ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತ್ಯೇಕ ರಾಜ್ಯ ಬೇಕೆಂದ ಸ್ಪೀಕರ್

Last Updated 18 ಜುಲೈ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: `ಕೊಡಗು ಜಿಲ್ಲೆಯನ್ನು ಪ್ರತ್ಯೇಕ ರಾಜ್ಯ ಮಾಡಿ, ಅಲ್ಲಿನ ಅರಣ್ಯ ಪ್ರದೇಶವನ್ನು ನಾವೇ ಸಂರಕ್ಷಿಸುತ್ತೇವೆ~ ಎಂದು ವಿಧಾನಸಭೆಯ ಅಧ್ಯಕ್ಷ ಕೆ.ಜಿ.ಬೋಪಯ್ಯ ಬುಧವಾರ ಇಲ್ಲಿ ಸರ್ಕಾರಕ್ಕೆ ಸವಾಲು ಹಾಕಿದರು. ಈ ಹೇಳಿಕೆಗೆ ಪ್ರತಿಪಕ್ಷಗಳು, ಸಾಹಿತಿಗಳು ಮತ್ತು ಕನ್ನಡಪರ ಹೋರಾಟಗಾರರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ರಾಜ್ಯ ವಿಭಜನೆಯ ಮಾತನಾಡಿರುವ ಸ್ಪೀಕರ್ ಬೋಪಯ್ಯ ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ. `ಕೊಡಗು ಪ್ರತ್ಯೇಕ ರಾಜ್ಯ ಅಗಲಿ~ ಎಂಬ ಬೋಪಯ್ಯ ಹೇಳಿಕೆಯೇ ಅರ್ಥವಿಲ್ಲದ್ದು ಮತ್ತು ಅವರ ಘನತೆಯನ್ನು ಮೀರಿದ್ದು ಎಂದು ಸಾಹಿತಿಗಳು, ಕನ್ನಡಪರ ಹೋರಾಟಗಾರರು ಟೀಕಿಸಿದ್ದಾರೆ.

`ಪಶ್ಚಿಮ ಘಟ್ಟಗಳ ವ್ಯಾಪ್ತಿಯಲ್ಲಿ ಬರುವ ಕೊಡಗು ಜಿಲ್ಲೆಯ ಯಾವುದೇ ಭಾಗವನ್ನು ವಿಶ್ವಪರಂಪರೆ ಪಟ್ಟಿಗೆ ಸೇರಿಸುವ ಅಗತ್ಯವಿಲ್ಲ. ಅದಕ್ಕೆ ಅವಕಾಶವನ್ನೂ ನೀಡುವುದಿಲ್ಲ. ಕೊಡಗು ಜಿಲ್ಲೆಯನ್ನು ಪ್ರತ್ಯೇಕ ರಾಜ್ಯ ಮಾಡಿದರೆ ಯುನೆಸ್ಕೊ ನಿರ್ವಹಿಸುವುದಕ್ಕಿಂತಲೂ ಉತ್ತಮ ರೀತಿಯಲ್ಲಿ ಅರಣ್ಯವನ್ನು ಕಾಪಾಡುತ್ತೇವೆ~ ಎಂದು ಬೋಪಯ್ಯ ಪತ್ರಿಕಾಗೋಷ್ಠಿಯಲ್ಲಿ ಘೋಷಿಸಿದರು.

`ಪಶ್ಚಿಮ ಘಟ್ಟಗಳನ್ನು ವಿಶ್ವ ಪರಂಪರೆ ಪಟ್ಟಿಗೆ ಸೇರ್ಪಡೆ ಮಾಡಿರುವುದು ಸರಿಯಲ್ಲ. ನಾವು ಬಾಲ್ಯದಿಂದಲೂ ಕಾಡಿನಲ್ಲಿ ಹುಟ್ಟಿ, ಕಾಡಿನಲ್ಲಿ ಬೆಳೆದು, ಕಾಡನ್ನು ಪೋಷಿಸಿಕೊಂಡು ಬಂದಿದ್ದೇವೆ. ಅರಣ್ಯ ಉಳಿಸುವುದನ್ನು ನಾವು ಯಾರಿಂದಲೂ ಕಲಿಯಬೇಕಾಗಿಲ್ಲ~ ಎಂದು ಪತ್ರಕರ್ತರ ಪ್ರಶ್ನೆಗಳಿಗೆ ಖಾರವಾಗಿ ಪ್ರತಿಕ್ರಿಯಿಸಿದರು.

`ಈ ಘಟ್ಟಗಳನ್ನು ವಿಶ್ವಪರಂಪರೆ ಪಟ್ಟಿಗೆ ಸೇರ್ಪಡೆ ಮಾಡುವುದನ್ನು ನಾವು ಹಿಂದಿನಿಂದಲೂ ವಿರೋಧಿಸುತ್ತಿದ್ದೇವೆ. ಅರಣ್ಯ ಸಂಪತ್ತನ್ನು ಉಳಿಸುವ ಬಗ್ಗೆ ಯುನೆಸ್ಕೊ ನಮಗೆ ಹೇಳಿಕೊಡುವ ಅಗತ್ಯವಿಲ್ಲ. ನಮ್ಮ ಜಿಲ್ಲೆಯ ಅರಣ್ಯವನ್ನು ಅವರಿಗಿಂತ ನಾವೇ ಚೆನ್ನಾಗಿ ಸಂರಕ್ಷಣೆ ಮಾಡಿಕೊಳ್ಳುತ್ತೇವೆ~ ಎಂದು ಸಿಟ್ಟಾದರು.

`ವಿಶ್ವಪರಂಪರೆ ಪಟ್ಟಿಗೆ ಪಶ್ಚಿಮ ಘಟ್ಟಗಳನ್ನು ಸೇರ್ಪಡೆ ಮಾಡುವ ಸಂಬಂಧ ಯುನೆಸ್ಕೊದಿಂದ ರಾಜ್ಯ ಸರ್ಕಾರಕ್ಕೆ ಅಧಿಕೃತವಾಗಿ ಯಾವುದೇ ಪತ್ರ ಬಂದಿಲ್ಲ. ಪತ್ರ ಬಂದರೆ, ಅದಕ್ಕೆ ವಿರೋಧ ವ್ಯಕ್ತಪಡಿಸಿ ನಾವೂ ಪತ್ರ ಬರೆಯುತ್ತೇವೆ~ ಎಂದರು.

`ಭೂಮಿಯ ಒಟ್ಟು ವಿಸ್ತೀರ್ಣದಲ್ಲಿ ಶೇಕಡ 33ರಷ್ಟು ಅರಣ್ಯ ಪ್ರದೇಶ ಇರಬೇಕು ಎಂಬ ನಿಯಮವಿದೆ. ಆದರೆ ಕೊಡಗು ಜಿಲ್ಲೆಯಲ್ಲಿ ಶೇ 33ಕ್ಕೂ ಹೆಚ್ಚಿನ ಭಾಗದಲ್ಲಿ ಅರಣ್ಯ ಪ್ರದೇಶವಿದೆ. ಅಲ್ಲಿನ ಸ್ಥಳೀಯ ಜನರ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳದೆ ವಿಧಾನಸೌಧದಲ್ಲಿ ಕುಳಿತು ಅರಣ್ಯದ ಬಗ್ಗೆ ಮಾತನಾಡುವುದು ಸರಿಯಲ್ಲ~ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪರಂಪರೆ ಪಟ್ಟಿಗೆ ಸೇರ್ಪಡೆ ಮಾಡಿರುವುದನ್ನು ಯಾಕೆ ವಿರೋಧ ಮಾಡುತ್ತೀರಿ ಎಂದು ಪ್ರಶ್ನಿಸಿದಾಗ, `ಅದರಿಂದ ಏನು ಲಾಭವಿದೆ ಎಂಬುದನ್ನು ಮೊದಲು ಯುನೆಸ್ಕೊದವರು ಸ್ಪಷ್ಟಪಡಿಸಲಿ, ಬಳಿಕ ನಾವು ಏಕೆ ವಿರೋಧ ಮಾಡುತ್ತೇವೆ ಎಂಬುದನ್ನು ಹೇಳುತ್ತೇವೆ~ ಎಂದು ಉತ್ತರಿಸಿದರು.

`ಕರ್ನಾಟಕ- ಕೇರಳ ಗಡಿ ಭಾಗದಲ್ಲಿ ಅರಣ್ಯ ಒತ್ತುವರಿ ಆಗಿದೆ. ಎಲ್ಲ ಕಡೆ ಅರಣ್ಯ ರಕ್ಷಕರ ಕೊರತೆ ಇದೆ. ಐದು ಜನ ಸಿಬ್ಬಂದಿ ಇರಬೇಕಾದ ಕಡೆ ಇಬ್ಬರು ಇದ್ದಾರೆ. ಕೆಳಹಂತದ ಸಿಬ್ಬಂದಿ ಕೊರತೆ ತೀವ್ರವಾಗಿದೆ. ಆದರೆ, ಮೇಲಿನ ಅಧಿಕಾರಿಗಳ ಸಂಖ್ಯೆ ಹೆಚ್ಚಾಗಿದೆ. ಹಿಂದೆ ಒಬ್ಬರೇ ಉಪ ಅರಣ್ಯ ಸಂರಕ್ಷಣಾಧಿಕಾರಿ ನಿರ್ವಹಿಸುತ್ತಿದ್ದ ಕಾರ್ಯಗಳನ್ನು ಈಗ ಐವರು ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ನಿರ್ವಹಿಸುತ್ತಿದ್ದಾರೆ. ಅವರೆಲ್ಲ ಏನು ಮಾಡುತ್ತಿದ್ದಾರೆ ಎಂಬುದು ಯಾರಿಗೂ ತಿಳಿಯುತ್ತಿಲ್ಲ.

ಆ ಬಗ್ಗೆ ಏಕೆ ಯಾರೂ ಮಾತನಾಡುವುದಿಲ್ಲ~ ಎಂದು ಅವರು ಪ್ರಶ್ನಿಸಿದರು.

`ಅಗತ್ಯವಿರುವ ಸಿಬ್ಬಂದಿಯನ್ನು ನೇಮಕ ಮಾಡುವಂತೆ ಸಭಾಧ್ಯಕ್ಷರಾಗಿರುವ ನೀವೇ ಸರ್ಕಾರಕ್ಕೆ ಸೂಚನೆ ನೀಡಬಹುದಲ್ಲಾ~ ಎಂದು ಪ್ರಶ್ನಿಸಿದಾಗ, `ಸಂಬಂಧಪಟ್ಟ ಸಚಿವರಿಗೆ ಸಿಬ್ಬಂದಿ ಸಮಸ್ಯೆ ಬಗ್ಗೆ ಹೇಳಿದ್ದೇನೆ. ಎಷ್ಟು ಬಾರಿ ಹೇಳುವುದು.... ನನಗೂ ಸಾಕಾಗಿ ಹೋಗಿದೆ~ ಎಂದು ಬೇಸರ ವ್ಯಕ್ತಪಡಿಸಿದರು. 

ಕ್ಷಮೆ ಯಾಚನೆಗೆ ಆಗ್ರಹ: `ಸಂವಿಧಾನಾತ್ಮಕ ಜವಾಬ್ದಾರಿಯುಳ್ಳ ಸ್ಪೀಕರ್ ಸ್ಥಾನದಲ್ಲಿ ಕುಳಿತು ರಾಜ್ಯವನ್ನು ಒಡೆಯುವ ಮಾತನಾಡಿರುವ ಕೆ.ಜಿ.ಬೋಪಯ್ಯ ಅವರು ತಕ್ಷಣವೇ ರಾಜ್ಯದ ಜನತೆಯ ಕ್ಷಮೆ ಯಾಚಿಸಬೇಕು~ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಆಗ್ರಹಿಸಿದರು.

ವಿಧಾನಸೌಧದಲ್ಲಿ ಬುಧವಾರ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯ ಬಳಿಕ ಪತ್ರಕರ್ತರ ಜೊತೆ ಮಾತನಾಡಿದ ಅವರು, `ಸ್ಪೀಕರ್ ಸ್ಥಾನದಲ್ಲಿ ಇರುವ ಬೋಪಯ್ಯ ಅವರು ಈ ರೀತಿ ಮಾತನಾಡಬಾರದು. ಕೊಡಗು ಜಿಲ್ಲೆ ಕರ್ನಾಟಕದ ಅವಿಭಾಜ್ಯ ಅಂಗ. ಅದನ್ನು ಕರ್ನಾಟಕದಿಂದ ಕಿತ್ತುಕೊಳ್ಳಲು ಯಾರಿಗೂ ಸಾಧ್ಯವಿಲ್ಲ. ಅವರು ರಾಜ್ಯವನ್ನು ವಿಭಜಿಸುವ ಮಾತನ್ನು ಆಡಿರುವುದು ಖಂಡನೀಯ~ ಎಂದರು.

`ಸ್ಪೀಕರ್ ಅವರು ರಾಜ್ಯ ವಿಭಜನೆಗೆ ಪೋತ್ಸಾಹ ನೀಡುವಂತಹ ಮಾತುಗಳನ್ನು ಆಡಿರುವುದು ದುರದೃಷ್ಟಕರ ಬೆಳವಣಿಗೆ~ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯಿಸಿದರು.

ನೆಗಡಿಗೆ ಮೂಗು ಕೊಯ್ಯಬೇಕೇ?

ಹೈದರಾಬಾದ್-ಕರ್ನಾಟಕ ಪ್ರದೇಶಕ್ಕೆ ಎಷ್ಟೊಂದು ಅನ್ಯಾಯವಾಗಿದೆಯೋ ಅಷ್ಟೇ ಪ್ರಮಾಣದ ಅನ್ಯಾಯ ಕೊಡಗು ಪ್ರಾಂತ್ಯಕ್ಕೂ ಆಗಿರುವುದು ಸತ್ಯ. ಅದನ್ನು ಸರಿಪಡಿಸಿಕೊಳ್ಳಲು ಪ್ರಜಾಪ್ರಭುತ್ವದಲ್ಲಿ ಮಾರ್ಗ ಇದೆ. ನೆಗಡಿ ಆಗಿದೆ ಎಂದ ಮಾತ್ರಕ್ಕೆ ಮೂಗನ್ನೇ ಕೊಯ್ಯಲು ಆಗುವುದಿಲ್ಲ. ಕೆ.ಜಿ. ಬೋಪಯ್ಯ ಅಂತಹ ಯತ್ನಕ್ಕೇ ಕೈಹಾಕಿದ್ದಾರೆ. ರಾಜ್ಯ ಪುನರ್ ವಿಂಗಡಣೆಯಾಗಿ 57 ವರ್ಷ ಗತಿಸಿದ ಬಳಿಕವೂ `ರಾಮ, ಸೀತೆಗೆ ಏನು ಆಗಬೇಕು~ ಎನ್ನುವಂತಹ ಇಂತಹ ತರ್ಕರಹಿತವಾದ ಆಲಾಪಗಳಿಗೆ ಅರ್ಥ ಇಲ್ಲ. ತಮ್ಮ ಹೊಣೆಯನ್ನು ಮರೆತು ಬೀದಿಯಲ್ಲಿ ಹೋಗುವವರಂತೆ ಬೋಪಯ್ಯ ಮಾತನಾಡಬಾರದಿತ್ತು. ಕೊಡಗು ಅಭಿವೃದ್ಧಿಗೆ ಹೋರಾಡಲು ನಾವೂ ಅವರ ಕೈಜೋಡಿಸಲು ಸಿದ್ಧರಿದ್ದೇವೆ. ಪ್ರತ್ಯೇಕ ರಾಜ್ಯ ಬೇಡಿಕೆ ಅರ್ಥವಿಲ್ಲದ್ದು.

- ಡಾ. ಪಾಟೀಲ ಪುಟ್ಟಪ್ಪ, ಹಿರಿಯ ಪತ್ರಕರ್ತ

ಕರ್ನಾಟಕ ಎಲ್ಲಿ ಉಳಿಯುತ್ತದೆ?

ಕನ್ನಡದ ಭಾಗವಾಗಿ ಬೆಳೆದ ಕೊಡಗು ಪ್ರತ್ಯೇಕ ರಾಜ್ಯದ ಬೇಡಿಕೆಗೆ ಯಾವುದೇ ಅರ್ಥವಿಲ್ಲ. ಇವತ್ತು ಕೊಡಗು ಜನ ಕೇಳಿದರೆ, ನಾಳೆ ಮತ್ತೆ ಹೈದರಾಬಾದ್-ಕರ್ನಾಟಕ ಭಾಗದವರೂ ಕೇಳುತ್ತಾರೆ. ಭಾಷೆ, ಸಂಸ್ಕೃತಿ, ಅನ್ಯಾಯದ ಹೆಸರಿನಲ್ಲಿ ಪ್ರತ್ಯೇಕ ರಾಜ್ಯ ಕೇಳುತ್ತಾ ಹೋದರೆ ಕರ್ನಾಟಕ ಉಳಿಯುವುದಾದರೂ ಎಲ್ಲಿ? ವಿಧಾನಸಭಾ ಅಧ್ಯಕ್ಷನಂತಹ ಸಾಂವಿಧಾನಕ ಸ್ಥಾನದಲ್ಲಿ ಕುಳಿತ ಕೆ.ಜಿ. ಬೋಪಯ್ಯ ಅವರ ಬಾಯಿಯಿಂದ ಇಂತಹ ಮಾತು ಬಂದಿರುವುದು ಖೇದಕರ. ಅವರ ಘನತೆಗೆ ಒಪ್ಪುವಂತಹ ಮಾತೂ ಇದಲ್ಲ.

- ಡಾ.ಎಂ.ಎಂ. ಕಲಬುರ್ಗಿ, ಹಿರಿಯ ಸಂಶೋಧಕ

`ಪ್ರಚಾರಕ್ಕಾಗಿ ಅಷ್ಟೇ~

ಬೋಪಯ್ಯ ಹೇಳಿಕೆ ಖಂಡನಾರ್ಹ. ಪ್ರಚಾರಕ್ಕಾಗಿ ಈ ರೀತಿ ಮಾತನಾಡುವುದು ಸರಿಯಲ್ಲ. ಕೊಡಗು ಜಿಲ್ಲೆಯ ಬಹುತೇಕ ಜನರು ಇದನ್ನು ಒಪ್ಪುವುದಿಲ್ಲ. ಆ ಜಿಲ್ಲೆಯ ಜನರು ಕರ್ನಾಟಕದೊಂದಿಗೆ ಇರಬೇಕು ಎಂದು ಬಯಸುತ್ತಾರೆ. ಆಗಾಗ್ಗೆ ಈ ರೀತಿಯ ಹೇಳಿಕೆಗಳನ್ನು ನೀಡುವುದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ.

- ಡಾ.ಎಂ.ಚಿದಾನಂದಮೂರ್ತಿ, ಹಿರಿಯ ಸಂಶೋಧಕ

ಆಘಾತಕಾರಿ ವಿಷಯ

ಪ್ರತ್ಯೇಕ ರಾಜ್ಯದ ಬಗ್ಗೆ ಮಾತನಾಡಿರುವುದು ಆಘಾತಕಾರಿ ವಿಷಯ. ಈ ರೀತಿಯ ಹೇಳಿಕೆಗಳಿಂದ ಅಖಂಡ ಕರ್ನಾಟಕಕ್ಕೆ ಚ್ಯುತಿಯಾಗುತ್ತದೆ. ಕರ್ನಾಟಕ ಏಕೀಕರಣ ಆಗಿರುವುದು ಕನ್ನಡ ನಾಡಿನ ಎಲ್ಲ ಭಾಗಗಳು ಒಂದಾಗಲಿ ಎಂಬ ಕಾರಣಕ್ಕಾಗಿಯೇ ಹೊರತು, ಇಬ್ಭಾಗವಾಗಲಿ ಎಂದು ಅಲ್ಲ.

ಕೊಡಗು ಹಿಂದೆ ಬ್ರಿಟಿಷರ ಆಳ್ವಿಕೆಯಲ್ಲಿ ಇದ್ದರೂ, ಏಕೀಕರಣ ನಂತರ ಕರ್ನಾಟಕದ ಭಾಗವೇ ಆಗಿದೆ. ಅಲ್ಲಿ ಏನಾದರೂ ಅನಾನುಕೂಲ ಇದ್ದರೆ ಸರಿಪಡಿಸಿಕೊಳ್ಳಲು ಅವಕಾಶವಿದೆ. ಆದರೆ ವಿಭಜನೆ ಬಗ್ಗೆ ಮಾತನಾಡುವುದು ಸರಿಯಲ್ಲ.

- ಡಾ.ಜಿ.ಎಸ್.ಶಿವರುದ್ರಪ್ಪ, ಹಿರಿಯ ಸಾಹಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT