇವರು ಮಾಡಿದ ಶ್ರಮ ಈಗ ಕೊನೆಯ ಹಂತ ತಲುಪಿದೆ.
 
ಎಲ್ಲ ಧರ್ಮದ ದೇವರಿಗೆ ಮೊರೆ ಹೋಗಿ, ವಿವಿಧ ಔಷಧೋಪಚಾರದ ಕಡೆಗೂ ಗಮನ ಹರಿಸಿರುವ ಇವರು ಈಗ ಪುತ್ರನ ಕಿಡ್ನಿ ಮರುಜೋಡಣೆಗೆ ಮುಂದಾಗಿದ್ದಾರೆ. ಕಿಡ್ನಿ ನೀಡಲು ತಾಯಿ `ಮಹಾ~ತ್ಯಾಗಕ್ಕೆ ಸಿದ್ಧರಾಗಿದ್ದರೂ ಅದಕ್ಕೆ ಬೇಕಾದ ಹಣ ಹೊಂದಿಸುವ ವಿಷಯ ಆಲೋಚಿಸುವಾಗ ಕುಟುಂಬವೇ ಬೆಚ್ಚಿ ಬೀಳುತ್ತದೆ.

ಎಂಜಿನಿಯರಿಂಗ್ ಮತ್ತು ಡಿಪ್ಲೋಮಾ ಮಾಡುತ್ತಿರುವ ಹಿರಿಯ ಪುತ್ರರಿಬ್ಬರ ಶಿಕ್ಷಣಕ್ಕಾಗಿ ಹಣ ಹೊಂದಿಸುವ ಸಂದರ್ಭದಲ್ಲೇ ಬಂದೆರಗಿದ ಅಮರನಾಥನ ಕಿಡ್ನಿ ವೈಫಲ್ಯವೆಂಬ ಬರಸಿಡಿಲು ಇವರಿಗೆ ಬಲವಾದ ಪೆಟ್ಟು ನೀಡಿದೆ. ಎರಡು ವರ್ಷಗಳಿಂದ ಡಯಾಲಿಸಿಸ್‌ನ ನಂತರ ಈಗ ಕಿಡ್ನಿ ಕಸಿಯ ಅನಿವಾರ್ಯತೆಗೆ ಸಿಕ್ಕಿದ್ದಾರೆ.

ಇದಕ್ಕೆ ಬೇಕಾದ ವೆಚ್ಚವನ್ನು ಭರಿಸಲು ಸಹೃದಯರ ಮೊರೆ ಹೋಗಿರುವ ಇವರು  ಹೊಸ ವರ್ಷದಲ್ಲಿ ಹೊಸ ಬೆಳಕಿನ ಆಶಾಕಿರಣವನ್ನು ಎದುರು ನೋಡುತ್ತಿದ್ದಾರೆ.

ವೀರಭದ್ರಯ್ಯ ಹುಬ್ಬಳ್ಳಿ ತಾಲ್ಲೂಕಿನ ಇಂಗಳಹಳ್ಳಿ ನಿವಾಸಿ, ಕೃಷಿಕ. ಮಕ್ಕಳ ಶಿಕ್ಷಣಕ್ಕಾಗಿ ನಗರ ಸೇರಿದವರು. ಊರಿನಲ್ಲಿದ್ದ ನಾಲ್ಕು ಎಕರೆ ಹೊಲವನ್ನು ಒಂದೂವರೆ ಲಕ್ಷ ರೂಪಾಯಿಗೆ ಅಡವಿಟ್ಟಿದ್ದಾರೆ. ಎರಡು ವರ್ಷಗಳ ಹಿಂದೆ ಪಡೆದಿರುವ ಬೆಳೆ ಸಾಲದ ಮೊತ್ತ ಈಗ ಒಂದು ಲಕ್ಷ ಚಿಲ್ಲರೆ ಆಗಿದೆ.

ಶೈಕ್ಷಣಿಕ ಸಾಲ ಸಿಗದ ಕಾರಣ ಎರಡನೆಯ ಮಗನ ಶಿಕ್ಷಣ ಮೊಟಕುಗೊಂಡಿದೆ. ಎರಡು ವರ್ಷಗಳಿಂದ ಶಾಲೆಯ ಕಡೆಗೆ ಮುಖ ಮಾಡದ ಅಮರನಾಥನಿಗಾಗಿ ಈಗಾಗಲೇ ಮಾಡಿರುವ ಖರ್ಚು ಸುಮಾರು 12 ಲಕ್ಷ ರೂಪಾಯಿ. ಮಾಡಿರುವ ಸಾಲ ಸುಮಾರು ಆರು ಲಕ್ಷ ರೂಪಾಯಿ. ಈಗಲೂ ವಾರಕ್ಕೆರಡು ಬಾರಿ ಡಯಾಲಿಸಿಸ್. ಕಿಡ್ನಿ ಕಸಿ ಚಿಕಿತ್ಸೆಗೆ ಬೇಕಾಗಿರುವ ಹಣ ಲಕ್ಷಗಟ್ಟಲೆ....! ಸಮಸ್ಯೆಯ ಸರಪಳಿ ಬೆಳೆಯುತ್ತಲೇ ಇದೆ.

ಮಹಾಂತವ್ವ ಅವರ ತಂದೆ, ಪಶು ವೈದ್ಯರಾಗಿದ್ದ ವಿರೂಪಾಕ್ಷಯ್ಯ ಹಿರೇಮಠ ಅವರ ಹೆಸರಿನಲ್ಲಿ ಬರುವ ಪಿಂಚಣಿ ಮೊತ್ತ ಇವರಿಗೆ ಈಗ ಏಕೈಕ ಆದಾಯ. `ಮಗನ ಪ್ರಾಣ ಉಳಿಸುವುದಕ್ಕಾಗಿ ರಾಜಕಾರಣಿಗಳ ಬಳಿ ಸಹಾಯ ಕೇಳಿ ಹೋದಾಗ ಒಬ್ಬರು ಮಂತ್ರಿ ಒಂದು ಪತ್ರ ಬರೆದು ಕೊಟ್ಟರೆ ಇನ್ನೊಬ್ಬರು ನಮಗೂ `ವೈರಸ್~ ತಗಲುತ್ತದೆ, ದೂರ ಹೋಗಿ ಎಂದು ಹೇಳಿದರು~ ಎನ್ನುತ್ತಾರೆ ಈ ದಂಪತಿ.

ಹೊಸ ವರ್ಷದಲ್ಲಿ ಆದಷ್ಟು ಬೇಗ ಕಿಡ್ನಿ ಕಸಿ ಮಾಡಿ ಜೀವನ ನೌಕೆಗೆ ಸರಿಯಾದ ದಿಶೆ ತೋರಿಸಲು ಸಮಾಜ ನೆರವಾಗುತ್ತದೆ ಎಂಬ ಆಶಾಭಾವ ಇವರದು.

ಸಹಾಯ ನೀಡಬಯಸುವವರು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನ ವಿಜಯನಗರ ಶಾಖೆಯಲ್ಲಿರುವ ಅಮರನಾಥನ ಖಾತೆಗೆ (ಎಸ್/ಬಿ-8900833213-1) ಹಣ ಜಮಾ ಮಾಡಬಹುದು. ಸಂಪರ್ಕ ಸಂಖ್ಯೆ-9880270835 ಅಥವಾ 7760243760.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT