ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೆ-ಉತ್ತರ

Last Updated 12 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಚರಿಕ್ ಆರ್.ಎಸ್
4ನಾನು ದ್ವಿತೀಯ ಪಿಯು (ಪಿಸಿಎಂಬಿ) ಓದುತ್ತಿದ್ದೇನೆ. ನನಗೆ ಮೈಕ್ರೋಬಯಾಲಜಿ ಇಷ್ಟ. ಹಾಗಾಗಿ ಇದಕ್ಕೆ ಇರುವ ಅವಕಾಶಗಳು ಮತ್ತು ಭವಿಷ್ಯದ ಕುರಿತು ತಿಳಿಸಿಕೊಡಿ. ಇದಕ್ಕಾಗಿ ನಾನು ಬಿಎಸ್ಸಿ ಮಾಡಬೇಕೊ ಅಥವಾ ಎಂಬಿಬಿಎಸ್ ಮಾಡಬೇಕೋ?
ಸೂಕ್ಷ್ಮಾಣು ಜೀವಶಾಸ್ತ್ರದಲ್ಲಿ ನೀವು ಆಸಕ್ತಿ ಹೊಂದಿರುವುದು ಸಂತಸದ ವಿಷಯ.
 
ಶುದ್ಧ ವಿಜ್ಞಾನದ ಸೀಮಾ ಕ್ಷೇತ್ರಗಳಲ್ಲಿ ಒಂದಾಗಿರುವ ಈ ಶಾಸ್ತ್ರ, ಜೀವಶಾಸ್ತ್ರ ಮತ್ತು ರಸಾಯನಶಾಸ್ತ್ರಗಳ ಮಿಶ್ರಣ. ನೀವು ಪಿಯು ಮುಗಿಸಿ ಬಿಎಸ್ಸಿ ಸೇರಿಕೊಂಡು ಇದನ್ನು ಓದಬಹುದು. ಬಿಎಸ್ಸಿಯಲ್ಲಿ ಅಧ್ಯಯನಕ್ಕೆ ರಸಾಯನಶಾಸ್ತ್ರ, ಜೀವಶಾಸ್ತ್ರ ಮತ್ತು ಸೂಕ್ಷ್ಮಾಣು ಜೀವಶಾಸ್ತ್ರವನ್ನು ಒಳಗೊಂಡಿರುವ ಆಯ್ಕೆ ಸಮುಚ್ಚಯವನ್ನು ತೆಗೆದುಕೊಳ್ಳಬೇಕು.
 
ಬಿಎಸ್ಸಿ ಮುಗಿಸಿದ ನಂತರ ನೀವು ಇದೇ ಶಾಸ್ತ್ರದಲ್ಲಿ ಎಂಎಸ್ಸಿ ಮಾಡಬಹುದು. ಅನಂತರ ಪಿಎಚ್‌ಡಿ ಮಾಡಿ ಸಂಶೋಧನೆಯನ್ನೂ ಕೈಗೆತ್ತಿಕೊಳ್ಳಬಹುದು.

ಶೃತಿ.ಎಚ್
4ನಾನು ಐಎಎಸ್ ಮಾಡಬೇಕೆಂದಿದ್ದೇನೆ. ಆದರೆ ಇನ್ನೂ ನನ್ನ ಪದವಿ ಮುಗಿದಿಲ್ಲ. ಈಗಷ್ಟೇ ಸೇರಿದ್ದೇನೆ. ಈಗ ನಾನೇನು ಮಾಡಬೇಕು? ಐಎಎಸ್ ಪರೀಕ್ಷೆಗೆ ಹೇಗೆ ತಯಾರಿ ನಡೆಸಬೇಕು?

ಐಎಎಸ್ ಮಾಡಬೇಕೆಂಬ ನಿಮ್ಮ ಕನಸು ಅತ್ಯುತ್ತಮವಾದುದು. ವಿದ್ಯಾರ್ಥಿ ದೆಸೆಯ ಪ್ರಾರಂಭದಿಂದಲೇ ಇಂತಹ ಮಹತ್ವಾಕಾಂಕ್ಷೆಗಳನ್ನು ಮೈಗೂಡಿಸಿಕೊಂಡು ನಿರಂತರವಾಗಿ ಈ ದಿಕ್ಕಿನಲ್ಲಿ ಶ್ರಮಿಸುವವರೇ ಮುಂದೆ ಜೀವನದಲ್ಲಿ ಯಶಸ್ಸಿನ ಶಿಖರವನ್ನು ಏರುತ್ತಾರೆ.

ಐಎಎಸ್ ಮಾಡಲು ಮೊದಲು ವಿಜ್ಞಾನ, ಕಲೆ, ಎಂಜಿನಿಯರಿಂಗ್, ಮೆಡಿಕಲ್ ಇಂತಹ ಯಾವುದಾದರೂ ಒಂದು ವಿಭಾಗದಲ್ಲಿ ಪದವಿ ಪಡೆದಿರಬೇಕು. ಎಂಎ ಅಥವಾ ಎಂಎಸ್ಸಿಯಂತಹ ಸ್ನಾತಕೋತ್ತರ ಪದವಿಗಳೂ ಅಪೇಕ್ಷಣೀಯ. ಈಗಿನಿಂದಲೇ ನೀವು ಓದುವ ಎಲ್ಲ ವಿಷಯಗಳಲ್ಲೂ ಆಳವಾದ ವ್ಯಾಸಂಗವನ್ನು ಮಾಡಬೇಕು.
 
ಸಾಮಾನ್ಯಜ್ಞಾನ ಮತ್ತು ಇಂಗ್ಲಿಷ್ ಭಾಷೆಯ ಬಗ್ಗೆ ಈಗಿನಿಂದಲೇ ಆಸಕ್ತಿ ಬೆಳೆಸಿಕೊಳ್ಳಬೇಕು. ನಿತ್ಯವೂ ವೃತ್ತಪತ್ರಿಕೆ, ನಿಯತಕಾಲಿಕ ಓದುತ್ತಾ, ಪ್ರಪಂಚದಲ್ಲಿ ನಡೆಯುತ್ತಿರುವ ಎಲ್ಲ ಆಗುಹೋಗುಗಳ ಬಗ್ಗೆ ಕುತೂಹಲ ಬೆಳೆಸಿಕೊಂಡು ಆ ವಿಚಾರಗಳನ್ನೆಲ್ಲಾ ಒಂದೆಡೆ ಕಲೆಹಾಕಿ ಮನನ ಮಾಡುತ್ತಿರಬೇಕು.

ಉಷಾ
4ಎಸ್‌ಎಸ್‌ಎಲ್‌ಸಿಯಲ್ಲಿ ಶೇ 70 ಅಂಕ ಪಡೆದಿದ್ದರೂ ನಾನು ದ್ವಿತೀಯ ಪಿಯು ಭೌತವಿಜ್ಞಾನ ಮತ್ತು ಗಣಿತದಲ್ಲಿ ಅನುತ್ತೀರ್ಣಳಾಗಿರುತ್ತೇನೆ. ಈ ಬಾರಿ ಅದನ್ನು ಪಾಸು ಮಾಡಿಕೊಳ್ಳುತ್ತೇನೆ. ಮುಂದೆ ಬಿಸಿಎ ಮಾಡಬೇಕೆಂದಿದ್ದೇನೆ. ಇದಕ್ಕೆ ಉತ್ತಮ ಬೇಡಿಕೆ ಇದೆಯೇ ತಿಳಿಸಿ.
 
ಅಂತೆಯೇ ನಾನು ಹಾರ್ಡ್‌ವೇರ್ ಕಂಪ್ಯೂಟರ್ ಟ್ರೈನಿಂಗ್ ಕೂಡ ಮಾಡುತ್ತಿದ್ದೇನೆ. ಇದರಿಂದ ಪ್ರಯೋಜನವಿದೆಯೇ ಎಂದು ಮಾರ್ಗದರ್ಶನ ಕೊಡಿ.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ 70 ಅಂಕಗಳನ್ನು ತೆಗೆದಿದ್ದ ನೀವು ಪಿಯುನಲ್ಲಿ ಅನುತ್ತೀರ್ಣರಾಗಿರುವುದು ಆಶ್ಚರ್ಯಕರ. ಇದಕ್ಕೆ ಕಾರಣವಾದ ಅಂಶಗಳನ್ನು ಗುರುತಿಸಿ, ಪರಿಹಾರ ಕಂಡುಕೊಂಡು ಉತ್ತಮ ಅಂಕಗಳನ್ನು ಗಳಿಸಿ.

ನಿಮಗೆ ಕಂಪ್ಯೂಟರ್ ವಿಜ್ಞಾನದಲ್ಲಿ ಆಸಕ್ತಿ ಇದ್ದರೆ ಬಿಸಿಎ ಅತ್ಯುತ್ತಮ ಕೋರ್ಸು. ಅನಂತರ ಎಂಸಿಎ ಸಹ ಮಾಡಬಹುದು. ತಂತ್ರಾಂಶ ಉದ್ಯಮದಲ್ಲಿ ಉದ್ಯೋಗಾವಕಾಶಗಳು ವಿಪುಲವಾಗಿವೆ. ಅಂತೆಯೇ ಯಂತ್ರಾಂಶ ಜ್ಞಾನವನ್ನು ನೀವು ಪಡೆಯುತ್ತಿರುವುದು ಸಹ ಒಳ್ಳೆಯದೆ. ಇದು ನಿಮ್ಮ ಮುಂದಿನ ವಿದ್ಯಾಭ್ಯಾಸ ಮತ್ತು ಉದ್ಯೋಗದಲ್ಲಿ ಸಹಕಾರಿಯಾಗುತ್ತದೆ.

ವಿಷ್ಣು ರಜಪೂತ್, ಇಳಕಲ್
4ನಾನು ಪಿಯು ಕಾಲೇಜಿನಲ್ಲಿ ಉಪನ್ಯಾಸಕ ಆಗಬೇಕೆಂದಿದ್ದೇನೆ. ನಾನು ಎಂಎ ಪಾಸು ಮಾಡಿಕೊಂಡಿದ್ದೇನೆ. ಆದರೆ ಆ ಪರೀಕ್ಷೆಯ ಅಂಕಗಳು ಎಂಎಡ್ ಪರೀಕ್ಷೆ ಅಂಕಗಳಿಗಿಂತಲೂ ಕಡಿಮೆ ಇವೆ. ಹಾಗಾಗಿ ನಾನು ಪಿಯುಗೆ ಅಧ್ಯಾಪಕನಾಗಲು ಎಂಎ ಅಂಕಗಳ ಆಧಾರದ ಮೇಲೆ ಯೋಗ್ಯನಾಗುವುದಿಲ್ಲವೇ? ದಯಮಾಡಿ ಮಾರ್ಗದರ್ಶನ ಕೊಡಿ.

ಪಿಯು ಕಾಲೇಜಿಗೆ ಅಧ್ಯಾಪಕನಾಗಲು ನಿಮ್ಮ ಎಂಎ ಪದವಿಯ ಅಂಕಗಳು ಮುಖ್ಯವೇ ಹೊರತು ಎಂಎಡ್ ಪರೀಕ್ಷೆಯದಲ್ಲ. ಎಂಎಡ್ ಅಂಕಗಳ ಮೇಲೆ ನೀವು ಬಿಎಡ್ ಕಾಲೇಜಿನಲ್ಲಿ ಅಧ್ಯಾಪಕರಾಗಬಹುದು.

ಖಾಸಗಿ ಪಿಯು ಕಾಲೇಜಿನಲ್ಲಿ ಅಧ್ಯಾಪಕರಾಗಲು ಎಂಎ ಪದವಿ ಪರೀಕ್ಷೆಯ ಅಂಕಗಳು ಮುಖ್ಯವಲ್ಲ. ಆದರೆ ಸರ್ಕಾರಿ ಪಿಯು ಕಾಲೇಜಿನಲ್ಲಿ ಅಧ್ಯಾಪಕರಾಗಲು ಕನಿಷ್ಠ ಶೇ 55 ಅಂಕಗಳು ಅತ್ಯಗತ್ಯ. ಪುನಃ ನೀವು ಎಂಎ ಪರೀಕ್ಷೆ ತೆಗೆದುಕೊಂಡಾದರೂ ಕನಿಷ್ಠ ಅರ್ಹತೆ ಗಳಿಸುವುದು ಅವಶ್ಯ.

ಮಂಜುನಾಥ್ ವಿ
4ನಾನು ಅಂತಿಮ ವರ್ಷದ ಮೆಕಾನಿಕಲ್ ಡಿಪ್ಲೊಮಾ ಮಾಡುತ್ತಿದ್ದೇನೆ. ನಂತರ ಉದ್ಯೋಗಕ್ಕೆ ಸೇರಬೇಕೆಂದಿದ್ದೇನೆ. ಜೊತೆಗೆ ಸಂಜೆ ಕಾಲೇಜಿನಲ್ಲಿ ಬಿಇ ಮಾಡಬೇಕು ಎಂದುಕೊಂಡಿದ್ದೇನೆ. ಮಾರ್ಗದರ್ಶನ ಕೊಡಿ.

ನೀವು ಮೆಕಾನಿಕಲ್ ಎಂಜಿನಿಯರಿಂಗ್ ಡಿಪ್ಲೊಮಾ ಮಾಡಿದ ನಂತರ ಉದ್ಯೋಗಕ್ಕೆ ಸೇರಿಕೊಳ್ಳಬಹುದು. ನಂತರ ಸಂಜೆ ಕಾಲೇಜುಗಳಲ್ಲಿ ಬಿಇ ಸಹ ಮಾಡಬಹುದು. ಬೆಂಗಳೂರಿನ ಬಸವನ ಗುಡಿ ರಸ್ತೆಯಲ್ಲಿರುವ ಬಿಎಂಎಸ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಈ ಅವಕಾಶವಿದೆ. ಉದ್ಯೋಗವನ್ನು ಮಾಡುತ್ತಾ ವಿದ್ಯಾಭ್ಯಾಸವನ್ನೂ ಮುಂದುವರಿಸಿ ಗುರಿ ತಲುಪುವುದು ಒಳ್ಳೆಯ ಯೋಚನೆ. ಇತರ ಸಂಜೆ ಕಾಲೇಜುಗಳ ಮಾಹಿತಿ ಅಂತರ್ಜಾಲದಲ್ಲಿ ಲಭ್ಯ.

http://www.karnataka.com/education/engg/evening-college.html

ದರ್ಶನ್, ಜಯನಗರ, ಬೆಂಗಳೂರು
4ನಾನು ದ್ವಿತೀಯ ಪಿಯು ವಾಣಿಜ್ಯ ವಿಭಾಗದಲ್ಲಿ ಓದುತ್ತಿದ್ದೇನೆ. ಮುಂದೆ ನಾನೇನು ಮಾಡಬಹುದು. ದಯಮಾಡಿ ಸಲಹೆ ಕೊಡಿ.

ನೀವು ದ್ವಿತೀಯ ಪಿಯು ಪರೀಕ್ಷೆಯಲ್ಲಿ ಈ ವರ್ಷ ಉತ್ತಮವಾದ ಅಂಕಗಳನ್ನು ತೆಗೆದು ಉತ್ತೀರ್ಣರಾಗಿ. ನೀವು ಅಭ್ಯಾಸ ಮಾಡುತ್ತಿರುವ ವಾಣಿಜ್ಯ ವಿಷಯಗಳು ಇವತ್ತಿನ ದಿನಗಳಲ್ಲಿ ತುಂಬಾ ಪ್ರಾಮುಖ್ಯತೆಯನ್ನು ಹೊಂದಿರುವಂತಹವು.
 
ನೀವು ಪಿಯು ನಂತರ ಬಿಕಾಂ ಅಥವಾ ಬಿಬಿಎಂ ಕೋರ್ಸಿಗೆ ಸೇರಿ ವಾಣಿಜ್ಯ ಸಂಬಂಧ ಅಧ್ಯಯನವನ್ನು ಮುಂದುವರಿಸಬಹುದು. ಅನಂತರ ನಿಮ್ಮ ಅಭಿರುಚಿಯನ್ನು ಗಮನಿಸಿ ಎಂಕಾಂ ಅಥವಾ ಸಿಎ ಮಾಡಬಹುದು.

ಮಂಜುನಾಥ ಕೆ.ಕೆ. ಶಂಕರಘಟ್ಟ, ಶಿವಮೊಗ್ಗ
4ನಾನು ಕುವೆಂಪು ವಿಶ್ವವಿದ್ಯಾಲಯದಲ್ಲಿ ಪ್ರವಾಸೋದ್ಯಮ ವಿಷಯದಲ್ಲಿ ಮೊದಲನೇ ವರ್ಷದ ಎಂಎಸ್ಸಿ ಓದುತ್ತಿದ್ದೇನೆ. ನನಗೆ ಉದ್ಯೋಗಾವಕಾಶಗಳು ಇವೆಯೇ ತಿಳಿಸಿ.

ಜೊತೆಗೆ ನಾನು ಪಿಡಿಒ ಉದ್ಯೋಗಕ್ಕೆ ಅರ್ಜಿ ಸಲ್ಲಿಸಿದ್ದೇನೆ. ಅದರಲ್ಲಿ ನಾನು ಉತ್ತೀರ್ಣತೆಯ ವರ್ಷವನ್ನು 2010ರ ಬದಲು 2011 ಎಂದು ನಮೂದಿಸಿದ್ದೇನೆ. ಪಿಡಿಒ ಪರೀಕ್ಷಾ ನಂತರ ಅಥವಾ ಫಲಿತಾಂಶ ಬಂದಮೇಲೆ ಇದನ್ನು ಸರಿಪಡಿಸಬಹುದೇ?

ಉದ್ಯೋಗಕ್ಕೆ ಸಲ್ಲಿಸಿರುವ ಅರ್ಜಿಯಲ್ಲಿ ನೀವು ತಪ್ಪಾಗಿ ಮಾಹಿತಿಯನ್ನು ಸಲ್ಲಿಸಿದ್ದರೆ ಅದನ್ನು ಸರಿಪಡಿಸಿ ಪುನಃ ಅರ್ಜಿಯನ್ನು ನೀವು ಸಲ್ಲಿಸಬಹುದು. ತಪ್ಪಾದ ಅರ್ಜಿಯನ್ನು ಹಿಂತೆಗೆದುಕೊಳ್ಳಬಹುದು ಅಥವಾ ಸಂಬಂಧಪಟ್ಟ ಕಛೇರಿಗೆ ನೀವು ಹೋಗಿ ನಿಮ್ಮ ಅರ್ಜಿಯನ್ನು ತೆಗೆಸಿ ತಪ್ಪನ್ನು ಅಧಿಕಾರಿಗಳ ಸಮ್ಮತಿಯೊಂದಿಗೆ ಸರಿಪಡಿಸಲೂಬಹುದು.

ಪ್ರವೀಣ್ ಕುಮಾರ್
4ನಾನು ಬಿಎ ಮಾಡುತ್ತಿದ್ದೇನೆ. ಜರ್ನಲಿಸಂ, ಇಂಗ್ಲಿಷ್ ಮೇಜರ್ ಮತ್ತು ಫಂಕ್ಷನಲ್ ಇಂಗ್ಲಿಷ್ ವಿಷಯಗಳನ್ನು ಆಯ್ದುಕೊಂಡಿದ್ದೇನೆ. ಆದರೆ ನಮ್ಮ ಮನೆಯಲ್ಲಿ ನನ್ನನ್ನು ಪತ್ರಿಕೋದ್ಯಮಕ್ಕೆ ಕಳುಹಿಸಲು ಒಪ್ಪುತ್ತಿಲ್ಲ. ಬಿಎಡ್‌ಗೆ ಸೇರಲು ಸಾಧ್ಯವಿಲ್ಲ. ನನಗೆ ಯಾವುದಾದರೂ ಸರ್ಕಾರಿ ಉದ್ಯೋಗ ಲಭಿಸುತ್ತದೆಯೇ? ನನ್ನ ಮುಂದಿನ ಭವಿಷ್ಯವೇನು ತಿಳಿಯುತ್ತಿಲ್ಲ. ದಯಮಾಡಿ ಸಲಹೆ ಕೊಡಿ.

ನೀವು ಬಿಎಯಲ್ಲಿ ಓದುತ್ತಿರುವ ಅಧ್ಯಯನ ವಿಷಯಗಳು ಅತ್ಯುತ್ತಮವಾದವು. ಪತ್ರಿಕೋದ್ಯಮ ಪ್ರಸ್ತುತ ಸಂದರ್ಭದಲ್ಲಿ ತುಂಬಾ ಪ್ರಮುಖವಾದ ಅಧ್ಯಯನ  ವಿಷಯ. ಈ ಕ್ಷೇತ್ರಕ್ಕೆ ನೀವು ಪ್ರವೇಶಿಸುವುದು ನಿಮ್ಮ ಮನೆಯವರಿಗೆ ಇಷ್ಟವಿಲ್ಲದಿರುವುದು ದುರದೃಷ್ಟಕರ.

ನಿಮಗಿರುವ ಬೇರೆ ದಾರಿ ಎಂದರೆ ನೀವು ಮುಂದೆ ಆಂಗ್ಲ ಭಾಷೆಯಲ್ಲಿ ಎಂಎ ಮಾಡುವುದು. ಅನಂತರ ಎಂಎ ಡಿಗ್ರಿಯ ಆಧಾರದ ಮೇಲೆ ನೀವು ಶಿಕ್ಷಕ ವೃತ್ತಿಯನ್ನು ಕೈಗೊಳ್ಳಬಹುದು. ಇಂಗ್ಲಿಷ್ ಶಿಕ್ಷಕರಿಗೆ ಈಗ ಬಹು ಬೇಡಿಕೆ ಇದೆ.  ್ಝ

ಅಮಿರ್‌ಖಾನ್ ಪಠಾಣ, ಹಾವೇರಿ
4ನಾನು ಪ್ರಥಮ ವರ್ಷದ ಬಿಕಾಂ ಓದುತ್ತಿದ್ದೇನೆ. ನನಗೆ ಸಿಎ ಮಾಡಲೋ, ಎಂಬಿಎ ಮಾಡಲೋ ಎಂಬ ಗೊಂದಲವಿದೆ. ದಯಮಾಡಿ ಯಾವುದಕ್ಕೆ ಹೆಚ್ಚಿನ ಬೇಡಿಕೆ ಮತ್ತು ಉದ್ಯೋಗಾವಕಾಶಗಳಿವೆ ಎಂದು ತಿಳಿಸಿಕೊಡಿ.

ನೀವು ಮೊದಲು ಶ್ರದ್ಧೆಯಿಂದ ಹೆಚ್ಚು ಅಂಕಗಳನ್ನು ತೆಗೆದು ಬಿಕಾಂ ಮುಗಿಸಿ. ಲೆಕ್ಕಾಚಾರ ಶಾಸ್ತ್ರದಲ್ಲಿ ನಿಮಗೆ ಆಸಕ್ತಿ ಇದ್ದರೆ ನೀವು ಸಿಎ ಮಾಡಬಹುದು. ಕಂಪೆನಿ ವ್ಯವಹಾರ, ಆಡಳಿತ ಮುಂತಾದವುಗಳಲ್ಲಿ ಆಸಕ್ತಿ ಇದ್ದರೆ ಎಂಬಿಎ ಮಾಡಬಹುದು. ನಿಮ್ಮ ಆಸಕ್ತಿಯನ್ನು ಗುರುತಿಸಿಕೊಳ್ಳಲು ಇನ್ನೂ ಎರಡು ವರ್ಷ ಕಾಲಾವಕಾಶವಿದೆ.

ಮೊಹಿಂದರ್
ನನ್ನ ಮಗಳು ಗೃಹವಿಜ್ಞಾನದಲ್ಲಿ ಅಂತಿಮ ವರ್ಷದ ಬಿಎಸ್ಸಿ ಮಾಡುತ್ತಿದ್ದಾಳೆ. ಇದಾದ ನಂತರ ಅವಳು ಬಿಎಡ್ ಮಾಡಲು ಅರ್ಹಳೇ? ಇಲ್ಲದಿದ್ದರೆ ಬೇರೆ ಯಾವ ಸೂಕ್ತ ಮಾರ್ಗಗಳಿವೆ? ದಯಮಾಡಿ ಮಾರ್ಗದರ್ಶನ ಕೊಡಿ.

- ಗೃಹವಿಜ್ಞಾನದಲ್ಲಿ ಬಿಎಸ್ಸಿ ಮಾಡಿದವರು ಬಿಎಡ್ ಮಾಡಲು ಅರ್ಹರು. ಆದ್ದರಿಂದ ನೀವು ನಿಮ್ಮ ಮಗಳ ವಿಚಾರದಲ್ಲಿ ಚಿಂತಿಸಬೇಕಾಗಿಲ್ಲ.

ಶಿವಕುಮಾರ, ತುಮಕೂರು
ನಾನು ಡಿಪ್ಲೊಮಾ 2ನೇ ವರ್ಷದಲ್ಲಿ ಓದುತ್ತಿದ್ದು, ನಂತರ ಎಂಜಿನಿಯರಿಂಗ್ ಬದಲು ಬೇರೆ ಯಾವುದನ್ನು ಓದಬಹುದು? ಡಿಪ್ಲೊಮಾಗೆ ಬೇಡಿಕೆ ಇದೆಯೇ? ನನಗೆ ಜೀವನದಲ್ಲಿ ಉನ್ನತ ಮಟ್ಟದಲ್ಲಿ ಇರಬೇಕೆಂಬ ಆಸೆ. ದಯವಿಟ್ಟು ಸಲಹೆ ಕೊಡಿ.

- ಉನ್ನತ ಮಟ್ಟದಲ್ಲಿ ಜೀವನ ಮಾಡಬೇಕೆಂಬ ನಿಮ್ಮ ಮಹತ್ವಾಕಾಂಕ್ಷೆಗಾಗಿ ಧನ್ಯವಾದಗಳು. ಬದುಕು ಬಂದ ಹಾಗೆ ಸ್ವೀಕರಿಸುವರೇ ಬಹುಮಂದಿ. ತಮಗೆ ಬೇಕಾದ ಹಾಗೆ ಬದುಕನ್ನು ಬದಲಿಸಿಕೊಳ್ಳಬಲ್ಲ ಛಲದಂಕಮಲ್ಲರು ವಿರಳ.

ಇದಕ್ಕೆ ಆತ್ಮವಿಶ್ವಾಸ ಮತ್ತು ಕಠಿಣ ಪರಿಶ್ರಮ ಅಗತ್ಯ. ನೀವು ಈಗ ಹಿಡಿದಿರುವ ಡಿಪ್ಲೊಮಾ ಓದನ್ನು ಉತ್ತಮ ಅಂಕಗಳೊಂದಿಗೆ ಮುಗಿಸಿ. ಅನಂತರ ನೀವು ಬೇಕಾದರೆ ಬಿಇ ಮಾಡಿ ಎಂಜಿನಿಯರ್ ಆಗಬಹುದು. ಬಿಇ ನಂತರ ಐಎಎಸ್ ಮಾಡಿ ಆಡಳಿತಾಧಿಕಾರಿಯಾಗಬಹುದು. ಭವಿಷ್ಯದಲ್ಲಿ ಅನಂತ ಸಾಧ್ಯತೆಗಳಿವೆ.

ಮಂಜುನಾಥ
ನಾನು ಬೆಂಗಳೂರು ವಿಶ್ವವಿದ್ಯಾಲಯದ ಬಿಎಸ್ಸಿ ಬಯೋಟೆಕ್ನಾಲಜಿ ಎರಡನೇ ವರ್ಷದಲ್ಲಿ ಓದುತ್ತಿದ್ದೇನೆ. ಅಂಕಪಟ್ಟಿಯಲ್ಲಿ ನನ್ನ ಹೆಸರು ತಪ್ಪಾಗಿ ಮುದ್ರಿತವಾಗುತ್ತಿದೆ. ಒಂದಕ್ಷರ ಬಿಟ್ಟು ಹೋಗಿದೆ. ಇದಕ್ಕಾಗಿ ನಾನು ಏನು ಮಾಡಬಹುದು ದಯಮಾಡಿ ತಿಳಿಸಿಕೊಡಿ.

- ಅಂಕಪಟ್ಟಿಯಲ್ಲಿ ನಿಮ್ಮ ಹೆಸರು ತಪ್ಪಾಗಿ ನಮೂದಾಗಿದ್ದರೆ ಈಗಲೇ ಅದನ್ನು ಸರಿಪಡಿಸಿಕೊಳ್ಳುವುದು ಒಳ್ಳೆಯದು. ಈ ಬಗ್ಗೆ ನಿಮ್ಮ ಕಾಲೇಜಿನ ಮೂಲಕ ವಿಶ್ವವಿದ್ಯಾಲಯದ ಪರೀಕ್ಷಾಂಗ ಕಚೇರಿಯನ್ನು ಸಂಪರ್ಕಿಸಿ.
 
ನಿಗದಿತ ಶುಲ್ಕವನ್ನು ಪಾವತಿ ಮಾಡಿ ಹಳೆಯ ಅಂಕಪಟ್ಟಿಯನ್ನು ಹಿಂತಿರುಗಿಸಿ. ನೀವು ಕಳುಹಿಸುವ ಎಲ್ಲ ದಾಖಲೆಗಳ ಜೆರಾಕ್ಸ್ ಪ್ರತಿಯನ್ನು ಇಟ್ಟುಕೊಳ್ಳಿ. ಈ ಬಗ್ಗೆ ವಿಶ್ವವಿದ್ಯಾಲಯದ ಕಛೇರಿಗೆ ಹಲವು ಬಾರಿ ಹೋಗಬೇಕಾಗಿ ಬಂದರೂ ತಾಳ್ಮೆಗೆಡದೆ ಕೆಲಸಮಾಡಿಕೊಳ್ಳಿ.

ಪ್ರಶ್ನೆ ಕಳಿಸಬೇಕಾದ ವಿಳಾಸ: ಸಂಪಾದಕರು, ಶಿಕ್ಷಣ ವಿಭಾಗ, ಪ್ರಜಾವಾಣಿ, 75 ಎಂಜಿ ರಸ್ತೆ,ಬೆಂಗಳೂರು 560001
ಪ್ರಶ್ನೆಗಳನ್ನು ಇಮೇಲ್‌ನಲ್ಲೂ ಕಳಿಸಬಹುದು:shikshana@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT