ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಮುಖರನ್ನು ಉಳಿಸಿಕೊಳ್ಳಲು ಸಿಎಸ್‌ಕೆ ಚಿಂತನೆ

Last Updated 9 ಜನವರಿ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಮುಂಬರುವ ಇಂಡಿಯನ್‌ ಪ್ರೀಮಿಯರ್ ಲೀಗ್ (ಐಪಿಎಲ್) ಏಳನೇ ಆವೃತ್ತಿಗೆ ತಂಡದಲ್ಲಿ ಪ್ರಮುಖ ಐದು ಮಂದಿ  ಆಟಗಾರರನ್ನು ಮುಂದುವರೆಸಲು ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್‌ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ಮಾಲೀಕರು ಚಿಂತನೆ ನಡೆಸಿದ್ದಾರೆ.

ಐಪಿಎಲ್‌ ನಿಯಮದ ಪ್ರಕಾರ ಒಂದು ತಂಡವು ಈಗಾಗಲೇ ಇರುವ ಆಟಗಾರರಲ್ಲಿ ಐವರನ್ನು ತಂಡ ದಲ್ಲಿ ಉಳಿಸಿಕೊಳ್ಳಬಹುದಾಗಿದ್ದು, ಈ ನಿಟ್ಟಿನಲ್ಲಿ ಮುಂಬೈ ಹಾಗೂ ಚೆನ್ನೈ ತಂಡದ ಮಾಲೀಕರು ಹಿಂದಿನ ಆವೃತ್ತಿಯಲ್ಲಿ ಉತ್ತಮವಾಗಿ ಆಡಿದ್ದ ಹಾಗೂ ಪ್ರಸ್ತುತ ಆಟಗಾರರು ತೋರುತ್ತಿರುವ ಪ್ರದರ್ಶನವನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.

ತಂಡದಲ್ಲಿ ಉಳಿಸಿಕೊಳ್ಳುವ  ಆಟಗಾರರ ಅಂತಿಮ ಪಟ್ಟಿಯನ್ನು ಎಲ್ಲಾ ಫ್ರಾಂಚೈಸಿಗಳು ಶುಕ್ರವಾರದೊಳಗೆ ತನಗೆ ನೀಡಬೇಕು ಎಂದು ಬಿಸಿಸಿಐ ಸೂಚಿಸಿದೆ.

ಬಿಸಿಸಿಐ ಅಧ್ಯಕ್ಷ ಎನ್‌. ಶ್ರೀನಿವಾಸನ್ ಒಡೆತನದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವು ಮಹೇಂದ್ರ ಸಿಂಗ್ ದೋನಿ  ಸೇರಿದಂತೆ, ಸುರೇಶ್ ರೈನಾ, ರವೀಂದ್ರ ಜಡೇಜ, ಆರ್‌.ಅಶ್ವಿನ್ ಹಾಗೂ ವಿದೇಶಿ ಆಟಗಾರರ ಪೈಕಿ ವೆಸ್ಟ್‌ ಇಂಡೀಸ್‌ನ ಡ್ವೇನ್ ಬ್ರಾವೊ ಇಲ್ಲವೇ ದ.ಆಫ್ರಿಕಾದ ಫಾಫ್ ಡು ಫ್ಲೆಸಿಸ್ ಅವರನ್ನು ಉಳಿಸಿಕೊಳ್ಳುವ ಆಲೋಚನೆಯಲ್ಲಿದೆ.

ಮುಂಬೈ ಇಂಡಿಯನ್ಸ್ ತಂಡ ಈ ಬಾರಿ ಸಚಿನ್‌ ತೆಂಡೂಲ್ಕರ್‌ ಅನುಪಸ್ಥಿತಿ ಯಲ್ಲಿ ಕಣಕ್ಕಿಯುತ್ತಿದ್ದು, ನಾಯಕ ರೋಹಿತ್‌ ಶರ್ಮಾ, ದಿನೇಶ್ ಕಾರ್ತಿಕ್, ಹರ್ಭಜನ್ ಸಿಂಗ್, ಅಂಬಟಿ ರಾಯುಡು ಸೇರಿದಂತೆ ವಿಂಡೀಸ್‌ನ ಕೀರನ್ ಪೊಲಾರ್ಡ್‌ , ಆಸ್ಟ್ರೇಲಿಯಾದ ಮಿಷೆಲ್ ಜಾನ್ಸನ್ ಹಾಗೂ ಶ್ರೀಲಂಕಾದ ಲಸಿತ್ ಮಾಲಿಂಗ ಅವರನ್ನು ಮುಂದುವರಿಸುವ ಸಾಧ್ಯತೆ ಇದೆ.

ಕಳೆದ ಆವೃತ್ತಿಯಲ್ಲಿ ಉತ್ತಮ ಪ್ರದರ್ಶನ ನೀಡಿ ಗಮನ ಸೆಳೆದಿದ್ದ ಸನ್‌ರೈಸರ್ಸ್ ಹೈದರಾಬಾದ್‌ ಭಾರತದ ಶಿಖರ್‌ ಧವನ್‌ ಮತ್ತು ದ.ಆಫ್ರಿಕಾದ ಡೇಲ್ ಸ್ಟೇನ್ ಅವರ ಜೊತೆಗೆ ಇದೇ ತಂಡದ ಕ್ವಿಂಟನ್‌ ಡಿ ಕಾಕ್ ಅಥವಾ ವಿಂಡೀಸ್‌ನ ಡರೆನ್ ಸಮಿ ಅವರನ್ನು ಉಳಿಸಿಕೊಳ್ಳುವತ್ತ ಒಲವು ತೋರಿದೆ.

ಭಾರತದ ಮಾಜಿ ನಾಯಕ ರಾಹುಲ್‌ ದ್ರಾವಿಡ್ ಅವರ ವಿದಾಯದಿಂದಾಗಿ ಬಾಲಿವುಡ್‌ ತಾರೆ ಶಿಲ್ಪಾ ಶೆಟ್ಟಿ ಒಡೆತನದ ರಾಜಸ್ತಾನ ರಾಯಲ್ಸ್   ಆಸ್ಟ್ರೇಲಿಯಾದ ಶೇನ್ ವಾಟ್ಸನ್, ಭಾರತದ ಅಜಿಂಕ್ಯಾ ರಹಾನೆ ಮತ್ತು ಸಂಜು ಸ್ಯಾಮ್ಸನ್ ಅವರನ್ನು ಮುಂದುವರಿಸಲು ಆಲೋಚನೆ ನಡೆಸಿದೆ.

ಇನ್ನೂ ಶಾರುಖ್‌ ಖಾನ್ ಒಡೆತನದ ಕೋಲ್ಕತ್ತ ನೈಟ್‌ ರೈಡರ್ಸ್‌ ತಂಡದಲ್ಲಿ ಭಾರತದ ಗೌತಮ್ ಗಂಭೀರ್‌, ಮೊಹಮ್ಮದ್ ಶಮಿ ಮತ್ತು ವಿಂಡೀಸ್‌ನ ಸುನೀಲ್ ನಾರಾಯಣ ಅವರ ಸ್ಥಾನ ಖಚಿತವಾಗಿದೆ ಎಂದು ಮೂಲಗಳು ತಿಳಿಸಿವೆ.

ಹೊಸ ತಂಡ ಕಟ್ಟುವತ್ತ ಪಂಜಾಬ್‌, ದೆಹಲಿ ಚಿತ್ತ: ಕಳೆದ ಆವೃತ್ತಿಯಲ್ಲಿ ಹೀನಾಯ ಪ್ರದರ್ಶನ ನೀಡುವ ಮೂಲಕ ಪಾಯಿಂಟ್‌ ಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ಕುಸಿದಿದ್ದ ಡೆಲ್ಲಿ ಡೇರ್‌ಡೆವಿಲ್ಸ್‌ ತಂಡದ ಮಾಲೀಕರು  ಈ ಬಾರಿ ಎಲ್ಲಾ ಆಟಗಾರರನ್ನು ಕೈಬಿಟ್ಟು ನೂತನ ವಾಗಿ ತಂಡವನ್ನು ಕಟ್ಟುವತ್ತ ಚಿತ್ತ ಹರಿಸಿದ್ದಾರೆ.

ಹರಾಜು ಪ್ರಕ್ರಿಯೆಯಲ್ಲಿ ಹಿಂದೆ ತಂಡದಲ್ಲಿದ್ದ ಆಸ್ಟ್ರೇಲಿಯಾದ ಡೇವಿಡ್‌ ವಾರ್ನರ್‌ ಅವರನ್ನು ಮರಳಿ ತೆಕ್ಕೆಗೆ ಹಾಕಿಕೊಳ್ಳುವ ಮೂಲಕ ಇತರ ಹೊಸ ಆಟಗಾರರನ್ನು ಸೆಳೆದುಕೊಳ್ಳಲು ಉತ್ಸುಕವಾಗಿದೆ.

ಇನ್ನೊಂದೆಡೆ ಬಾಲಿವುಡ್‌ ನಟಿ ಪ್ರೀತಿ ಜಿಂಟಾ ಒಡೆತನದ ಕಿಂಗ್ಸ್‌ ಇಲೆವನ್ ಪಂಜಾಬ್ ಕೂಡಾ ಇನ್ನೊಮ್ಮೆ  ಆಟಗಾರರನ್ನು ಖರೀದಿಸುವ ಮೂಲಕ ಹೊರ ಆರಂಭ ಕಾಣುವ ನಿರೀಕ್ಷೆಯಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT