ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಹ: 20 ಸಾವಿರ ಹೆಕ್ಟೇರ್ ಬೆಳೆೆ ಹಾನಿ, ರೈತರ ಆತಂಕ

Last Updated 16 ಸೆಪ್ಟೆಂಬರ್ 2011, 4:50 IST
ಅಕ್ಷರ ಗಾತ್ರ

ಬಾಗಲಕೋಟೆ: ಮುಳುಗಡೆ ನಾಡಿನ ರೈತರಿಗೆ ಮಳೆಯಾಗಲಿ, ಬಿಡಲಿ ಪ್ರತೀ ವರ್ಷ ಪ್ರವಾಹದಿಂದ ಮಾತ್ರ  ತಪ್ಪಿಸಿಕೊಳ್ಳುವುದು ಅಸಾಧ್ಯವಾಗಿ ಪರಿಣಮಿಸಿದೆ.ಮಹಾರಾಷ್ಟ್ರ ಮತ್ತು ಬೆಳಗಾವಿ ಜಿಲ್ಲೆಯಲ್ಲಿ ವಿಪರೀತ ಮಳೆಯಾದರೆ  ಜಿಲ್ಲೆಯ ರೈತ ಸಮುದಾಯ ಬೆಲೆ ತೆರ ಬೇಕಾಗುತ್ತದೆ. ಪ್ರತಿ ವರ್ಷ ಜಿಲ್ಲೆಯ ಜೀವನದಿಗಳು ಉಕ್ಕಿಹರಿಯುವ ಪರಿಣಾಮ ಸಾವಿರಾರು ಎಕರೆ ಬೆಳೆ ಹಾಗೂ ಮನೆಗಳಿಗೆ ಹಾನಿಯಾಗುತ್ತದೆ.

ಪ್ರಸ್ತುತ  ಜಿಲ್ಲೆಯ ಕೃಷ್ಣಾ, ಘಟಪ್ರಭಾ ಮತ್ತು ಮಲಪ್ರಭಾ ನದಿ ಪ್ರವಾಹದಿಂದ ಅಂದಾಜು 1908.20 ಹೆಕ್ಟೇರ್ ಬೆಳೆ ಹಾನಿಯಾಗಿದೆ. ಇದರಿಂದ ಉತ್ತಮ ಇಳುವರಿಯ ನಿರೀಕ್ಷೆಯಲ್ಲಿದ್ದ ರೈತರು ಕಂಗಾಲಾಗಿದ್ದಾರೆ. ಬಾದಾಮಿ ತಾಲ್ಲೂಕಿನಲ್ಲಿ ಮಲಪ್ರಭಾ ಪ್ರವಾಹದಿಂದ ರೂ. 142.82 ಲಕ್ಷ ಮೊತ್ತದ 924 ಹೆಕ್ಟೇರ್ ಬೆಳೆ ಹಾನಿಯಾಗಿದೆ.

ಕೃಷ್ಣಾ ಮತ್ತು ಘಟಪ್ರಭಾ ನದಿ ಪ್ರವಾಹದಿಂದ ಬಾಗಲಕೋಟೆ, ಮುಧೋಳ, ಜಮಖಂಡಿ ಮತ್ತು ಹುನಗುಂದ ತಾಲ್ಲೂಕಿನಲ್ಲಿ ಅಪಾರ ಪ್ರಮಾಣದ ಬೆಳೆಗೆ ಹಾನಿಯಾದ ವರದಿಯಾಗಿದೆ.ಜಿಲ್ಲೆಯಲ್ಲಿ ಮೆಕ್ಕೆಜೋಳ, ಸೂರ್ಯಕಾಂತಿ, ಕಬ್ಬು, ಈರುಳ್ಳಿ, ಸೋಯಾಬಿನ್ ಸೇರಿದಂತೆ ಇತರೆ ಬೆಳೆಗಳು ನೀರಿನಲ್ಲಿ ಮುಳುಗಿ ಹಾನಿಗೆ ಒಳಗಾಗಿವೆ. ಇನ್ನೂ ಕೆಲವೆಡೆ ರೈತರು ಬೆಳೆದ ಬೆಳೆ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದೆ.

ಬಾಗಲಕೋಟೆ: ಕೃಷ್ಣಾ ಮತ್ತು ಘಟಪ್ರಭಾ ನದಿ ಪ್ರವಾಹದಿಂದ  ತಾಲ್ಲೂಕಿನ ಸುತಗುಂಡಾರದಲ್ಲಿ 54 ಹೆಕ್ಟೇರ್, ಮನಾಳದಲ್ಲಿ 54, ಬೊಮ್ಮಣಗಿಯಲ್ಲಿ 25.2, ಚಿಕ್ಕಮ್ಯೋಗೇರಿಯಲ್ಲಿ 24, ಹಿರೇಮ್ಯೋಗೇರಿಯಲ್ಲಿ 26, ಹಂಡರಗಲ್‌ನಲ್ಲಿ 22, ನಾಗಸಂಪಿಗೆಯಲ್ಲಿ 24, ನಾಗರಾಳದಲ್ಲಿ 16, ನಾಯನೇಗಲಿ 40, ಮಂಕಣಿ 30, ಮುದವಿನಕೊಪ್ಪ 26, ಕಲಾದಗಿಯಲ್ಲಿ 2, ಉದಗಟ್ಟಿಯಲ್ಲಿ 7, ಶಾರದಾಳದಲ್ಲಿ 5.3,

ಗೋವನಕೊಪ್ಪದಲ್ಲಿ 6, ಹಿರೇಸಂಶಿ ಮತ್ತು ಚಿಕ್ಕಸಂಶಿಯಲ್ಲಿ 9, ದೇವನಳದಲ್ಲಿ 5.8, ಸೊಕ್ಕನಾದಗಿ 6.5, ಛಬ್ಬಿ 5, ಯಡಹಳ್ಳಿ 4, ಆನದಿನ್ನಿ 4.5, ಕೇಶನೂರ 4.8, ಮುರನಾಳ 5, ಮೀರಾಪುರದಲ್ಲಿ 2.5 ಹೆಕ್ಟೇರ್ ಸೇರಿದಂತೆ ಒಟ್ಟು 27 ಗ್ರಾಮಗಳಲ್ಲಿ ರೂ.190 ಲಕ್ಷ ಮೊತ್ತದ 418.60 ಹೆಕ್ಟೇರ್ ಬೆಳೆ ಹಾನಿಯಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಅಂದಾಜಿಸಿದ್ದಾರೆ.

ಮುಧೋಳ:  ಘಟಪ್ರಭಾ ನದಿ ನೀರಿನಿಂದ  ತಾಲ್ಲೂಕಿನ 40 ಹಳ್ಳಿಗಳಲ್ಲಿ ರೂ. 201.322 ಲಕ್ಷ ಮೊತ್ತದ 565.60 ಹೆಕ್ಟೇರ್ ಬೆಳೆ ಹಾನಿಯಾಗಿದೆ.   ತಾಲ್ಲೂಕಿನ ಢವಳೇಶ್ವರದಲ್ಲಿ 36 ಹೆಕ್ಟೇರ್, ನಂದಗಾಂವದಲ್ಲಿ 23.60 ಹೆಕ್ಟೇರ್, ಮಳಲಿಯಲ್ಲಿ 34, ನಾಗರಾಳದಲ್ಲಿ 31 ಹೆಕ್ಟೇರ್ ಸೇರಿದಂತೆ ಒಟ್ಟು 40 ಹಳ್ಳಿಗಳಲ್ಲಿ ಬೆಳೆ ನೆಲಸಮವಾಗಿದೆ ಎಂದು ಕೃಷಿ ಇಲಾಖೆ ಅಂದಾಜಿಸಿದೆ.

ಬಾದಾಮಿ: ಮಲಪ್ರಭಾ ನದಿ ದಡದ 12 ಹಳ್ಳಿಗಳಲ್ಲಿ 183 ಹೆಕ್ಟೇರ್ ಸೂರ್ಯಕಾಂತಿ, 530 ಹೆಕ್ಟೇರ್ ಮೆಕ್ಕೆಜೋಳ, 19 ಹೆಕ್ಟೇರ್ ಹತ್ತಿ, 52 ಹೆಕ್ಟೇರ್ ತೋಟಗಾರಿಕೆ ಬೆಳೆಗಳು ಸೇರಿದಂತೆ ಒಟ್ಟು ರೂ. 142.820 ಲಕ್ಷ ಮೊತ್ತದ 924 ಹೆಕ್ಟೇರ್ ಬೆಳೆ ಹಾನಿಯಾಗಿದೆ.

ಈ ತಾಲ್ಲೂಕಿನ ಕರ್ಲಕೊಪ್ಪ, ಹಾಗನೂರ, ತಳಕವಾಡ, ಆಲೂರ(ಎಸ್.ಕೆ), ಬೀರನೂರ, ಗೋವನಕೊಪ್ಪ, ಕಿತ್ತಲಿ, ಸುಳ್ಳ, ಹೆಬ್ಬಳ್ಳಿ, ಮುಮರಡ್ಡಕೊಪ್ಪ, ಕಳಸ ಹಾಗೂ ಒಡವಟ್ಟಿ ಗ್ರಾಮದ ರೈತರು ಪ್ರವಾಹಕ್ಕೆ ನಲುಗಿದ್ದಾರೆ.

 ಪರಿಹಾರ: ಕೇಂದ್ರ ಸರ್ಕಾರ ಪ್ರತಿ ಹೆಕ್ಟೇರ್ ಬೆಳೆ ಹಾನಿಗೆ ರೂ. 2 (ಮೊದಲ ಬಾರಿ ಹಾನಿಯಾದರೆ) ಮತ್ತು ರೂ. 4 ಸಾವಿರ ಪರಿಹಾರ ನೀಡುತ್ತದೆ. ತೋಟಗಾರಿಕೆ ಬೆಳೆಗಳಿಗೆ ರೂ. 6 ಪರಿಹಾರ ನೀಡಲು ಅಧಿಸೂಚನೆಯಿದೆ. ಈ ಪರಿಹಾರ ರೈತರಿಗೆ ಯಾತಕ್ಕೂ ಸಾಲದು. ಸಾಲ ಮಾಡಿ ಬೆಳೆದ ಬೆಳೆ ಈಗ ನೀರು ಪಾಲಾಗಿದೆ.

ವಾಡಿಕೆಗಿಂತ ಕಡಿಮೆ ಮಳೆ: `ಪ್ರಜಾವಾಣಿ~ಯೊಂದಿಗೆ ಮಾತನಾಡಿದ ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ಗುರುಮೂರ್ತಿ,  ಕಳೆದ 2010ನೇ ಸಾಲಿಗೆ ಹೋಲಿಸಿದರೆ ಈ ವರ್ಷ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ ಎಂದರು.  ಕಳೆದ ವರ್ಷ ಆಗಸ್ಟ್ ಅಂತ್ಯಕ್ಕೆ 424.6 ಮಿಲಿ ಮೀಟರ್ ಮಳೆಯಾಗಿತ್ತು.
 
ಆದರೆ ಈ ವರ್ಷ 360.2 ಮಿ.ಮಿ ಮಳೆಯಾಗಿದೆ. ಜಿಲ್ಲೆಯಲ್ಲಿ ಆಗಸ್ಟ್ ಅಂತ್ಯಕ್ಕೆ 297.2 ವಾಡಿಕೆ ಮಳೆ ನಿರೀಕ್ಷಿಸಲಾಗಿತ್ತು. ಇದು ಇಲಾಖೆಯ ಪ್ರಕಾರ ಹೆಚ್ಚಿನ ಪ್ರಮಾಣದಲ್ಲಿಯೇ ಮಳೆಯಾಗಿದೆ. ಆದರೆ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಮಳೆಯ ಪ್ರಮಾಣ ಕಡಿಮೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಹಿಂಗಾರು ಬಿತ್ತನೆಯೂ ಆರಂಭವಾಗಿದೆ. ಈ ಬಾರಿ ಒಟ್ಟು 3 ಲಕ್ಷ ಹೆಕ್ಟೇರ್ (ಹಿಂಗಾರು) ಪ್ರದೇಶದಲ್ಲಿ ಬಿತ್ತನೆಗೆ ಕೃಷಿ ಇಲಾಖೆ ಗುರಿ ಹೊಂದಿದೆ ಎಂದರು.

ಜೋಳ 94,720 ಹೆಕ್ಟೇರ್, ಗೋಧಿ 44,322 ಹೆಕ್ಟೇರ್, ಕಡಲೆ 80,838 ಹೆಕ್ಟೇರ್, ಸೂರ್ಯಕಾಂತಿ 28,402 ಹೆಕ್ಟೇರ್ ಭೂಮಿಯಲ್ಲಿ ಬಿತ್ತನೆಯಾಗುವ ನಿರೀಕ್ಷೆಯಿದೆ. ಬಿತ್ತನೆಗಾಗಿ ರೈತರಿಗೆ ಅಗತ್ಯ  ಬೀಜಗಳನ್ನು ಕರ್ನಾಟಕ ಬೀಜ ನಿಗಮ ಹಾಗೂ ಇತರ ಸಂಸ್ಥೆಗಳಿಂದ ರೈತರಿಗೆ ಒದಗಿಸಲಾಗುತ್ತಿದೆ. ಜೊತೆಗೆ ರಸಗೊಬ್ಬರ ವಿತರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT