ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜ್ವಲಿಸುತ್ತಿರುವ ಹಣತೆ ಈ ದೀಪಿಕಾ...

Last Updated 13 ಮೇ 2012, 19:30 IST
ಅಕ್ಷರ ಗಾತ್ರ

ಹಣತೆ ಪುಟ್ಟದು. ಆದರೆ ಅದು ಪ್ರಜ್ವಲಿಸುತ್ತಿರುವ ಪರಿ ಅದ್ಭುತ...
17ರ ಹರೆಯದಲ್ಲೇ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಲು ಅರ್ಹತೆ ಪಡೆದಿರುವ ರಾಂಚಿಯ ಹುಡುಗಿ ದೀಪಿಕಾ ಕುಮಾರಿಯ ಸಾಧನೆಯೇ ಅಂತಹದ್ದು.

ಕಳೆದ ವಾರ ಟರ್ಕಿಯ ಅಂಟಾಲ್ಯದಲ್ಲಿ ನಡೆದ ಬಿಲ್ಲುಗಾರಿಕೆ ವಿಶ್ವಕಪ್‌ನ ವೈಯಕ್ತಿಕ     ರಿಕರ್ವ್ ವಿಭಾಗದಲ್ಲಿ ಅವರು ಚಿನ್ನ ಗೆದ್ದು ಬಂದಿದ್ದಾರೆ. ಅದರಲ್ಲೂ ವಿಶ್ವ ಬಿಲ್ಲುಗಾರಿಕೆಯಲ್ಲಿ ಪಾರಮ್ಯ ಹೊಂದಿರುವ ಕೊರಿಯಾದವರನ್ನು ಹಿಮ್ಮೆಟ್ಟಿಸಿದ ಈ ಹುಡುಗಿಯ ಸಾಧನೆಗೆ ಶಹಬ್ಬಾಸ್ ಹೇಳಲೇಬೇಕು.

ದೀಪಿಕಾ ವಿಶ್ವ ಜೂನಿಯರ್ ಚಾಂಪಿಯನ್ ಕೂಡ. ದೆಹಲಿ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಎರಡು ಚಿನ್ನದ ಪದಕ ಜಯಿಸಿದ್ದರು. ಆಗ ಇವರಿಗೆ ಕೇವಲ 15 ವರ್ಷ! ಹಾಗಾಗಿ ಅವರು ಒಲಿಂಪಿಕ್ಸ್‌ನಲ್ಲಿ ಒಂದು ಪದಕ ಗೆಲ್ಲಬಹುದು ಎಂಬ ಭರವಸೆಯನ್ನು ಭಾರತದ ಕ್ರೀಡಾ ಪ್ರೇಮಿಗಳು ಇಟ್ಟುಕೊಂಡಿದ್ದಾರೆ.

ಭಾರತಕ್ಕೆ ಟ್ವೆಂಟಿ-20 ಹಾಗೂ ಏಕದಿನ ಕ್ರಿಕೆಟ್ ವಿಶ್ವಕಪ್ ಗೆದ್ದುಕೊಟ್ಟ ನಾಯಕ ಮಹೇಂದ್ರ ಸಿಂಗ್ ದೋನಿ ಅವರ ಊರಿನ ದೀಪಿಕಾ ಇಂದು ಭಾರತ ಕ್ರೀಡಾ ರಂಗದ ಮಿನುಗು ತಾರೆ.
 
ದೀಪಿಕಾ ಜಾರ್ಖಂಡ್ ಮುಖ್ಯಮಂತ್ರಿ ಅರ್ಜುನ್ ಮುಂಡಾ ಅವರ ಪತ್ನಿ ಮೀರಾ ಮುಂಡಾ ಸ್ಥಾಪಿಸಿರುವ ಅರ್ಜುನ್ ಆರ್ಚರಿ ಅಕಾಡೆಮಿಯಲ್ಲಿ ತರಬೇತಿ ಪಡೆಯಲು 2005ರಲ್ಲಿ ಆರಂಭಿಸಿದರು. 2006ರಲ್ಲಿ ಜೆಮ್‌ಶೆಡ್‌ಪುರದಲ್ಲಿರುವ ಟಾಟಾ ಆರ್ಚರಿ ಅಕಾಡೆಮಿಗೆ ಸೇರಿದರು.

ಅಲ್ಲಿ ಅವರಿಗೆ ಪ್ರತಿ ತಿಂಗಳು 5000 ರೂ. ಭತ್ಯೆ ಸಿಗುತಿತ್ತು. ಆಟೊ ರಿಕ್ಷಾ ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದ ತಂದೆಯ ಬಳಿ ಹಣದ ನೆರವು ಕೇಳುವ ಪ್ರಮೇಯವೇ ಬರಲಿಲ್ಲ.

ಚಿಕ್ಕ ವಯಸ್ಸಿನ ಈ ಹುಡುಗಿಯ ಮೇಲೆ ಈಗ ಅಪಾರ ನಿರೀಕ್ಷೆಗಳಿವೆ. ಅವರು ರಾಂಚಿಯ ಜೂನಿಯರ್ ಕಾಲೇಜ್‌ನಲ್ಲಿ ಎರಡನೇ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ವಿಶ್ವಕಪ್ ಗೆದ್ದು ಸ್ವದೇಶಕ್ಕೆ ಹಿಂತಿರುಗಿರುವ ದೀಪಿಕಾ `ಪ್ರಜಾವಾಣಿ~ಯೊಂದಿಗೆ ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ.

* ದೇಶ ಈಗ ನಿಮ್ಮ ಮೇಲೆ ತುಂಬಾ ನಿರೀಕ್ಷೆ ಇಟ್ಟುಕೊಂಡಿದೆ. ಇದಕ್ಕೆ ಯಾವ ರೀತಿ ಸ್ಪಂದಿಸುತ್ತೀರಾ?
ಆರಂಭದಲ್ಲಿ ಪತ್ರಿಕೆ, ಟಿವಿಯಲ್ಲಿ ನನ್ನ ಹೆಸರು ಬಂದಾಗ ತುಂಬಾ ಭಯವಾಗುತಿತ್ತು. ಏಕೆಂದರೆ ಈ ನಿರೀಕ್ಷೆಯನ್ನು ಉಳಿಸಿಕೊಂಡು ಹೋಗುವುದು ಹೇಗೆ ಎಂಬ ಒತ್ತಡ ಶುರುವಾಗುತಿತ್ತು. ಆದರೆ ಈಗ ಅದನ್ನೆಲ್ಲಾ ನಿಭಾಯಿಸುವುದನ್ನು ಕಲಿತುಕೊಂಡಿದ್ದೇನೆ. ಅದನ್ನು ಸವಾಲಾಗಿ ಸ್ವೀಕರಿಸಿದ್ದೇನೆ.

* ಇಷ್ಟು ಚಿಕ್ಕ ವಯಸ್ಸಿನಲ್ಲಿಯೇ ಇಷ್ಟೊಂದು ಸಾಧನೆ ಮೂಡಿ ಬಂದಿದೆ. ಈ ಕುರಿತು?
ಆ ಶ್ರೇಯ ನನ್ನ ಕೋಚ್‌ಗಳಿಗೆ ಸಲ್ಲಬೇಕು. ಜೊತೆಗೆ ನನ್ನನ್ನು ಸದಾ ಪ್ರೋತ್ಸಾಹಿಸುವ ಪೋಷಕರು, ತರಬೇತಿ ಹಾಗೂ ನೆರವು ನೀಡುತ್ತಿರುವ ಟಾಟಾ ಆರ್ಚರಿ ಅಕಾಡೆಮಿ ಅದಕ್ಕೆ ಕಾರಣ. 

* ಲಂಡನ್‌ನಲ್ಲಿ ಪದಕ ಗೆದ್ದು ಬರುವ ವಿಶ್ವಾಸ ವ್ಯಕ್ತಪಡಿಸಿದ್ದೀರಿ. ಈ ಬಗ್ಗೆ?
ಖಂಡಿತ ಪದಕ ಗೆದ್ದು ಬರುವ ವಿಶ್ವಾಸದಲ್ಲಿದ್ದೇನೆ. ಅದು ಚಿನ್ನದ ಪದಕ ಎಂದು ಮಾತ್ರ ಭರವಸೆ ನೀಡಲಾರೆ. ಆದರೆ ಬರಿಗೈಯಲ್ಲಿ ಬರಲು ಖಂಡಿತ ನನಗೆ ಇಷ್ಟವಿಲ್ಲ.

* ನಿಮ್ಮ ಕುಟುಂಬದ ಆರ್ಥಿಕ ಪರಿಸ್ಥಿತಿ ನಿಮ್ಮ ಸಾಧನೆಗೆ ಅಡ್ಡಿಯಾಗಲಿಲ್ಲವೇ?
ಅದ್ಯಾವತ್ತೂ ನನ್ನನ್ನು ಕಾಡಲಿಲ್ಲ. ಅದಕ್ಕೆ ಕಾರಣ ಟಾಟಾ ಆರ್ಚರಿ ಅಕಾಡೆಮಿ. ಈ ಅಕಾಡೆಮಿಗೆ ಸೇರಿದ್ದು ನನ್ನ ಜೀವನದ ಟರ್ನಿಂಗ್ ಪಾಯಿಂಟ್.

* ರಾಂಚಿಯಿಂದ ಲಂಡನ್ ಒಲಿಂಪಿಕ್‌ವರೆಗಿನ ನಿಮ್ಮ ಹಾದಿ ಬಗ್ಗೆ ಹೇಳಿ?
ಚಿಕ್ಕ ಚಿಕ್ಕ ಸ್ಪರ್ಧೆಗಳಲ್ಲಿ ಗೆದ್ದಾಗ ನನಗೆ ಸಿಗುತ್ತಿದ್ದ ಸ್ವಾಗತ ತುಂಬಾ ಖುಷಿಗೆ ಕಾರಣವಾಗುತಿತ್ತು. ಆ ಸ್ವಾಗತ, ಸನ್ಮಾನ, ಪ್ರಶಂಸೆ ನನಗೆ ಸ್ಫೂರ್ತಿ ನೀಡಿದವು. ನನಗೆ ಸಿಕ್ಕ ಬಹುಮಾನಗಳು ಖುಷಿಗೆ ಕಾರಣವಾದವು.

ಆದರೆ ಆ ಬಗ್ಗೆ ನಾನು ಹೆಚ್ಚು ಚಿಂತಿಸಲು ಹೋಗಿಲ್ಲ. ಕಾಮನ್‌ವೆಲ್ತ್ ಕೂಟದಲ್ಲಿ ಚಿನ್ನ ಗೆದ್ದಾಗ ಬಂದ 30 ಲಕ್ಷ ರೂಪಾಯಿಗೂ ಹೆಚ್ಚು ಬಹುಮಾನ ಹಣವನ್ನು ತಂದೆಗೆ ಕೊಟ್ಟೆ. ಅವರು ನನಗೆ ಬೇಕಾದ ಸಾಧನಗಳನ್ನು ಖರೀದಿಸಿ ಕೊಡುತ್ತಾರೆ.

* ವಿಶ್ವಕಪ್‌ನಲ್ಲಿ ಮೊದಲ ಬಾರಿ ಚಿನ್ನ ಗೆದ್ದ ಆ ಕ್ಷಣ ಹೇಗಿತ್ತು?
ಅದು ಸೀನಿಯರ್ ವಿಭಾಗದ ಸ್ಪರ್ಧೆ. ಹಾಗಾಗಿ ಕಠಿಣ ಸ್ಪರ್ಧೆ ಇದ್ದೇ ಇರುತ್ತದೆ. ಇದರಲ್ಲಿ ನಾನು ಯಶಸ್ವಿಯಾಗಿದ್ದೇನೆ. ಚಿನ್ನ ಗೆದ್ದೆ ಎನ್ನುವುದಕ್ಕಿಂತ ಈ ವಿಶ್ವಕಪ್ ನನ್ನಲ್ಲಿ ಹೆಚ್ಚು ವಿಶ್ವಾಸ ತುಂಬಿದೆ.

* ಒಲಿಂಪಿಕ್ಸ್‌ನಲ್ಲಿ ಯಾರಿಂದ ನಿಮಗೆ ಹೆಚ್ಚು ಪ್ರತಿರೋಧ ಎದುರಾಗಬಹುದು?

ಕೊರಿಯಾ ಹಾಗೂ ಚೀನಾದ ಸ್ಪರ್ಧಿಗಳಿಂದ. ಅಂಟಾಲ್ಯದಲ್ಲಿ ಅವರ ವಿರುದ್ಧ ಯಶಸ್ವಿಯಾಗಿದ್ದೇನೆ. ಅದನ್ನು ಲಂಡನ್‌ನಲ್ಲೂ ಮುಂದುವರಿಸುವ ಧೈರ್ಯವಿದೆ.

* ಒಲಿಂಪಿಕ್ಸ್‌ಗೆ ತರಬೇತಿ ಹೇಗಿದೆ?
ಸಿಕ್ಕಿಂನ ಗ್ಯಾಂಗ್‌ಟಾಕ್‌ನಲ್ಲಿ ಮೇ 16ರಿಂದ ತರಬೇತಿ ಶುರುವಾಗಲಿದೆ. ಲಂಡನ್‌ನಲ್ಲಿ ಚಳಿ ಇರುವ ಕಾರಣ ಅಲ್ಲಿಗೆ ಹೊಂದಿಕೊಳ್ಳಲು ಗ್ಯಾಂಗ್‌ಟಾಕ್‌ನಲ್ಲಿ ಶಿಬಿರ ಆಯೋಜಿಸಲಾಗಿದೆ. ಜೊತೆಗೆ ಅಮೆರಿಕಾ ಹಾಗೂ ಚೀನಾ ತೈಪೆಯಲ್ಲಿ ನಡೆಯಲಿರುವ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲಿದ್ದೇನೆ. ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಖುಷಿ ಇದೆ.
 
ಆದರೆ ಆ ಬಗ್ಗೆ ನಾನು ಹೆಚ್ಚು ಚಿಂತಿಸುತ್ತಿಲ್ಲ. ತರಬೇತಿಯಲ್ಲಿ ನನ್ನನ್ನು ಪೂರ್ಣವಾಗಿ ತೊಡಗಿಸಿಕೊಳ್ಳಬೇಕು. ಕಳೆದ ಎರಡು ವರ್ಷಗಳಿಂದ ಪ್ರತಿ ದಿನ ಎಂಟು ಗಂಟೆ ಅಭ್ಯಾಸ ನಡೆಸುತ್ತಿದ್ದೇನೆ.

* ಪೋಷಕರಿಂದ ಯಾವ ರೀತಿಯ ಬೆಂಬಲ ವ್ಯಕ್ತವಾಗುತ್ತಿದೆ?
ಮುಖ್ಯವಾಗಿ ಪೋಷಕರು ನನಗೆ ಪೂರ್ಣ ಸ್ವಾತಂತ್ರ್ಯ ಕೊಟ್ಟಿದ್ದಾರೆ. ಸದ್ಯ ಹಣಕಾಸು ಸೇರಿದಂತೆ ಯಾವುದೇ ತೊಂದರೆ ಇಲ್ಲ. ಆದರೆ ಅಂತಹ ತೊಂದರೆ ಇದ್ದ ಸಂದರ್ಭದಲ್ಲಿ ಟಾಟಾ ಆರ್ಚರಿ ಅಕಾಡೆಮಿ ನೀಡಿದ ನೆರವನ್ನು ಮರೆಯಲಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT