ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಯಾಣ ದರ ಹೆಚ್ಚಳ: ಪ್ರತಿಭಟನೆ

Last Updated 3 ಅಕ್ಟೋಬರ್ 2012, 18:30 IST
ಅಕ್ಷರ ಗಾತ್ರ

ಬೆಂಗಳೂರು: ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಬಸ್ ಪ್ರಯಾಣ ದರ ಏರಿಸಿರುವ ಸರ್ಕಾರದ ಕ್ರಮವನ್ನು ಖಂಡಿಸಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಮತ್ತು ಭಾರತ ಪ್ರಜಾಸತ್ತಾತ್ಮಕ ಯುವಜನ ಒಕ್ಕೂಟದ (ಡಿವೈಎಫ್‌ಐ) ಸದಸ್ಯರು ಶಾಂತಿನಗರದ ಬಿಎಂಟಿಸಿ ಕೇಂದ್ರ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.

`ರಾಜ್ಯ ಸರ್ಕಾರ ಕೆಎಸ್‌ಆರ್‌ಟಿಸಿ ಬಸ್ ಪ್ರಯಾಣ ದರದಲ್ಲಿ ಶೇ 12ರಷ್ಟು ಮತ್ತು ಬಿಎಂಟಿಸಿ ಪ್ರಯಾಣ ದರದಲ್ಲಿ ಶೇ 15ರಷ್ಟು ಏರಿಕೆ ಮಾಡಿದೆ. ಡೀಸೆಲ್ ಬೆಲೆ ಏರಿಕೆಯಾಗಿರುವುದರಿಂದ ಬಸ್ ಟಿಕೆಟ್ ದರ ಹೆಚ್ಚಿಸುವುದು ಅನಿವಾರ್ಯವಾಯಿದೆ ಎಂದು ಸರ್ಕಾರ ಕಾರಣ ಹೇಳುತ್ತಿದೆ. ಆದರೆ, ಡೀಸೆಲ್ ಬೆಲೆ ಏರಿಕೆಯಾದ ದಿನವೇ ಸಾರಿಗೆ ಸಚಿವ ಆರ್.ಅಶೋಕ ಪತ್ರಿಕಾಗೋಷ್ಠಿ ಕರೆದು, ಯಾವುದೇ ಕಾರಣಕ್ಕೂ ಬಸ್ ಟಿಕೆಟ್ ದರ ಹೆಚ್ಚಿಸುವುದಿಲ್ಲ ಎಂದು ಹೇಳಿದ್ದರು. ಆದರೆ, ಈಗ ಮಾತಿನಂತೆ ನಡೆದುಕೊಳ್ಳದ ಸಚಿವರು, ದರ ಹೆಚ್ಚಿಸಿದ್ದಾರೆ~ ಎಂದು ಡಿವೈಎಫ್‌ಐ ಅಧ್ಯಕ್ಷ ಲಿಂಗರಾಜು ಆಕ್ರೋಶ ವ್ಯಕ್ತಪಡಿಸಿದರು.

ನಂತರ ಮಾತನಾಡಿದ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಅಧ್ಯಕ್ಷೆ ಸುಬ್ಬಲಕ್ಷ್ಮಮ್ಮ, `ರಾಜ್ಯದ 125 ತಾಲ್ಲೂಕುಗಳು ಬರಗಾಲದಿಂದ ತತ್ತರಿಸಿ ಹೋಗಿವೆ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಬಸ್ ಪ್ರಯಾಣ ದರ ಏರಿಕೆ ಮಾಡುವ ಬದಲು, ಪರ್ಯಾಯ ಕ್ರಮಗಳನ್ನು ತೆಗೆದುಕೊಳ್ಳಬಹುದಿತ್ತು.
 
ಆದರೆ, ಪ್ರಯಾಣಿಕರಿಗೆ ಯಾವುದೇ ಸೂಚನೆ ನೀಡದೆ ರಾತ್ರೋರಾತ್ರಿ ದರ ಏರಿಕೆ ಮಾಡಿರುವುದು ಖಂಡನೀಯ. ಸರ್ಕಾರದ ವರದಿಯಂತೆ ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ಸಂಸ್ಥೆಗಳು ಲಾಭದಲ್ಲಿವೆ. ಆದ್ದರಿಂದ ಸರ್ಕಾರ ಪ್ರಯಾಣ ದರ ಏರಿಕೆ ಮಾಡಿರುವುದನ್ನು ಕೂಡಲೇ ಹಿಂಪಡೆಯಬೇಕು~ ಎಂದು ಆಗ್ರಹಿಸಿದರು.

ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷೆ ಗೌರಮ್ಮ, ಕಾರ್ಯದರ್ಶಿ ವಿ.ಎನ್.ಯಶೋಧ ಸೇರಿದಂತೆ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT