ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂದ್‌ನ ಚಂದ

Last Updated 20 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ಬೆಳಗ್ಗಿನ ಐದಕ್ಕೆ ಕೂಗುವ ಪಕ್ಕದ ಮನೆಯ ಕುಕ್ಕರ್ ಇವತ್ತು ಎದ್ದು `ಮುಖ' ತೊಳೆದ್ದ್ದದು ಒಂಬತ್ತಕ್ಕೆ. ತರಾತುರಿಯಲ್ಲೊಂದು ಒಗ್ಗರಣೆ ಕೊಟ್ಟು, ಅಂದಂದಿನ ಮಸಾಲೆಯದ್ದೇ ಹೆಸರಿನ ಭಾತ್ ಮಾಡುವ ಸಂಕಲ್ಪದೊಂದಿಗೆ, ಕುಕ್ಕರ್‌ನ ತಳಕ್ಕೆ ಅಕ್ಕಿಯನ್ನು ಚೊಂಯ್ ಅಂತ ಸುರಿದು ಎರಡು ಸೀಟಿ ಕೂಗಿಸಿ ತಟ್ಟೆಗಳಿಗೆ ಸರ್ವ್ ಮಾಡುತ್ತಿದ್ದ ಆಂಟಿಯಂದಿರು ಇವತ್ತು ನಿರಾಳವಾಗಿ ದೋಸೆ ಮಾಡಿ ರುಚಿಕಟ್ಟಾದ ಚಟ್ನಿಯೊಂದಿಗೆ ತಾವೂ ಸವಿದಿದ್ದಾರೆ. ಮುಷ್ಕರದ ಕೃಪೆ!
***
ಪಕ್ಕದ ಮನೆಯ ಸಾಫ್ಟ್‌ವೇರ್ ಇಂಜಿನಿಯರ್ ರುಚಿಕಾ ಎದ್ದಿದ್ದು ಹತ್ತೂವರೆಗೆ ಅಂತೆ! ಮನೆಯಿಂದಲೇ ಕೆಲಸ ಮಾಡುವಂತೆ ಕಂಪೆನಿಯವರು ತಿಳಿಸಿದ್ದಾರೆ. `ರಾತ್ರಿಯೇ ಸ್ವಲ್ಪ ಮುಗಿಸಿದ್ದೇನೆ, ಇನ್ನು ಉಳಿದದ್ದನ್ನು ಮನೆಗೆಲಸದ ಮಧ್ಯೆ ಮಾಡಿಮುಗಿಸಿದರಾಯಿತು' ಎನ್ನುತ್ತಾರೆ ಅವರು. ಬಂದ್ ಅವರಿಗೆ ತಂದುಕೊಟ್ಟದ್ದು ನಿರುಮ್ಮಳ ಭಾವ.
***
ಫೆ. 20 ಮದುವೆಗೆ ಪ್ರಶಸ್ತ ಮುಹೂರ್ತಗಳಿರುವ ದಿನ. ಆದರೆ ಬಂದ್‌ನ ಪರಿಣಾಮವನ್ನು ಮದುವೆ ಮನೆಗಳವರು, ಕಲ್ಯಾಣ ಮಂಟಪಗಳ ಭೋಜನ ಶಾಲೆಗಳು ಅನುಭವಿಸಿದವು.
***
ಸದಾ ಆಟೊ ಸರತಿಗೆ ಸಾಕ್ಷಿಯಾಗುತ್ತಿದ್ದ ಎಂ.ಜಿ. ರಸ್ತೆಯ ಪ್ರಿಪೇಯ್ಡ ಆಟೊ ಕೌಂಟರ್ ಪೂರ್ತಿ ಖಾಲಿಯಾಗಿದ್ದರೂ ಸಂಚಾರಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ವಿಷ್ಣುವರ್ಧನ್ ಪಂಡಿತ್ ಅವರು ತಮ್ಮ ಸಹೋದ್ಯೋಗಿಗಳೊಂದಿಗೆ ಬೆಳಗ್ಗಿನಿಂದಲೇ ಹಾಜರಿದ್ದರು. ಎಂ.ಜಿ. ರಸ್ತೆಯುದ್ದಕ್ಕೆ ಮತ್ತು ಮೆಟ್ರೊ ನಿಲ್ದಾಣದ ಆಸುಪಾಸಿನಲ್ಲಿ ಸಾರ್ವಜನಿಕರಿಗೆ ತುರ್ತು ನೆರವು, ಮಾಹಿತಿ ನೀಡುವಲ್ಲಿ ಅವರು ನಿರತರಾಗಿದ್ದರು.

ಆದರೆ ಏಳು ಬೇಡಿಕೆಗಳನ್ನು ಮುಂದಿಟ್ಟು ಮುಷ್ಕರದ ಕರೆಗೆ ಕೈಜೋಡಿಸಿದ ಆಟೊ ಚಾಲಕರದು ಮಿಶ್ರ ಭಾವ.

----

ಒತ್ತಾಯದ ರಜೆ
ಎರಡು ದಿನ ಮುಷ್ಕರವೆಂದರೆ ಜೀವನಕ್ಕೆ ಕಷ್ಟವೇ. ಇಂದಿನ ಸಂಪಾದನೆ, ನಾಳಿನದ್ದು ನಾಳೆಗೆ ಅಂತ ಜೀವನ ಸಾಗಿಸೋ ನಮ್

ಮಂಥವರು ಮುಷ್ಕರದಿಂದ ವಿಶ್ರಾಂತಿ ಸಿಕ್ಕಿತು ಅಂತ ಖುಷಿ ಪಡೋದು ಸಾಧ್ಯನಾ? ಆದದ್ದಾಗಲಿ ಅಂತ ರಸ್ತೆಗಿಳಿದರೆ ಕಲ್ಲು ಹೊಡೀತಾರೆ.

ಒಂದು ರೀತಿಯಲ್ಲಿ ಇದನ್ನು ಕಷ್ಟ ಮತ್ತು ಸುಖದ ಫಿಫ್ಟಿ ಫಿಫ್ಟಿ ಅಂತ ಭಾವಿಸುತ್ತೇನೆ. ಬಹಳ ದಿನದ ನಂತರ ಮನೆ ಮಂದಿಯೊಂದಿಗೆ ಇರುವ ಅವಕಾಶವನ್ನು ಈ ಮುಷ್ಕರ ಒದಗಿಸಿದೆ. ನಮ್ಮ ಸಮಸ್ಯೆಗಳನ್ನು ಬಗೆಹರಿಸುವ ದೃಷ್ಟಿಯಿಂದ ಹಮ್ಮಿಕೊಂಡಿರುವ ಮುಷ್ಕರ ನಮಗೆ ಒಳ್ಳೆಯ ಫಲಿತಾಂಶವನ್ನೇ ನೀಡಲಿ ಎಂದು ಹಾರೈಸುತ್ತೇನೆ.
- ಬಾಬು, ಹಳೇಗುಡ್ಡದಹಳ್ಳಿ

ಸಂಪಾದನೆ ಕಟ್!

ನಮ್ಮ ಬೇಡಿಕೆಗಳು ಈಡೇರಬೇಕಾದರೆ ಹೀಗೆ ದೊಡ್ಡ ಪ್ರಮಾಣದಲ್ಲಿ ಮುಷ್ಕರ ನಡೆಯಲೇಬೇಕು. ಇದು ಒಳ್ಳೆಯದೇ. ಆದರೆ ಸಂಪಾದನೆ ಕಟ್ ಆಗುತ್ತಲ್ಲ? ಎಲ್ಲಾದರೂ ನೆಂಟರ ಮನೆಗೋ, ಸಿನಿಮಾಗೋ ಹೋಗೋಣ ಅಂದರೆ ನಮ್ಮಲ್ಲಿ ಬೈಕ್, ಸ್ಕೂಟರ್ ಇಲ್ಲ. ಹಾಗಾಗಿ ಮನೇಲೇ ಇರಬೇಕಷ್ಟೇ.

-ಗೋವಿಂದರಾಜು, ಸುಂಕದಕಟ್ಟೆ

ಬೇಡಿಕೆ ಈಡೇರಬೇಕಲ್ವಾ?
ಮುಷ್ಕರದಿಂದ ನಮಗೆ ಕಷ್ಟವಾಗುತ್ತಾದರೂ ಬಂದ್‌ಗೆ ನಮ್ಮ ಬೆಂಬಲವಿದೆ. ಕಳೆದ ವರ್ಷಗಳಲ್ಲಿ ಹೀಗೇ ಆಟೊ ಬಂದ್ ನಡೆಸಿದಾಗ ನಮ್

ಮ ಕೆಲವು ಬೇಡಿಕೆಗಳು ಈಡೇರಿವೆ.

ಕಪ್ಪು- ಹಳದಿ ಆಟೊಗಳಿಗೂ ಹಸಿರು ಬಣ್ಣ ಕಡ್ಡಾಯ ಬಳಿಯಬೇಕು, ಹೊಸ ಡಿಜಿಟಲ್ ಮೀಟರ್ ಅಳಡಿಸಬೇಕು, ಆಟೊದ ಮುಂಭಾಗಕ್ಕೆ ಸಿಂಗಲ್ ಗ್ಲಾಸ್ ಅಳವಡಿಸಬೇಕು ಮುಂತಾದ ಆದೇಶಗಳನ್ನು ಹಿಂಪಡೆಯಲು ನಮ್ಮ ಮುಷ್ಕರವೇ ಕಾರಣ. ಈ ಬಾರಿಯೂ ನಮ್ಮ ಏಳು ಬೇಡಿಕೆಗಳಲ್ಲಿ ಎರಡೋ, ಮೂರೋ ಈಡೇರುವ ಭರವಸೆ ನನಗಿದೆ.
-ಕಣ್ಣನ್, ನಂದಿನಿ ಲೇಔಟ್

ನಿದ್ದೆ ಮಾಡ್ತೇನೆ
ರೆಸ್ಟ್ ಬೇಕು ಮೇಡಂ. ಬಂದ್‌ನ ನೆಪದಲ್ಲಾದರೂ ಮನೇಲಿದ್ದು ನಿದ್ದೆ ಮಾಡುತ್ತೇನೆ. ದಿನಾ ಬೆಳಿಗ್ಗೆ 9ರಿಂದ ರಾತ್ರಿ 11ರವರೆಗೂ ದುಡೀತೀನಿ. ಬಂದ್‌ನಿಂದಾಗಿ ರಜೆ ಸಿಕ್ಕಿದಂತಾಯಿತು.
- ವಿನೋದ್, ರಾಜಾಜಿನಗರ, 

ಮನೆಯಲ್ಲಿ ಖುಷಿ
ನಮಗೆ ಆಟೊನೇ ಸರ್ವಸ್ವ. ಅದಿಲ್ಲದೆ ಬದುಕು ಇಲ್ಲ. ದ್ವಿಚಕ್ರ ವಾಹನ ಇದ್ದಿದ್ದರೆ ಹೊರಗೆ ಸುತ್ತಾಡಲು ಹೋಗಬಹುದಿತ್ತು. ನಮ್ಮಲ್ಲಿಲ್ಲದ ಕಾರಣ ಮನೆಯಲ್ಲಿ ಖುಷಿಯಾಗಿ ಕಾಲ ಕಳೆಯುತ್ತೇನೆ.

- ಸುರೇಶ್, ಲಗ್ಗೆರೆ

`ಮುಷ್ಕರ ನಡೀಲಿ'
ಮುಷ್ಕರ ನಡೆಸಲಿ ಮೇಡಂ. ನಾವು ಪೊಲೀಸ್‌ನೋರು ಆಟೊ ಚಾಲಕರ ಮೇಲೆ ದೌರ್ಜನ್ಯ ನಡೆಸುತ್ತಿದ್ದೇವೆ. ಹೇಗೆ ಅಂತೀರಾ? ಪ್ರಯಾಣಿಕರು ಕರೆದಲ್ಲಿಗೆ ಬಾಡಿಗೆಗೆ ಹೋಗಲೊಪ್ಪದ ಚಾಲಕರಿಗೆ ರೂ 100 ದಂಡ ವಿಧಿಸಲಾಗುತ್ತಿತ್ತು.ಆದರೆ ಇತ್ತೀಚೆಗೆ ಈ ತಪ್ಪಿಗೂ ಚಾಲನಾ ಪರವಾನಗಿ ವಶಪಡಿಸಿಕೊಂಡು ರೂ 2000 ದಂಡ ವಿಧಿಸಲಾಗುತ್ತಿದೆ. ಇದು ನಮ್ಮವರು (ಪೊಲೀಸ್ ಸಂಚಾರ ವಿಭಾಗ) ಕೈಗೊಂಡ ಅಮಾನವೀಯ ಕ್ರಮ. ಇಂತಹ ಅನೇಕ ಸಮಸ್ಯೆಗಳು ಅವರಿಗೂ ಇವೆ. ಹೀಗೆ ಒಂದೆರಡು ದಿನ ಬೀದಿಗಿಳಿದರೆ ನಮ್ಮ ಅಧಿಕಾರಿಗಳಿಗೆ ಬುದ್ಧಿ ಬಂದೀತು' ಎಂದು ಖಾರವಾಗಿ ಪ್ರತಿಕ್ರಿಯಿಸಿದರು ಸಂಚಾರ ಪೊಲೀಸ್‌ಅಧಿಕಾರಿಯೊಬ್ಬರು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT