ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೆಬ್ರುವರಿ 10ರೊಳಗೆ ಕೆರೆ ಭರ್ತಿ

Last Updated 6 ಜನವರಿ 2012, 6:15 IST
ಅಕ್ಷರ ಗಾತ್ರ

ರಾಯಚೂರು: ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ದನಕರುಗಳಿಗೆ ಮೇವು ಮತ್ತು ನೀರು ಹಾಗೂ ಜನತೆಗೆ ಕುಡಿಯುವ ನೀರು ಸಮಸ್ಯೆ ಆಗದೇ ಇರುವ ರೀತಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.
 
ಫೆಬ್ರುವರಿ 10ರೊಳಗೆ ಕುಡಿವ ನೀರಿನ ಕೆರೆಗಳನ್ನು ನೀರಾವರಿ ಕಾಲುವೆ ಮುಖಾಂತರ ಭರ್ತಿ ಮಾಡಿಕೊಳ್ಳಲು ಆದೇಶಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಯೋಗೇಂದ್ರ ತ್ರಿಪಾಠಿ ಹೇಳಿದರು.

ಬರ ಪರಿಸ್ಥಿತಿ ನಿರ್ವಹಣೆ ಕುರಿತು ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಭವನದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಈಗಾಗಲೇ ಅನುಷ್ಠಾನದಲ್ಲಿರುವ ಕುಡಿವ ನೀರು ಪೂರೈಕೆ ಯೋಜನೆಗಳು ಮಾರ್ಚ್‌ಗಿಂತ ಮುಂಚಿತವಾಗಿಯೇ ಪೂರ್ಣಗೊಳಿಸಲು ಆಶ್ವಾಸನೆಯನ್ನು ಎಂಜಿನಿಯರ್‌ಗಳು ನೀಡಿದ್ದಾರೆ. ಕುಡಿವ ನೀರು ಪೂರೈಕೆ ಯೋಜನೆ 42 ಕಾಮಗಾರಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವಲ್ಲಿ ಜೆಸ್ಕಾಂ ವಿಳಂಬ ಮಾಡಿದೆ.. ಸರಕು-ಸರಂಜಾಮು ಪೂರೈಕೆ ಸಮಸ್ಯೆಯಿಂದ ವಿಳಂಬ ಎಂಬ ಕಾರಣ ನೀಡಿದೆ.  ಇವೆಲ್ಲ ನಿಭಾಯಿಸಿ ಯೋಜನೆಗೆ ತುರ್ತು ವಿದ್ಯುತ್ ಸಂಪರ್ಕ ಕಲ್ಪಿಸಿ ಅನುಷ್ಠಾನಗೊಳಿಸಲು ಆದೇಶಿಸಲಾಗಿದೆ ಎಂದು ಹೇಳಿದರು.

ಮಳೆ ಆಶ್ರಯಿಸಿದ ಜಮೀನಿನಲ್ಲಿ ಬೆಳೆದ ಬೆಳೆ ಶೇ 40ಕ್ಕಿಂತ ಹೆಚ್ಚು ನಷ್ಟವಾಗಿದೆ. ಬೆಳೆ ನಷ್ಟ ಮತ್ತು ಪರಿಹಾರದ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

ದನಕರುಗಳಿಗೆ ಮೇವಿನ ಕೊರತೆ ಆಗದಂತೆ ನೋಡಿಕೊಳ್ಳಲು ಈಗಾಗಲೇ ಜಿಲ್ಲಾಡಳಿತವು ಮೇವು ಬೀಜದ ಕಿಟ್‌ಗಳನ್ನು ವಿತರಣೆ ಮಾಡಿದೆ. ಹೊರ ಜಿಲ್ಲೆಗೆ ಈ ಜಿಲ್ಲೆಯಿಂದ ಮೇವು ಸಾಗಾಟ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ ಎಂದು ತಿಳಿಸಿದರು.

ಹಣದ ಕೊರತೆ ಇಲ್ಲ: ಬರ ಪರಿಸ್ಥಿತಿ ನಿಭಾಯಿಸಲು ಹಣ ಕೊರತೆ ಇಲ್ಲ. ಜಿಲ್ಲಾಡಳಿತದ ಬಳಿ ಒಂದುವರೆ ಕೋಟಿ ಇದೆ. ರಾಜ್ಯ ಸರ್ಕಾರವು ಎರಡು ಕೋಟಿ ದೊರಕಿಸಿದೆ. ಜಿಲ್ಲಾ ಉಸ್ತುವಾರಿ ಸಚಿವರು ಹೆಚ್ಚಿನ ನೆರವು ದೊರಕಿಸಲು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ ಎಂದು ಹೇಳಿದರು.

ಉದ್ಯೋಗ ಖಾತ್ರಿ ಯೋಜನೆ ರಾಷ್ಟ್ರವ್ಯಾಪಿ ವರ್ಷಪೂರ್ತಿ ಜಾರಿಯಲ್ಲಿರುವ ಯೋಜನೆ. ಕೆಲಸ ಬಯಸುವವರಿಗೆ ಈ ಯೋಜನೆಯಡಿ ಕೆಲಸ ಕೊಡಲಾಗುತ್ತದೆ. ಬರಗಾಲ ಪರಿಸ್ಥಿತಿಯೇ ಇರಬೇಕು ಎಂಬುದಿಲ್ಲ. ಈಗ ಬರಗಾಲ ಇದೆ. ಕೆಲಸ ಬೇಕು ಎಂದು ಬಯಸುವವರಿಗೆ ಜಿಲ್ಲಾ ಪಂಚಾಯತ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ದೊರಕಿಸುತ್ತದೆ ಎಂದರು.

ಉದ್ಯೋಗ ಖಾತರಿ ಯೋಜನೆಯಡಿ ರೂಪಿಸಿದ ನಿಯಮಾವಳಿ ಪ್ರಕಾರ ನಿರ್ದಿಷ್ಟ ಪಡಿಸಿದಷ್ಟು ಹಣವನ್ನು ಕೆಲಸಗಾರರಿಗೆ ಕೊಡಬೇಕಾಗುತ್ತದೆ. ಅದನ್ನು ಮೀರಿ ಹಣ ಪಾವತಿ ಅಸಾಧ್ಯ. ತಮ್ಮ ದುಡಿಮೆಗೆ ಇನ್ನೂ ಹೆಚ್ಚಿನ ಹಣ ದೊರಕುತ್ತದೆ ಎಂದು ಜನತೆ ಬೇರೆ ಕಡೆ ಗುಳೇ ಹೋದರೆ ಅದು ಅವರಿಷ್ಟ ಮತ್ತು ಅವರ ಸ್ವಾತಂತ್ರ್ಯ ಅಷ್ಟೇ. ಆದರೆ, ಇಲ್ಲಿಯೇ ಇದ್ದು ಕೆಲಸವಿಲ್ಲ ಎಂಬುವವರಿಗೆ ಕೆಲಸ ಕೊಡುವ ವ್ಯವಸ್ಥೆ ಮಾಡಲಾಗುತ್ತದೆ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ವಿ ಅನ್ಬುಕುಮಾರ, ಜಿಪಂ ಸಿಇಓ ಮನೋಜಕುಮಾರ ಜೈನ್, ಹೆಚ್ಚುವರಿ ಜಿಲ್ಲಾಧಿಕಾರಿ ರಾಧಾಕೃಷ್ಣ ಮದನಕರ್, ಹಿರಿಯ ಸಹಾಯಕ ಆಯುಕ್ತರಾದ ತಿಮ್ಮಪ್ಪ ಹಾಗೂ ಉಜ್ವಲ್ ಘೋಷ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT