ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫುಟ್‌ಪಾತ್ ಮೇಲೆ ಪಾದಚಾರಿಗಳ ಪರದಾಟ

Last Updated 6 ಜೂನ್ 2011, 8:10 IST
ಅಕ್ಷರ ಗಾತ್ರ

ಬೆಳಗಾವಿ: ಕಾನೂನು ರಕ್ಷಣೆ ಮಾಡಬೇಕಾದವರೇ ಕಾನೂನು ಉಲ್ಲಂಘಿಸುತ್ತಿದ್ದಾರೆ. ಹೀಗಾಗಿ ಬೆಳಗಾವಿಯಲ್ಲಿ ಪಾದಚಾರಿಗಳ ಗೋಳು ಕೇಳುವವರಿಲ್ಲದಂತಾಗಿದೆ.

ನಗರದ ಹಲವಾರು ಕಡೆಗಳಲ್ಲಿ ಫುಟ್‌ಪಾತ್‌ಗಳ ಮೇಲೆ ವಾಹನಗಳನ್ನು ನಿಲ್ಲಿಸಲಾಗುತ್ತಿದೆ. ಅದರಿಂದ ಪಾದಚಾರಿಗಳ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ. ಹಾಗೆಂದು ದೂರು ಸಲ್ಲಿಸಬೇಕೆಂದು ಪೊಲೀಸರ ಬಳಿಗೆ ಹೋಗುವಂತಿಲ್ಲ. ಏಕೆಂದರೆ ಪೊಲೀಸ್ ವಾಹನಗಳೇ ಫುಟ್‌ಪಾತ್ ಮೇಲೆ ನಿಂತಿರುತ್ತವೆ.

ನಗರದ ಪ್ರಮುಖ ರಸ್ತೆಗಳಲ್ಲಿ ಕಾಲೇಜು ರಸ್ತೆಯೂ ಒಂದು. ಆ ರಸ್ತೆಯಲ್ಲಿರುವ ಹೋಟೆಲ್‌ಗೆ  ಬರುವ ಬಹುತೇಕ ವಾಹನಗಳು ರಾಜಾರೋಷವಾಗಿ ಫುಟ್‌ಪಾತ್ ಅತಿಕ್ರಮಿಸಿಕೊಂಡು ನಿಲ್ಲುತ್ತವೆ. ಆದರೆ ಇದು ಕೂಗಳತೆ ದೂರದಲ್ಲಿ ಕಾರ್ಯನಿರ್ವಹಿಸುವ ಸಂಚಾರಿ ಪೊಲೀಸ್‌ಗೆ ಕಾಣುವುದಿಲ್ಲ.

ಆದರೆ ಅದೇ ರಸ್ತೆಯಲ್ಲಿ ನೀವು ನಿಷೇಧಿಸಿದ ಸ್ಥಳದಲ್ಲಿ ದ್ವಿಚಕ್ರ ವಾಹನ ನಿಲ್ಲಿಸಿದ್ದೇ ಆದರೆ ಕೂಡಲೇ ಪೊಲೀಸರು ಅಲ್ಲಿಗೆ ಆಗಮಿಸುತ್ತಾರೆ. ವಾಹನ ಮಾಲೀಕರು ಇಲ್ಲದಿದ್ದರೆ ವಾಹನವನ್ನು ಎತ್ತಿಕೊಂಡು ಹೋಗುತ್ತಾರೆ. ಸ್ಥಳದಲ್ಲೇ ಇದ್ದರೆ ದಂಡ ವಿಧಿಸುತ್ತಾರೆ.

ಇದೇ ನಿಯಮ ಹೋಟೆಲ್ ಮುಂದಿರುವ ವಾಹನಗಳಿಗೆ ಅನ್ವಯವಾಗುವುದಿಲ್ಲ ಎನ್ನುವುದು ಮಾತ್ರ ಆಶ್ಚರ್ಯ ಮೂಡಿಸುತ್ತದೆ.

ಇದೇ ರೀತಿ ವನಿತಾ ವಿದ್ಯಾಲಯ ಬಳಿ ಇರುವ ಐಡಿಬಿಐ ಬ್ಯಾಂಕ್ ಬಳಿಯೂ ಫುಟ್‌ಪಾತ್ ಮೇಲೆ ಸಾಕಷ್ಟು ವಾಹನಗಳು ಬೆಳಿಗ್ಗೆಯಿಂದ ಸಂಜೆಯವರೆಗೆ ನಿಂತಿರುತ್ತವೆ. ಅಲ್ಲಿಯೇ ಸಂಚಾರ ನಿಯಂತ್ರಣಕ್ಕಾಗಿ ಪೊಲೀಸರೊಬ್ಬರು ಕಾರ್ಯ ನಿರ್ವಹಿಸುತ್ತಾರೆ. ಆದರೆ ಅವರು ಅತ್ತ ತಿರುಗಿಯೂ ನೋಡುವುದಿಲ್ಲ.

ಕ್ಲಬ್ ರಸ್ತೆಯ ಒಂದು ಬದಿಗೆ ನಾಲ್ಕು ಚಕ್ರ ವಾಹನಗಳನ್ನು, ಇನ್ನೊಂದು ಬದಿಗೆ ದ್ವಿಚಕ್ರ ವಾಹನಗಳನ್ನು ನಿಲ್ಲಿಸಲಾಗುತ್ತದೆ. ಆದರೆ ಅದೇ ರಸ್ತೆಯಲ್ಲಿ ಬರುವ ಹೋಟೆಲ್‌ಗೆ ಮಾತ್ರ ಇದು ಅನ್ವಯಿಸುವುದಿಲ್ಲ.

ಕ್ಲಬ್ ರಸ್ತೆಯ ಒಂದು ಭಾಗದಲ್ಲಿ ಅತಿಕ್ರಮಣವಾಗಿದೆ. ಅದನ್ನೇ ಪ್ಲಸ್ ಪಾಯಿಂಟ್ ಆಗಿಸಿಕೊಂಡಿರುವ ಹೋಟೆಲ್‌ನವರು ಆ ಜಾಗದಲ್ಲಿ ಕಾರು ಇತ್ಯಾದಿ ವಾಹನಗಳನ್ನು ನಿಲ್ಲಿಸುತ್ತಾರೆ. ದ್ವಿಚಕ್ರ ವಾಹನ ನಿಲ್ಲಿಸಬೇಕಾದ ಜಾಗದಲ್ಲಿ ನಿಲ್ಲಿಸಲು ಹೋದರೆ ಅಲ್ಲಿಯ ಸಿಬ್ಬಂದಿ ಸಾರ್ವಜನಿಕರ ಮೇಲೆ ದಬ್ಬಾಳಿಕೆ ಮಾಡುತ್ತಾರೆ.

ಇದೇ ರೀತಿ ನಗರದ ಹಲವಾರು ಕಡೆಗಳಲ್ಲಿ ಫುಟ್‌ಪಾತ್ ಅತಿಕ್ರಮಣ ಮಾಡಿಕೊಳ್ಳಲಾಗಿದೆ. ಇದರಿಂದಾಗಿ ಪಾದಚಾರಿಗಳು ಪರದಾಡುತ್ತಿದ್ದಾರೆ. ಪೊಲೀಸರು ಮಾತ್ರ ಕ್ರಮಕೈಗೊಳ್ಳಲು ಮುಂದಾಗುತ್ತಿಲ್ಲ.

ಆದರೆ ನಗರದ ವಿವಿಧೆಡೆ ರಸ್ತೆ ಬದಿಗೆ ಕಾಯಿಪಲ್ಲೆ ಮಾರಾಟ ಮಾಡುವವರ ಹಾಗೂ ಬಂಡಿ ಅಂಗಡಿಗಳ ತೆರವು ಕಾರ್ಯಾಚರಣೆ ಮಾತ್ರ ನಡೆದಿರುತ್ತದೆ. ಕೆಲವಡೆ ಮಾಮೂಲು ತೆಗೆದುಕೊಂಡು ಹಾಗೆಯೇ ಬಿಡಲಾಗುತ್ತದೆ.

`ಪಾದಚಾರಿಗಳಿಗೆ ತೊಂದರೆಯಾಗುವಂತೆ ಫುಟ್‌ಪಾತ್ ಅತಿಕ್ರಮಿಸಿಕೊಂಡಿರುವವರನ್ನು ತೆರವುಗೊಳಿಸುವ ಕಾರ್ಯ ಆಗಬೇಕು. ಕಾನೂನು ಎಲ್ಲರಿಗೂ ಒಂದೇ ಆಗಿರುತ್ತದೆ. ಅದನ್ನು ಪೊಲೀಸ್ ಇಲಾಖೆಯವರು ಜಾರಿಗೊಳಿಸಬೇಕು~ ಎನ್ನುತ್ತಾರೆ ಕಿರಣ ಪಾಟೀಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT