ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೇಮ ವಿವಾಹ, ಶಾಪಿಂಗ್ ವಿರುದ್ಧ ಹುಕುಂ

Last Updated 13 ಜುಲೈ 2012, 19:30 IST
ಅಕ್ಷರ ಗಾತ್ರ

ಭಾಗ್ಪತ್, ಉತ್ತರ ಪ್ರದೇಶ (ಪಿಟಿಐ): ಪ್ರೀತಿಸಿ ಮದುವೆಯಾಗುವಂತಿಲ್ಲ...40 ವರ್ಷದೊಳಗಿನ ಮಹಿಳೆಯರು ಪೇಟೆ (ಶಾಪಿಂಗ್) ಸುತ್ತುವಂತಿಲ್ಲ...ಮನೆಯ ಹೊರಗೆ ಮೊಬೈಲ್ ಬಳಸುವಂತಿಲ್ಲ...ಆಚೆ ಹೋಗುವಾಗ ತಲೆಯ ಮೇಲೆ ಸೆರಗು ಕಡ್ಡಾಯ..!

ಜಿಲ್ಲೆಯ ರಮಲಾ ಪ್ರದೇಶದ ಅಸರಾ ಗ್ರಾಮ ಪಂಚಾಯ್ತಿ ಹೊರಡಿಸಿರುವ ಫರ್ಮಾನು ಇದು. ಪ್ರೀತಿಸಿ ಮದುವೆಯಾದರೆ ಊರಿಂದಲೇ ಓಡಿಸಲಾಗುತ್ತದೆ ಎಂದೂ ಅದು ಬೆದರಿಕೆ ಹಾಕಿದೆ.

`ಪಂಚಾಯ್ತಿ ಹೊರಡಿಸಿರುವ ಆದೇಶಗಳ ಬಗ್ಗೆ ತನಿಖೆ ನಡೆಸಲಾಗುತ್ತದೆ. ಈವರೆಗೆ ಯಾರನ್ನೂ ಬಂಧಿಸಿಲ್ಲ. ತನಿಖಾ ವರದಿ ಬಂದ ನಂತರ ಕ್ರಮ ತೆಗೆದುಕೊಳ್ಳಲಾಗುತ್ತದೆ~ ಎಂದು ಭಾಗ್ಪತ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ  ವಿ.ಕೆ.ಶೇಖರ್ ಹೇಳಿದ್ದಾರೆ.

ಮಹಿಳಾ ಆಯೋಗ ಕ್ರಮ: ಸ್ವಾತಂತ್ರ್ಯ ಬಂದು 64 ವರ್ಷಗಳಾದರೂ ಇಂಥ ಆದೇಶ ಹೊರಡಿಸುವುದು ದುರದೃಷ್ಟಕರ ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ಮಮತಾ ಶರ್ಮ ಹೇಳಿದ್ದಾರೆ.

`ಪಂಚಾಯ್ತಿಗಳಿಗೆ ಸಂವಿಧಾನ ಬದ್ಧ ಅಧಿಕಾರ ಇಲ್ಲ. ಹೀಗಿರುವಾಗ ಇಂಥ ಆದೇಶಗಳಿಗೆ ಸೊಪ್ಪು ಹಾಕುವ ಅಗತ್ಯವಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕು. ಈ ಕಟ್ಟಳೆಗಳನ್ನು ಪಾಲಿಸದಂತೆ ನಿರ್ದೇಶನ ನೀಡಬೇಕು~ ಎಂದು ಆಗ್ರಹಿಸಿದ್ದಾರೆ.

ಪಂಚಾಯ್ತಿ ಹೊರಡಿಸಿದ ಆದೇಶಗಳ ಕುರಿತು ವರದಿ ಸಲ್ಲಿಸುವಂತೆ ಉತ್ತರ ಪ್ರದೇಶ ಮಹಿಳಾ ಆಯೋಗವು ಭಾಗ್ಪತ್ ಜಿಲ್ಲಾಡಳಿತವನ್ನು ಕೇಳಿದೆ.

ಮಹಿಳೆಯರ ವಿರೋಧ
: ಪಂಚಾಯ್ತಿ ಆದೇಶಕ್ಕೆ ಮಹಿಳಾ ರಾಜಕಾರಣಿಗಳು ಹಾಗೂ ಕಾರ್ಯಕರ್ತೆಯರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. `ಇಂಥ ಆದೇಶ ಹೊರಡಿಸಲು ಗ್ರಾಮ ಪಂಚಾಯ್ತಿಗೆ ಕಾನೂನು ಪ್ರಕಾರ ಯಾವುದೇ ಹಕ್ಕು ಇಲ್ಲ. ಹಾಗಾಗಿ ಗ್ರಾಮಸ್ಥರು ಇದನ್ನು ಪಾಲಿಸದಂತೆ ನೋಡಿಕೊಳ್ಳಬೇಕು~ ಎಂದು ಮಹಿಳಾ ಹೋರಾಟಗಾರರು ಉತ್ತರ ಪ್ರದೇಶ ಸರ್ಕಾರವನ್ನು ಆಗ್ರಹಿಸಿದ್ದಾರೆ.

`ಮಹಿಳೆಯರು ತಲೆ ಮೇಲೆ ಸೆರಗು ಹಾಕಿಕೊಳ್ಳಬೇಕು, ಮೊಬೈಲ್ ಫೋನ್ ಬಳಸಕೂಡದು ಎಂದು ಆಜ್ಞೆ ಹೊರಡಿಸುವುದು ತಪ್ಪಾಗುತ್ತದೆ. ಸರ್ಕಾರ ಕೂಡಲೇ ಕ್ರಮ ತೆಗೆದುಕೊಳ್ಳಬೇಕು~ ಎಂದು ಬಿಜೆಪಿ ವಕ್ತಾರೆ ನಿರ್ಮಲಾ ಸೀತಾರಾಂ ಒತ್ತಾಯಿಸಿದ್ದಾರೆ.

ಸಿಪಿಎಂ ಪಾಲಿಟ್ ಬ್ಯುರೊ ಸದಸ್ಯೆ ಬೃಂದಾ ಕಾರಟ್ ಕೂಡ ಪಂಚಾಯ್ತಿ ಆದೇಶಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. `ಜಾತಿ ಪಂಚಾಯ್ತಿಗಳು ಸ್ವಯಂ ಘೋಷಿತ ಮಂಡಳಿಗಳು. ಅವುಗಳಿಗೆ ಕಾನೂನು ರೂಪಿಸುವ ಹಕ್ಕು ಇಲ್ಲ. ಅವು ಹೊರಡಿಸುವ ಫತ್ವಾಗಳು ಕಾನೂನು ಬಾಹಿರ ಎನಿಸಿಕೊಳ್ಳುತ್ತವೆ~ ಎಂದಿದ್ದಾರೆ.

ಇಬ್ಬರು ಗ್ರಾಮಸ್ಥರ ತನಿಖೆ(ಲಖನೌ ವರದಿ):
ಜಾತಿ ಪಂಚಾಯ್ತಿ ಹೊರಡಿಸಿರುವ ವಿವಾದಾತ್ಮಕ ಆದೇಶಗಳಿಗೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಗ್ರಾಮಸ್ಥರನ್ನು ತನಿಖೆಗೊಳಪಡಿಸಿದ್ದಾರೆ.

ಅಸರಾ ಗ್ರಾಮದ ಮೊಕಿಂ ಹಾಗೂ ಮುಜಾಹಿದ್ ಎಂಬುವರನ್ನು ಗುರುವಾರ ಪೊಲೀಸರು ಪ್ರಶ್ನೆಗೊಳಪಡಿಸಿದ್ದು, ಇವರಿಬ್ಬರನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿ ಗ್ರಾಮಸ್ಥರು ಪೊಲೀಸರನ್ನು ಥಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT