ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುರಸಭೆ: ಅಧ್ಯಕ್ಷಗಿರಿಗೆ ಹಗ್ಗ ಜಗ್ಗಾಟ

Last Updated 2 ಸೆಪ್ಟೆಂಬರ್ 2013, 5:47 IST
ಅಕ್ಷರ ಗಾತ್ರ

ಹೂವಿನಹಡಗಲಿ: ಇಲ್ಲಿನ ಪುರಸಭೆ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟಗೊಳ್ಳುತ್ತಿದ್ದಂತೆ ಅಧಿಕಾರಕ್ಕಾಗಿ ಕಾಂಗ್ರೆಸ್ಸಿಗರಲ್ಲಿಯೇ ಹಗ್ಗಜಗ್ಗಾಟ ಶುರುವಾಗಿದೆ.

ಕಾಂಗ್ರೆಸ್ ಪಕ್ಷದ ಮುಂಚೂಣಿ ನಾಯಕರು ಮೇಲ್ನೋಟಕ್ಕೆ ಒಗ್ಗಟ್ಟಿನ ಮಂತ್ರ ಜಪಿಸುತ್ತಿದ್ದಾರಾದರೂ ಹಳೆ ಕಾಂಗ್ರೆಸ್, ಹೊಸ ಕಾಂಗ್ರೆಸ್ ಎಂಬ ಇಬ್ಬಣಗಳ ನಡುವಿನ ಕಂದಕ ಇನ್ನೂ ಹಾಗೆಯೇ ಉಳಿದಿದೆ. ಆ ಕಾರಣಕ್ಕಾಗಿ ಪುರಸಭೆ ಅಧಿಕಾರದ ಚುಕ್ಕಾಣಿ ಎರಡು ಗುಂಪಿನ ಪ್ರತಿಷ್ಠೆಯ ಪ್ರಶ್ನೆಯೂ ಆಗಿದೆ.

ಪುರಸಭೆಯ 23 ಸ್ಥಾನಗಳ ಪೈಕಿ 14 ವಾರ್ಡ್‌ಗಳಲ್ಲಿ ಗೆದ್ದಿರುವ ಕಾಂಗ್ರೆಸ್ ಸ್ಪಷ್ಟ ಬಹುಮತ ಹೊಂದಿದೆ. 4ರಲ್ಲಿ ಬಿಎಸ್‌ಆರ್ ಕಾಂಗ್ರೆಸ್, 2ರಲ್ಲಿ ಜೆಡಿಎಸ್, 2ರಲ್ಲಿ ಪಕ್ಷೇತರರು ಹಾಗೂ ಒಂದು  ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು. ಪುರಸಭೆ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮತ್ತು ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿಗೆ ಮೀಸಲಾತಿ ಪ್ರಕಟವಾಗುತ್ತಿದ್ದಂತೆಯೇ ಚಟುವಟಿಕೆಗಳು ಗರಿಗೆದರಿವೆ.

ಅಧ್ಯಕ್ಷ ಸ್ಥಾನಕ್ಕೆ ಕೋಡಿಹಳ್ಳಿ ಕೊಟ್ರೇಶ್ ಹೆಸರು ಕೇಳಿಬರುತ್ತಿದೆ. ಕರೆಯೆತ್ತಿನ ಶಶಿಕಲಾ, ಹಣ್ಣಿ ವೀರಮ್ಮ, ಹಾದಿಮನಿ ಕೊಟ್ರೇಶ್, ಆರ್. ಪವಿತ್ರ ಕೂಡ ಪೈಪೋಟಿ ನಡೆಸಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ಪಿ.ಎಂ. ವಿಲ್ಸನ್‌ಸ್ವಾಮಿ ಸ್ಪರ್ಧೆ ಬಯಸಿದ್ದಾರೆ. ಪ.ಜಾತಿಯ ಮಹಿಳೆ ದುರುಗಮ್ಮ ಕೂಡ ಅವಕಾಶಕ್ಕೆ ಕಾಯುತ್ತಿದ್ದಾರೆ.

ಕಳೆದ 2 ದಶಕಗಳಿಂದ ಪಟ್ಟಣದ ಜನತೆ ಪುರಸಭೆ ಆಡಳಿತವನ್ನು ಉಪಮುಖ್ಯಮಂತ್ರಿ ದಿ.ಎಂ.ಪಿ.ಪ್ರಕಾಶರಿರುವ ಪಕ್ಷಕ್ಕೆ ನೀಡುತ್ತಾ ಬಂದಿದೆ. ಆಯ್ಕೆಯಾಗುವ ಸದಸ್ಯರಲ್ಲಿ ಚರ್ಚಿಸಿ ಅವರು ಸಾಮಾಜಿಕ ನ್ಯಾಯ ಪರಿಕಲ್ಪನೆಯಲ್ಲಿ ಅಧಿಕಾರ ಹಂಚುವ ಮೂಲಕ ಯಾರಿಗೂ ಅಸಮಧಾನವಾಗದಂತೆ ನಾಜೂಕಿನಿಂದ ನಿರ್ವಹಿಸುತ್ತಾ ಬಂದಿದ್ದರು.

ಇದೀಗ ಪುರಸಭೆ ಅಧಿಕಾರ ಚುಕ್ಕಾಣಿ ಹಿಡಿಯಲು ಹಳೆ ಮತ್ತು ಹೊಸ ಕಾಂಗ್ರೆಸ್ ಹೆಸರಿನಲ್ಲಿಯೇ ಆಕಾಂಕ್ಷಿಗಳು ತಮ್ಮ ಹಕ್ಕು ಪ್ರತಿಪಾದಿಸುತ್ತಿರುವುದರಿಂದ ಆಯ್ಕೆ ಜವಾಬ್ದಾರಿ ಹೊತ್ತವರಿಗೆ ತಲೆನೋವಾಗಿ ಪರಿಣಮಿಸಿದೆ.

ವಿಧಾನಸಭಾ ಕ್ಷೇತ್ರ ಪರಿಶಿಷ್ಟ ಜಾತಿಗೆ ಮೀಸಲಾಗಿರುವುದರಿಂದ ಬಹುಸಂಖ್ಯಾತ ಸಮುದಾಯಗಳಿಗೆ ಸ್ಥಳೀಯ ಸಂಸ್ಥೆಗಳಲ್ಲಿ ಅಧಿಕಾರ ನೀಡಿ ತೃಪ್ತಿಪಡಿಸಬೇಕಾಗಿದೆ. ಕ್ಷೇತ್ರ ಪ್ರತಿನಿಧಿಸಿರುವ ಸಚಿವ ಪಿ.ಟಿ. ಪರಮೇಶ್ವರನಾಯ್ಕ ಮತ್ತು ವಿದೇಶ ಪ್ರವಾಸದಲ್ಲಿರುವ ಶಾಸಕ ಎಂ.ಪಿ. ರವೀಂದ್ರರ ನಡುವೆ ಚರ್ಚೆಯಾದ ಬಳಿಕ ಪುರಸಭೆ ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆಗೆ ಒಪ್ಪಿತ ಸೂತ್ರ ಸಿದ್ಧವಾಗಲಿದೆ.

ಪಟ್ಟಣದ ಪ್ರಮುಖ ಕಟ್ಟೆಗಳಲ್ಲಿ, ಹೋಟೆಲ್ ಹಾಗೂ ಇತರೆಡೆ ನೂತನ ಅಧ್ಯಕ್ಷರ ಆಯ್ಕೆ ವಿಚಾರ ಬಿರುಸಿನ ಚರ್ಚೆಯ ವಿಷಯವಾಗಿದೆ. ಆಯ್ಕೆಗಾಗಿ ತಮ್ಮದೇ ಲೆಕ್ಕಾಚಾರದಲ್ಲಿ ಜನ ನಿರತರಾಗಿದ್ದಾರೆ. ರಾಜಕೀಯ ಮುಖಂಡರು, ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳು ಪಕ್ಷದ ವರಿಷ್ಠರ ಮೇಲೆ ಪ್ರಭಾವ ಬೀರುವ ಪ್ರಯತ್ನದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT