ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುರಸಭೆಯಿಂದ ಕುಡಿಯುವ ನೀರಿನ ಪೈಪ್‌ಲೈನ್ ಅಳವಡಿಕೆ

Last Updated 13 ಫೆಬ್ರುವರಿ 2012, 8:55 IST
ಅಕ್ಷರ ಗಾತ್ರ

ನಂಜನಗೂಡು: ಪಟ್ಟಣದ ನಾಗಮ್ಮ ಶಾಲೆ ಆವರಣದ ಕುಡಿಯುವ ನೀರು ಸರಬರಾಜಿನ ಓವರ್‌ಹೆಡ್ ಟ್ಯಾಂಕ್‌ನಿಂದ ಎರಡು ಭಾಗವಾಗಿ ವಿಂಗಡಿಸಿ ನೀರು ಹರಿಸುವ ಸುಮಾರು ರೂ.4.5 ಲಕ್ಷ ವೆಚ್ಚದ ಪೈಪ್‌ಲೈನ್ ಕಾಮಗಾರಿಗೆ ಟೆಂಡರ್ ಕರೆಯದೇ ಆರಂಭಿಸಿದ್ದ ಕಾಮಗಾರಿಯನ್ನು ಪುರಸಭೆಯ ಕೆಲವು ಸದಸ್ಯರು ಭಾನುವಾರ ತಡೆ ಹಿಡಿದರು.

ಓವರ್‌ಹೆಡ್ ಟ್ಯಾಂಕ್ ಮೂಲದಿಂದ ಪೈಪ್‌ಲೈನ್ ಅಳವಡಿಸುವ ಮೊದಲೇ ಬ್ರಾಡ್‌ವೇ ರಸ್ತೆಯ ರೈಲ್ವೆ ಗೇಟ್ ಬಳಿ ಚಾಲ್ತಿಯಲ್ಲಿದ್ದ  ಮುಖ್ಯ ಕೊಳಾಯಿ ಮಾರ್ಗ ತುಂಡರಿಸಿ, ರಾಷ್ಟ್ರಪತಿ ರಸ್ತೆ ಕಡೆಗೆ ನೇರವಾಗಿ ನೀರು ಹರಿಸುವ ಕಾಮಗಾರಿಯನ್ನು ಶನಿವಾರ ಮಧ್ಯಾಹ್ನ ಪ್ರಾರಂಭಿಸಲಾಗಿತ್ತು.
 
ಖಾಸಗಿ ಗುತ್ತಿಗೆದಾರರು ಪುರಸಭೆಗೆ ಸೇರಿದ ಜೆಸಿಬಿ ಯಂತ್ರವನ್ನು ಅಕ್ರಮವಾಗಿ ಬಳಸಿಕೊಂಡು ಭೂಮಿಯನ್ನು ಅಗೆಯುವಾಗ ಪೈಪ್ ಒಡೆದ ಪರಿಣಾಮ ಭಾನುವಾರ ಬೆಳಿಗ್ಗೆ ಹಳೆ ಪಟ್ಟಣಕ್ಕೆ ನೀರು ಸರಬರಾಜು ಇಲ್ಲವಾಯಿತು. ಇದರಿಂದ ಕೋಪಗೊಂಡ 7 ಮತ್ತು 8ನೇ ವಾರ್ಡಿನ ಸದಸ್ಯರಾದ ಪಿ. ಚಂದ್ರಶೇಖರ್ ಮತ್ತು ಜಿ. ಮುಹೀರ್‌ಅಹಮದ್ ಹಾಗೂ ಮಾಜಿ ಅಧ್ಯಕ್ಷ ಎಂ.ಶ್ರೀಧರ್ ಸ್ಥಳಕ್ಕೆ ದೌಡಾಯಿಸಿ ಅಕ್ರಮವಾಗಿ ನಡೆಯುತ್ತಿದ್ದ ಕಾಮಗಾರಿಯನ್ನು ತಡೆಗಟ್ಟಿದರು.

ಬಳಿಕ `ಪ್ರಜಾವಾಣಿ~ ಜತೆ ಮಾತನಾಡಿದ ಪಿ.ಚಂದ್ರಶೇಖರ್, ಸುಮಾರು ರೂ. 4.5 ಲಕ್ಷ ವೆಚ್ಚದ ಕಾಮಗಾರಿಗೆ ಟೆಂಡರ್ ಕರೆದಿಲ್ಲ. ಕಾಮಗಾರಿ ಆದೇಶ ನೀಡಿಲ್ಲ. ಕೇವಲ ಅಂದಾಜು ಪಟ್ಟಿ ಮಾತ್ರ ತಯಾರಿಸಲಾಗಿದೆ.

ಸದಸ್ಯರೊಬ್ಬರ ಒತ್ತಡಕ್ಕೆ ಮಣಿದು ಈ ಅಕ್ರಮ ಕಾಮಗಾರಿಯನ್ನು ಶುರು ಮಾಡಲಾಗಿದೆ. ಈ ಬಗ್ಗೆ ತಪ್ಪಿತಸ್ಥರ ವಿರುದ್ಧ ಜಿಲ್ಲಾಧಿಕಾರಿಗಳು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

7, 6 ಮತ್ತು 8ನೇ ವಾರ್ಡಿಗೆ ಅನ್ವಯವಾಗುವಂತೆ ಓವರ್‌ಹೆಡ್ ಟ್ಯಾಂಕ್‌ನಿಂದ ಪ್ರತ್ಯೇಕ ಪೈಪ್‌ಲೈನ್ ಅಳವಡಿಸಿ, ನೀರು ಸರಬರಾಜು ಸುಸೂತ್ರವಾಗಿದೆ ಎಂದು ಕಂಡು ಬಂದ ನಂತರವಷ್ಟೇ ನೀರು ಸರಬರಾಜು ವ್ಯವಸ್ಥೆಯನ್ನು ವಿಂಗಡಿಸಬೇಕು. ಅಲ್ಲಿಯ ತನಕ ಈಗಿರುವ ವ್ಯವಸ್ಥೆಯೇ ಮುಂದುವರಿಯಬೇಕು.
 
ಸೋಮವಾರ ಪಟ್ಟಣದಲ್ಲಿ ಮಾರಿ ಹಬ್ಬ ಆಚರಿಸಲಾಗುತ್ತಿದೆ. ಮುಂದಿನ ಸೋಮವಾರ (ಫೆ.20) ಶಿವರಾತ್ರಿ ಹಬ್ಬ ಬರುತ್ತಿದೆ. ಈ ರೀತಿ ಹಬ್ಬದ ಮುನ್ನಾ ದಿನಗಳಲ್ಲಿ ಅದೂ 2ನೇ ಶನಿವಾರ, ಭಾನುವಾರದ ರಜಾ ದಿನ ನೋಡಿ ಅಕ್ರಮವಾಗಿ ಕಾಮಗಾರಿ ನಡೆಸಿ ನೀರು ಸರಬರಾಜಿಗೆ ಧಕ್ಕೆ ಆಗಲು ಕಾರಣರಾದ ಅಧಿಕಾರಿಗಳ ವಿರುದ್ಧ ಸದಸ್ಯರು ಹರಿಹಾಯ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT