ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸರಿಗೆ ದೂರು ಕೊಟ್ಟೀರಿ, ಜೋಕೆ!

Last Updated 16 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಮೊಬೈಲ್ ಬಳಸುವ ಪ್ರತಿಯೊಬ್ಬರಿಗೂ ಯಾವುದೋ ಒಂದು ಸ್ಪರ್ಧೆ­ಯಲ್ಲಿ ಕೋಟ್ಯಂತರ ರೂಪಾಯಿ ಬಹುಮಾನ ಬಂದಿದೆ, ಪಡೆಯಲು ನಿಮ್ಮ ಬ್ಯಾಂಕ್ ವಿವರ, ಹೆಸರು ಇತ್ಯಾದಿ ಮಾಹಿತಿ ನೀಡುವಂತೆ ಕೋರಿ ಕಿರು­ಸಂದೇಶಗಳು ಬರುವುದು ಬಹಳ ಸಾಮಾನ್ಯ. ಇಂಥ ಸಂದೇಶ ಓದಿ ‘ಡಿಲಿಟ್’ ಮಾಡು­­­ವವರು ಸಾಕಷ್ಟು ಜನ ಇದ್ದರೂ, ಕೆಲ­ವರು ಆಸೆಗೋ, ಅಜ್ಞಾನಕ್ಕೋ ಇಂತಹ ಸಂದೇ­ಶಗಳಿಗೆ ಪ್ರತಿಕ್ರಿಯಿಸಿ ಹತ್ತಿಪ್ಪತ್ತು ಲಕ್ಷ ರೂಪಾಯಿ ಕಳೆದುಕೊಂಡು ನರಳುವವರೂ ಇದ್ದಾರೆ. 

ನನ್ನ ಮೊಬೈಲ್‌ಗೂ ಹೀಗೆ ಪದೇ ಪದೇ ಬರುತ್ತಿದ್ದ ಸಂದೇಶಗಳು ಬಹಳ ಕಿರಿಕಿರಿ ಮಾಡುತ್ತಿದ್ದುದರಿಂದ ಮತ್ತು ಇಂತಹ ವಂಚಕರ ಜಾಲವನ್ನು ಬಯಲಿಗೆಳೆಯಬೇಕೆಂಬ ಹಾಗೂ ಸಾರ್ವಜನಿಕರಿಗೆ ಆಗುವ ಮೋಸ ನಿಲ್ಲಲಿ ಎಂಬ ಸದುದ್ದೇಶದಿಂದ ನಾನು ಸಂದೇಶಗಳ ವಿವರ­ಗಳನ್ನು ರಾಜ್ಯದ ಪೊಲೀಸ್‌ ಮಹಾನಿರ್ದೇಶಕರಿಗೆ ನೀಡಿ ಅಗತ್ಯ  ಕಾನೂನು ಕ್ರಮ ಕೈಗೊಳ್ಳುವಂತೆ ಕೋರಿದೆ.  ನನ್ನ ಪತ್ರಕ್ಕೆ ಅಗತ್ಯ ಕ್ರಮ ಕೈಗೊಂಡಿ­ರುವುದಾಗಿ ಹೇಳಿ ಹಿಂಬರಹ ಬಂತು. 

ಆದರೆ ಸಂದೇಶಗಳು ಬರುವುದು ಮಾತ್ರ ನಿಲ್ಲಲಿಲ್ಲ.  ಇದಾದ ನಾಲ್ಕು ತಿಂಗಳು ನಂತರ ಮತ್ತೆ ಎಲ್ಲ ಸಂದೇಶಗಳ ವಿವರ ಸಹಿತ ತೀವ್ರ ಕ್ರಮ ಕೋರಿ ಮತ್ತೊಂದು ಪತ್ರವನ್ನು ಪೊಲೀಸ್‌ ಮಹಾನಿರ್ದೇಶಕರಿಗೆ ಸಲ್ಲಿಸಿದೆ. 

ಈ ಬಾರಿ ನನ್ನ ದೂರಿಗೆ ಸ್ವಲ್ಪ ಗಂಭೀರವಾಗಿ ಸ್ಪಂದಿಸಿದ ಪೊಲೀಸ್‌ ಮಹಾನಿರ್ದೇಶಕರು ನನ್ನ ಪತ್ರವನ್ನು ಸೈಬರ್ ಕ್ರೈಮ್ ಪೊಲೀಸ್ ಠಾಣೆಗೆ ರವಾನಿಸಿದ್ದರು.  ಬೆಂಗಳೂರಿನ ಸೈಬರ್ ಕ್ರೈಮ್ ಪೋಲಿಸ್ ಠಾಣೆಯವರು ನನಗೆ ದೂರವಾಣಿ ಕರೆ ಮಾಡಿ, ‘ನಿಮ್ಮ ದೂರು ನಮ್ಮ ಕಚೇರಿಗೆ ಬಂದಿದೆ. ನೀವು ಬಂದು ಅದರ ಕುರಿತಂತೆ ಒಂದು ಹೇಳಿಕೆಯನ್ನು ಕೊಡಬೇಕಾಗುತ್ತದೆ’ ಎಂದರು.  ನಾನು, ‘ಮೌಖಿಕ ದೂರು ನೀಡಿದರೆ ಲಿಖಿತ ದೂರು ಕೊಡಿ ಎನ್ನುತ್ತೀರಿ, ಈಗ ಲಿಖಿತ ದೂರು ಸಲ್ಲಿಸಿದ್ದೇನೆ.  ಮತ್ತೆ ಈ ವಿಷಯಕ್ಕೆ ಅಲ್ಲಿಗೆ ಬಂದು ಏನು ಹೇಳಿಕೆಯನ್ನು ನೀಡಬೇಕು?   ಪ್ರಯಾಣ ವೆಚ್ಚವನ್ನು ಸ್ವಂತ ಭರಿಸಿ  ಅಷ್ಟು ದೂರ ಬರುವುದು ನನಗೆ ಸಾಧ್ಯವಿಲ್ಲ.  ನಿಮ್ಮ ಇಲಾಖೆಯ ಶಿವಮೊಗ್ಗದ ಸಿಬ್ಬಂದಿಗೆ ಸೂಚಿಸಿ ಇಲ್ಲಿಯೇ ನನ್ನ ಹೇಳಿಕೆ ಪಡೆದು ನಿಮಗೆ ಕಳಿಸಲು ತಿಳಿಸಿ’ ಎಂದೆ.  ‘ನಮ್ಮ ವ್ಯಾಪ್ತಿಗೆ ಶಿವಮೊಗ್ಗ ಸಿಬ್ಬಂದಿ ಬರುವುದಿಲ್ಲ, ಹಾಗಾಗಿ ಅವರ ಸಹಾಯ ಪಡೆಯಲು ಆಗದು.  ಮತ್ತು ನಿಮ್ಮ ಮೊಬೈಲ್‌ಗೆ ಬಂದಿರುವ ಸಂದೇಶಗಳು ಮತ್ತು ಮೊಬೈಲ್ ಫೋನ್‌ನ ಫೋಟೊ ಬೇಕಾಗುತ್ತದೆ.  ಆದ್ದರಿಂದ ನೀವೇ ಬಂದು ಹೋಗಿ’ ಎಂದು ದಿನಕ್ಕೆ ಎರಡು ಮೂರು ಬಾರಿ ಕರೆ ಮಾಡ­ತೊಡಗಿದರು. 

ಇಂತಹ ನಿರಂತರ ಒತ್ತಡಗಳಿಂದ ಬೇಸತ್ತ ನಾನು, ‘ನನಗಂತೂ ಅಲ್ಲಿಗೆ ಬರಲು ಸಾಧ್ಯವಿಲ್ಲ’ ಎಂದು ಖಂಡಿತವಾಗಿ ಹೇಳಿದ ಮೇಲೆ, ‘ಆಯಿತು, ನಿಮ್ಮ ಮೊಬೈಲ್ ನ  ಫೋಟೊ ಹಾಗೂ ಸಂದೇಶಗಳನ್ನು ಇ–ಮೇಲ್ ಮೂಲಕ ಕಳುಹಿಸಿ, ಆದರೆ ನೀವಂತೂ ನಮ್ಮಲ್ಲಿಗೆ ಬಂದು ಹೇಳಿಕೆ ಕೊಡಲೇಬೇಕು’ ಎಂದರು. 

ನಂತರದಲ್ಲಿ ‘ನಿಮಗೆ ಬಿಡುವಾದಾಗ ಬಂದು ಹೇಳಿಕೆ ಕೊಡಿ’ ಎಂಬ ಇ– ಮೇಲ್‌ನ್ನು ಕಳಿಸಿ­ದರು.  ಒಂದು ಸಮಾಧಾನದ ಸಂಗತಿ­ಯೆಂದರೆ ಕರೆಮಾಡಿದ್ದ ಪೊಲೀಸ್‌ ಉಪಾಧೀಕ್ಷಕ ದರ್ಜೆ ಅಧಿಕಾರಿ ಸೌಜನ್ಯಯುತವಾಗಿ, ಸಹೃದಯತೆ­ಯಿಂದ ಮಾತನಾಡಿದರು.  ಕಾಕತಾಳೀಯ ಎಂಬಂತೆ ನನ್ನ ಮನವಿಯು ಸೈಬರ್ ಕ್ರೈಮ್ ಠಾಣೆಗೆ ರವಾನೆಯಾದ ನಂತರದಿಂದ ಬಹು­ಮಾನ ಪಡೆದ ಒಂದೇ ಒಂದು ಸಂದೇಶ ನನ್ನ ಮೊಬೈಲ್‌ಗೆ ಬಂದಿಲ್ಲ!   ದೂರುದಾರರ ಹೆಸರು, ವಿಳಾಸಗಳನ್ನು ಖಚಿತಪಡಿಸಿಕೊಂಡ ನಂತರ ಆರೋಪಿತರನ್ನು ಕಂಡುಹಿಡಿಯಲು ಪೊಲೀಸರು ಪರಿಶ್ರಮಿಸಬೇಕಲ್ಲದೇ ದೂರು ಕೊಟ್ಟ ತಪ್ಪಿಗೆ ದೂರುದಾರರಿಗೇ ಪದೇ ಪದೇ ದೂರವಾಣಿ ಕರೆ ಮಾಡಿ  ವಿಚಾರಣೆಗೆ ಹಾಜರಾಗುವಂತೆ ಸತತ ಒತ್ತಡ ಹೇರುವುದು ಎಷ್ಟು ಸಮರ್ಥನೀಯ?  ಇದರಿಂದ ಯಾರು ಮತ್ತೆ ದೂರು ಕೊಡಲು ಮನಸ್ಸು ಮಾಡುವರು?

ಇದರಂತೆಯೇ ಬೆಂಗಳೂರಿನಲ್ಲಿ ಆಟೊ ರಿಕ್ಷಾದವರು ಹೆಚ್ಚು ಬಾಡಿಗೆ ಕೇಳುವ, ಕರೆದಲ್ಲಿಗೆ ಬರಲು ನಿರಾಕರಿಸುವ ಕುರಿತು ಬೆಂಗಳೂರು ಮಹಾನಗರ ಪೊಲೀಸ್‌ ಆಯುಕ್ತರಿಗೆ ಈ ವರ್ಷದ ಜೂನ್‌ ೦೩ ರಂದು  ಒಂದು ಲಿಖಿತ ದೂರನ್ನು ಆಟೊ ರಿಕ್ಷಾಗಳ ಸಂಖ್ಯೆ, ಸಮಯ, ಸ್ಥಳ, ದಿನಾಂಕ ಸಹಿತ ಸಲ್ಲಿಸಿದ್ದೆ.  ಇದಾಗಿ ಮೂರೂವರೆ ತಿಂಗಳ ನಂತರ (೨೪.೦೯.೨೦೧೩) ಬೆಂಗಳೂರಿನ  ಉಪ್ಪಾರಪೇಟೆ ಪೊಲೀಸ್‌ ಠಾಣೆಯಿಂದ ಒಂದು ಹಿಂಬರಹ ಬಂದಿದೆ.  ಆಟೊರಿಕ್ಷಾಗಳ ಪತ್ತೆಗಾಗಿ ನಮ್ಮ ಸಿಬ್ಬಂದಿ ಕೈಗೊಂಡ ಕ್ರಮವು ಫಲಕಾ­ರಿಯಾಗಿರದ ಕಾರಣ ಸದರಿ ಆಟೊ ರಿಕ್ಷಾಗಳ ಮಾಲೀಕ ಇಲ್ಲವೇ ಚಾಲಕರ ಮೇಲೆ ಕ್ರಮಕೈ­ಗೊಳ್ಳಲು ಸಾಧ್ಯವಾಗಿರುವುದಿಲ್ಲ.  ಆದಾಗ್ಯೂ ಪತ್ತೆ ಕಾರ್ಯ ಮುಂದುವರೆಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಬರೆಯಲಾಗಿದೆ.   

ಸಂಖ್ಯೆ ಸಹಿತ ನಾಲ್ಕು ಆಟೊಗಳ ವಿರುದ್ಧ ದೂರು ಸಲ್ಲಿಸಿದರೆ ಅವುಗಳನ್ನೇ ಮೂರೂವರೆ ತಿಂಗಳ ನಂತರವೂ ಪತ್ತೆ ಹಚ್ಚಲಾಗಿಲ್ಲವೆಂದರೆ ಈ ಆಟೊಗಳು ಬೆಂಗಳೂರಿನಲ್ಲಿ ಸಂಚರಿಸುತ್ತಿಲ್ಲವೇ? ಈ ಆಟೊಗಳು ಖೊಟ್ಟಿ ವಿಳಾಸ ಹೊಂದಿವೆಯೇ?  ಆಕಸ್ಮಿಕವಾಗಿ ಏನಾದರೂ ಅಪಘಾತ, ಕೊಲೆ, ಅತ್ಯಾಚಾರದಂತಹ ಅಪರಾಧ ಕೃತ್ಯಗಳು ಘಟಿಸಿದಲ್ಲಿ ಆಟೊ ಸಂಖ್ಯೆಗಳನ್ನು ಆಧರಿಸಿ ದೂರು ನೀಡಿದಲ್ಲಿ ಏನು ಪ್ರಯೋಜನ?  ಸಾರ್ವಜನಿಕರು ಇಂತಹ ಕಾರಣಗಳಿಂದಾಗಿ ದೂರು ನೀಡುವ ಮುನ್ನ ಹತ್ತು ಬಾರಿ ಯೋಚಿಸಬೇಕಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT