ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿ ಶಾಲೆಗೆ ಕುಡಿಯುವ ನೀರು ಕಡ್ಡಾಯ

Last Updated 12 ಜನವರಿ 2012, 8:25 IST
ಅಕ್ಷರ ಗಾತ್ರ

ಶಿವಮೊಗ್ಗ: ಜಿಲ್ಲೆಯ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಿಕೊಡುವಂತೆ ನ್ಯಾಯಾಲಯದ ಆದೇಶವಿದ್ದು, ಈ ಆದೇಶಾನುಸಾರ ನೀರಿನ ಸೌಲಭ್ಯ ಹೊಂದದಿರುವ ಮತ್ತು ಹೊಂದಿರುವ ಶಾಲೆಗಳ ನೀರಿನ ಮೂಲಗಳ ಕುರಿತು ಮಾಹಿತಿ ನೀಡುವಂತೆ ಜಿ.ಪಂ. ಅಧ್ಯಕ್ಷೆ ಶುಭಾ ಕೃಷ್ಣಮೂರ್ತಿ, ಡಿಡಿಪಿಐ ಪರಮಶಿವಪ್ಪ ಅವರಿಗೆ ಸೂಚಿಸಿದರು.

ಜಿ.ಪಂ. ಅಬ್ದುಲ್ ನಜೀರ್‌ಸಾಬ್ ಸಭಾಂಗಣದಲ್ಲಿ ಗುರುವಾರ ಕರ್ನಾಟಕ ಅಭಿವೃದ್ಧಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಹಲವು ಶಾಲೆಗಳು ಗ್ರಾ.ಪಂ. ಹಾಗೂ ಪ.ಪಂ. , ಪುರಸಭೆಗಳ ನೀರಿನ ಮೂಲಗಳನ್ನು ಅವಲಂಬಿಸಿವೆ. ಆದರೆ, ಪ್ರತಿ ಶಾಲೆಗಳು ತಮ್ಮ ಸ್ವಂತ ನೀರಿನ ಮೂಲಗಳನ್ನು ಹೊಂದಬೇಕು. ಅದಕ್ಕೆ ಸರ್ಕಾರ ಹಣಕಾಸಿನ ನೆರವು ನೀಡಲಿದೆ. ನೀರಿನ ಸ್ವಂತ ಮೂಲಗಳಿಲ್ಲದ ಶಾಲೆಗಳನ್ನು ಇಲಾಖೆ ಪಟ್ಟಿ ಮಾಡಬೇಕು. ಆ ಪಟ್ಟಿಗೆ ಜನ ಪ್ರತಿನಿಧಿಗಳು ನೀಡಿದ ಹೆಸರುಗಳನ್ನೂ ಸೇರಿಸಿ ಮಾಹಿತಿ ಸಿದ್ಧಪಡಿಸಬೇಕು ಎಂದು ಸೂಚಿಸಿದರು.

ಜಿಲ್ಲೆಯಲ್ಲಿ ಈಗಾಗಲೇ ಕೈಗೆತ್ತಿಕೊಳ್ಳಲಾಗಿರುವ ಕುಡಿಯುವ ನೀರಿನ ಯೋಜನೆ ಹಾಗೂ ಮತ್ತಿತರ ಕಾಮಗಾರಿಗಳನ್ನು ಮಾರ್ಚ್ ಅಂತ್ಯದ ಒಳಗಾಗಿ ಪೂರ್ಣಗೊಳಿಸಿ, ಬಿಡುಗಡೆ ಆಗಿರುವ ಅನುದಾನವನ್ನು ಸದ್ಬಳಕೆ ಮಾಡಿಕೊಂಡು ಶೇ. 100ರಷ್ಟು ಪ್ರಗತಿ ಸಾಧಿಸಲು ಮುಂದಾಗಬೇಕೆಂದು ಎಂದು ಅಧ್ಯಕ್ಷರು ಸೂಚಿಸಿದರು.

ಜಿ.ಪಂ. ಉಪಾಧ್ಯಕ್ಷ ಎಚ್.ಬಿ. ಗಂಗಾಧರಪ್ಪ ಮಾತನಾಡಿ, ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ `ಗಂಗಾಕಲ್ಯಾಣ~ ಯೋಜನೆಯಡಿ ಕೊರೆದ ಕೊಳವೆಬಾವಿಗಳಿಗೆ ಇದುವರೆಗೂ ವಿದ್ಯುತ್ ಸಂಪರ್ಕ ಕಲ್ಪಿಸಿಕೊಡದಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ, ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರನ್ನು ಖುದ್ದು ಸಂಪರ್ಕಿಸಿ, ವಿದ್ಯುತ್ ಸೌಲಭ್ಯ ಕಲ್ಪಿಸಿಕೊಡುವಂತೆ ಕೋರಲು ನಿಗಮದ ಜಿಲ್ಲಾ ವ್ಯವಸ್ಥಾಪಕರಿಗೆ ಸೂಚಿಸಿದರು.

ಜಿ.ಪಂ. ಸಿಇಒ ಡಾ.ಸಂಜಯ್ ಬಿಜ್ಜೂರ್ ಮಾತನಾಡಿ, ಜಿಲ್ಲೆಯಲ್ಲಿ ಕೇಂದ್ರ ಸರ್ಕಾರದ ಅನುದಾನದೊಂದಿಗೆ  ನಡೆಯುವ ಎಲ್ಲ ಅನಾಥಾಲಯಗಳನ್ನು    ಪರಿಶೀಲಿಸಿ, ನಿಗದಿತ ಸಂಖ್ಯೆ ಹೊಂದಿರದ,  ಸರಿಯಾಗಿ ಕಾರ್ಯ ನಿರ್ವಹಿಸದ ಸಂಸ್ಥೆಗಳಿಗೆ ಅನುದಾನ ಬಿಡುಗಡೆ ಮಾಡದಿರಲು ಪತ್ರ ಬರೆಯುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಯಲ್ಲಿ ಬೇಸಿಗೆಯಲ್ಲಿ ಉಂಟಾಗುವ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಅಗತ್ಯವಿರುವ  6 ಕೋಟಿ ಅನುದಾನ ಬಿಡುಗಡೆಗಾಗಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದ್ದು, ಶೀಘ್ರದಲ್ಲಿ ಅನುದಾನ ಬಿಡುಗಡೆ ಆಗುವ ನಿರೀಕ್ಷೆ ಇದೆ. ಇಲಾಖಾವಾರು ಸಾಮಾನ್ಯ ಮಾಹಿತಿಯನ್ನು ಅಂತರ್ಜಾಲದಲ್ಲಿ ಅಳವಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಗೀತಾ ಮಲ್ಲಿಕಾರ್ಜುನ ಮಾತನಾಡಿ, ಸೊರಬದ ಹಿರೇ ಮಾಗಡಿಯಲ್ಲಿ ಒಂದೇ ಕಟ್ಟಡದಲ್ಲಿ ನಡೆಯುತ್ತಿರುವ ಕಿತ್ತೂರ ರಾಣಿ ಚನ್ನಮ್ಮ ಮತ್ತು ಮೊರಾರ್ಜಿ ದೇಸಾಯಿ ವಸತಿಶಾಲೆಗಳಲ್ಲಿ 280 ವಿದ್ಯಾರ್ಥಿಗಳಲ್ಲದೆ, ಶಿಕ್ಷಕರೂ ಇದ್ದು, ಇವರ ವಿದ್ಯಾಭ್ಯಾಸ ಹಾಗೂ ನಿತ್ಯದ ಚಟುವಟಿಕೆಗಳಿಗೆ ತುಂಬಾ ತೊಂದರೆ ಆಗಿದೆ. ಚನ್ನಮ್ಮ ವಸತಿಶಾಲೆ ನೂತನ ಕಟ್ಟಡ ನಿರ್ಮಾಣ ಹಂತದಲ್ಲಿದ್ದು, ಕಾಮಗಾರಿ ಪೂರ್ಣಗೊಳ್ಳುವವರೆಗೆ ಆನವಟ್ಟಿಯ ಬಾಡಿಗೆ ಕಟ್ಟಡದಲ್ಲಿ ನಡೆಸುವಂತೆ ಸಮಾಜ ಕಲ್ಯಾಣಾಧಿಕಾರಿಗೆ ಸೂಚಿಸಿದರು.

ಕೃಷಿ ಮತ್ತು ಕೈಗಾರಿಕೆ  ಸ್ಥಾಯಿ ಸಮಿತಿ ಅಧ್ಯಕ್ಷ ಈಶ್ವರಪ್ಪ ಹಾಗೂ ವಿವಿಧ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.      

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT