ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫುಟ್‌ಬಾಲ್, ಮಲ್ಲಕಂಬ ಪ್ರವೀಣ

Last Updated 24 ಜನವರಿ 2011, 19:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಮಹಾಭಾರತದ ಭೀಮನ ಹಾಗೆ ನಮ್ಮ ತಂದೆ ಭೀಮಸೇನರ ವ್ಯಕ್ತಿತ್ವ’ ಎಂದು ಸ್ಮರಿಸಿಕೊಂಡರು ಅವರ ಹಿರಿಯ ಪುತ್ರ ರಾಘವೇಂದ್ರ ಜೋಶಿ.
ಅವರು ತಮ್ಮ ತಂದೆಯ ಕುರಿತು ‘ಪ್ರಜಾವಾಣಿ’ ಜೊತೆ ಹಂಚಿಕೊಂಡ ಅಳಿಯದ ನೆನಪುಗಳು ಇಲ್ಲಿವೆ.

‘ಫೆಬ್ರುವರಿ 4ಕ್ಕೆ ಅವರು 90ಕ್ಕೆ ಕಾಲಿಡುತ್ತಿದ್ದರು. ಸಣ್ಣವರಿರುವಾಗ ಭಾಳ ದುಃಖ ಅನುಭವಿಸಿದ್ರು. ಶಾಣ್ಯಾರಿದ್ರು. ತಲೆಯೊಳಗ ಧ್ವನಿ ಮತ್ತು ಸ್ವರದ ಗುಂಗು ಇರುತ್ತಿತ್ತು. ಅವರ ಕಾಕಾ ಗದುಗಿನ ಸಮೀಪದ ರೈಲು ನಿಲ್ದಾಣದಲ್ಲಿ ಕೆಲಸಕ್ಕೆ ಇದ್ದರು. ಆಗ ಕಾಕು, ‘ಭೀಮಾ ಸ್ವಲ್ಪ ಊಟದ ಡಬ್ಬಿ ಕೊಟ್ಟ ಬರ್ತೀಯಾ?’ ಅಂದಾಗ ‘ಜರೂರು’ ಅಂದು ಸೈಕಲ್ಲು ಮೇಲೆ ಹೊರಟ್ರು. ಸದಾ ಕಾಲ ಡಬಲ್ ಸೀಟು ಓಡಿಸುವವರು. ಗೆಳೆಯರನ್ನು ಕೂಡಿಸಿಕೊಂಡು ಹೊರಟಾಗ ಜೋರು ಮಳೆ-ಗಾಳಿ. ಓಪನ್ ಬ್ರಿಜ್ ಇತ್ತು. ಜೋರದಾರು ನೀರು ಹರಿಯುತ್ತಿತ್ತು. ರಾತ್ರಿ ಒಂಬತ್ತು ಗಂಟೆಗೆ ರೈಲು ನಿಲ್ದಾಣ ತಲುಪಿದರು. ಊಟದ ಡಬ್ಬಿ ತಲುಪಿಸಿದರು. ಅಂಥಾ ಮಳೆಯಲ್ಲೂ ಬಂದಿದ್ದಕ್ಕೆ ಗಾಬರಿಯಾಗಿ ಇಲ್ಲಿಯೇ ಇರು ಎಂದರೂ ವಾಪಸು ಮನೆಗೆ ಬಂದಿದ್ದರು.

‘ಇಂಥ ಧೈರ್ಯ ಅವರಿಗೆ ಬಹಳ ಇತ್ತು. ಒಳ್ಳೆಯ ಫುಟ್‌ಬಾಲ್ ಆಟಗಾರ ಅವರು. ಹಾಡುಗಾರ ಆಗದಿದ್ದರೆ ಫುಟ್‌ಬಾಲ್ ಆಟಗಾರ ಆಗುತ್ತಿದ್ದೆ ಅಂತಿದ್ರು. ಒಳ್ಳೆ ಈಜುಗಾರ. ಬಾವಿಯಿಂದ ಜಿಗಿಯುವಾಗ ಕಲ್ಲಿಗೆ ಹಲ್ಲು ಬಡಿದು ಅರ್ಧ ಮುರಿದಿತ್ತು.

‘ಮಲ್ಲಕಂಬ ಪಟು ಬೇರೆ. ಅಜ್ಜ ಗುರಾಚಾರ್ಯ ಜೋಶಿ ಹೆಡ್ ಮಾಸ್ಟರ್ ಆಗಿದ್ದರು. ಇನ್ಸ್‌ಪೆಕ್ಟರ್ ಬಂದಾಗ ಇವರ ಮಲ್ಲಕಂಬ ನೋಡಿಯೇ ಹೋಗುತ್ತಿದ್ದರು. ಮಲ್ಲಕಂಬದ ಮೇಲೆ ಒಂದೇ ಕೈಯಲ್ಲಿ ಕಸರತ್ತು ಮಾಡುತ್ತಿದ್ದರು. ಇದು ಅವರಿಗೆ ಒಂದೇ ಸ್ವರವನ್ನು ತುಂಬಾ ಹೊತ್ತು ಹಾಡಲು ಸಾಧ್ಯವಾಗಿರಬಹದು. 

‘ಛಲೋ ರೀತಿ ಬೈಕ್, ಕಾರು ಓಡಿಸುತ್ತಿದ್ದರು. ಅವರಿಗೆ ಎಲ್ಲ ಮೆಕ್ಯಾನಿಸಂ ಗೊತ್ತಿತ್ತು. ಫಿಯೆಟ್ ಮಾಲೀಕರಾದ ವಾಲಚಂದ್-ಹೀರಾಚಂದ್ ಶೇಟ್ ಅವರು ಒಮ್ಮೆ ಪುಣೆ ಸಮೀಪದ ವಾಲ್‌ಚಂದ್ ನಗರದಲ್ಲಿ ಕಛೇರಿ ಕೊಡಲು ಕರೆದಿದ್ದರು. ಅವರದೇ ಗಾಡಿ ಕಳಿಸಿದ್ದರು. ಕಛೇರಿ ಮುಗಿಸಿಕೊಂಡು ಬರುವಾಗ ಪುಣೆ ಇನ್ನೂ 30 ಕಿ.ಮೀ. ದೂರ ಇದ್ದಾಗ ಕಾರು ಬಂದ್ ಬಿತ್ತು. ಆಗ ಚಾಲಕ ಎಷ್ಟೇ ಯತ್ನಿಸಿದರೂ ಚಾಲು ಆಗಲಿಲ್ಲ. ಆಗ ಭೀಮಸೇನ ತಾವೇ ಗಾಡಿ ಸ್ಟಾರ್ಟ್ ಮಾಡಿಸಿ ಚಾಲಕನಿಗೆ ‘ಏನು ಕೆಲಸ ಮಾಡ್ತಿ. ಅದರ ಪರಿಪೂರ್ಣತೆ ಇರಲಿ’ ಎಂದರು.

‘ಎಲ್ಲ ಘರಾಣಾಗಳ ಒಳ್ಳೆಯದನ್ನು ಸ್ವೀಕರಿಸಿ ತನ್ನ ಛಾಪನ್ನು ಒತ್ತಿದರು. ಸಂಗೀತ ಎಂದರೆ ನಾಲ್ಕು ಸ್ವರವೆಂದು ಹಾಡುತ್ತಿದ್ದಿಲ್ಲ. ಸ್ವರಕ್ಕೆ ನಾಲ್ಕನೆಯ ಆಯಾಮ ಕೊಡುತ್ತಿದ್ದರು.ಇದು ಅವರ ಸ್ವರದ ತಾಕತ್ತು. ಭಕ್ತಿ ರಸದಲ್ಲಿ ಹಾಡಿದರೆ ಅವರ ಸ್ವರ ಮತ್ತಿಷ್ಟು ಅರಳುತ್ತಿತ್ತು. ಇದಕ್ಕೆಲ್ಲ ಅವರ ಅಜ್ಜಿ ರಮಾಬಾಯಿಯ ಸಂಗೀತ ಸಂಸ್ಕಾರ ಕಾರಣ.ಅಜ್ಜಿ ಪುರಂದರ ದಾಸರ ಕೀರ್ತನೆಗಳನ್ನು ಛಲೋ ಹಾಡುತ್ತಿದ್ದರು. ನಮ್ಮ ಅಜ್ಜ ಅಚ್ಯುತಾಚಾರ್ಯ ಕಟ್ಟಿ ಬಾಗಲಕೋಟೆ ಜಿಲ್ಲೆಯ ಬಾದಾಮಿಯಲ್ಲಿ ವತನದಾರರು ಆಗಿದ್ದರು. ಆಗಿನ ಕಾಲದಲ್ಲಿ ವರ್ಷಕ್ಕೆ ಲಕ್ಷ ರೂಪಾಯಿ ಉತ್ಪನ್ನ ಇತ್ತು. ಅಜ್ಜನಿಗೆ ನಮ್ಮ ತಂದೆಯ ಮೇಲೆ ಬಹಳ ಪ್ರೀತಿ.

‘1980ರ ಸುಮಾರಿಗೆ ಅವರ ಹೊಟ್ಟೆಯಲ್ಲಿ ಅಲ್ಸರ್ ಒಡೆದುಬಿಟ್ಟಿತ್ತು. ಅವರು ಉಳಿಯುವುದು ಕಷ್ಟಸಾಧ್ಯವಾಗಿತ್ತು. ಪುಣೆಯ ಕೆಇಎಂ ಆಸ್ಪತ್ರೆಯಲ್ಲಿ ಆಪರೇಷನ್ ಥಿಯೇಟರ್‌ಗೆ ಹೋಗುವಾಗ ನಾ ಹೊಂಟೆ ಎಂದಿದ್ದರು. ನಂತರ ಅವರು ಹುಷಾರಾದರು. ಫಿಜಿಯೋಥೆರಪಿ ಮಾಡುವಾಗ ಅಡ್ಡಾಡಬೇಕಿತ್ತು. ನಡೆಯಿರಿ ಎಂದಾಗ ಸುಮ್ಮನಿದ್ದರು. ಕನ್ನಡದಲ್ಲಿ ಅಂದಾಗ ತಕ್ಷಣ ಎದ್ದು ನಡೆದಾಡಿದರು. ಅವರಿಗೆ ಕನ್ನಡದ ಮೇಲೆ ಅಂಥ ಪ್ರೀತಿಯಿತ್ತು.

ಅವರ ಕುರಿತು ಎಷ್ಟೊಂದು ನೆನಪುಗಳಿವೆ. ಯಾವುದನ್ನು ಹೇಳಲಿ. ಅವರ ಪ್ರಚಂಡ ಇಚ್ಛಾಶಕ್ತಿ, ಉತ್ತುಂಗ ಕಲ್ಪಕತೆ ಹಾಗೂ ಭಾವನೆಗಳಲ್ಲಿ ಮಿಂದ ಖರೇ ಸೂರ್ ಎಂದರೇನೇ ಭೀಮಣ್ಣ...
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT