ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾಕೃತ ವಿವಿ: ಹಂಪನಾ ಒತ್ತಾಯ

Last Updated 27 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: `ಸಂಸ್ಕೃತಕ್ಕಿಂತಲೂ ಪ್ರಾಚೀನವಾದ ಪ್ರಾಕೃತ ಭಾಷೆಯ ಅಧ್ಯಯನಕ್ಕಾಗಿ ರಾಜ್ಯ ಸರ್ಕಾರ ಪ್ರಾಕೃತ ಭಾಷಾ ವಿಶ್ವವಿದ್ಯಾಲಯವನ್ನು ಸ್ಥಾಪಿಸಬೇಕು~ ಎಂದು ಹಿರಿಯ ಸಂಶೋಧಕ ಡಾ.ಹಂಪಾ ನಾಗರಾಜಯ್ಯ ಒತ್ತಾಯಿಸಿದರು.

ಹಂಪಿ ಕನ್ನಡ ವಿಶ್ವವಿದ್ಯಾಲಯದ ಅಭೇರಾಜ್ ಬಲ್ದೋಟ ಜೈನ ಸಂಸ್ಕೃತಿ ಅಧ್ಯಯನ ಪೀಠ ಹಾಗೂ ಜೈನ್ ವಿಶ್ವವಿದ್ಯಾಲಯ ಜಂಟಿಯಾಗಿ ಶುಕ್ರವಾರ ನಗರದ ಜೈನ್ ಕಾಲೇಜಿನಲ್ಲಿ ಆಯೋಜಿಸಿದ್ದ `ಕರ್ನಾಟಕ ಶ್ವೇತಾಂಬರ ಜೈನ ಸಮಾಜ : ಸಂಸ್ಕೃತಿ ಅಧ್ಯಯನ~ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

`ಜೈನ ಧರ್ಮದ ಬಹತೇಕ ಸಾಹಿತ್ಯ ಗ್ರಂಥಗಳು ರಚನೆಗೊಂಡ ಪ್ರಾಕೃತ ಭಾಷೆ ಸಂಸ್ಕೃತಕ್ಕಿಂತಲೂ ಪ್ರಾಚೀನವಾದುದು. ಆದರೂ ಪ್ರಾಕೃತ ಭಾಷೆಯ ಅಧ್ಯಯನಕ್ಕಾಗಿ ಇಡೀ ದೇಶದಲ್ಲಿ ಇದುವರೆಗೂ ಒಂದೇ ಒಂದು ಪ್ರಾಕೃತ ವಿಶ್ವವಿದ್ಯಾಲಯದ ಸ್ಥಾಪನೆಯೂ ಆಗಿಲ್ಲ. ಕರ್ನಾಟಕ ಸರ್ಕಾರ ಪ್ರಾಕೃತ ಭಾಷಾ ವಿಶ್ವವಿದ್ಯಾಲಯವನ್ನು ಸ್ಥಾಪಿಸಿ ದೇಶಕ್ಕೆ ಮಾದರಿಯಾಗಬೇಕು~ ಎಂದು ಅವರು ನುಡಿದರು.

`ಕರ್ನಾಟಕದಲ್ಲಿ ಶ್ವೇತಾಂಬರ ಜೈನರ ಮೂಲ ನೆಲೆಗಳನ್ನು ಗುರುತಿಸುವ ಗಂಭೀರ ಸಂಶೋಧನೆಗಳ ಅವಶ್ಯಕತೆ ಇದೆ. ಶ್ವೇತಾಂಬರರನ್ನು ಬಿಟ್ಟು ಜೈನ ಧರ್ಮ ಅಪೂರ್ಣ. ಕರ್ನಾಟಕದಲ್ಲಿ ದಿಗಂಬರ ಪಂಥಕ್ಕೆ ಸಿಕ್ಕಷ್ಟು ಪ್ರಾಧಾನ್ಯತೆ ಶ್ವೇತಾಂಬರ ಪಂಥಕ್ಕೆ ಸಿಗಲಿಲ್ಲ. ಕರ್ನಾಟಕದಲ್ಲಿ ದಿಗಂಬರ ಹಾಗೂ ಶ್ವೇತಾಂಬರ ಪಂಥಗಳು ಜೊತೆಯಾಗಿ ರೂಪುಗೊಂಡ `ಯಾಪನೀಯ~ ಪಂಥ ಹೆಚ್ಚು ಮನ್ನಣೆ ಪಡೆಯಿತು~ ಎಂದರು.

`ನಾಲ್ಕನೇ ಶತಮಾನದ ಕಾಲಕ್ಕೆ ರಾಜ್ಯದಲ್ಲಿ ಶ್ವೇತಾಂಬರರು ರಾಜಕೀಯದಲ್ಲಿ ಪ್ರಾಧಾನ್ಯತೆ ಸಾಧಿಸಿದ್ದರು ಎಂಬುದು ಬನವಾಸಿ ಕದಂಬರ ಕಾಲದ ಶಾಸನಗಳಿಂದ ತಿಳಿಯುತ್ತದೆ. ಆದರೆ ಶ್ವೇತಾಂಬರ ಜೈನರ ಕೊಡುಗೆಗಳ ಬಗ್ಗೆ ಇನ್ನೂ ಸರಿಯಾದ ಸಂಶೋಧನೆಗಳು ನಡೆದಿಲ್ಲ. ಕರ್ನಾಟಕದಲ್ಲಿ ಮೂರನೇ ಶತಮಾನದ ವೇಳೆಗಾಗಲೇ ಶ್ವೇತಾಂಬರ ಜೈನರ ಹೆಜ್ಜೆ ಗುರುತುಗಳು ಸ್ಪಷ್ಟವಾಗಿ ಕಾಣುತ್ತವೆ~ ಎಂದು ಅವರು ತಿಳಿಸಿದರು.

`ರಾಜ್ಯ ಕರಾವಳಿ ಭಾಗದಲ್ಲಿ ಶ್ವೇತಾಂಬರರು ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿದ್ದ ಬಗ್ಗೆ ಕೆಲವು ಕುರುಹುಗಳು ಸಿಗುತ್ತವೆ. ಕದಂಬರ ಪೂರ್ವ ಕಾಲದಲ್ಲಿ ಶ್ವೇತಾಂಬರರ ಸಂಸ್ಕೃತಿ ಕರ್ನಾಟಕವೂ ಸೇರಿದಂತೆ ನೆರೆಯ ರಾಜ್ಯಗಳಿಗೂ ಹಬ್ಬಿದ ಬಗ್ಗೆ ಕೆಲವು ಆಧಾರಗಳಿವೆ. ಆದರೆ ಈ ವಿಷಯದಲ್ಲಿ ಹೆಚ್ಚಿನ ಸಂಶೋಧನೆಗಳಾಗದ ಹೊರತು ಅದರ ಬಗ್ಗೆ ಸರಿಯಾದ ಮಾಹಿತಿ ಸಿಗುವುದು ಸಾಧ್ಯವಿಲ್ಲ~ ಎಂದರು.

ಹಿರಿಯ ಸಾಹಿತಿ ಡಾ.ಕಮಲಾ ಹಂಪನಾ ಮಾತನಾಡಿ, `ಕರ್ನಾಟಕದಲ್ಲಿ 12 ನೇ ಶತಮಾನಕ್ಕಿಂತಲೂ ಮುಂಚೆ ಹೆಚ್ಚಿನ ಸಂಖ್ಯೆಯಲ್ಲಿದ್ದವರು ಜೈನ ಧರ್ಮೀಯರು. ಆದರೆ 12 ನೇ ಶತಮಾನದಲ್ಲಿ ವೀರಶೈವ ಧರ್ಮದ ಬಲವಂತದಿಂದಾಗಿ ಅನೇಕ ಜೈನರು ವೀರಶೈವ ಧರ್ಮವನ್ನು ಸ್ವೀಕರಿಸಿದ ಬಗ್ಗೆ ಅಣ್ಣಿಗೇರಿ ಹಾಗೂ ಅಬ್ಬನೂರು ಶಾಸನಗಳು ತಿಳಿಸುತ್ತವೆ. ಇಂದು ವೀರಶೈವರಾಗಿರುವ ಬಹುಪಾಲು ಜನರು ಜೈನಧರ್ಮಕ್ಕೆ ಸೇರಿದವರಾಗಿದ್ದರು~ ಎಂದರು.

`ಜೈನಧರ್ಮವೂ ಮೂಲತಃ ನಿರೀಶ್ವರವಾದಿಯಾದದ್ದು. ಆದರೆ ತೀರ್ಥಂಕರರು ಗತಿಸಿದ ನಂತರ ಅವರನ್ನೇ ದೇವರೆಂದು ಪೂಜಿಸಲಾಯಿತು. ಜೈನಧರ್ಮ ಮೂಲದಲ್ಲಿ ಆಚರಣೆಗಳಿಗಿಂತ ಆತ್ಮೋನ್ನತಿಗೆ ಹೆಚ್ಚಿನ ಒತ್ತು ನೀಡಿದ್ದು ತಿಳಿಯುತ್ತದೆ~ ಎಂದು ಅವರು ಹೇಳಿದರು.

ಇತಿಹಾಸ ಅಕಾಡೆಮಿಯ ಅಧ್ಯಕ್ಷ ಡಾ.ದೇವರಕೊಂಡಾರೆಡ್ಡಿ ಮಾತನಾಡಿ, `ಕರ್ನಾಟಕದಲ್ಲಿ ಭಾಷೆ ಹಾಗೂ ಆಹಾರ ಪದ್ಧತಿಯ ಕಾರಣದಿಂದಾಗಿ ಶ್ವೇತಾಂಬರ ಪಂಥದ ಬೆಳವಣಿಗೆ ಸಾಧ್ಯವಾಗಲಿಲ್ಲ. ದಿಗಂಬರ ಪಂಥ ಕರ್ನಾಟಕವನ್ನೇ ಆವರಿಸಿದರೂ ಶ್ವೇತಾಂಬರ ಪಂಥ ಇಲ್ಲಿ ಹೆಚ್ಚು ಬೆಳೆಯದಿದ್ದುದು ಆಶ್ಚರ್ಯ~ ಎಂದರು.

ಕನ್ನಡ ವಿಶ್ವವಿದ್ಯಾಲಯ ಪ್ರಕಟಿಸಿರುವ ಸಿ.ಎಸ್.ವಾಸುದೇವನ್ ಅವರ `ಮುಕ್ಕೋಡಿ~, ಎಂ.ಜಯಚಂದ್ರ ಅವರ `ಸವಣಸುತ್ತ~ ಹಾಗೂ ಕೆ.ರವೀಂದ್ರನಾಥ್ ಅವರ `ಜೈನ ಟೀಕಾ ಶಾಸ್ತ್ರ~ ಹಾಗೂ `ಕರ್ನಾಟಕದ ಜೈನ ಮಠಗಳು ಮತ್ತು ಕನ್ನಡ ಸಾಹಿತ್ಯ~ ಕೃತಿಗಳನ್ನು ಡಾ.ಕಮಲಾ ಹಂಪನಾ ಬಿಡುಗಡೆಗೊಳಿಸಿದರು.

ಜೈನ್ ವಿಶ್ವವಿದ್ಯಾಲಯದ ಕುಲಪತಿ ಡಾ.ಎನ್.ಸುಂದರ್ ರಾಜನ್, ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ.ಎ.ಮುರಿಗೆಪ್ಪ, ಅಭೇರಾಜ್ ಬಲ್ದೋಟ ಜೈನ ಸಂಸ್ಕೃತಿ ಅಧ್ಯಯನ ಪೀಠದ ಸಂಚಾಲಕ ಡಾ.ಎನ್.ಚಿನ್ನಸ್ವಾಮಿ ಸೋಸಲೆ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT