ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸ್ ಕಮಿಷನರ್‌ನಿಂದ ಮಾಹಿತಿಗೆ ಆದೇಶ

Last Updated 24 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ನಿವೇಶನ ನೀಡುವುದಾಗಿ ಭರವಸೆ ಕೊಟ್ಟು ವಂಚಿಸಿರುವ ಆರೋಪ ಹೊತ್ತ ನಗರದ ವೈಯಾಲಿಕಾವಲ್ ಗೃಹ ನಿರ್ಮಾಣ ಸಹಕಾರ ಸಂಘದ ಪದಾಧಿಕಾರಿಗಳಿಗೆ ಹಲವು ಬಾರಿ ಜಾರಿ ಮಾಡಿರುವ ಜಾಮೀನು ರಹಿತ ವಾರೆಂಟ್ ಅನ್ನು ಸಂಘಕ್ಕೆ ತಲುಪಿಸುವಲ್ಲಿ  ವಿಫಲರಾದ ಪೊಲೀಸರ ಕ್ರಮಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್, ಈ ಕುರಿತು ನಗರ ಪೊಲೀಸ್ ಕಮಿಷನರ್ ಅವರೇ ಖುದ್ದಾಗಿ ಸಮಜಾಯಿಷಿ ನೀಡುವಂತೆ ಆದೇಶಿಸಿದೆ.

ಪೊಲೀಸರ ವಿಫಲತೆ ಕುರಿತಾಗಿ ಡಾ. ಆತ್ಮರಾಜನ್ ರೈ ಹಾಗೂ ಇತರರು ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಬಿ.ವಿ.ಪಿಂಟೊ ಈ ಆದೇಶ ಹೊರಡಿಸಿದ್ದಾರೆ.

ನಿವೇಶನ ಮಂಜೂರು ಮಾಡುವುದಾಗಿ ನಂಬಿಸಿ 1984ರಿಂದ 1994ರ ಅವಧಿಯ ನಡುವೆ ಲಕ್ಷಾಂತರ ರೂಪಾಯಿಗಳನ್ನು ಸಂಘ ಪಡೆದುಕೊಂಡಿದೆ. ನಿವೇಶನ ಮಂಜೂರು ಮಾಡದ ಕಾರಣ ಗ್ರಾಹಕರ ವೇದಿಕೆ ಮುಂದೆ ದೂರು ಸಲ್ಲಿಸಲಾಗಿತ್ತು. ಈ ಸಂಬಂಧ ತಮ್ಮ ಪ್ರಕರಣ ಒಂದರಲ್ಲಿಯೇ ಸಂಘದ ಪದಾಧಿಕಾರಿಗಳಿಗೆ 10 ಬಾರಿ ವಾರೆಂಟ್ ಜಾರಿ ಮಾಡಲಾಗಿತ್ತು. ಆದರೆ ಅದನ್ನು ತಲುಪಿಸಲು ಪೊಲೀಸರು ವಿಫಲರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸೂಕ್ತ ಕ್ರಮಕ್ಕೆ ಆದೇಶಿಸಬೇಕು ಎನ್ನುವುದು ಅರ್ಜಿದಾರರ ದೂರು. ವಿಚಾರಣೆಯನ್ನು ಮುಂದೂಡಲಾಗಿದೆ.

ಖರ್ಗೆ ಪುತ್ರ ಅರ್ಜಿ ವಜಾ

ಗುಲ್ಬರ್ಗ ಜಿಲ್ಲೆಯ ಚಿತ್ತಾಪುರ ವಿಧಾನಸಭಾ ಕ್ಷೇತ್ರಕ್ಕೆ 2009ರ ಆಗಸ್ಟ್ ತಿಂಗಳಿನಲ್ಲಿ ನಡೆದ ಉಪ ಚುನಾವಣೆಯನ್ನು ಪ್ರಶ್ನಿಸಿ ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ಪ್ರಿಯಾಂಕ್ ಖರ್ಗೆ ಅವರು ಸಲ್ಲಿಸಿದ್ದ ಚುನಾವಣಾ ತಕರಾರು ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

ಮಲ್ಲಿಕಾರ್ಜುನ ಖರ್ಗೆ ಅವರು ಲೋಕಸಭೆಗೆ ಆಯ್ಕೆಯಾದ ಹಿನ್ನೆಲೆಯಲ್ಲಿ ಆ ಕ್ಷೇತ್ರದ ಸ್ಥಾನವು ತೆರವುಗೊಂಡಿತ್ತು. ಈ ಕಾರಣದಿಂದ ಅಲ್ಲಿ ನಡೆದ ಉಪಚುನಾವಣೆಯಲ್ಲಿ ಪ್ರಿಯಾಂಕ್ ಅವರು ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದರು. ಈ ಕ್ಷೇತ್ರದಿಂದ ಆಯ್ಕೆಯಾಗಿರುವ ಬಿಜೆಪಿ ಅಭ್ಯರ್ಥಿ ವಾಲ್ಮೀಕಿ ನಾಯಕ ಅವರು ಕಾನೂನು ಬಾಹಿರವಾಗಿ ಆಯ್ಕೆಯಾಗಿದ್ದಾರೆ ಎನ್ನುವುದು ಪ್ರಿಯಾಂಕ್ ಅವರ ವಾದವಾಗಿತ್ತು.

ನಾಯಕ ಅವರು ವಂಚನೆ, ಭ್ರಷ್ಟಾಚಾರ ಎಸಗುವ ಮೂಲಕ ಹಾಗೂ ಹಣದ ಆಮಿಷ ಒಡ್ಡಿ ಮತದಾರರನ್ನು ಖರೀದಿ ಮಾಡುವ ಮೂಲಕ ಚುನಾವಣಾ ಅಕ್ರಮ ಎಸಗಿದ್ದಾರೆ ಎಂದು ಅವರು ದೂರಿದ್ದರು. ಚುನಾವಣೆ ನಡೆಯುವ ದಿನ ಪುಣೆ, ಮುಂಬೈ ಸೇರಿದಂತೆ ಮಹಾರಾಷ್ಟ್ರ ರಾಜ್ಯದಿಂದ ಸುಮಾರು 38 ಬಸ್ಸುಗಳಲ್ಲಿ ಜನರನ್ನು  ಅವರು ಕರೆತಂದಿದ್ದರು. ಈ ಹಿನ್ನೆಲೆಯಲ್ಲಿ ಅವರು ಆಯ್ಕೆಯಾಗಿದ್ದಾರೆ ಎಂಬುದು ಅವರ ವಾದವಾಗಿತ್ತು.

ಆದರೆ ಈ ಎಲ್ಲ ಆರೋಪಗಳಿಗೆ ಸೂಕ್ತ ದಾಖಲೆ ಒದಗಿಸಲು ಪ್ರಿಯಾಂಕ್ ಅವರು ವಿಫಲರಾಗಿದ್ದಾರೆ ಎಂದು ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ ದಾಸ್ ಅವರು ಅಭಿಪ್ರಾಯ ಪಟ್ಟಿದ್ದಾರೆ.

ಜಾಮೀನು ಮಂಜೂರು
ಲಂಚಕ್ಕಾಗಿ ಪೀಡಿಸಿ ವ್ಯಕ್ತಿಯೊಬ್ಬರನ್ನು ಗೃಹ ಬಂಧನದಲ್ಲಿರಿಸಿದ್ದ ಆರೋಪದ ಮೇಲೆ ಬಂಧಿತರಾಗಿದ್ದ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಎಂ.ಮೋಹನ್‌ಕುಮಾರ್ ಮತ್ತು ಕಾನ್ಸ್‌ಸ್ಟೆಬಲ್ ದೊಡ್ಡಸಿದ್ದಯ್ಯ ಅವರಿಗೆ ಹೈಕೋರ್ಟ್ ಸೋಮವಾರ ಜಾಮೀನು ನೀಡಿದೆ.

ಎಚ್‌ಎಸ್‌ಆರ್ ಬಡಾವಣೆ ನಿವಾಸಿ ಶ್ರೀಧರ್ ಅವರಿಂದ ರೂ 4 ಲಕ್ಷ ಲಂಚಕ್ಕೆ ಬೇಡಿಕೆ ಒಡ್ಡಿರುವ ಆರೋಪ ಇವರ ಮೇಲೆ ಇದೆ. ಇವರ ವಿರುದ್ಧ ಶ್ರೀಧರ್ ಅವರ ಸ್ನೇಹಿತ ಪ್ರಭಾಕರ್ ಲೋಕಾಯುಕ್ತರಲ್ಲಿ ದೂರು ದಾಖಲು ಮಾಡಿದ್ದರು.

ತಮ್ಮ ಮೇಲಿರುವ ಆರೋಪಗಳು ನಿರಾಧಾರ ಎಂದು ತಿಳಿಸಿ ಅವರು ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಬಿ.ವಿ.ಪಿಂಟೊ ಮಾನ್ಯ ಮಾಡಿದ್ದಾರೆ.

ಸರ್ಕಾರಕ್ಕೆ ನೋಟಿಸ್
ಬಾರ್ ಅಂಡ್ ರೆಸ್ಟೋರೆಂಟ್‌ನಲ್ಲಿ ಮಹಿಳೆಯರನ್ನು ಕೆಲಸಕ್ಕೆ ಸೇರಿಸಿಕೊಂಡಿರುವ ಕಾರಣ, ಪೊಲೀಸರು ತಮಗೆ ಕಿರುಕುಳ ನೀಡುತ್ತಿರುವುದಾಗಿ ಆರೋಪಿಸಿ ಗಾಂಧಿನಗರದ ಬಳಿಯ ಐಶ್ವರ್ಯ ಬಾರ್ ಮಾಲೀಕರು ಹೈಕೋರ್ಟ್ ಮೊರೆ ಹೋಗಿದ್ದಾರೆ.

ವಿವಾದಕ್ಕೆ ಸಂಬಂಧಿಸಿದಂತೆ ಸರ್ಕಾರ, ಪೊಲೀಸ್ ಕಮಿಷನರ್ ಸೇರಿದಂತೆ ಇತರ ಪ್ರತಿವಾದಿಗಳಿಗೆ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ನೋಟಿಸ್ ಜಾರಿಗೆ ಆದೇಶಿಸಿದ್ದಾರೆ.

ಮಹಿಳೆಯರನ್ನು ಕೆಲಸಕ್ಕೆ ಸೇರಿಸಿಕೊಳ್ಳಲು ಹೈಕೋರ್ಟ್ ಅನುಮತಿ ನೀಡಿದ ಮೇಲೂ ಈ ರೀತಿ ಕಿರುಕುಳ ನೀಡುತ್ತಿರುವುದು ಸರಿಯಲ್ಲ ಎಂದು ಅವರು ದೂರಿದ್ದಾರೆ. ವಿಚಾರಣೆ ಮುಂದೂಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT