ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿ ಕ್ಷೇತ್ರದಲ್ಲಿ 2 ಗೋಶಾಲೆ ತೆರೆಯಲು ಆಗ್ರಹ

Last Updated 4 ಏಪ್ರಿಲ್ 2013, 6:07 IST
ಅಕ್ಷರ ಗಾತ್ರ

ಹಾಸನ: `ಬರದಿಂದಾಗಿ ಜಿಲ್ಲೆಯ ಅನೇಕ ಭಾಗಗಳಲ್ಲಿ ಜನ-ಜಾನುವಾರುಗಳಿಗೆ ತೀವ್ರ ಸಂಕಷ್ಟ ಎದುರಾಗಿದ್ದು, ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಕನಿಷ್ಠ ಎರಡು ಗೋಶಾಲೆಗಳನ್ನು ತೆರೆಯಲು ವ್ಯವಸ್ಥೆ ಮಾಡಬೇಕು' ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ಒತ್ತಾಯಿಸಿದ್ದಾರೆ.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಹಸು ಸಾಕುವವರಿಗೆ ಒಂದೆಡೆ ನೀರಿನ ಸಮಸ್ಯೆಯಾದರೆ ಇನ್ನೊಂದೆಡೆ ಮೇವಿನ ಸಮಸ್ಯೆಯೂ ಇದೆ. ಮೇವನ್ನು ಬೇರೆ ಜಿಲ್ಲೆಗೆ ಸಾಗಿಸುವುದು ನಿಷೇಧಿಸಿದ್ದರೂ ಈಗಲೂ ನೆರೆಯ ಜಿಲ್ಲೆಗಳು ಮಾತ್ರವಲ್ಲ ನೆರೆಯ ರಾಜ್ಯಗಳಿಗೂ ಜಿಲ್ಲೆಯಿಂದ ಮೇವು ಸರಬರಾಜಾಗುತ್ತಿದೆ. ಇದನ್ನು ತಡೆಯಬೇಕು ಮತ್ತು ಜಿಲ್ಲೆಯ ಕೆಲವೆಡೆ ಮೇವಿನ ಬ್ಯಾಂಕ್  ನಿರ್ಮಿಸಬೇಕು ಎಂದರು.

`ಕೊಳವೆ ಬಾವಿ ಮತ್ತು ಪಂಪ್ ಸೆಟ್ ಇರುವವರಿಗೆ ಉಚಿತವಾಗಿ ಮೇವಿನ ಬೀಜ ಮತ್ತು ಗೊಬ್ಬರ ನೀಡಿ ಮೇವು ಬೆಳಸಬೇಕು. ಜಾನುವಾರುಗಳಿಗೆ ರೋಗ ಬಾರದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಪಶು ಸಂಗೋಪನಾ ಇಲಾಖೆಗೆ ಬೇಕಾದಷ್ಟು ಹಣ ಬಿಡುಗಡೆ ಮಾಡಬೇಕು ಎಂದು ರೇವಣ್ಣ ಆಗ್ರಹಿಸಿದರು.

ಜಮೀನು ಬಿಡಿಸಿದ್ದು ನಾವೇ
ದಾಸರಕೊಪ್ಪಲು ಭಾಗದಲ್ಲಿ ರೈತರ ಭೂಮಿಯನ್ನು ನಾವೇ ಬಿಡಿಸಿಕೊಟ್ಟಿದ್ದೇವೆ ಎಂದು ಕೆಲವು ಬಿಂಬಿಸುತ್ತಿದ್ದಾರೆ. ಈಚೆಗೆ ಮನೆಮನೆಗೆ ಕರಪತ್ರಗಳನ್ನೂ ಹಂಚುತ್ತಿದ್ದಾರೆ. ಅಂಥವರು ಒಮ್ಮೆ ವಿಧಾ–ನಸಭಾ ಕಲಾಪದ ದಾಖಲೆಗಳನ್ನು ನೋಡಬೇಕು. ನಾನು ಮತ್ತು ಶಾಸಕ ಪ್ರಕಾಶ್ ಅವರೇ ಈ ರೈತರ ಪರವಾಗಿ ವಿಧಾನಸಭೆಯಲ್ಲಿ ಹೋರಾಟ ಮಾಡಿದ್ದೆವು. ಈಗ ರೈತರಿಗೆ ಭೂಮಿ ಕೊಟ್ಟಿದ್ದರೂ ಮಧ್ಯವರ್ತಿಗಳು ಅದನ್ನು ಖರೀದಿಸಿ ದುಡ್ಡು ಮಾಡುತ್ತಿದ್ದಾರೆ ಎಂದು ರೇವಣ್ಣ ಆರೋಪಿಸಿದರು.

ಜಾಗ ನಗರಸಭೆಗೆ ಕೊಡಿ
ಹಾಸನದ ಹಳೆಯ ಬಸ್ ನಿಲ್ದಾಣವನ್ನು ಒಡೆಯಲು ಆರಂಭಿಸಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ರೇವಣ್ಣ, `ಈ ಜಾಗವನ್ನು ಬಸ್ ನಿಲ್ದಾಣ ಬಿಟ್ಟು ಬೇರೆ ಉದ್ದೇಶಕ್ಕೆ ಬಳಸುವಂತಿಲ್ಲ. ಸಂಸ್ಥೆಯವರು ಅಂಥ ಪ್ರಯತ್ನ ಮಾಡಬಾರದು. ಅದು ನಗರಸಭೆಯ ಆಸ್ತಿಯಾಗಿದ್ದು ನಗರಸಭೆಗೇ ಮರಳಿಸಬೇಕು. ನಮ್ಮ ಸರ್ಕಾರ ಬಂದರೆ ಈ ಕೆಲಸವನ್ನು ಸ್ಥಗಿತಗೊಳಿಸುತ್ತೇವೆ' ಎಂದು ಎಚ್ಚರಿಕೆ ನೀಡಿದರು.

ವಾರದೊಳಗೆ ಪಟ್ಟಿ
ಹಾಸನದಲ್ಲಿ ಪಕ್ಷದ ಟಿಕೆಟ್ ಹಂಚಿಕೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ರೇವಣ್ಣ, `ದೇವೇಗೌಡರು, ಪಟೇಲ್ ಶಿವರಾಂ ಹಾಗೂ ಎಚ್.ಕೆ. ಜವರೇಗೌಡ ಅವರು ಕುಳಿತು ಈ ಬಗ್ಗೆ ತೀರ್ಮಾನ ಕೈಗೊಳ್ಳುತ್ತಾರೆ. ಒಂದು ವಾರದೊಳಗೆ ಪಕ್ಷದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಲಿದೆ' ಎಂದರು. ಶಾಸಕ ಎಚ್.ಎಸ್. ಪ್ರಕಾಶ್ ಹಾಗೂ ಪಟೇಲ್ ಶಿವರಾಂ ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT