ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸ್ ಸಿಬ್ಬಂದಿ ಕೊರತೆ: ಅಪರಾಧ ಹೆಚ್ಚಳ

Last Updated 19 ಜುಲೈ 2012, 8:20 IST
ಅಕ್ಷರ ಗಾತ್ರ

ಮಡಿಕೇರಿ: ಇತ್ತೀಚೆಗೆ ಜಿಲ್ಲೆಯಲ್ಲಿ ಕಳವು, ಹಲ್ಲೆ- ಕೊಲೆ ಪ್ರಕರಣಗಳು ಸೇರಿದಂತೆ ಅಪರಾಧ ಪ್ರಕರಣಗಳು ಹೆಚ್ಚುತ್ತ್ದ್ದಿದು, ಇದನ್ನು ನಿಯಂತ್ರಿಸಬೇಕಾದ ಪೊಲೀಸ್ ಇಲಾಖೆಯಲ್ಲಿ ಈಗ ಸಿಬ್ಬಂದಿ ಕೊರತೆ ತೀವ್ರವಾಗಿ ಕಾಡುತ್ತಿದೆ! 

ನಗರದ ಕೋಟೆ ವಿಧಾನಸಭಾಂಗಣದಲ್ಲಿ ಬುಧವಾರ ಸಚಿವ ಎಂ.ಪಿ. ಅಪ್ಪಚ್ಚು ರಂಜನ್ ಅವರು ಕೈಗೊಂಡ ಅಧಿಕಾರಿಗಳ ಸಭೆಯಲ್ಲಿ ಇಂತಹದೊಂದು ಆಘಾತಕಾರಿ ವಿಷಯವು ಬಹಿರಂಗಗೊಂಡಿತು.

ಕುಶಾಲನಗರದಲ್ಲಿ ಕಳ್ಳತನ ಪ್ರಕರಣಗಳು ಅಧಿಕವಾಗುತ್ತಿದ್ದು, ಇವುಗಳನ್ನು ನಿಯಂತ್ರಿಸಲು ಹಾಗೂ ಕಳ್ಳರನ್ನು ಪತ್ತೆ ಹಚ್ಚಲು ಏನು ಕ್ರಮಕೈಗೊಂಡಿದ್ದೀರಿ ಎಂದು ಸಚಿವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಂಜುನಾಥ ಅಣ್ಣಿಗೇರಿ ಅವರನ್ನು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಅಣ್ಣಿಗೇರಿ ಅವರು, ಜಿಲ್ಲೆಯಲ್ಲಿ ಪೊಲೀಸರ ಕೊರತೆ ತುಂಬಾ ಕಾಡುತ್ತಿದೆ. ರಾತ್ರಿ ಕಾವಲು ಕಾಯಲು ಸಹ ಸಿಬ್ಬಂದಿ ಸಿಗುತ್ತಿಲ್ಲ ಎಂದು ಅಳಲು ತೋಡಿಕೊಂಡರು.

ಈಗಾಗಲೇ 72 ಜನ ಪೊಲೀಸ್ ಪೇದೆಗಳು ವರ್ಗಾವಣೆ ಪಡೆದು ಜಿಲ್ಲೆಯಿಂದ ಹೊರಹೋಗಿದ್ದಾರೆ. ಇದಲ್ಲದೇ ಇನ್ನೂ 27 ಜನ ಪೇದೆಗಳು ವರ್ಗಾವಣೆ ಪಡೆಯಲು ತುದಿಗಾಲಲ್ಲಿ ನಿಂತಿದ್ದಾರೆ. ಸರಿಸುಮಾರು 100 ಜನ ಪೇದೆಗಳ ಕೊರತೆ ಕಾಡುತ್ತಿದೆ ಎಂದು ಅವರು ಹೇಳಿದರು.

ತಾತ್ಕಾಲಿಕವಾಗಿ ಜಿಲ್ಲೆಯ ಮೀಸಲು ಪೊಲೀಸ್ ಪಡೆಯಿಂದ ಕೆಲವು ಜನ ಪೊಲೀಸರ ಸೇವೆಯನ್ನು ಪಡೆಯಲಾಗುತ್ತಿದೆ. ಇಲಾಖೆಯಲ್ಲಿರುವ ಹಲವಾರು ವಾಹನಗಳು ಸಹ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಅವರು ತಿಳಿಸಿದರು.

ಕುಶಾಲನಗರವು ಅತ್ಯಂತ ತೀವ್ರವಾಗಿ ಬೆಳೆಯುತ್ತಿದೆ. ಆದರೆ ಅದಕ್ಕೆ ತಕ್ಕಂತೆ ಪೊಲೀಸ್ ಸಿಬ್ಬಂದಿ ಅಲ್ಲಿಲ್ಲ. ಇತ್ತೀಚೆಗೆ ನಡೆದಿರುವ ಕಳ್ಳತನ ಪ್ರಕರಣಗಳ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದ್ದು, ಸದ್ಯದಲ್ಲಿಯೇ ಕಳ್ಳರನ್ನು ಬಂಧಿಸಲಾಗುವುದು ಎಂದು ನುಡಿದರು.

ನಂತರ ಮಾತನಾಡಿದ ಸಚಿವರ, ಜಿಲ್ಲೆಯಲ್ಲಿ ಅಧಿಕಾರಿಗಳು ಸೇವೆ ಸಲ್ಲಿಸಲು ಉತ್ತಮ ಅವಕಾಶಗಳಿವೆ. ಇದನ್ನು ಸಮರ್ಪಕವಾಗಿ ಬಳಸಿಕೊಂಡು ನಾಗರಿಕರು ಮೆಚ್ಚುವಂತಹ ಕೆಲಸ ಮಾಡಬೇಕು. ಕಾರ್ಯಕ್ರಮ ಅನುಷ್ಠಾನದಲ್ಲಿ ಸಮಸ್ಯೆಗಳಿದ್ದರೆ ತಕ್ಷಣವೇ ತಿಳಿಸಿದರೆ ಪರಿಹರಿಸಲಾಗುವುದು ಎಂದು ಹೇಳಿದರು.

ಜಿ.ಪಂ.ಉಪಾಧ್ಯಕ್ಷರಾದ ಎಚ್.ಎಂ.ಕಾವೇರಿ ಅವರು ಮಾತನಾಡಿ ಶಾಲಾ-ಕಾಲೇಜುಗಳಲ್ಲಿ ಬಿಸಿಯೂಟ, ಮದುವೆ ಮತ್ತಿತರ ಸಮಾರಂಭಗಳಲ್ಲಿ ಆಹಾರ ಪೋಲು ಮಾಡದಂತೆ ಎಚ್ಚರಿಕೆ ವಹಿಸಬೇಕು. ಈ ಬಗ್ಗೆ ಜಿ.ಪಂ.ಸಾಮಾನ್ಯ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದ್ದು, ಆಹಾರವನ್ನು ಪೋಲು ಮಾಡದಂತೆ ಪ್ರತಿಯೊಬ್ಬರೂ ಎಚ್ಚರಿಕೆ ವಹಿಸಬೇಕು ಎಂದು ಅವರು ಸಲಹೆ ಮಾಡಿದರು.

ಜಿಲ್ಲಾಧಿಕಾರಿ ಕೆ.ಎಂ.ಚಂದ್ರೇಗೌಡ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಮಂಜುನಾಥ್ ಅಣ್ಣಿಗೇರಿ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಬಿ.ಅಂಜನಪ್ಪ, ಉಪ ವಿಭಾಗಾಧಿಕಾರಿ ಜಿ.ಪ್ರಭು, ಜಿ.ಪಂ. ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಡಿ.ಬಿ.ಧರ್ಮಪ್ಪ, ಸದಸ್ಯರಾದ ವೆಂಕಪ್ಪ ಪೂಜಾರಿ, ಟಿ.ಪಿ.ಸಂದೇಶ್, ಬಲ್ಲಾರಂಡ ಬೀನಾಬೊಳ್ಳಮ್ಮ, ಮನುಮುತ್ತಪ್ಪ ಮತ್ತು ಇಲಾಖೆ ಅಧಿಕಾರಿಗಳು ಇದ್ದರು.


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT