ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಭಾವ ಬೀರುತ್ತಿರುವ ಫಲಕಗಳು

Last Updated 19 ಏಪ್ರಿಲ್ 2013, 11:21 IST
ಅಕ್ಷರ ಗಾತ್ರ

ಯಾದಗಿರಿ: ವಿಧಾನಸಭೆ ಚುನಾವಣೆಯ ನೀತಿ ಸಂಹಿತೆ ಜಾರಿಯಾಗಿ ಸುಮಾರು ಒಂದು ತಿಂಗಳು ಕಳೆದಿದ್ದರೂ, ಜಿಲ್ಲೆಯಲ್ಲಿ ಈಗಲೂ ಅನೇಕ ಫಲಕಗಳು ಮತದಾರರ ಮೇಲೆ ಪ್ರಭಾವ ಬೀರುತ್ತಲೇ ಇವೆ. ಆಡಳಿತ ಸೌಧವಿರುವ ಜಿಲ್ಲಾ ಕೇಂದ್ರದಲ್ಲಿಯೇ ಇಂತಹ ಹಲವಾರು ಫಲಕಗಳು ರಾರಾಜಿಸುತ್ತಿದ್ದರೂ, ಅಧಿಕಾರಿಗಳಿಗೆ ಮಾತ್ರ ಕಾಣುತ್ತಿಲ್ಲ ಎಂಬ ಆಕ್ರೋಶ ಜನರಿಂದ ವ್ಯಕ್ತವಾಗುತ್ತಿದೆ.

ಈಗಾಗಲೇ ಪ್ರಮುಖ ರಸ್ತೆಗಳಲ್ಲಿರುವ ಹಲವಾರು ಫಲಕಗಳನ್ನು ತೆರವುಗೊಳಿಸಲಾಗಿದೆ. ಸಂಸದರ ಅನುದಾನದಡಿ ನಿರ್ಮಿಸಲಾದ ಬಸ್ ಶೆಲ್ಟರ್‌ನ ಫಲಕಗಳನ್ನು ಕಿತ್ತು ಹಾಕಲಾಗಿದೆ. ಸರ್ಕಾರದ ಸಾಧನೆಗಳನ್ನು ವಿವರಿಸುವ ಫಲಕಗಳನ್ನೂ ತೆರವುಗೊಳಿಸಲಾಗಿದೆ. ಆದರೆ ನಗರದ ವಿವಿಧ ಬಡಾವಣೆಗಳಲ್ಲಿ ಈಗಲೂ ಹಲವಾರು ಫಲಕಗಳು ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡುತ್ತಿವೆ ಎಂದು ಜನರು ಹೇಳುತ್ತಿದ್ದಾರೆ.

ಮತದಾರರ ಮೇಲೆ ಪ್ರಭಾವ ಬೀರದಿರಲಿ ಎಂಬ ಉದ್ದೇಶದಿಂದಲೇ ಫಲಕ ತೆರವು ಮಾಡಲಾಗುತ್ತಿದೆ. ನಗರದ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಇನ್ನೂ ಹಲವಾರು ಫಲಕಗಳು ಹಾಗೆಯೇ ನಿಂತಿದ್ದು, ಮತದಾರರು ಪ್ರಭಾವಿತರಾಗುವ ಸಾಧ್ಯತೆ ಇದೆ. ಇಂತಹ ಫಲಕಗಳನ್ನೂ ತೆರವು ಮಾಡುವ ಕಾರ್ಯಕ್ಕೆ ಜಿಲ್ಲಾಡಳಿತ ಮುಂದಾಗಬೇಕು ಎನ್ನುತ್ತಾರೆ ಕಟ್ಟಡ ಕಟ್ಟುವ ಹಾಗೂ ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸೈದಪ್ಪ ಗುತ್ತೇದಾರ.

ಉದಾಹರಣೆಗೆ ಇಲ್ಲಿಯ ಬಸವೇಶ್ವರ ನಗರದಲ್ಲಿ ಮಾಜಿ ಶಾಸಕರ ಅವಧಿಯಲ್ಲಿ ಮಾಡಿದ ರಸ್ತೆ ಕಾಮಗಾರಿಯ ಶಂಕುಸ್ಥಾಪನೆಯ ಫಲಕ ಈಗಲೂ ಹಾಗೇ ನಿಂತಿದೆ. ಇನ್ನು ಅನೇಕ ಬಡಾವಣೆಗಳಲ್ಲಿ ಉದ್ಯಾನಗಳ ಉದ್ಘಾಟನೆ, ಮತ್ತಿತರ ಕಾಮಗಾರಿಗಳ ಉದ್ಘಾಟನೆಯ ಸಂದರ್ಭದಲ್ಲಿ ಹಾಕಿರುವ ಫಲಕಗಳೂ ರಾರಾಜಿಸುತ್ತಿವೆ. ನಿತ್ಯ ಇವುಗಳನ್ನು ನೋಡುವ ಜನರು ಆಯಾ ಜನಪ್ರತಿನಿಧಿಗಳ ಬಗ್ಗೆ ಒಲವು ತೋರುವ ಸಾಧ್ಯತೆಗಳು ಹೆಚ್ಚಾಗಿವೆ. ಹೀಗಾಗಿ ಇಂತಹ ಫಲಕಗಳನ್ನು ತೆರವು ಮಾಡಿದಲ್ಲಿ ನೀತಿ ಸಂಹಿತೆಯನ್ನು ಕಟ್ಟು ನಿಟ್ಟಾಗಿ ಜಾರಿಗೊಳಿಸಿದಂತಾಗುತ್ತದೆ ಎಂದು ಅಭಿಪ್ರಾಯ ಪಡುತ್ತಾರೆ.

ಗ್ರಾಮೀಣ ಪ್ರದೇಶಗಳಲ್ಲಂತೂ ಇಂತಹ ಹಲವಾರು ಫಲಕಗಳು ಈಗಲೂ ಕಾಣಸಿಗುತ್ತವೆ. ಮೊದಲೇ ಗ್ರಾಮೀಣ ಭಾಗದ ಜನರು ಮುಗ್ಧರಾಗಿದ್ದು, ಅವರ ಮೇಲೆ ಸುಲಭವಾಗಿ ಇಂತಹ ಫಲಕಗಳು ಪ್ರಭಾವ ಬೀರುತ್ತವೆ. ಜೊತೆಗೆ ಈ ಫಲಕಗಳಿಂದಲೇ ಪ್ರಚಾರವನ್ನೂ ನಡೆಸಿದಂತಾಗುತ್ತಿದೆ ಎಂದು ಜನರು ಹೇಳುತ್ತಿದ್ದಾರೆ.

ಜಿಲ್ಲೆಯಾದ ನಂತರ ಪ್ರಥಮ ಬಾರಿಗೆ ಚುನಾವಣೆ ನಡೆಯುತ್ತಿದ್ದು, ಈಗಾಗಲೇ ಬಿಗಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಆದರೂ ಕೆಲವೆಡೆ ಇಂತಹ ಫಲಕಗಳನ್ನು ಬಿಟ್ಟಿರುವುದರಿಂದ ಜನರು ಪ್ರಭಾವಿತರಾಗಬಹುದಾಗಿದೆ. ಈ ಹಿನ್ನೆಲೆಯಲ್ಲಿ ಇಂತಹ ಫಲಕಗಳನ್ನೂ ಕೂಡಲೇ ತೆರವು ಮಾಡಬೇಕು ಎಂದು ಕರವೇ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಎನ್. ಭೀಮುನಾಯಕ ಮನವಿ ಮಾಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT