ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಧ್ವನಿಸಿದ ಜಾನುವಾರು ಕಾಯಿಲೆ ಸಮಸ್ಯೆ

ಪಾಂಡವಪುರ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆ
Last Updated 18 ಸೆಪ್ಟೆಂಬರ್ 2013, 6:33 IST
ಅಕ್ಷರ ಗಾತ್ರ

ಪಾಂಡವಪುರ: ಜಾನುವಾರುಗಳಿಗೆ ಕಾಲುಬಾಯಿ ಜ್ವರ ಸಮಸ್ಯೆ, ಮುಂಗಾರು ಮಳೆ ಕೊರತೆಯಿಂದ ಹಾಳಾದ ರಾಗಿ ಬೆಳೆ, ಗ್ರಾಮಸಭೆಗೆ ಅಧಿಕಾರಿಗಳ ಗೈರು ಹಾಜರಿ, ಬಾಲಕಿಯರ ಆತ್ಮರಕ್ಷಣೆಗೆ ಕರಾಟೆ ತರಬೇತಿ, ಎಸ್‌ಸಿಪಿ ಯೋಜನೆ ಫಲಾನುಭವಿಗಳಿಗೆ ಸಾಲ ನೀಡಲು ಬ್ಯಾಂಕುಗಳು ನಿರಾಕರಣೆ, ರೇಷ್ಮೆ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ, ವಿದ್ಯುತ್‌ ಪರಿವರ್ತಕಗಳ ರಿಪೇರಿ, ಕಾಲೇಜು ವಿದ್ಯಾರ್ಥಿನಿಯ ಆತ್ಮಹತ್ಯೆ ಪ್ರಕರಣದ ನಿರ್ಲಕ್ಷ್ಯ...

ಇವು ಮಂಗಳವಾರ ನಡೆದ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಪ್ರತಿಧ್ವನಿಸಿದ ಪ್ರಮುಖ ವಿಷಯಗಳು.
ಸಭೆಯಲ್ಲಿ ಚರ್ಚೆ ಆರಂಭಿಸಿದ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಚ್‌.ಎಂ. ರಾಮಕೃಷ್ಣ ಮತ್ತು ಸದಸ್ಯ ಯಶವಂತ್‌ ಅವರು, ತಾಲ್ಲೂಕಿನಲ್ಲಿ ಹಸುಗಳಿಗೆ ಕಾಲುಬಾಯಿ ಜ್ವರ ತಗುಲಿ ನರಳುತ್ತಿವೆ. ಹಲವಾರು ಹಸುಗಳು ಸಾವನ್ನಪ್ಪಿವೆ. ಇದರ ನಿವಾರಣೆಗೆ ಏನು ಕ್ರಮ ವಹಿಸಿದ್ದೀರಿ ಎಂದು ವಿಷಯ ಪ್ರಸ್ತಾಪಿಸಿದರು. ಪಶು ಸಂಗೋಪನಾ ಇಲಾಖೆಯ ಪ್ರಭಾರಿ ನಿರ್ದೇಶಕ ಡಾ. ಕೋದಂಡ ಅವರು, ಕಾಲುಬಾಯಿ ಜ್ವರದಿಂದ ತಾಲ್ಲೂಕಿನಲ್ಲಿ ಇದುವರೆಗೆ 10 ಹಸುಗಳು, 12 ಕರುಗಳು ಮಾತ್ರ ಸಾವನ್ನಪ್ಪಿವೆ.

ಲಸಿಕೆ ಹಾಕಿಸದ ರಾಸುಗಳು ಮಾತ್ರ ಸಾವನ್ನಪ್ಪಿವೆ. ರೋಗ ಕಾಣಿಸಿಕೊಂಡ 12 ಗ್ರಾಮಗಳಲ್ಲಿ ಈಗಾಗಲೇ ಲಸಿಕೆ ಹಾಕಿ ತಪಾಸಣೆ ಮಾಡಲಾಗಿದೆ. ಇಲಾಖೆಯು 40 ಸಾವಿರ ರಾಸುಗಳಿಗೆ ಲಸಿಕೆ ಹಾಕುವ ಉದ್ದೇಶವನ್ನು ಹೊಂದಿತ್ತಾದರೂ, ರೈತರ ಉದಾಸೀನತೆಯಿಂದ ಕೇವಲ 26 ಸಾವಿರ ರಾಸುಗಳಿಗೆ ಲಸಿಕೆ ಹಾಕಲಾಯಿತು ಎಂದು ವಿವರಣೆ ನೀಡಿದರು. ಮುಂಗಾರು ಮಳೆಯ ಕೊರತೆ ಯಿಂದಾಗಿ ರಾಗಿ ಬೆಳೆ ಕುಂಠಿತ ಗೊಂಡಿದೆ. ಹುರುಳಿ ಹಾಗೂ ಇನ್ನಿತರ ಬೆಳೆಗಳನ್ನು ಬೆಳೆಯಲು ಇಲಾಖೆಯಿಂದ ಪ್ರೋತ್ಸಾಹ ನೀಡಲಾಗುವುದು ಎಂದು ಕೃಷಿ ಸಹಾಯ ನಿರ್ದೇಶಕ ಮಹಾದೇವಯ್ಯ ಎಂದು ವಿವರಿಸಿದರು.

ಕರಾಟೆ ತರಬೇತಿ
ಹೆಣ್ಣುಮಕ್ಕಳ ಆತ್ಮರಕ್ಷಣೆಗಾಗಿ ಪ್ರೌಢಶಾಲೆ ಮಟ್ಟದಲ್ಲಿ ಕರಾಟೆ ತರಬೇತಿ ನೀಡಲಾಗುತ್ತಿದೆ. ಶಾಲೆಗಳಿಗೆ 35 ಅತಿಥಿ ಶಿಕ್ಷಕರನ್ನು ನೇಮಮಾಡಿಕೊಳ್ಳಲು ಅಭ್ಯರ್ಥಿಗಳಿಂದ ಅರ್ಜಿ ಸ್ವೀಕರಿಸಲಾಗಿತ್ತು. ಇದಕ್ಕೆ ತಡೆಯಾಜ್ಞೆ ನೀಡಿದ ಸರ್ಕಾರ ಈಗ ಕೆಲವು ನಿಬಂಧನೆಗಳನ್ನು ಹಾಕಿ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವಂತೆ ಸೂಚನೆ ನೀಡಿದೆ ಎಂದು ಬಿಇಒ ಸ್ವಾಮಿ ಸಭೆಯ ಗಮನಕ್ಕೆ ತಂದರು.

ಕಾಡುತ್ತಿದೆ ಸಿಬ್ಬಂದಿ ಕೊರತೆ
ಪಾಂಡವಪುರ ಉಪ ವಿಭಾಗ ಕೇಂದ್ರದಲ್ಲಿ ವಿದ್ಯುತ್‌ ಪರಿವರ್ತಕ ರಿಪೇರಿ ಕೇಂದ್ರವನ್ನು ಪ್ರಾರಂಭಿಸಲಾಗುತ್ತಿದೆ ಎಂದು ಸೆಸ್ಕ್‌ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಪರಮೇಶ್ವರಪ್ಪ ತಿಳಿಸಿದರು. ರೇಷ್ಮೆ ಇಲಾಖೆಯಲ್ಲಿನ ಸಿಬ್ಬಂದಿ ಕೊರತೆಯಿಂದಾಗಿ ಕೆಲಸ ನಿರ್ವಹಿಸಲು ಕಷ್ಟವಾಗುತ್ತಿದೆ ಎಂದು ಇಲಾಖೆಯ ಸಹಾಯಕ ನಿರ್ದೇಶಕ ನಟರಾಜು ಸಭೆಗೆ ನಿವೇದಿಸಿಕೊಂಡರು.

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆಯುವ ಗ್ರಾಮಸಭೆಗಳಿಗೆ ಅಧಿಕಾರಿಗಳು ಗೈರು ಹಾಜರಾ ಗುತ್ತಿದ್ದಾರೆ. ಇದನ್ನು ಸರಿಪಡಿಸಿಕೊಳ್ಳ ಬೇಕು ಎಂದು ಇಒ ಸಿದ್ದಲಿಂಗಮೂರ್ತಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿ ದರು. ವಿಶೇಷ ಘಟಕ ಯೋಜನೆಯ ಫಲಾನುಭವಿಗಳಿಗೆ ಸರ್ಕಾರ ಸಬ್ಸಿಡಿ ಬಿಡುಗಡೆ ಮಾಡಿದರೂ ಬ್ಯಾಂಕ್‌ ಅಧಿಕಾರಿಗಳು ಸಾಲ ನೀಡುತ್ತಿಲ್ಲ. ಅಂತಹ ಬ್ಯಾಂಕ್‌ಗಳ ವಿರುದ್ಧ ಲೀಡ್‌ ಬ್ಯಾಂಕ್‌ಗೆ ಪತ್ರ ಬರೆಯಬೇಕೆಂದು ಅಧ್ಯಕ್ಷ ರಾಮಕೃಷ್ಷ ತಿಳಿಸಿದರು.

ಉಪಾಧ್ಯಕ್ಷೆ ಗಾಯತ್ರಿ ಕೃಷ್ಣೇಗೌಡ, ಸ್ಥಾಯಿ ಸಮಿತಿ ಅಧ್ಯಕ್ಷ ಎಚ್‌. ಸ್ವಾಮೀಗೌಡ ಹಾಗೂ ಸದಸ್ಯರು, ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT