ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಳಕಿತ ಪವನ್

Last Updated 4 ಆಗಸ್ಟ್ 2011, 19:30 IST
ಅಕ್ಷರ ಗಾತ್ರ

ಪ್ರತಿಯೊಂದು ಹಾಡಿಗೂ ವಿವರಣೆ ನೀಡುತ್ತಾ, ದೊರಕುತ್ತಿದ್ದ ಪ್ರತಿಕ್ರಿಯೆಗಳಿಂದ ಪುಳಕಿತವಾಗುತ್ತಾ ಓಡಾಡುತ್ತಿದ್ದರು ನಿರ್ದೇಶಕ ಪವನ್. ತಮ್ಮ `ಲೈಫು ಇಷ್ಟೇನೆ!~ ಚಿತ್ರದ ಹಾಡುಗಳ ಪ್ರದರ್ಶನ ಮತ್ತು ಸೀಡಿ ಬಿಡುಗಡೆ ಸಮಾರಂಭದಲ್ಲಿ ಅವರು ವಹಿಸಿದ್ದು ನಿರೂಪಕನ ಪಾತ್ರ.

ಮೊದಲಿಗೆ ಮಾತನಾಡಿದ ಸಂಗೀತ ನಿರ್ದೇಶಕ ಮನೋಮೂರ್ತಿ ಈ ಚಿತ್ರದ ಮೂಲಕ ತಾವು ರಂಜಿತ್ ಮತ್ತು ಅಂಕಿತಾ ಪಾಯಿ ಎಂಬ ಗಾಯಕರಿಗೆ ಅವಕಾಶ ನೀಡಿದ್ದನ್ನು ಸಂತಸದಿಂದ ಹೇಳಿಕೊಂಡರು. ಅಲ್ಲದೇ `ಲೈಫು ಇಷ್ಟೇನೆ~ ಸೀಡಿಯೊಳಗೆ ಸಾಹಿತ್ಯವಿಲ್ಲದ ಒಂದು ಟ್ಯೂನ್ ಕೊಟ್ಟು ಹಾಡು ಕಟ್ಟಲು ಕೇಳಿದ್ದೇವೆ. ಕನ್ನಡಿಗರು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು ಎಂದು ಆಹ್ವಾನಿಸಿದರು.

 ಹಾಡುಗಳ ಪ್ರದರ್ಶನದ ನಡುನಡುವೆ ಹಾಡು ಬರೆದ ಸಾಹಿತಿಗಳಾದ ಯೋಗರಾಜ್ ಭಟ್, ಜಯಂತ್ ಕಾಯ್ಕಿಣಿ, ಗಾಯಕರಾದ ಚೇತನ್, ಹೇಮಂತ್, ಅನನ್ಯ ಭಗತ್ ಮಾತನಾಡಿದರು.

ಮೊದಲಿಗೆ ಯೋಗರಾಜ್ ಭಟ್ಟರು ತಾವು ಈ ಹಾಡುಗಳನ್ನು ಬರೆದಾಗ ಪವನ್ ತುಂಬಾ ಗಂಭೀರವಾಯಿತು ಎಂದು ತೆಗೆದ ತರಕಾರನ್ನು ನೆನಪಿಸಿಕೊಂಡರು. ಪವನ್ ತುಂಬಾ ಗಂಭೀರ ಸ್ವಭಾವದ ಹುಡುಗ ಅದಕ್ಕೆ ಗಂಭೀರವಾದ ಹಾಡುಗಳನ್ನು ಬರೆದುಕೊಟ್ಟಿರುವುದಾಗಿ ಹೇಳಿದ ಅವರು-

`ಗಾಯಕ ಚೇತನ್ ತಮ್ಮ ತಂದೆ ತುರ್ತು ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭದಲ್ಲಿ ಈ ತಮಾಷೆ ಹಾಡನ್ನು ಹಾಡಿದರು. ಆರ್ಡಿನರಿ ಮೈಕ್‌ನಲ್ಲಿ ಅವರು ಹಾಡಿದ್ದನ್ನೇ ಅಂತಿಮಗೊಳಿಸಿದ್ದೇವೆ.
 
ಈ ಹಾಡಿನಲ್ಲಿ ಎಂಟನೇ ತರಗತಿ ಹುಡುಗಿ ಹುಡುಗರಿಗಿಂತ ಉದ್ದವಾಗುವ ಮತ್ತು ಕಾಲೇಜು ಗೆಳತಿ ಗೆಳೆಯನಿಗೆ ರಾಕಿ ಕಟ್ಟುವ ಘಟನೆಗಳು ಬರುತ್ತವೆ. ಅವು ಮನೋಮೂರ್ತಿಯವರ ಜೀವನದಲ್ಲಿ ನಡೆದದ್ದು. ಹಾಡುಗಳ ಚಿತ್ರೀಕರಣವನ್ನು ನೋಡಿದರೆ ಪವನ್ ಕೆಲಸದಲ್ಲಿ ಭವಿಷ್ಯದ ತಾಕತ್ತು ಎದ್ದುಕಾಣುವಂತಿದೆ~ ಎಂದು ಹೊಗಳಿದರು.

ಪವನ್ ಅವರ ವೃತ್ತಿಪರತೆಯನ್ನು ಮನಸಾರೆ ಮೆಚ್ಚಿ ಮಾತನಾಡಿದ ಕವಿ ಜಯಂತ ಕಾಯ್ಕಿಣಿ- `ಭಟ್ಟರ ಶಾಲೆಯಲ್ಲಿ ಪಳಗಿದ ಮೊದಲ ಹುಡುಗ ಪವನ್. ರಂಗಶಂಕರದಲ್ಲಿ ಹುಚ್ಚನಂತಿದ್ದ ಈತ ಅಪ್ಪನ ನಿರೀಕ್ಷೆಗಳನ್ನು ತಲೆಕೆಳಗು ಮಾಡಿದ್ದ. ಇದೀಗ ಅವನು ಹೊಸ ತಲೆಮಾರಿನ ಹುಡುಗರ ತಲ್ಲಣಗಳನ್ನು ಅರಿತು ಸ್ವಂತಿಕೆಯಿಂದ ಸಾಧನೆ ಮಾಡುತ್ತಿದ್ದಾನೆ. ಅವನಿಗಾಗಲೇ ಸೂಕ್ತ ತರಬೇತಿ ಸಿಕ್ಕಿದೆ~ ಎಂದರು.

ನಂತರ ತಮ್ಮ ಚಿತ್ರ ಸಾಹಿತ್ಯವನ್ನು ವ್ಯಂಗ್ಯ ಮಾಡಿಕೊಳ್ಳುವಂತೆ `ಕವಿಗಳಾದ ನಾವು ನಮ್ಮ ಹೆಂಡತಿಯರಿಗೆ ಮತ್ತು ಪ್ರೇಯಸಿಯರಿಗೆ ಹೇಳಬೇಕಾದ ಸಾಲುಗಳನ್ನು ಈ ದಿಗಂತ್‌ಗೆ ಬರೆಯಬೇಕಾದ ಪರಿಸ್ಥಿತಿ ಬಂದಿದೆ~ ಎನ್ನುತ್ತಾ ನಕ್ಕರು.

ಗಾಯಕ ಚೇತನ್ ಹಾಡು ಹಾಡುವಾಗ ಚಿಕಿತ್ಸೆ ಪಡೆಯುತ್ತಿದ್ದ ತಮ್ಮ ತಂದೆಯನ್ನು ಮರೆತು ಹಾಡಿದ್ದಾಗಿ ಹೇಳಿದರು. ಹೇಮಂತ್‌ಗೆ ಹಾಡು ಹಾಡಿದ ನಂತರ ಸ್ಕ್ರಿಪ್ಟ್ ಕೇಳಿದ ಅನುಭವವಾಯಿತಂತೆ.

ನಾಯಕಿ ಸಿಂಧು ಹೆಚ್ಚು ಮಾತನಾಡದೇ ಅವಕಾಶ ನೀಡಿದವರಿಗೆ ಧನ್ಯವಾದ ಅರ್ಪಿಸಿದರು. ಮತ್ತೊಬ್ಬ ನಾಯಕಿ ಸಂಯುಕ್ತಾ ತಮ್ಮ ಮೆಚ್ಚಿನ ಗಾಯಕಿ ಶ್ರೇಯಾ ಘೋಷಾಲ್ ಹಾಡಿಗೆ ತಾವು ನಟಿಸಿದ ಸಂತಸ ಹೇಳಿಕೊಂಡರು.

ಛಾಯಾಗ್ರಾಹಕ ಜ್ಞಾನಮೂರ್ತಿ ಅವರನ್ನು ಪರ್ಯಾಯ ನಾಯಕ ಎಂದು ಹೊಗಳಿದ ನಾಯಕ ದಿಗಂತ್, ಚಿತ್ರದಲ್ಲಿ ತಾವೆಲ್ಲಾ ಚೆನ್ನಾಗಿ  ಕಾಣಲು ಛಾಯಾಗ್ರಾಹಕರು ಮತ್ತು ವಸ್ತ್ರವಿನ್ಯಾಸಕರೇ ಕಾರಣ ಎಂದರು.

ಸಂಪೂರ್ಣ ಚಿತ್ರವನ್ನು ಹೆಗಲ ಮೇಲೆ ಕ್ಯಾಮೆರಾ ಹೊತ್ತು ಚಿತ್ರೀಕರಿಸಿರುವ ಛಾಯಾಗ್ರಾಹಕ ಜ್ಞಾನಮೂರ್ತಿ ತಮ್ಮ ಅನುಭವ ಹಂಚಿಕೊಂಡರು.

`ಭಟ್ಟರ ಮಾತುಗಳಿಂದ ವಿಚಲಿತರಾಗಿ ಮತ್ತೆ ರೀಶೂಟ್ ಮಾಡೋಣ~ ಎನಿಸುತ್ತಿದೆ ಎಂದ ನಿರ್ದೇಶಕ ಪವನ್, `ನಿನ್ನ ಗುಂಗಲ್ಲೇ..~ ಮತ್ತು `ಮಾಯಾವಿ.. ಮಾಯಾವಿ..~ ಹಾಡುಗಳನ್ನು ಲಡಾಖ್‌ನಲ್ಲಿ ಚಿತ್ರೀಕರಿಸಿದ ವಿಚಾರ ತಿಳಿಸಿದರು.

ತಮಗೆ ಮೊದಲ ಬಾರಿಗೆ `ಇಂತಿ ನಿನ್ನ ಪ್ರೀತಿಯ~ ಚಿತ್ರದಲ್ಲಿ ವಾಸ್ನೆ ಬಾಬು ಪಾತ್ರ ಮಾಡಲು ಅವಕಾಶ ನೀಡಿ, ಭಟ್ಟರ ತಂಡಕ್ಕೆ ಪರಿಚಯಿಸಿದವರು ನಿರ್ದೇಶಕ ಸೂರಿ ಎಂದು ಹೇಳಿ ಅವರನ್ನು ವೇದಿಕೆಗೆ ಕರೆದ ಪವನ್ ಅವರಿಂದಲೇ ಸೀಡಿ ಬಿಡುಗಡೆ ಮಾಡಿಸಿದರು. ಸಮಾರಂಭದಲ್ಲಿ ನಿರ್ಮಾಪಕ ಮಂಜುನಾಥ್, ಅತಿಥಿ ಪಾತ್ರದಲ್ಲಿ ನಟಿಸಿರುವ ರಮ್ಯಾಬಾರ್ನ, ಚೆರ‌್ರಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT