ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೇಮ ವಿವಾಹ: ತಪ್ಪದ ಜಾತಿ ಸಂಕೋಲೆ

Last Updated 7 ಮೇ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಪರಸ್ಪರ ಪ್ರೀತಿಸಿ ಮದುವೆಯಾದ ಪ್ರೇಮಿಗಳಿಗೆ ಮದುವೆಯಾದ ನಂತರವೂ ಜಾತಿ ಸಂಕೋಲೆಯ ಸಂಕಷ್ಟ ತಪ್ಪಿಲ್ಲ. ಪ್ರೇಮ ವಿವಾಹವಾಗಿ ಸುಖ ಸಂಸಾರದ ಕನಸು ಕಂಡಿದ್ದ ಜೋಡಿಗಳು ಜೀವಭಯ ಎದುರಿಸುವಂತಾಗಿದೆ. ಜಾತಿಯ ಕಟ್ಟುಪಾಡಿನ ಕಾರಣದಿಂದ ಪ್ರೀತಿಸಿದ ಜೋಡಿಗಳು ಮನೆಯಿಂದಲೇ ಹೊರಬರಲಾಗದ ದುಃಸ್ಥಿತಿ ಈಗ ನಿರ್ಮಾಣವಾಗಿದೆ.

ನಗರದ ಹೊರವಲಯದ ಸರ್ಜಾಪುರ ರಸ್ತೆಯ ದೊಡ್ಡಕುಂಟೆ ಗ್ರಾಮದ ನಿವಾಸಿ ಕೆ.ಸಂತೋಷ್ ಹಾಗೂ ಸಮೀಪದ ಬೂರಕುಂಟೆ ಗ್ರಾಮದ ಪಿ.ವನಿತಾ ಎಂಬುವರಿಗೆ ಎರಡು ವರ್ಷಗಳ ಹಿಂದೆ ಪರಿಚಯವಾಗಿ, ಪರಿಚಯ ಪ್ರೀತಿಗೆ ತಿರುಗಿತ್ತು. ಇವರಿಬ್ಬರೂ ಮದುವೆಯಾಲು ಮುಂದಾದಾಗ ಸಂತೋಷ್ ಮನೆಯವರು ಒಪ್ಪಿದರೂ, ಸಂತೋಷ್ ದಲಿತ ಎಂಬ ಕಾರಣಕ್ಕೆ ವಹ್ನಿ ಕುಲ ಕ್ಷತ್ರಿಯ ಜನಾಂಗದ ವನಿತಾ ಪೋಷಕರು ಮದುವೆಗೆ ವಿರೋಧ ಒಡ್ಡಿದ್ದರು.

ವಾಹನ ಚಾಲಕರಾಗಿ ಕೆಲಸ ಮಾಡುತ್ತಿದ್ದ ಸಂತೋಷ್ (21) ಹಾಗೂ ಪಿಯುಸಿ ಓದುತ್ತಿದ್ದ ವನಿತಾ (18) ಪೋಷಕರ ವಿರೋಧದ ನಡುವೆಯೂ ಮಾರ್ಚ್ 13 ರಂದು ಪ್ರೇಮ ವಿವಾಹವಾಗಿ, ನಗರದ ಜೆ.ಪಿ ನಗರದ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ವಿವಾಹ ನೋಂದಣಿ ಮಾಡಿಸಿದ್ದರು.

ನಿತ್ಯವೂ ಕಿರುಕುಳ: `ಮದುವೆಯಾದ ದಿನದಿಂದ ವನಿತಾ ತಂದೆ ಪೊನ್ನಪ್ಪ ಕಿರುಕುಳ ನೀಡುತ್ತಲೇ ಬರುತ್ತಿದ್ದಾರೆ. ಮದುವೆಯಾದ ಒಂದು ತಿಂಗಳಲ್ಲೇ ಸರ್ಜಾಪುರ ರಸ್ತೆಯಲ್ಲಿ ಪೊನ್ನಪ್ಪ ಹಾಗೂ ಇನ್ನಿತರ ಮೂರು ಜನರು ನನ್ನ ಮೇಲೆ ಹಲ್ಲೆ ನಡೆಸಿದರು. ರಾಜಕೀಯವಾಗಿ ಪ್ರಭಾವಿಯಾಗಿರುವ ಪೊನ್ನಪ್ಪ ಪೊಲೀಸರ ಮೂಲಕ ನಮ್ಮನ್ನು ದೂರ ಮಾಡಲು ಪ್ರಯತ್ನಿಸುತ್ತಿದ್ದಾರೆ~ ಎಂದು ಸಂತೋಷ್ `ಪ್ರಜಾವಾಣಿ~ಗೆ ತಿಳಿಸಿದರು.

`ಜೀವ ಭಯದಿಂದಾಗಿ ಮನೆಯಿಂದ ಹೊರ ಹೋಗಲೇ ಭಯವಾಗುತ್ತಿದೆ. ಪ್ರತಿ ಕ್ಷಣವನ್ನೂ ಆತಂಕದಲ್ಲೇ ಕಳೆಯುತ್ತಿದ್ದೇವೆ. ನಾವು ಪರಸ್ಪರ ಪ್ರೀತಿಸಿದ್ದೇ ತಪ್ಪು ಎಂಬಂತೆ ಪೊನ್ನಪ್ಪ ಹಾಗೂ ಆತನ ಸ್ನೇಹಿತರು ನಮ್ಮ ಮೇಲೆ ದ್ವೇಷ ಸಾಧಿಸುತ್ತಿದ್ದಾರೆ. ರಾಜಕೀಯ ಪ್ರಭಾವವಿರುವ ಅವರು ನಮ್ಮನ್ನು ಬೇರೆ ಮಾಡಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ~ ಎಂದು ಅವರು ಹೇಳಿದರು.

ಪ್ರಾಣ ಬಿಟ್ಟರೂ ಬೇರಾಗುವುದಿಲ್ಲ : `ನನ್ನ ತಂದೆಯೇ ನನ್ನ ಶತ್ರುವಾಗಿ ಪರಿಣಮಿಸಿದ್ದಾರೆ. ಮದುವೆಯಾದ ಮೇಲೂ ನಮ್ಮನ್ನು ನೆಮ್ಮದಿಯಿಂದ ಬದುಕಲು ಬಿಡುತ್ತಿಲ್ಲ. ಜಾತಿ ಹಾಗೂ ಅಂತಸ್ತಿನ ಕಾರಣದಿಂದ ನಮ್ಮನ್ನು ಬೇರೆ ಮಾಡಲು ಪ್ರಯತ್ನಿಸುತ್ತಿದ್ದಾರೆ. ದಿನವೂ ನನ್ನ ಗಂಡನನ್ನು ಬಿಟ್ಟು ಬರುವಂತೆ ಒತ್ತಾಯ ಮಾಡುತ್ತಲೇ ಇದ್ದಾರೆ. ಪ್ರಾಣ ಬಿಟ್ಟರೂ ನಾನು ಸಂತೋಷ್‌ನನ್ನು ಬಿಟ್ಟು ಹೋಗುವುದಿಲ್ಲ~ ಎಂದು ವನಿತಾ ಹೇಳಿದ್ದಾರೆ.

`ನನ್ನ ತಂದೆಯೇ ನನ್ನನ್ನು ತಮ್ಮ ಸ್ನೇಹಿತರ ಮನೆಯಲ್ಲಿರಿಸಿ ಸಂತೋಷ್ ವಿರುದ್ಧ ವಿವೇಕನಗರ ಪೊಲೀಸ್ ಠಾಣೆಯಲ್ಲಿ ಅಪಹರಣದ ದೂರು ನೀಡಿದ್ದಾರೆ. ಸುಮಾರು ಇಪ್ಪತ್ತು ದಿನಗಳ ಕಾಲ ನನ್ನನ್ನು ಗೃಹ ಬಂಧನದಲ್ಲಿ ಇಡಲಾಗಿತ್ತು. `ಸಂತೋಷ್ ಕೆಳಜಾತಿಯವನು, ಆತನನ್ನು ಬಿಟ್ಟು ಬಾ~ ಎಂದು ನನ್ನ ಮನವೊಲಿಸಲು ನೋಡಿದರು. ಆದರೆ, ವಾರದ ಹಿಂದೆ ವಿವಿಧ ಸಂಸ್ಥೆಗಳು ಹಾಗೂ ಸ್ನೇಹಿತರೊಂದಿಗೆ ಬಂದ ಸಂತೋಷ್ ನನ್ನನ್ನು ಅಲ್ಲಿಂದ ಬಿಡಿಸಿಕೊಂಡು ಬಂದರು. ಆದರೂ ದಿನವೂ ಜೀವ ಬೆದರಿಕೆಯ ಕರೆಗಳು ಬರುತ್ತಲೇ ಇವೆ~ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಸಂತೋಷ್ ಹಾಗೂ ವನಿತಾ ಪ್ರೇಮ ವಿವಾಹ ಉಳಿಸಲು ಕೆಲವು ಸಂಘ ಸಂಸ್ಥೆಗಳು ಮುಂದಾಗಿದ್ದು, `ಪೊಲೀಸರು ಕಾನೂನು ರೀತಿಯಲ್ಲಿ ವಿಚಾರಣೆ ನಡೆಸಿ ಪೊನ್ನಪ್ಪ ಹಾಗೂ ಹಲ್ಲೆ ನಡೆಸಿದ ಅವರ ಸ್ನೇಹಿತರನ್ನು ಬಂಧಿಸಬೇಕು~ ಎಂದು ಒತ್ತಾಯಿಸಿವೆ.

ಸರ್ಜಾಪುರ ಠಾಣೆಯಲ್ಲಿ ಸಂತೋಷ್ ಅವರು ಪೊನ್ನಪ್ಪ ಹಾಗೂ ಅವರ ಸ್ನೇಹಿತರಾದ ಪ್ರಸನ್ನ, ಮಂಜುನಾಥ್, ನಾಗಪ್ಪ ಸೇರಿದಂತೆ ಒಟ್ಟು 15 ಜನರ ವಿರುದ್ಧ ಹಲ್ಲೆ ಹಾಗೂ ಕೊಲೆ ಯತ್ನದ ದೂರು ದಾಖಲಿಸಿದ್ದಾರೆ.

ಯಾವುದೇ ರಾಜಕೀಯ ಪ್ರಭಾವ ಇಲ್ಲ : `ಸಂತೋಷ್ ನೀಡಿರುವ ದೂರಿನ ಆಧಾರದ ಮೇಲೆ ವಿಚಾರಣೆ ನಡೆಸಲಾಗುತ್ತಿದ್ದು, ಪ್ರಕರಣದಲ್ಲಿ ಯಾವುದೇ ರಾಜಕೀಯ ಪ್ರಭಾವವೂ ಇಲ್ಲ. ಆರೋಪಿಗಳು ತಲೆ ಮರೆಸಿಕೊಂಡಿದ್ದು, ಅವರಿಗಾಗಿ ಹುಡುಕಾಟ ನಡೆದಿದೆ. ಸಂತೋಷ್ ಹಾಗೂ ವನಿತಾ ಅವರು ಪೊಲೀಸ್ ರಕ್ಷಣೆ ಕೋರಿದರೆ ರಕ್ಷಣೆ ನೀಡಲು ನಾವು ಸಿದ್ಧರಿದ್ದೇವೆ~ ಎಂದು ಸರ್ಜಾಪುರ ಠಾಣೆಯ ಇನ್‌ಸ್ಪೆಕ್ಟರ್ ವೆಂಕಟಶೆಟ್ಟಿ `ಪ್ರಜಾವಾಣಿ~ ತಿಳಿಸಿದ್ದಾರೆ.

`ವಿವೇಕನಗರದಲ್ಲಿ ಮದುವೆ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಬಂದಿದ್ದಾಗ ವನಿತಾ ಅಪಹರಣವಾಗಿದ್ದಾರೆ ಎಂದು ಆಕೆಯ ಪೋಷಕರು ಸಂತೋಷ್ ವಿರುದ್ಧ ಅಪಹರಣದ ದೂರು ನೀಡಿದ್ದರು. ಇತ್ತೀಚೆಗೆ ಆಕೆಯೇ ಠಾಣೆಗೆ ಬಂದು ತಾನು ಅಪಹರಣಕ್ಕೆ ಒಳಗಾಗಿರಲಿಲ್ಲ, ಬದಲಾಗಿ ತನ್ನ ಅಜ್ಜಿಯ ಮನೆಯಲ್ಲಿದ್ದೆ ಎಂದು ಲಿಖಿತ ಹೇಳಿಕೆ ನೀಡಿದ್ದಾರೆ~ ಎಂದು ವಿವೇಕನಗರ ಪೊಲೀಸರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT