ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಣ್ಣ ಬದಲಿಸಿದ ಶಾಸಕರು!

Last Updated 20 ಸೆಪ್ಟೆಂಬರ್ 2011, 6:50 IST
ಅಕ್ಷರ ಗಾತ್ರ

ಮಂಡ್ಯ: ರಾಜಕೀಯ ಕಾರಣಗಳಿಗಾಗಿ ಸುದ್ದಿಯಲ್ಲಿ ರುತ್ತಿದ್ದ ಶಾಸಕರಿಗೆ ಅದು ಹೊಸ ರೂಪ. ಅವರೆಲ್ಲಾ ಬಣ್ಣ ಹಚ್ಚಿದ್ದರು. ಮೊದಲ ನೋಟಕ್ಕೆ ಗುರುತು ಸಿಗದಷ್ಟೂ ಬದಲಾಗಿದ್ದರು. ವೇಷ ಭೂಷಣವು ಬದಲಾಗಿತ್ತು. ಅವರೆಲ್ಲರೂ ಆದಿಚುಂಚನಗಿರಿಯ ಮಹಿಮೆಯನ್ನು ಸಾರಲು ಒಟ್ಟಾಗಿದ್ದರು.

ನಾಗಮಂಗಲ ತಾಲ್ಲೂಕು ದೇವಲಾಪುರ ಹೋಬಳಿಯ ಎಚ್.ಬೊಮ್ಮನಹಳ್ಳಿಯಲ್ಲಿ ಸೋಮ ವಾರ ಸಿನಿಮಾ ರಂಜನೆ. ಮೆಚ್ಚಿನ ಜನಪ್ರತಿನಿಧಿ ಗಳನ್ನು ಹೊಸ ಗೆಟಪ್‌ನಲ್ಲಿ ನೋಡಲು ಜನರು ಸೇರಿದ್ದರು.

ಸಚಿವ ಯೋಗೇಶ್ವರ್, ಶಾಸಕರಾದ ಕೆ.ಆರ್. ಪೇಟೆಯ ಕೆ.ಬಿ.ಚಂದ್ರಶೇಖರ್, ನಾಗಮಂಗಲ ಕ್ಷೇತ್ರದ ಸುರೇಶ್‌ಗೌಡ, ಮೇಲುಕೋಟೆ ಕ್ಷೇತ್ರದ ಸಿ.ಎಸ್.ಪುಟ್ಟರಾಜು, ಹಾಸನ ಜಿಲ್ಲೆಯ ಪುಟ್ಟೇಗೌಡ, ಮೂಡಿಗೆರೆ ಕ್ಷೇತ್ರದ ಶಾಸಕ ಅಭಯಚಂದ್ರ ಜೈನ್ ಅವರು ಚಲನಚಿತ್ರಕ್ಕಾಗಿ ಬಣ್ಣ ಹಚ್ಚಿದ್ದರು.

ಜಿಲ್ಲೆಯ ಆದಿಚುಂಚನಗಿರಿ ಕ್ಷೇತ್ರದ ಮಹಿಮೆಯನ್ನು ಚಿತ್ರಕಥೆಯನ್ನಾಗಿ ಹೊಂದಿರುವ `ಶ್ರೀಕ್ಷೇತ್ರ ಆದಿಚುಂಚನಗಿರಿ~ ಚಲನಚಿತ್ರದಲ್ಲಿ ಈ ಎಲ್ಲ ಶಾಸಕರು ಪಾತ್ರಧಾರಿಗಳು. ಸಚಿವರೂ ಆಗಿರುವ ಚನ್ನಪಟ್ಟಣ ಕ್ಷೇತ್ರದ ಶಾಸಕ ಸಿ.ಪಿ.ಯೊಗೇಶ್ವರ ಅಧಿಕೃತ ಕಾರಿನಲ್ಲಿಯೇ ಚಿತ್ರೀಕರಣಕ್ಕೆ ಸ್ಥಳಕ್ಕೆ ಆಗಮಿಸಿದ್ದರು.

ನಿತ್ಯದ ರಾಜಕಾರಣ ಬದಿಗಿಟ್ಟು ಸಿನಿಮಾಗಾಗಿ ಬಣ್ಣ `ಬದಲಿಸಿದ~ ಶಾಸಕರೊಂದಿಗೆ ಹಿರಿಯ ನಟಿ ಜಯಂತಿ, ನಟಿ ಅನುಪ್ರಭಾಕರ್ ಅವರು ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು.

ದೇವಲಾಪುರದ ಗ್ರಾಮೀಣ ಹಿನ್ನೆಲೆಯ ಮನೆಯೊಂದರಲ್ಲಿ ನಡೆದ ಚಿತ್ರೀಕರಣದಲ್ಲಿ ಪಾತ್ರಧಾರಿ ಅನುಪ್ರಭಾಕರ್ ಜೋಗಯ್ಯನ ಹಾಡು ಕೇಳಿ ಮೈಮರೆತು ತನ್ನ ಮಗುವನ್ನೇ ಕತ್ತರಿಸುವ ದೃಶ್ಯದ ಚಿತ್ರೀಕರಣ ನಡೆಯಿತು.

ಚಿತ್ರ ಶ್ರೀಕ್ಷೇತ್ರದ ಮಹಿಮೆಯನ್ನು ತಿಳಿಸುವ ಉದ್ದೇಶ ಹೊಂದಿದ್ದು, ಚಿತ್ರಕಥೆಯ ಅನುಸಾರ ಮುದ್ದಮ್ಮ-ಮುದ್ದಯ್ಯ ದಂಪತಿಗೆ ಏಳು ಜನ ಮಕ್ಕಳು, ಮೊದಲ ಆರು ಮಂದಿಗೆ ಮಕ್ಕಳ ಭಾಗ್ಯವಿಲ್ಲ. ಕೊನೆಯ ಮಗನ ಪಾತ್ರಧಾರಿಯೇ ಸಿ.ಪಿ.ಯೋಗೇಶ್ವರ್. ಅವರ ಪತ್ನಿಯ ಪಾತ್ರದಲ್ಲಿ ಅನುಪ್ರಭಾಕರ್ ಇದ್ದರು.

ಯೋಗೇಶ್ವರ್ ಪುತ್ರನ ನಾಮಕರಣದ ದೃಶ್ಯದ ಚಿತ್ರೀಕರಣ ಇದ್ದು, ಅರ್ಜುನ ಜೋಗಿ ಎಂಬ ಜೋಗಯ್ಯನ ಹಾಡು ಹೇಳಿಕೊಂಡು ಸಾಗುವ, ಅದನ್ನು ಕೇಳುತ್ತಾ ತರಕಾರಿ ಹೆಚ್ಚುತ್ತಿದ್ದ ಅನುಪ್ರಭಾರಕ್ ಹಾಡಿನಲ್ಲಿ ಮೈಮರೆತು ಮಗುವನ್ನೇ ಕತ್ತರಿಸುವ ದೃಶ್ಯ.

ಇದನ್ನು ಕಂಡ ಅತ್ತೆಯ ಪಾತ್ರಧಾರಿ ಜಯಂತಿ ಆಕ್ರಂದನ ಕೇಳಿದ ಜೋಗಯ್ಯ ಕಾಲಭೈರವೇಶ್ವರ ದೇವರ ಮೇಲೆ  ಹಾಡು ಹೇಳಲಿದ್ದು, ಅದು ಮಗುವಿಗೆ ಜೀವ ಬರಲು ಕಾರಣವಾಗುತ್ತದೆ ಎಂಬುದು ದೃಶ್ಯದ ಸಾರ.
ಗ್ರಾಮದಲ್ಲಿಯೇ ಇನ್ನೂ ಎರಡು ದಿನ ಚಿತ್ರೀಕರಣ ನಡೆಯಲಿದ್ದು, ಅಂಬರೀಶ್-ಶ್ರುತಿ ರಾಜ-ರಾಣಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ನಿರ್ದೇಶಕ ಸಾಯಿ ಪ್ರಕಾಶ್ ಸ್ಥಳಕ್ಕೆ ಭೇಟಿ ನೀಡಿದ್ದ ಮಾಧ್ಯಮ ಪ್ರತಿನಿಧಿಗಳಿಗೆ ವಿವರಿಸಿದರು.

ರಾಜಕಾರಣಿಗಳೇ ಪಾತ್ರಧಾರಿ ಗಳಾಗಿದ್ದಾರೆ. ಪಾತ್ರಕ್ಕೆ ನ್ಯಾಯ ಸಲ್ಲುತ್ತದಾ? ಎಂಬ ಪ್ರಶ್ನೆಗೆ ನಿರ್ದೇಶಕ ಸಾಯಿ ಪ್ರಕಾಶ್, ಪಾತ್ರಕ್ಕೆ ನ್ಯಾಯ ಒದಗಿಸುವ ಭರವಸೆ ಇದೆ ಎಂದರು.

ಶಾಸಕರ ಪರವಾಗಿ ಮಾತನಾಡಿದ ಶಾಸಕ ಸಿ.ಎಸ್.ಪುಟ್ಟರಾಜು, ನಾವೆಲ್ಲರೂ ರಾಜಕಾರಣಕ್ಕೆ ಮೊದಲೇ ಬಣ್ಣ ಹಚ್ಚಿದ್ದವರು. ನಟನೆ ಹೊಸದಲ್ಲ. ನಾಟಕಗಳಲ್ಲಿ ಅಭಿನಯಿಸಿದ್ದೇವೆ. ಇದು, ನಿತ್ಯದ ರಾಜಕಾರಣದ ಜಂಜಾಟದಿಂದ ಕೆಲಕಾಲ ಹೊರಬರಲು ನೆರವಾಗಿದೆ ಎಂದು ಹೇಳಿದರು.

ಚಿತ್ರ ಆದಿಚುಂಚನಗಿರಿ ಕ್ಷೇತ್ರದ ಸ್ವಾಮೀಜಿ ಬಾಲಗಂಗಾಧರನಾಥ ಸ್ವಾಮೀಜಿ ಅವರ ಜನ್ಮದಿನವಾದ ಜನವರಿ 12ರ ವೇಳೆಗೆ ತೆರೆಗೆ ಬರುವ ಸಾಧ್ಯತೆಯಿದೆ. ಡಿಸೆಂಬರ್‌ಗೆ ಚಿತ್ರೀಕರಣ ಮುಗಿಯಲಿದೆ. ಜನವರಿಗೆ ಬಿಡುಗಡೆ ಮಾಡುವ ನಿಟ್ಟಿನಲ್ಲಿ ಕೆಲಸ ಭರದಿಂದ ಸಾಗಿದೆ ಎಂದು ನಿರ್ದೇಶಕರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT