ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೋತ್ಸಾಹಧನ ರೂ15,000 ಏರಿಕೆ

ಅನುಸೂಚಿತ ಜಾತಿ/ಪಂಗಡ ಗೃಹ ಶೌಚಾಲಯ ನಿರ್ಮಾಣ
Last Updated 5 ಡಿಸೆಂಬರ್ 2013, 6:49 IST
ಅಕ್ಷರ ಗಾತ್ರ

ಮಂಡ್ಯ: ಗ್ರಾಮ ನೈರ್ಮಲ್ಯಕ್ಕೆ ಒತ್ತು ನೀಡಿರುವ ಸರ್ಕಾರ ಅನುಸೂಚಿತ ಜಾತಿ ಹಾಗೂ ಅನುಸೂಚಿತ ಪಂಗಡ ಕುಟುಂಬಗಳ ವೈಯಕ್ತಿಕ ಗೃಹ ಶೌಚಾಲಯ ನಿರ್ಮಾಣಕ್ಕೆ ನೀಡುತ್ತಿದ್ದಂಥ ಪ್ರೋತ್ಸಾಹಧನವನ್ನು ರೂ15,000  ಏರಿಸಿದೆ.
ಈವರೆವಿಗೂ, ನಿರ್ಮಲ ಭಾರತ ಅಭಿಯಾನ (ಎನ್‌.ಬಿ.ಎ.) ಯೋಜನೆಯಡಿ ರೂ10,000 ಮಾತ್ರ ನೀಡಲಾಗುತ್ತಿತ್ತು. ಈಗ, ಈ ಮೊತ್ತವು 15 ಸಾವಿರಕ್ಕೆ ಹೆಚ್ಚಳವಾಗಿದೆ.

ಎನ್‌ಬಿಎ ಯೋಜನೆಯಡಿ ರೂ 4,700; ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ರೂ 4,500 ಹಾಗೂ ಫಲಾನು­ಭ­ವಿ­ಯ ವಂತಿಕೆ ರೂ 800 ಸೇರಿದಂತೆ ಒಟ್ಟು ರೂ10,000. ಪ್ರೋತ್ಸಾಹಧನವನ್ನು ನೀಡಲಾಗುತ್ತಿತ್ತು.

ಈಗ ಹೆಚ್ಚುವರಿಯಾಗಿ ನೀಡುತ್ತಿರುವ ರೂ5,000 ಅನ್ನು ಸಮಾಜ ಕಲ್ಯಾಣ ಇಲಾಖೆಯ ವಿಶೇಷ ಘಟಕ ಯೋಜನೆ (ಎಸ್‌ಸಿಪಿ) ಹಾಗೂ ಪರಿಶಿಷ್ಟ ವರ್ಗ ಉಪ ಯೋಜನೆ (ಟಿಎಸ್‌ಪಿ) ಅಡಿಯಲ್ಲಿ ಭರಿಸಲಾಗುತ್ತಿದೆ.

ಈವೊಂದು ಆರ್ಥಿಕ ನೆರವು ಎಲ್ಲ ಬಿಪಿಎಲ್‌ ಮತ್ತು ನಿರ್ಬಂಧಿತ ಎಪಿಎಲ್‌ (ಎಸ್‌ಸಿ/ಎಸ್‌ಟಿ, ಸಣ್ಣ ಮತ್ತು ಅತಿ ಸಣ್ಣ ಹಿಡುವಳಿದಾರರು, ಮಹಿಳಾ ಪ್ರಧಾನ ಹಾಗೂ ಅಂಗವಿಕಲ ಕುಟುಂಬಗಳು) ಕುಟುಂಬಗಳಿಗೆ ಸಿಗಲಿದೆ. 2013ರ ನ. 13 ರಿಂದ ಅನ್ವಯವಾಗುವಂತೆ, ಅಪೂರ್ಣವಾಗಿರುವ ಅಥವಾ ಪ್ರಾರಂಭವಾಗುವ ಗ್ರಾಮೀಣ ಪ್ರದೇಶದಲ್ಲಿನ ಈ ವರ್ಗಗಳ ಕುಟುಂಬಗಳಿಗೆ ಗೃಹ ಶೌಚಾಲಯ ಹೊಂದಲು ಪ್ರತಿ ಘಟಕಕ್ಕೆ 15 ಸಾವಿರ ರೂ. ದೊರೆಯಲಿದೆ.

ಪ್ರಸಕ್ತ ಸಾಲಿನಲ್ಲಿ ರೂಪಿಸಿರುವ ಕ್ರಿಯಾ ಯೋಜನೆ ಪ್ರಕಾರ, ಜಿಲ್ಲೆಯಲ್ಲಿ ಒಟ್ಟು 3,609 ಕುಟುಂಬಗಳಿಗೆ ಈ ನೆರವು ದೊರೆಯಲಿದೆ. ಇದರಲ್ಲಿ ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್‌) ಎಸ್‌ಸಿ –2,202, ಎಸ್‌ಟಿ –211 ಹಾಗೂ ನಿರ್ಬಂಧಿತ ಎಪಿಎಲ್ ಎಸ್‌ಸಿ –1,045 ಹಾಗೂ ಎಸ್‌ಟಿ –151 ಕುಟುಂಬಗಳು ಸೇರಿವೆ.

ಷರತ್ತುಗಳೇನು?: ಸಂಪೂರ್ಣ ಸ್ವಚ್ಛತಾ ಆಂದೋಲನ (ಟಿಎಸ್‌ಸಿ)/ಎನ್‌.ಬಿ.ಎ. ಅಥವಾ ಇನ್ಯಾವುದೇ ಕೇಂದ್ರ ಅಥವಾ ರಾಜ್ಯ ಸರ್ಕಾರದ ಕಾರ್ಯಕ್ರಮದಡಿ ಶೌಚಾಲಯ ನಿರ್ಮಾಣಕ್ಕೆ ಪ್ರೋತ್ಸಾಹಧನ ಪಡೆಯದೇ ಇರುವವರನ್ನು ಗ್ರಾಮ ಸಭೆಯ ಮೂಲಕ ಆಯ್ಕೆ ಮಾಡಬೇಕಿರುತ್ತದೆ. ಇದಕ್ಕಾಗಿ ಪ್ರತ್ಯೇಕ ಪುಸ್ತಕವನ್ನು ಗ್ರಾಪಂ ಸಿಬ್ಬಂದಿ ನಿರ್ವಹಣೆ ಮಾಡಬೇಕಿದೆ.

ಗೃಹ ಶೌಚಾಲಯ ನಿರ್ಮಾಣದ ನಂತರ ಒಂದೇ ಕಂತಿನಲ್ಲಿ ಫಲಾನುಭವಿಯ ಬ್ಯಾಂಕ್‌ ಖಾತೆಗೆ ಹಣ ಜಮಾ ಮಾಡಲಾಗುತ್ತದೆ.

ಎನ್‌ಬಿಎ ನೋಡೆಲ್‌ ಅಧಿಕಾರಿಗಳು ಹಾಗೂ ಜಿಲ್ಲಾ/ತಾಲ್ಲೂಕು ಮಟ್ಟದ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ನಿರ್ವಹಣೆಯ ಮೇಲುಸ್ತುವಾರಿ ನೋಡಿಕೊಳ್ಳಬೇಕಿದೆ. ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಪ್ರತಿ ತಿಂಗಳು ಪ್ರಗತಿ ಪರಿಶೀಲನೆ ನಡೆಸಲಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT