ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ಯಾಶನ್ ಲೋಕದ ಏಕಲವ್ಯ

ನನ್ನ ಕಥೆ–ಸಯ್ಯದ್ ರಿಜ್ವಾನ್ ಉದ್ದಿನ್
Last Updated 1 ಜನವರಿ 2014, 19:30 IST
ಅಕ್ಷರ ಗಾತ್ರ

ಬೆಂಗಳೂರಿನ ಭಾರತಿ ನಗರದಲ್ಲಿ ವಾಸವಿರುವ ಚಿಕ್ಕ ಕುಟುಂಬ ನಮ್ಮದು. ಅಪ್ಪ, ಅಮ್ಮ ಜತೆಗೊಬ್ಬ ತಮ್ಮ ಇದಿಷ್ಟು ನಮ್ಮ ಸಂಸಾರ. ಶಿಕ್ಷಣದ ಕುರಿತು ಹೇಳಬೇಕೆಂದರೆ ಪದವಿ ಅಪೂರ್ಣ... ಪದವಿಯಂತೆ ಬದುಕನ್ನು ಅಪೂರ್ಣವಾಗಿಸಲು ಸಾಧ್ಯವಿಲ್ಲ ನೋಡಿ, ಅದಕ್ಕಾಗಿ ಅರ್ಥಪೂರ್ಣವಾಗಿ ಬದುಕಬೇಕೆಂಬ ಯೋಚನೆಯಲ್ಲಿದ್ದ ನನಗೆ ಹೊಳೆದದ್ದೆ ಬಟ್ಟೆ ವ್ಯಾಪಾರ.

ಸರಿ. ಕಮರ್ಷಿಯಲ್ ಸ್ಟ್ರೀಟ್‌ನಲ್ಲಿ 1994ರಲ್ಲಿ ಬಟ್ಟೆ ಅಂಗಡಿ ಪ್ರಾರಂಭಿಸಿದೆ. ನಿಮಗೆ ನೆನಪಿರಲಿ, ಆಗ ನಮ್ಮ ಜನರ ಮೇಲೆ ಈಗಿನಷ್ಟು ಪಾಶ್ಚಾತ್ಯ ಉಡುಪುಗಳ ಪ್ರಭಾವವಿರಲಿಲ್ಲ. ಆಗಷ್ಟೇ, ಅದರ ಗಾಳಿ ಇತ್ತ ಬೀಸಲು ಪ್ರಾರಂಭಿಸಿತ್ತು. ಅದು ನನಗೆ ‘ಗಾಳಿ ಬಿಟ್ಟಾಗ ತೂರಿಕೊ’ ಎನ್ನುವ ಗಾದೆಯನ್ನು ಪುನಃ ಪುನಃ ನೆನಪಿಸುತ್ತಿತ್ತು.

ಏಕೆಂದರೆ ಆ ದಿನಗಳಲ್ಲಿ ಬಗೆ ಬಗೆ ವಿನ್ಯಾಸದ ಉಡುಪುಗಳು ಎಲ್ಲಾ ಕಡೆ ದೊರೆಯುತ್ತಿರಲಿಲ್ಲ. ನಮ್ಮ ಬಳಿ ಕೂಡ. ಆಗ ಹೊಸ ಹೊಸ ವಿನ್ಯಾಸದ ಉಡುಪುಗಳನ್ನು ಅರಸಿ ನನ್ನ ಅಂಗಡಿಗೆ ಬರುತ್ತಿದ್ದ ಬಹುತೇಕ ಗಿರಾಕಿಗಳು ಸಿನಿಮಾ ನಟ-ನಟಿಯರು ಹಾಗೂ ಕಾಲೇಜು ವಿದ್ಯಾರ್ಥಿಗಳಾಗಿದ್ದರು.

ಪ್ರತಿ ಬಾರಿ ಅವರ ಬೇಡಿಕೆಗೆ ‘ಅದಿಲ್ಲ’, ‘ಇದಿಲ್ಲ’ ಎಂದು ನಿರಾಶೆಗೊಳಿಸುವುದು ಸರಿಯಲ್ಲ ಎಂಬ ನಿರ್ಧಾರ ನನ್ನಲ್ಲಿ ಮೂಡಿದ್ದೇ ತಡ, ನನಗೆ ಗೊತ್ತಿಲ್ಲದೆಯೇ ನನ್ನೊಳಗೊಬ್ಬ ಕಾಸ್ಟೂಮ್ ಡಿಸೈನರ್ ಎಚ್ಚೆತ್ತುಕೊಂಡುಬಿಟ್ಟಿದ್ದ. ಎಲ್ಲೋ ಕಂಡ, ಕೇಳಿದ ಉಡುಗೆ ಹುಡುಕಿಕೊಂಡು ಬರುತ್ತಿದ್ದ ಗಿರಾಕಿಗಳಿಂದ ಸ್ವಲ್ಪ ಸಮಯ ಪಡೆದು ನಾನು ನನ್ನದೇ ಆದ ಕಲ್ಪನೆಯಲ್ಲಿ ಅವುಗಳನ್ನು ಸಿದ್ಧಪಡಿಸಿ, ಗ್ರಾಹಕರನ್ನು ತೃಪ್ತಿಪಡಿಸಲು ಪ್ರಯತ್ನಿಸುತ್ತಿದ್ದೆ.

ನನ್ನ ಆ ಪ್ರಯತ್ನ ಕೆಲ ದಿನಗಳಲ್ಲೇ ಯಶಸ್ಸು ಗಳಿಸುವ ಎಲ್ಲ ಲಕ್ಷಣಗಳು ಕಂಡುಬಂದವು. ಏಕೆಂದರೆ, ನಾನು ವಿನ್ಯಾಸಗೊಳಿಸಿದ ಉಡುಗೆಗಳಿಗೆ ಅನೇಕ ಸ್ಪರ್ಧೆಗಳಲ್ಲಿ ಬಹುಮಾನಗಳು ದೊರೆಯುವ ಜತೆಗೆ ಅನೇಕ ಕಲಾವಿದರು ನನ್ನ ಕಾಯಂ ಗಿರಾಕಿಗಳಾದರು.
ಇಷ್ಟು ಸಾಕಲ್ಲವೇ, ನಾನು ವಸ್ತ್ರ ವಿನ್ಯಾಸಕ ಆಗಿ ವೃತ್ತಿ ಜೀವನ ಪ್ರಾರಂಭಿಸಲು. 1999ರಲ್ಲಿ ಬಟ್ಟೆ ವ್ಯಾಪಾರ ಬಿಟ್ಟು ಸಂಪೂರ್ಣವಾಗಿ ಡಿಸೈನರ್ ಆಗಿ ಬದಲಾಗಿಯೇ ಬಿಟ್ಟೆ.

ಆರಂಭದಲ್ಲೇ ಅಪಶಕುನ ಎನ್ನುವಂತೆ ಮನೆಯವರು ‘ಬಂಗಾರದಂತಹ ಬಟ್ಟೆ ವ್ಯಾಪಾರ ಬಿಡಬೇಡ. ಫ್ಯಾಶನ್‌ಗೆ ಭವಿಷ್ಯವಿಲ್ಲ ಬಿಟ್ಟಾಕು’ ಎಂದು ವರಾತ ತೆಗೆದರು. ಆದರೆ, ನನ್ನ ಅಂತರಾತ್ಮ ನನಗೆ ಕೂಗಿ ಹೇಳುತಿತ್ತು ‘ಇದರಲ್ಲಿ ನಿನಗೆ ಯಶಸ್ಸು ಅಡಗಿದೆ ಬಿಡಬೇಡ’ ಎಂದು. ಕೊನೆಗೂ ನಾನು ನನ್ನ ದಾರಿಯಲ್ಲಿ ಮುನ್ನಡೆದು ಬಿಟ್ಟೆ.

ಫ್ಯಾಶನ್ ದಾರಿಗೇನೊ ಇಳಿದೆ ಮುಂದೆ  ಮಾರ್ಗದರ್ಶಕರು ಯಾರು? ಗೊತ್ತಿಲ್ಲ! ‘ಬಂದದ್ದು ಬರಲಿ, ಭಗವಂತನ ದಯ ವೊಂದಿರಲಿ’ ಎಂಬ ಮಂತ್ರ ಜಪಿಸುತ್ತ ವಸ್ತ್ರ ವಿನ್ಯಾಸದ ಜತೆಗೆ ಫ್ಯಾಶನ್ ಕೊರಿಯೋಗ್ರಫಿ ದಾರಿಯನ್ನು ಕೂಡ ಪ್ರವೇಶಿಸಿ ಗಾಡ್‌ಫಾದರ್ ಇಲ್ಲದ ‘ಏಕಲವ್ಯ’ನಂತೆ ನನ್ನದೇ ಆದ ನೆಲೆ ಕಂಡುಕೊಂಡಿದ್ದೇನೆ.

ಈ ನಡುವೆ ಶಿವರಾಜ್ ಕುಮಾರ್ ಅಭಿನಯದ ಇಂದ್ರಧನುಷ್ ಚಿತ್ರ ಸೇರಿದಂತೆ ಕನ್ನಡದ ಸುಮಾರು 10 ಚಿತ್ರಗಳಿಗೆ  ವಸ್ತ್ರ ವಿನ್ಯಾಸಕನಾಗಿ ಕಾರ್ಯ ನಿರ್ವಹಿಸಿದ್ದೇನೆ. ಫ್ಯಾಶನ್ ಕೊರಿಯೋಗ್ರಾಫರ್ ಆಗಿ ಈವರೆಗೆ ದಕ್ಷಿಣ ಭಾರತದಾದ್ಯಂತ ಮಿಸ್ ಸೌತ್ ಇಂಡಿಯಾ ಸೇರಿದಂತೆ ಹಲ ವಾರು ಕಂಪೆನಿಗಳ ಉತ್ಪನ್ನಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಸುಮಾರು 200ಕ್ಕೂ ಅಧಿಕ ಪ್ರದರ್ಶನ ನೀಡಿದ್ದೇನೆ.

ಒಂದು ಪ್ರದರ್ಶನಕ್ಕಿಂತ ಮತ್ತೊಂದು ಚೆನ್ನಾಗಿರಲೇಬೇಕು  ಎನ್ನುವುದು ನನ್ನ ಸಿದ್ಧಾಂತ. ಅದನ್ನು ನಾನು ಚಾಚೂ ತಪ್ಪದೇ ಪಾಲಿಸಿಕೊಂಡು ಬಂದವ. ನನ್ನ ಅಭಿಪ್ರಾಯದಲ್ಲಿ ಫ್ಯಾಶನ್ ಕೊರಿಯೋಗ್ರಫಿ ಎನ್ನುವುದು ‘ಪಾಕಸೂತ್ರ’ದಂತೆ. ಅದರಲ್ಲಿ ಯಾವ ಪದಾರ್ಥವೂ ಹೆಚ್ಚು ಕಡಿಮೆಯಾಗಬಾರದು. ಹಾಗೇನಾದರೂ ಆದರೆ ಅಡುಗೆಯ ರುಚಿ ಕೆಟ್ಟು ಹೋಗುತ್ತದೆ.

ಅಂತೆಯೇ ಓರ್ವ ಫ್ಯಾಶನ್ ಕೊರಿಯೋಗ್ರಾಫರ್‌ಗೆ ವೇದಿಕೆ, ಸಂಗೀತ, ವಸ್ತ್ರವಿನ್ಯಾಸ, ಬೆಳಕಿನ ವಿನ್ಯಾಸ, ಪ್ರಸಾಧನ ಕಲೆ, ಕೂದಲ ವಿನ್ಯಾಸ, ಆಭರಣ, ಪಾದರಕ್ಷೆ, ಬಣ್ಣ, ದೇಹ ಭಾಷೆ, ಮಾತನಾಡುವ ಕೌಶಲ ಹೀಗೆ... ಹತ್ತು ಹಲವು ವಿಷಯಗಳ ಸಂಪೂರ್ಣ ಪರಿಜ್ಞಾನವಿರಬೇಕು. ಆಗಷ್ಟೇ ಆತ ಯಶಸ್ಸು ಗಳಿಸಲು ಸಾಧ್ಯ. ನನಗೆ ಮಕ್ಕಳ ಫ್ಯಾಶನ್ ಶೋ ಎಂದರೆ ತುಂಬಾ ಇಷ್ಟ.

ಆದರೆ ಇದಕ್ಕೆ ಮಕ್ಕಳನ್ನು ತರಬೇತಿಗೊಳಿಸುವುದು ಮಾತ್ರ ಅಷ್ಟೇ ಕಷ್ಟ. ದೊಡ್ಡವರಾದರೆ ಒಮ್ಮೆ ಹೇಳಿದ್ದನ್ನು ಮನಸ್ಸಿನಲ್ಲಿಟ್ಟು ಕೊಂಡು ಅದರಂತೆ ನಡೆಯುತ್ತಾರೆ. ಒಂದೊಮ್ಮೆ ಮಕ್ಕಳು ತಮ್ಮ ಮನಸೋ ಇಚ್ಛೆ ವರ್ತಿಸುತ್ತಾರೆ. ಆದರೂ ಆ ಪುಟ್ಟ ಹೆಜ್ಜೆಗಳ ನಡಿಗೆಯೇ ಚೆಂದ. ಖ್ಯಾತ ರೂಪದರ್ಶಿಯರಾದ ಮನಿಷಾ ವುಂಡಾಲೆ, ರಾಧಿಕಾ ರಾವ್ ಸೇರಿದಂತೆ ನಟಿಯರಾದ ಸಂಜನಾ, ಮೇಘನಾ, ಸಿರಿನ್, ತೇಜಸ್ವಿನಿ, ಚೈತ್ರಾ ನನ್ನ ಗರಡಿಯಲ್ಲಿ ಒಂದು ಕಾಲದಲ್ಲಿ ಬೆಕ್ಕಿನ ನಡಿಗೆ ಇಟ್ಟವರು.

 ಮಾಡೆಲ್ ಆಗ ಬಯಸುವವರು ಒಳ್ಳೆಯ ಸಂಸ್ಥೆಗೆ ಸೇರುವುದರೊಂದಿಗೆ ಪರಿಣಿತ ಕೊರಿಯೋಗ್ರಾಫ್‌ರ ಬಳಿ ಮಾತ್ರ ಫ್ಯಾಶನ್ ಪಾಠ ಕಲಿಯಬೇಕು ಎನ್ನುವುದು ನನ್ನ ಸಲಹೆ. ಇವರೆಗಿನ ನನ್ನ ಈ ಪಯಣದಲ್ಲಿ ನನ್ನಷ್ಟೇ ನನ್ನ ಪತ್ನಿ ರಾಫಿಯಾಳದು ಪಾಲಿದೆ. ಸದಾ ಅವಳ  ಬೆಂಬಲ ನನಗೆ ಇದ್ದ ಕಾರಣದಿಂದಲೇ ನಾನು ಈ ಕ್ಷೇತ್ರದಲ್ಲಿ ಈ ಅಲ್ಪ ಯಶಸ್ಸು ಗಳಿಸಲು ಸಾಧ್ಯವಾಗಿದೆ.

ಕೊನೆಯದಾಗಿ ನನ್ನದೊಂದು ಕನಸಿದೆ. ಅದು ಕನ್ನಡ ಚಿತ್ರರಂಗದ ನಟ-ನಟಿಯರನ್ನೆಲ್ಲ ಒಟ್ಟುಗೂಡಿಸಿ ಒಂದೇ ವೇದಿಕೆ ಮೇಲೆ ಹೆಜ್ಜೆ ಹಾಕಿಸುವುದು. ಅದ್ಯಾವಾಗ ಕೈಗೂಡುವುದೋ ಎಂದು ಕಾಯುತ್ತಿರುವೆ ಚಾತಕ ಪಕ್ಷಿಯಂತೆ. ನಾನು ಹೇಳುವುದಿಷ್ಟೇ, ಕನಸು ಕಾಣುವುದು ತಪ್ಪಲ್ಲ. ಆದರೆ ಅದನ್ನು ಸಾಕಾರಗೊಳಿಸುವ ದಾರಿಯಲ್ಲಿ ಎದುರಾಗುವ ಕಷ್ಟಗಳಿಗೆ ಬೆನ್ನು ತೋರಿಸುವುದು ತಪ್ಪು. ಅದನ್ನೊಮ್ಮೆ ಜಯಿಸಿದರೆ ನಿಮಗೆ ಯಾವುದೇ ಕ್ಷೇತ್ರದಲ್ಲಾಗಲಿ ಯಶಸ್ಸು ಕಟ್ಟಿಟ್ಟ ಬುತ್ತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT