ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫರ್ಮಾನ್, ಶರತ್ ಖುಷಿ

Last Updated 21 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಚೀನಾದ ಗುವಾಂಗ್‌ಜೌನಲ್ಲಿ ನಡೆದ 2010ರ ಏಷ್ಯನ್ ಪ್ಯಾರಾ ಕ್ರೀಡಾಕೂಟದಲ್ಲಿ ಪದಕ ಗೆದ್ದಿದ್ದಕ್ಕೆ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು ಹಣದ ಬಹುಮಾನ ಪ್ರಕಟಿಸಿರುವುದಕ್ಕೆ ಕರ್ನಾಟಕದ ಅಂಗವಿಕಲ ಕ್ರೀಡಾಪಟುಗಳಾದ ಫರ್ಮಾನ್ ಬಾಷಾ ಹಾಗೂ ಶರತ್ ಗಾಯಕ್ವಾಡ್ ಸಂತಸ ವ್ಯಕ್ತಪಡಿಸಿದ್ದಾರೆ.

ಏಷ್ಯನ್ ಕೂಟದಲ್ಲಿ ಫರ್ಮಾನ್ ಬಾಷಾ ಪವರ್‌ಲಿಫ್ಟಿಂಗ್‌ನಲ್ಲಿ ಬೆಳ್ಳಿ, ಶರತ್ ಗಾಯಕ್ವಾಡ್ ಹಾಗೂ ರಾಘವೇಂದ್ರ ಅನ್ವೇಕರ್ ಈಜು ವಿಭಾಗದಲ್ಲಿ ಕಂಚಿನ ಪದಕ ಜಯಿಸಿದ್ದರು.

`ಕೊನೆಗೂ ನಮ್ಮ ಸಾಧನೆ ಗುರುತಿಸಿದ್ದಾರೆ ಎಂಬ ಖುಷಿ ಇದೆ. ಅದಕ್ಕಾಗಿ ನಾವು ಹಲವು ತಿಂಗಳಿನಿಂದ ಕಾಯುತ್ತಿದ್ದೆವು~ ಎಂದು ಶರತ್ `ಪ್ರಜಾವಾಣಿ~ಗೆ ಪ್ರತಿಕ್ರಿಯಿಸಿದ್ದಾರೆ.

`ಆದರೆ ಬಹುಮಾನ ಹಣದಲ್ಲೂ ತಾರತಮ್ಯ ಎಸಗಲಾಗಿದೆ. ಪದಕ ಗೆದ್ದ ಸಮರ್ಥ ಕ್ರೀಡಾಪಟುಗಳಿಗೆ ಹೆಚ್ಚು ಹಣ ಪ್ರಕಟಿಸಿದ್ದರು. ಆದರೆ ನಮಗೆ ಅವರ ಅರ್ಧದಷ್ಟು ಹಣ ಕೂಡ ನೀಡಿಲ್ಲ~ ಎಂದು 20ರ ಹರೆಯದ ಶರತ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

`ಕಾಮನ್‌ವೆಲ್ತ್ ಕ್ರೀಡಾಕೂಟ ಮತ್ತು ಏಷ್ಯನ್ ಕ್ರೀಡಾಕೂಟದಲ್ಲಿ ಪದಕ ಗೆದ್ದ ರಾಜ್ಯದ ಮೂವರು ಅಂಗವಿಕಲ ಕ್ರೀಡಾಪಟುಗಳಿಗೆ ಕೂಡಲೇ ನಗದು ಪುರಸ್ಕಾರ ನೀಡಲಾಗುವುದು. ಚಿನ್ನದ ಸಾಧನೆ ಮಾಡಿದವರಿಗೆ ರೂ 2.50 ಲಕ್ಷ, ಬೆಳ್ಳಿಗೆ ರೂ 1.75 ಲಕ್ಷ ಮತ್ತು ಕಂಚು ಗೆದ್ದವರಿಗೆ ರೂ 1.25 ಲಕ್ಷ ನಗದು ಪುರಸ್ಕಾರ ನೀಡಲಾಗುವುದು~ ಎಂದು ಸಿಎಂ ಮಂಗಳವಾರ ಪ್ರಕಟಿಸಿದ್ದರು.

ಒಂದು ಕೈ ಇಲ್ಲದ ಶರತ್ 100 ಮೀ.ಬ್ರೆಸ್ಟ್‌ಸ್ಟ್ರೋಕ್ ವಿಭಾಗದಲ್ಲಿ ಲಂಡನ್‌ನಲ್ಲಿ ನಡೆಯಲಿರುವ 2012ರ ಪ್ಯಾರಾಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲು ತರಬೇತಿ ನಡೆಸುತ್ತಿದ್ದಾರೆ. `ಇಷ್ಟು ದಿನ ನಮ್ಮ ಗೋಳು ಕೇಳುವವರು ಇರಲಿಲ್ಲ. ನೂತನ ಮುಖ್ಯಮಂತ್ರಿ ನಮ್ಮ ಸಮಸ್ಯೆಗೆ ಸ್ಪಂದಿಸಿದ್ದಾರೆ. ಬಹುಮಾನ ಹಣ ಪ್ರಕಟಿಸಲು ಸೂಚಿಸಿದ್ದಾರೆ~ ಎಂದು ಫರ್ಮಾನ್ ನುಡಿದಿದ್ದಾರೆ. 

 ಏಷ್ಯನ್ ಕೂಟದಲ್ಲಿ ಪದಕ ಗೆದ್ದಿರುವ ಕರ್ನಾಟಕದ ಸ್ಪರ್ಧಿಗಳಿಗೆ ಬಹುಮಾನದ ಹಣ ನೀಡುವಂತೆ ಆರು ತಿಂಗಳ ಹಿಂದೆಯೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಹಿಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಕೂಡ ಬರೆದಿದ್ದರು ಎಂದು ಫರ್ಮಾನ್ ಹೇಳಿದರು. ಲಂಡನ್ ಪ್ಯಾರಾಲಿಂಪಿಕ್ಸ್ ನಲ್ಲಿ ಪಾಲ್ಗೊಳ್ಳಲು ಬಾಷಾ ಅರ್ಹತೆ ಪಡೆದ್ದ್ದಿದು, ಈಗ ಅಭ್ಯಾಸ ನಡೆಸುತ್ತಿದ್ದಾರೆ.

`ತಾರತಮ್ಯ ಎಸಗಲಾಗಿದೆ~
`ನಮಗೆ ಪ್ರಕಟಿಸಿರುವ ಬಹುಮಾನ ಹಣದಲ್ಲೂ ತಾರತಮ್ಯ ಎಸಗಿದ್ದಾರೆ. ಏಷ್ಯನ್ ಕ್ರೀಡಾಕೂಟದಲ್ಲಿ ಸಾಧನೆ ಮಾಡಿದ ಸಮರ್ಥ ಕ್ರೀಡಾಪಟುಗಳಿಗೆ 10 ಲಕ್ಷ (ಚಿನ್ನ), 7 ಲಕ್ಷ (ಬೆಳ್ಳಿ) ಹಾಗೂ 5 ಲಕ್ಷ (ಕಂಚು) ರೂ. ಪ್ರಕಟಿಸಿದ್ದರು. ಆದರೆ ನಮಗೆ ಅವರ ಅರ್ಧದಷ್ಟು ಹಣ ಕೂಡ ನೀಡಿಲ್ಲ~ ಎಂದು ಫರ್ಮಾನ್ ಬಾಷಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಾಜ್ಯ ಸರ್ಕಾರ ಪ್ರಕಟಿಸಿರುವ ಪ್ರಕಾರ ಏಷ್ಯನ್ ಪ್ಯಾರಾ ಕ್ರೀಡಾಕೂಟದಲ್ಲಿ ಬೆಳ್ಳಿ ಜಯಿಸಿರುವ ಬಾಷಾ 1.75 ಲಕ್ಷ ಹಣ ಪಡೆಯಲಿದ್ದಾರೆ.

`ಸಮರ್ಥರಿಗೆ ನೀಡಿದಷ್ಟು ಬಹುಮಾನ ಹಣವನ್ನು ಕೇಂದ್ರ ಸರ್ಕಾರ ನೀಡಿದೆ. ಆದರೆ ರಾಜ್ಯದಲ್ಲಿ ನಮಗೆ ಅನ್ಯಾಯವಾಗಿದೆ. ಅಂಗವಿಕಲರಾಗಿ ನಾವು ಕಷ್ಟವನ್ನು ಎದುರಿಸಿ ಈ ಸಾಧನೆ ಮಾಡಿದ್ದೇವೆ~ ಎಂದು ಅವರು ನುಡಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT