ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೈನಲ್ ಪ್ರವೇಶದ ಆಸೆ ಜೀವಂತ

ಕ್ರಿಕೆಟ್: ಭಾರತದ ಬೌಲಿಂಗ್ ದಾಳಿಗೆ ಬಾಗಿದ ವಿಂಡೀಸ್, ಕೊಹ್ಲಿ ಪಡೆಗೆ ಬೋನಸ್ ಅಂಕ
Last Updated 6 ಜುಲೈ 2013, 19:59 IST
ಅಕ್ಷರ ಗಾತ್ರ

ಪೋರ್ಟ್ ಆಫ್ ಸ್ಪೇನ್ (ಪಿಟಿಐ): ಸತತ ಎರಡು ಪಂದ್ಯಗಳಲ್ಲಿ ಅನುಭವಿಸಿದ ಸೋಲಿನ ಸಂಕಷ್ಟದಿಂದ ಭಾರತ ತಂಡ ಹೊರ ಬಂದಿದೆ. ತ್ರಿಕೋನ ಏಕದಿನ ಕ್ರಿಕೆಟ್ ಸರಣಿಯ ವೆಸ್ಟ್ ಇಂಡೀಸ್ ಎದುರಿನ `ಮಾಡು ಇಲ್ಲವೇ ಮಡಿ' ಹೋರಾಟದಲ್ಲಿ 102 ರನ್ ಗೆಲುವು ಪಡೆದಿರುವ ವಿರಾಟ್ ಕೊಹ್ಲಿ ಬಳಗ ಫೈನಲ್ ಪ್ರವೇಶಿಸುವ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.

ಕ್ವೀನ್ಸ್ ಪಾರ್ಕ್ ಓವಲ್ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ವಿಂಡೀಸ್ ಫೀಲ್ಡಿಂಗ್ ಆರಿಸಿಕೊಂಡಿತು. ಕೊಹ್ಲಿ ಶತಕದ ಬಲದಿಂದ ಭಾರತ ನಿಗದಿತ ಓವರ್‌ಗಳಲ್ಲಿ ಏಳು ವಿಕೆಟ್‌ಗೆ 311 ರನ್ ಕಲೆ ಹಾಕಿತ್ತು. ವಿಂಡೀಸ್ ಇನಿಂಗ್ಸ್ ಆರಂಭವಾಗಿ ಹತ್ತು ಓವರ್ ಮುಗಿಯಲು ಒಂದು ಎಸೆತ ಬಾಕಿ ಇರುವಾಗ ಮಳೆ ಸುರಿಯಿತು. ಆದ್ದರಿಂದ ಆತಿಥೇಯರಿಗೆ 39 ಓವರ್‌ಗಳಲ್ಲಿ 274 ರನ್ ಗಳಿಸುವ ಪರಿಷ್ಕೃತ ಗುರಿ ನೀಡಲಾಗಿತ್ತು. ಆದರೆ, ಭಾರತದ ದಾಳಿಯನ್ನು ಎದುರಿಸಿ ನಿಲ್ಲಲಾಗದೇ ಪರದಾಡಿದ ವಿಂಡೀಸ್ 34 ಓವರ್‌ಗಳಲ್ಲಿ 171 ರನ್ ಕಲೆ ಹಾಕುವ ಹೊತ್ತಿಗೆ ಎಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡಿತು.

ಈ ಪಂದ್ಯದಲ್ಲಿ ಭಾರತಕ್ಕೆ ಗೆಲುವು ಅನಿವಾರ್ಯವಾಗಿತ್ತು. ಇದರ ಜೊತೆಗೆ ಒಂದು ಬೋನಸ್ ಅಂಕವನ್ನೂ ಬಾಚಿಕೊಂಡ ಕಾರಣ, ಫೈನಲ್ ಪ್ರವೇಶದ ಕನಸಿಗೆ ಬಲ ಬಂದಿದೆ. ಹಿಂದಿನ ಪಂದ್ಯದಲ್ಲಿ ಶ್ರೀಲಂಕಾ ತಂಡ ಭಾರತವನ್ನು ಮಣಿಸಿ ಬೋನಸ್ ಪಾಯಿಂಟ್‌ನೊಂದಿಗೆ ಐದು ಅಂಕ ಗಳಿಸಿತ್ತು. ಭಾರತ ಕೂಡಾ ಈಗ ಇಷ್ಟೇ ಅಂಕ ಗಳಿಸಿರುವುದರಿಂದ ಫೈನಲ್ ಪ್ರವೇಶಿಸುವ ಸ್ಪರ್ಧೆಯ ಪೈಪೋಟಿ ಹೆಚ್ಚಿದೆ.

ಮಿಂಚಿದ ವೇಗಿಗಳು: ಸವಾಲಿನ ಮೊತ್ತವನ್ನು ಬೆನ್ನಟ್ಟುವ ಹಾದಿಯ ಆರಂಭದಲ್ಲಿಯೇ ಎಡವಿದ ವಿಂಡೀಸ್ ಬ್ಯಾಟ್ಸ್‌ಮನ್‌ಗಳಿಗೆ ಇನ್ನಿಲ್ಲದಂತೆ ಕಾಡಿದ್ದು ಭಾರತದ ವೇಗದ ಬೌಲರ್‌ಗಳು. ಮೂರನೇ ಓವರ್‌ನ ಎರಡನೇ ಎಸೆತದಲ್ಲಿ ಕ್ರಿಸ್ ಗೇಲ್ (10) ವಿಕೆಟ್ ಪಡೆದ ಭುವನೇಶ್ವರ್ ಕುಮಾರ್ ಭಾರತಕ್ಕೆ ಆರಂಭಿಕ ಮೇಲುಗೈ ತಂದುಕೊಟ್ಟರು. ಮೊದಲಿನಿಂದಲೂ ಬಿಗಿ ಹಿಡಿದ ಸಾಧಿಸಿದ ಬೌಲರ್‌ಗಳು ನಂತರವೂ ವಿಂಡೀಸ್‌ಗೆ ಚೇತರಿಸಿಕೊಳ್ಳಲು ಅವಕಾಶ ನೀಡಲಿಲ್ಲ.

ಗೇಲ್ ಔಟಾದ ಎರಡು ಓವರ್‌ಗಳ ಅಂತರದಲ್ಲಿ ಡರೆನ್ ಬ್ರಾವೊ (1) ಕ್ರೀಸ್‌ಗೆ ಬಂದು ಹೋಗುವ ಶಾಸ್ತ್ರ ಮುಗಿಸಿದರು. ಮಳೆ ಶುರುವಾಗುವ ಹೊತ್ತಿಗಾಗಲೇ ಎರಡು ವಿಕೆಟ್ ಕಳೆದುಕೊಂಡಿದ್ದ ತಂಡಕ್ಕೆ ಆರಂಭಿಕ ಬ್ಯಾಟ್ಸ್‌ಮನ್ ಜಾನ್ಸನ್ ಚಾರ್ಲ್ಸ್ (45, 39 ಎಸೆತ, 6ಬೌಂಡರಿ, 2 ಸಿಕ್ಸರ್) ಹಾಗೂ  ಮರ್ಲಾನ್ ಸ್ಯಾಮುಯೆಲ್ಸ್ (6) ಚೇತರಿಕೆ ನೀಡುವ ಪ್ರಯತ್ನ ಮಾಡಿದರು.

ಸ್ಯಾಮುಯೆಲ್ಸ್ ಎರಡಂಕಿಯ ಮೊತ್ತ ಮುಟ್ಟಲಿಲ್ಲವಾದರೂ ಚಾರ್ಲ್ಸ್‌ಗೆ ಉತ್ತಮ ಬೆಂಬಲ ನೀಡಿದರು. ಈ ಜೋಡಿ ಮೂರನೇ ವಿಕೆಟ್ ಜೊತೆಯಾಟದಲ್ಲಿ 39 ರನ್ ಕಲೆ ಹಾಕಿತು. ಆದರೆ, ಇಶಾಂತ್ ಶರ್ಮ ಎಸೆತದಲ್ಲಿ ಸ್ಯಾಮುಯೆಲ್ಸ್ ಔಟಾದರು. ಈ ವೇಳೆ ವಿಂಡೀಸ್ ಮೊತ್ತ 11.6 ಓವರ್‌ಗಳಲ್ಲಿ 64. ಆದರೆ, ಮುಂದಿನ 43 ರನ್ ಗಳಿಸುವ ಅಂತರದಲ್ಲಿ ಆತಿಥೇಯರು ಐದು ವಿಕೆಟ್ ಕಳೆದುಕೊಂಡರು. ಇದು ವಿಂಡೀಸ್ ಸೋಲಿಗೆ ಮುನ್ನುಡಿಯಾಯಿತು.

ಲಂಕಾ ಎದುರಿನ ಹಿಂದಿನ ಪಂದ್ಯದಲ್ಲಿ ಸಾಕಷ್ಟು ರನ್ ಬಿಟ್ಟುಕೊಟ್ಟಿದ್ದ ಭಾರತದ ಬೌಲರ್‌ಗಳು ಹಳೆಯ ತಪ್ಪನ್ನು ಪುನರಾವರ್ತಿಸಲಿಲ್ಲ. ಇಶಾಂತ್ ಶರ್ಮ, ರವೀಂದ್ರ ಜಡೇಜ ತಲಾ ಎರಡು ವಿಕೆಟ್ ಪಡೆದರೆ, ಭುವನೇಶ್ವರ್ ಮತ್ತು ಉಮೇಶ್ ಯಾದವ್ ತಲಾ ಮೂರು ವಿಕೆಟ್ ಉರುಳಿಸಿದರು.

ಜೊತೆಯಾಟಕ್ಕೆ ಲಭಿಸದ ಫಲ: ಬೇಗನೆ  ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ವಿಂಡೀಸ್ ತಂಡಕ್ಕೆ ಸುನಿಲ್ ನಾರಾಯಣ್ (21) ಹಾಗೂ ಕೆಮರ್ ರೋಚ್ (34) ಜೀವ ತುಂಬುವ ಪ್ರಯತ್ನ ಮಾಡಿದರು. ಈ ಜೋಡಿ ಒಂಬತ್ತನೇ ವಿಕೆಟ್ ಜೊತೆಯಾಟದಲ್ಲಿ 58 ರನ್ ಕಲೆ ಹಾಕಿದ್ದೇ ಇದಕ್ಕೆ ಸಾಕ್ಷಿ. ಆದರೆ, ರವೀಂದ್ರ ಜಡೇಜ 34ನೇ ಓವರ್‌ನ ಕೊನೆಯ ಎರಡು ಎಸೆತಗಳಲ್ಲಿ ಸುನಿಲ್ ನಾರಾಯಣ್ ಮತ್ತು ಕೆಮರ್ ರೋಚ್ ವಿಕೆಟ್ ಉರುಳಿಸಿ ವಿಂಡೀಸ್ ಹೋರಾಟಕ್ಕೆ ಅಂತ್ಯ ಹಾಡಿದರು.

                                                  ಸ್ಕೋರ್ ವಿವರ

ಭಾರತ 50 ಓವರ್‌ಗಳಲ್ಲಿ 7 ವಿಕೆಟ್‌ಗೆ 311
ರೋಹಿತ್ ಶರ್ಮ ಸಿ ದಿನೇಶ್ ರಾಮ್ದಿನ್ ಬಿ ಟಿನೊ ಬಿಸ್ಟ್  46
ಶಿಖರ್ ಧವನ್ ಸಿ ಡರೆನ್ ಬ್ರಾವೊ ಬಿ ಕೆಮರ್ ರೋಚ್  69
ವಿರಾಟ್ ಕೊಹ್ಲಿ ಸಿ ಡರೆನ್ ಸಮಿ ಬಿ ಡ್ವೇನ್ ಬ್ರಾವೊ  102
ಸುರೇಶ್ ರೈನಾ ಸಿ ಡರೆನ್ ಸಮಿ ಬಿ ಮರ್ಲಾನ್ ಸ್ಯಾಮುಯೆಲ್ಸ್  10
ದಿನೇಶ್ ಕಾರ್ತಿಕ್ ಸಿ ದಿನೇಶ್ ರಾಮ್ದಿನ್ ಬಿ ಟಿನೊ ಬಿಸ್ಟ್  06
ಮುರಳಿ ವಿಜಯ್ ಸಿ ಜಾನ್ಸನ್ ಚಾರ್ಲ್ಸ್ ಬಿ ಕೀರನ್ ಪೊಲಾರ್ಡ್  27
ರವೀಂದ್ರ ಜಡೇಜ ರನ್‌ಔಟ್ (ಡೆವೊನ್ ಸ್ಮಿತ್, ಬದಲಿ ಆಟಗಾರ/ಡ್ವೇನ್ ಬ್ರಾವೊ)  02
ಆರ್. ಅಶ್ವಿನ್ ಔಟಾಗದೆ  25
ಇತರೆ: (ಬೈ-4, ಲೆಗ್ ಬೈ -7, ವೈಡ್-13)  24
ವಿಕೆಟ್ ಪತನ: 1-123 (ಧವನ್; 23.1), 2-141 (ರೋಹಿತ್; 29.1), 3-156 (ರೈನಾ; 32.4), 4-168 (ಕಾರ್ತಿಕ್; 35.1), 5-210 (ವಿಜಯ್; 39.5), 6-221 (ಜಡೇಜ; 41.1), 7-311 (ಕೊಹ್ಲಿ; 49.6).
ಬೌಲಿಂಗ್: ಡರೆನ್ ಸೆಮಿ 8-1-28-0, ಕೆಮರ್ ರೋಚ್ 10-2-69-1, ಟಿನೊ ಬೆಸ್ಟ್ 10-0-51-2, ಡ್ವೇನ್ ಬ್ರಾವೊ 7-0-57-1, ಸುನಿಲ್ ನಾರಾಯಣ್ 5-1-35-0, ಮರ್ಲಾನ್ ಸ್ಯಾಮುಯೆಲ್ಸ್ 8-0-39-1, ಕೀರನ್ ಪೊಲಾರ್ಡ್ 2-0-21-1.

ವೆಸ್ಟ್ ಇಂಡೀಸ್ 34 ಓವರ್‌ಗಳಲ್ಲಿ 171
ಕ್ರಿಸ್ ಗೇಲ್ ಸಿ ದಿನೇಶ್ ಕಾರ್ತಿಕ್ ಬಿ ಭುವನೇಶ್ವರ್ ಕುಮಾರ್  10
ಜಾನ್ಸನ್ ಚಾರ್ಲ್ಸ್ ಸಿ ಸುರೇಶ್ ರೈನಾ ಬಿ ಇಶಾಂತ್ ಶರ್ಮ  45
ಡರೆನ್ ಬ್ರಾವೊ ಸಿ ಅಶ್ವಿನ್ ಬಿ ಭುವನೇಶ್ವರ್ ಕುಮಾರ್  01
ಮರ್ಲಾನ್ ಸ್ಯಾಮುಯೆಲ್ಸ್ ಸಿ ದಿನೇಶ್ ಕಾರ್ತಿಕ್ ಬಿ ಇಶಾಂತ್ ಶರ್ಮ  06
ಕೀರನ್ ಪೊಲಾರ್ಡ್ ಸಿ ಅಶ್ವಿನ್ ಬಿ ಭುವನೇಶ್ವರ್ ಕುಮಾರ್  00
ಡ್ವೇನ್ ಬ್ರಾವೊ ಎಲ್‌ಬಿಡಬ್ಲ್ಯು ಬಿ ಉಮೇಶ್ ಯಾದವ್  14
ದಿನೇಶ್ ರಾಮ್ದಿನ್ ಸಿ ಭುವನೇಶ್ವರ್ ಕುಮಾರ್ ಬಿ ಉಮೇಶ್ ಯಾದವ್  09
ಡರೆನ್ ಸಮಿ ಎಲ್‌ಬಿಡಬ್ಲ್ಯು ಬಿ ಉಮೇಶ್ ಯಾದವ್  12
ಕೆಮರ್ ರೋಚ್ ಬಿ ರವೀಂದ್ರ ಜಡೇಜ  34
ಸುನಿಲ್ ನಾರಾಯಣ್ ಸಿ ಇಶಾಂತ್ ಶರ್ಮ ಬಿ ರವೀಂದ್ರ ಜಡೇಜ  21
ಟಿನೊ ಬಿಸ್ಟ್ ಔಟಾಗದೆ  00
ಇತರೆ: ( ಬೈ-1, ಲೆಗ್ ಬೈ-10, ವೈಡ್-8)  19
ವಿಕೆಟ್ ಪತನ: 1-14 (ಗೇಲ್; 2.2), 2-25 (ಡರೆನ್ ಬ್ರಾವೊ; 4.6), 3-64 (ಸ್ಯಾಮುಯೆಲ್ಸ್; 11.6), 4-65 (ಪೊಲಾರ್ಡ್; 12.4), 5-69 (ಚಾರ್ಲ್ಸ್; 13.3), 6-91 (ರಾಮ್ದಿನ್; 20.1), 7-108 (ಡ್ವೇನ್ ಬ್ರಾವೊ; 22.3), 8-113 (ಸಮಿ; 24.3), 9-171 (ನಾರಾಯಣ್; 33.5), 10-171 (ರೋಚ್; 33.6).
ಬೌಲಿಂಗ್: ಭುವನೇಶ್ವರ್ ಕುಮಾರ್ 8-1-29-3, ಉಮೇಶ್ ಯಾದವ್ 8-1-32-3, ಇಶಾಂತ್ ಶರ್ಮ 7-1-30-2, ರವೀಂದ್ರ ಜಡೇಜ 7-1-44-2,    ಆರ್. ಅಶ್ವಿನ್ 4-0-25-0.

ಫಲಿತಾಂಶ: ಡಕ್ವರ್ಥ್ ಲೂಯಿಸ್ ನಿಯಮದ ಪ್ರಕಾರ ಭಾರತಕ್ಕೆ 102 ರನ್ ಜಯ ಹಾಗೂ ಐದು ಪಾಯಿಂಟ್ (ಒಂದು ಬೋನಸ್).
ಪಂದ್ಯ ಶ್ರೇಷ್ಠ: ವಿರಾಟ್ ಕೊಹ್ಲಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT