ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಹ ಇಳಿಕೆ: 3 ಸೇತುವೆ ಸಂಚಾರಕ್ಕೆ ಮುಕ್ತ

ಬೆಳಗಾವಿ: ಭಾರಿ ಮಳೆ, ರಸ್ತೆ ಜಲಾವೃತ
Last Updated 3 ಆಗಸ್ಟ್ 2013, 6:52 IST
ಅಕ್ಷರ ಗಾತ್ರ

ಬೆಳಗಾವಿ: ಕೃಷ್ಣಾ ನದಿಯಲ್ಲಿ ನೀರಿನ ಪ್ರಮಾಣದಲ್ಲಿ ಗಣನೀಯ ಇಳಿಕೆಯಾಗಿದ್ದು, ಜಲಾವೃತಗೊಂಡಿದ್ದ ಮೂರು ಸೇತುವೆಗಳು ಸಂಚಾರಕ್ಕೆ ಮುಕ್ತವಾಗಿದ್ದು, 15 ಸೇತುವೆಗಳು ಈವರೆಗೂ ನೀರಿನಲ್ಲಿ ಮುಳುಗಿವೆ.

ರಾಯಬಾಗ ತಾಲ್ಲೂಕಿನ ಸಿದ್ದಾಪುರ-ಖೇಮಲಾಪುರ, ಖೆಮಲಾಪುರ- ಶಿರಗೂರ ಹಾಗೂ ಅಥಣಿ ತಾಲ್ಲೂಕಿನ ಕಂಗಡಿ-ಐನಾಪುರ ರಸ್ತೆ ಸೇತುವೆ ಸಂಚಾರಕ್ಕೆ ಮುಕ್ತವಾಗಿವೆ. ಚಿಕ್ಕೋಡಿ ತಾಲ್ಲೂಕಿನ 7 ಸೇತುವೆಗಳು, ರಾಯಬಾಗ ತಾಲ್ಲೂಕಿನ 5 ಹಾಗೂ ಅಥಣಿ ತಾಲ್ಲೂಕಿನ 3 ಸೇತುವೆಗಳು ಜಲಾವೃತಗೊಂಡಿವೆ.

ಕಳೆದ ಎರಡು ದಿನಗಳಿಂದ ಬೆಳಗಾವಿ ನಗರ ಸೇರಿದಂತೆ ತಾಲ್ಲೂಕಿನಲ್ಲಿ ಭಾರಿ ಪ್ರಮಾಣದಲ್ಲಿ ಮಳೆ ಸುರಿಯುತ್ತಿರುವುದರಿಂದ ರಸ್ತೆಗಳು ಜಲಾವೃತಗೊಂಡಿವೆ. ಹೊಲಗದ್ದೆಗಳಿಗೆ ನೀರು ನುಗ್ಗಿದೆ.

ಖಾನಾಪುರ ತಾಲ್ಲೂಕಿನಲ್ಲಿ ಶುಕ್ರವಾರವೂ ಉತ್ತಮವಾಗಿ ಮಳೆ ಸುರಿದಿದೆ. ಮಲಪ್ರಭಾ ನದಿಯ ನೀರಿನ ಮಟ್ಟ ಗಣನೀಯವಾಗಿ ಹೆಚ್ಚಿದ್ದು, ಪಟ್ಟಣದ ಸಮೀಪದ ಹಳೆ ಸೇತುವೆ ಮುಳುಗಡೆಯಾಗಿದೆ. ಬೆಳಗಾವಿ ತಾಲ್ಲೂಕಿನ ಪೀರನವಾಡಿ ಬಳಿ ರಸ್ತೆಯ ಮೇಲೆ ನೀರು ತುಂಬಿ ಹರಿದಿದ್ದರಿಂದ ಕೆಲಕಾಲ ಬೆಳಗಾವಿ- ಖಾನಾಪುರ ಸಂಪರ್ಕ ಸ್ಥಗಿತಗೊಂಡಿತ್ತು. ದಿನವಿಡಿ ಮಳೆ ಸುರಿಯುತ್ತಿದ್ದರಿಂದ ಜನಜೀವನದ ಮೇಲೆ ಪರಿಣಾಮ ಬೀರಿದೆ.

ಬೆಳಗಾವಿಯಿಂದ ಖಾನಾಪುರ ಕಡೆಗೆ ಹೋಗುವ ವಾಹನಗಳು ತಡವಾಗಿದ್ದರಿಂದ ಖಾನಾಪುರದ ಬ್ಯಾಂಕ್, ವಿಮಾ ಹಾಗೂ ವಿವಿಧ ಸರಕಾರಿ ಉದ್ಯೋಗಿಗಳು ಹಾಗೂ ಪ್ರಯಾಣಿಕರು 2 ಗಂಟೆ ತಡವಾಗಿ ತಲುಪಿದ್ದಾರೆ.

ನಗರದ ಬ್ರಹ್ಮನಗರ ಸಮೀಪ ಬೆಳಗಾವಿ- ಗೋವಾ ರಾಷ್ಟ್ರೀಯ ಹೆದ್ದಾರಿ 4ಎ ದಲ್ಲಿ ನೀರು ಹರಿದಿದ್ದರಿಂದ ಸಂಪರ್ಕ ಕೆಲಕಾಲ ಬಂದ್ ಆಗಿತ್ತು. ರಸ್ತೆ ಪಕ್ಕದ ಹೊಲಗದ್ದೆಗಳು ಜಲಾವೃತಗೊಂಡಿವೆ. ಈ ರಸ್ತೆಯಲ್ಲಿ ಸಂಚರಿಸಲು ವಾಹನ ಸವಾರರು ಪರದಾಡಬೇಕಾಯಿತು.

ಟಿಳಕವಾಡಿಯ ಗಜಾನನ ಮಹಾರಾಜ ನಗರ ಪ್ರದೇಶವು ಸಂಪೂರ್ಣವಾಗಿ ಜಲಾವೃತಗೊಂಡಿದೆ. ಈ ಪ್ರದೇಶದ ತಗ್ಗು ಭಾಗಗಳ ಮನೆಯೊಳಗೆ ನೀರು ನುಗ್ಗಿದೆ. ರಸ್ತೆಗಳು ಸಂಪೂರ್ಣ ಜಲಾವೃತಗೊಂಡಿದ್ದು, ಮೊಣಕಾಲಿನಷ್ಟು ಪ್ರಮಾಣದಲ್ಲಿ ನೀರು ನಿಂತಿದೆ. ಈ ಪ್ರದೇಶದಲ್ಲಿ ನೀರು ಹರಿಯಲು ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದಿರುವುದು ಇದಕ್ಕೆ ಕಾರಣ.

35 ಮನೆ ಕುಸಿತ
ಅತಿವೃಷ್ಟಿಯಿಂದಾಗಿ ಬೆಳಗಾವಿ ತಾಲ್ಲೂಕಿನಲ್ಲಿ 13 ಮನೆ, ಹುಕ್ಕೇರಿ ತಾಲ್ಲೂಕಿನಲ್ಲಿ 9 ಮನೆ, ರಾಯಬಾಗ ತಾಲ್ಲೂಕಿನಲ್ಲಿ 2 ಮನೆ, ಖಾನಾಪುರ ತಾಲ್ಲೂಕಿನ 5 ಮನೆ  ಸೇರಿದಂತೆ ಜಿಲ್ಲೆಯಲ್ಲಿ ಗುರುವಾರ ಒಟ್ಟು 29 ಮನೆಗಳು ಭಾಗಶಃ ಕುಸಿದು ಬಿದ್ದಿದ್ದು, ಅಂದಾಜು 11.01 ಲಕ್ಷ ರೂಪಾಯಿ ಹಾನಿ ಸಂಭವಿಸಿದೆ.

ಶುಕ್ರವಾರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ ಖಾನಾಪುರ ಪಟ್ಟಣದಲ್ಲಿ 63.2 ಮಿ.ಮೀ., ಲೋಂಡಾದಲ್ಲಿ 85 ಮಿ.ಮೀ., ನಾಗರಗಾಳಿ 51.2 ಮಿ.ಮೀ., ಜಾಂಬೋಟಿ 44 ಮಿ.ಮೀ., ಮಳೆ ವರದಿಯಾಗಿದೆ.

ಬೆಳಗಾವಿ ತಾಲ್ಲೂಕಿನಲ್ಲಿ ಬೆಳಿಗ್ಗೆಯಿಂದ ಮಳೆಯು ಬಿಟ್ಟು ಬಿಟ್ಟು ಹಾಗೂ ಆಗಾಗ ಬಿರುಸಿನಿಂದ ಮಳೆ ಸುರಿದಿದೆ. ವಿದ್ಯಾರ್ಥಿಗಳು ಶಾಲಾ ಕಾಲೇಜಿಗೆ ತೆರಳಲು ಪ್ರಯಾಸ ಪಡುವಂತಾಗಿತ್ತು.

ಬೆಳಗಾವಿ ನಗರದಲ್ಲಿ 38 ಮಿ.ಮೀ., ಸಂತಿಬಸ್ತವಾಡ 37 ಮಿ.ಮೀ., ರಾಕಸಕೊಪ್ಪದಲ್ಲಿ 124.5 ಮಿ.ಮೀ., ಮಳೆಯಾಗಿದೆ.
ಚಿಕ್ಕೋಡಿ ವರದಿ:  ಮಹಾರಾಷ್ಟ್ರದ ವಿವಿಧ ಜಲಾಶಯಗಳಿಂದ 1.5 ಲಕ್ಷ ಕ್ಯೂಸೆಕ್‌ಗೂ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದರೂ ಹಿಪ್ಪರಗಿ ಜಲಾಶಯದಿಂದ ಮಹಾರಾಷ್ಟ್ರದಿಂದ ಹರಿದು ಬರುತ್ತಿರುವ ನೀರಿಗಿಂತಲೂ ಹೆಚ್ಚುವರಿ ಪ್ರಮಾಣದಲ್ಲಿ ನೀರನ್ನು ಹೊರಬಿಡುತ್ತಿರುವ ಪರಿಣಾಮವಾಗಿ ತಾಲ್ಲೂಕಿನಲ್ಲಿ ಶುಕ್ರವಾರ ಕೃಷ್ಣಾ ನದಿ ಹರಿವಿನಲ್ಲಿ ಒಂದು ಮೀಟರ್‌ನಷ್ಟು ಇಳಿಕೆ ದಾಖಲಾಗಿದೆ.

ಸಹ್ಯಾದ್ರಿ ಪರ್ವತ ಶ್ರೇಣಿಗಳಲ್ಲಿ ಮಳೆರಾಯನ ಅಬ್ಬರ ಮುಂದುವರಿದಿದೆ. ಆದರೆ, ತಾಲ್ಲೂಕಿನಲ್ಲಿ  ಮಳೆ ಪ್ರಮಾಣ ಕಡಿಮೆಯಾಗಿದೆ. ದೂಧಗಂಗಾ ನದಿಯ ಹರಿವಿನಲ್ಲಿಯೂ ಸುಮಾರು 3 ಅಡಿಯಷ್ಟು ಕಡಿಮೆಯಾಗಿದೆ. ಶುಕ್ರವಾರ ಮಹಾರಾಷ್ಟ್ರದ ಕೊಯಿನಾ ಸೇರಿದಂತೆ ವಿವಿಧ ಜಲಾಶಯಗಳಿಂದ ಹೆಚ್ಚುವರಿಯಾಗಿ ನೀರು ಬಿಡುವ ನಿರೀಕ್ಷೆಯಿದೆ. ಆದರೂ ಆಲಮಟ್ಟಿಯಿಂದ ಹೊರ ಬಿಡುತ್ತಿರುವ ನೀರಿನ ಪ್ರಮಾಣ ಹೆಚ್ಚಿಗೆ ಇರುವುದರಿಂದ ಶನಿವಾರ ಮತ್ತೆ ನೀರಿನ ಹರಿವಿನಲ್ಲಿ ಯಥಾಸ್ಥಿತಿ ಉಳಿಯುವ ನಿರೀಕ್ಷೆಯಿದೆ.

ದೂಧಗಂಗಾ ಮತ್ತು ವೇದಗಂಗಾ ನದಿಗಳ ಮೂಲಕ 27196 ಕ್ಯೂಸೆಕ್, ರಾಜಾಪುರ ಬ್ಯಾರೇಜ್‌ದಿಂದ 1,47,131 ಕ್ಯೂಸೆಕ್, ನೀರು ಹರಿದು ಬರುತ್ತಲಿದೆ. ತಾಲ್ಲೂಕಿನ ಕಲ್ಲೋಳ ಹತ್ತಿರ ಕೃಷ್ಣಾ ನದಿಗೆ ಒಟ್ಟಾರೆಯಾಗಿ 1.74,327 ಕ್ಯೂಸೆಕ್ ನೀರಿನ ಹರಿವಿದ್ದು, ಹಿಪ್ಪರಗಿ ಜಲಾಶಯದಿಂದ 2.06.000 ಕ್ಯೂಸೆಕ್ ಹಾಗೂ ಆಲಮಟ್ಟಿ ಜಲಾಶಯದಿಂದ ಸುಮಾರು 1.46,393 ಕ್ಯೂಸೆಕ್ ನೀರನ್ನು ಹೊಬಿಡಲಾಗುತ್ತಿದೆ.

ಸೇತುವೆಗಳ ಮಟ್ಟ: ಕಲ್ಲೋಳ 533.00 ಮೀ, ಅಂಕಲಿ:532.00 ಮೀ, ಸದಲಗಾ: 535.49 ಮೀ, ಕುಡಚಿ: 529.90 ಮೀ ನಷ್ಟಿದೆ.
ಮಳೆ ವಿವರ: ಮಹಾರಾಷ್ಟ್ರದ ಕೊಯ್ನೊ-204 ಮಿ.ಮೀ, ನವಜಾ-214 ಮಿ.ಮೀ, ಮಹಾಬಳೇಶ್ವರ-170 ಮಿ.ಮೀ, ವಾರಣಾ-118ಮಿ.ಮೀ, ಸಾಂಗಲಿ- 6ಮಿ.ಮೀ, ಕೊಲ್ಲಾಪುರ -21ಮಿ.ಮೀ, ಚಿಕ್ಕೋಡಿ- 9.6ಮಿ.ಮೀ, ನಾಗರಮುನ್ನೋಳ್ಳಿ- 7.8ಮಿ.ಮೀ, ಸದಲಗಾ-5.3ಮಿ.ಮೀ, ಗಳತಗಾ-6.4 ಮಿ.ಮೀ, ಜೋಡಟ್ಟಿ-1.4 ಮಿ.ಮೀ, ನಿಪ್ಪಾಣಿ -14.02 ಮಿ.ಮೀ
ಮಹಾರಾಷ್ಟ್ರದಲ್ಲಿ ಕಳೆದ 24 ಗಂಟೆಗಳಲ್ಲಿ ಮತ್ತೆ ಮಳೆ ಹೆಚ್ಚಾಗಿರುವುದರಿಂದ ಅಲ್ಲಿನ ಜಲಾಶಯಗಳಿಂದ ಹೆಚ್ಚಿನ ನೀರು ಬರುವ ಸಂಭವವಿದೆ ಆದ್ದರಿಂದ ನದಿದಡದ ಜನರು ಹಾಗೂ ಆಯಾ ಗ್ರಾಮಗಳಲ್ಲಿ ನಿಯೋಜನೆಗೊಂಡಿರುವ ನೋಡಲ್ ಅಧಿಕಾರಿಗಳಿಗೆ ಜಾಗೃತಿಯಿಂದ ಇರಲು ಸೂಚನೆ ನೀಡಲಾಗಿದೆ   ಎಂದು ತಹಶೀಲ್ದಾರ್ ರಾಜಶೇಖರ ಡಂಬಳ ತಿಳಿಸಿದ್ದಾರೆ.

ಮಳೆಗೆ ತತ್ತರಿಸಿದ ಇಳೆ
ಖಾನಾಪುರ: ಕಳೆದ ಬುಧವಾರ ಸಂಜೆಯಿಂದ ಎಗ್ಗಿಲ್ಲದೇ ಸುರಿಯುತ್ತಿರುವ ಪುಷ್ಯ ಮಳೆಗೆ ತಾಲ್ಲೂಕಿನ ಜನ-ಜಾನುವಾರುಗಳು ತತ್ತರಿಸಿವೆ. ಅರಣ್ಯ ಪ್ರದೇಶದಲ್ಲಿ ಎಡೆಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ನದಿಗಳು ಹಾಗೂ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ಅವ್ಯಾಹತವಾಗಿ ಸುರಿಯುತ್ತಿರುವ ಮಳೆಯ ಕಾರಣ ಶುಕ್ರವಾರ ತಾಲ್ಲೂಕಿನ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ರಜೆ ಘೋಷಿಸಲಾಗಿತ್ತು. ಶುಕ್ರವಾರ ಮಧ್ಯಾಹ್ನದ ನಂತರ ಮಳೆಯ ಪ್ರಮಾಣ ಕೊಂಚ ಕಡಿಮೆಯಾಗಿದ್ದು, ಶನಿವಾರ ಎಂದಿನಂತೆ ತಾಲ್ಲೂಕಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳು ಕಾರ್ಯನಿರ್ವಹಿಸಲಿವೆ ಎಂದು ತಾಲ್ಲೂಕು ಆಡಳಿತ ಸ್ಪಷ್ಟಪಡಿಸಿದೆ.

ಮಳೆಯಿಂದಾಗಿ ಮಲಪ್ರಭಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚುತ್ತಿದ್ದು, ಪಟ್ಟಣದ ಹಳೆಯ ಸೇತುವೆ, ಹಬ್ಬನಹಟ್ಟಿ ಬಳಿಯ ಸೇತುವೆ, ಚಾಪಗಾವಿ-ಯಡೋಗಾ ಮಧ್ಯದ ಸೇತುವೆ, ಚಿಕ್ಕಹಟ್ಟಿಹೊಳಿ-ಚಿಕ್ಕಮುನವಳ್ಳಿ ಸೇತುವೆಗಳ ಮೇಲೆ ನೀರು ಹರಿಯುತ್ತಿದೆ. ಮಹದಾಯಿ ನದಿಯಲ್ಲಿಯೂ ನೀರು ಹೆಚ್ಚಿನ ಪ್ರಮಾಣ ಹರಿಯುತ್ತಿರುವ ಕಾರಣ ಕೊಂಗಳಾ-ನೇರಸಾ ಮಧ್ಯ ಸಂಪರ್ಕ ಕಡಿತಗೊಂಡಿದೆ. ಬೀಡಿ ಹೋಬಳಿಯ ಭುರಣಕಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ತಟ್ಟೀ ಹಳ್ಳ ಅಪಾಯದ ಮಟ್ಟದಲ್ಲಿ ಹರಿಯುತ್ತಿರುವ ಪರಿಣಾಮ ಕಳೆದ ಒಂದು ವಾರದಿಂದ ಮಾಸ್ಕೇನಟ್ಟಿ-ಗೌಳಿವಾಡಾಗಳ ನಡುವೆ ರಸ್ತೆ ಸಂಪರ್ಕ ಸಂಪೂರ್ಣವಾಗಿ ಕಡಿತಗೊಂಡಿದೆ.

ಜೂನ್ ತಿಂಗಳಿನಿಂದ ಜುಲೈ ಅಂತ್ಯದವರೆಗೆ ತಾಲ್ಲೂಕಿನ ವಿವಿಧೆಡೆ ಮಳೆಯಿಂದಾಗಿ ಒಟ್ಟು 53 ಮನೆಗಳಿಗೆ ಹಾನಿಯಾಗಿದೆ ಎಂದು ತಾಲ್ಲೂಕು ಆಡಳಿತ ತಿಳಿಸಿದೆ. ಶುಕ್ರವಾರ ತಾಲ್ಲೂಕಿನ ನೀಲಾವಡೆ, ಅಸೋಗಾ, ಮಂಗೇನಕೊಪ್ಪ, ಕಸಮಳಗಿ, ಗೋಧೋಳಿ, ಗೋದಗೇರಿ, ಉಮ್ರವಾಣಿ ಹಾಗೂ ಖಾನಾಪುರ ಪಟ್ಟಣಗಳಲ್ಲಿ ತಲಾ ಒಂದೊಂದು ಸೇರಿದಂತೆ ಒಟ್ಟು 8 ಮನೆಗಳಿಗೆ ಭಾಗಶಃ ಬಿದ್ದಿವೆ. ಇದರಿಂದ ಒಟ್ಟು 3 ಲಕ್ಷದಷ್ಟು ಹಾನಿ ಉಂಟಾಗಿದೆ.

ಗುರುವಾರ ಸಂಜೆ ಪಟ್ಟಣದ ಹೊಸ ಬಸ್ ನಿಲ್ದಾಣದ ಬಳಿ ವಿದ್ಯುತ್ ಕಂಬವೊಂದರ ಮೇಲೆ ಮರ ಬಿದ್ದು ಶುಕ್ರವಾರ ಮಧ್ಯಾಹ್ನದವರೆಗೆ ಪಟ್ಟಣದಲ್ಲಿ ವಿದ್ಯುತ್ ಸಂಪರ್ಕ ಸಂಪೂರ್ಣ ಕಡಿತಗೊಂಡಿತ್ತು. ಶುಕ್ರವಾರ ಅಲ್ಲಲ್ಲಿ ಮರಗಿಡಗಳು ಹಾಗೂ ವಿದ್ಯುತ್ ಕಂಬಗಳು ಧರೆಗುರುಳಿದ ಪರಿಣಾಮ ಅರಣ್ಯ ಭಾಗದ ಹಲವು ಗ್ರಾಮಗಳಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಂಡಿದೆ. ಅರಣ್ಯ ಭಾಗದಲ್ಲಿ ಮಳೆಯ ಆರ್ಭಟ ಮುಂದುವರಿದಿದೆ. ಪಟ್ಟಣದ ಸಮಾಜ ಕಲ್ಯಾಣ ಇಲಾಖೆಯ ಕಚೇರಿ ಮಳೆಯಿಂದ ಸಂಪೂರ್ಣ ಸೋರುತ್ತಿದೆ. ಮಳೆಯ ಜೊತೆಗೆ ಬಿರುಗಾಳಿಯೂ ಜೋರಾಗಿ ಬೀಸುತ್ತಿರುವ ಕಾರಣ ಅನೇಕ ಮನೆಗಳ ಛಾವಣಿಗಳು ಕಿತ್ತು ಹೋಗಿವೆ. ಉಳಿದಂತೆ ಮಲಪ್ರಭಾ, ಪಾಂಡರಿ ಹಾಗೂ ಮಹದಾಯಿ ನದಿಗಳಲ್ಲಿ ನೀರು ಅಪಾಯಮಟ್ಟದಲ್ಲಿ ಹರಿಯುತ್ತಿದ್ದು, ನೀರಿಗೆ ಇಳಿಯದಂತೆ ಸಾರ್ವಜನಿಕರಲ್ಲಿ ತಾಲ್ಲೂಕು ಆಡಳಿತ ಮನವಿ ಮಾಡಿದೆ.

ಶುಕ್ರವಾರದ ವರದಿಯಂತೆ ಕಣಕುಂಬಿಯಲ್ಲಿ 115.4 ಮಿ.ಮೀ, ಜಾಂಬೋಟಿಯಲ್ಲಿ 44 ಮಿ.ಮೀ, ನಾಗರಗಾಳಿಯಲ್ಲಿ 51.2 ಮಿ.ಮೀ, ಲೋಂಡಾದಲ್ಲಿ 85 ಮಿ.ಮೀ, ಗುಂಜಿಯಲ್ಲಿ 82.4 ಮಿ.ಮೀ, ಖಾನಾಪುರ ಪಟ್ಟಣದಲ್ಲಿ 63.2 ಮಿ.ಮೀ, ಅಸೋಗಾ 70 ಮಿ.ಮೀ, ಬೀಡಿಯಲ್ಲಿ 18 ಹಾಗೂ ಕಕ್ಕೇರಿಯಲ್ಲಿ 15.6 ಮಿ.ಮೀ ಮಳೆ ಸುರಿದ ವರದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT