ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬತ್ತ ಖರೀದಿ: ಆಹಾರ ನಿಗಮದ ಆದೇಶ ತಂದ ಕತ್ತಲೆ

Last Updated 17 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಮೈಸೂರು:  ಈ ವರ್ಷ ಮೈಸೂರು ಜಿಲ್ಲೆಯಲ್ಲಿ ಜ್ಯೋತಿ ತಳಿ ಬತ್ತ ಬೆಳೆದ ರೈತರ ಬದುಕು ಕತ್ತಲಾಗಿದೆ.
ಜಿಲ್ಲೆಯಲ್ಲಿ ಕೃಷಿ ಇಲಾಖೆಯು ಕಳೆದ ಹಂಗಾಮಿನಲ್ಲಿ 15 ಸಾವಿರ ಕ್ವಿಂಟಲ್‌ನಷ್ಟು ಜ್ಯೋತಿ ತಳಿ ಬಿತ್ತನೆ ಬೀಜವನ್ನು ರೈತರಿಗೆ ವಿತರಿಸಿದೆ. ಅಂದಾಜು 25 ಸಾವಿರ ಹೆಕ್ಟೇರ್‌ನಲ್ಲಿ ಈ ತಳಿ ಬತ್ತವನ್ನು ಬೆಳೆಯಲಾಗಿದೆ.

ಎಕರೆ ಒಂದಕ್ಕೆ ಅಂದಾಜು 18 ರಿಂದ 20 ಕ್ವಿಂಟಲ್ ಇಳುವರಿ ಬರುತ್ತದೆ. ಅಂದರೆ ಸುಮಾರು 11.25 ಕ್ವಿಂಟಲ್‌ನಷ್ಟು ಜ್ಯೋತಿ ತಳಿಯ ಬತ್ತ ಉತ್ಪಾದನೆಯಾಗಿದೆ. ಆದರೆ ಇಷ್ಟೊಂದು ಪ್ರಮಾಣದ ಬತ್ತವನ್ನು ಖರೀದಿಸುವವರು ಇಲ್ಲದೇ ಇರುವುದರಿಂದ ರೈತರು ಆತಂಕಕ್ಕೊಳಗಾಗಿದ್ದಾರೆ.

ಪ್ರತಿ ವರ್ಷ ಕೇರಳ ವ್ಯಾಪಾರಿಗಳು ಜ್ಯೋತಿ ಬತ್ತವನ್ನು ಹೆಚ್ಚಾಗಿ ಖರೀದಿಸುತ್ತಿದ್ದರು. ಆದರೆ ಈ ವರ್ಷ ಕೇರಳ ವ್ಯಾಪಾರಿಗಳು ಕರ್ನಾಟಕದತ್ತ ಮುಖ ಮಾಡಿಲ್ಲ. ಅಲ್ಲಿನ ಸರ್ಕಾರ ರೂ.2 ಗೆ ಒಂದು ಕೆ.ಜಿ. ಅಕ್ಕಿಯನ್ನು ನೀಡುತ್ತಿರುವುದರಿಂದ ಹೆಚ್ಚಿನ ಬೆಲೆ ಕೊಟ್ಟು ಜ್ಯೋತಿ ಬತ್ತದ ಅಕ್ಕಿಯನ್ನು ಬಳಸಲು ಯಾರೂ ಬಯಸುತ್ತಿಲ್ಲ.
 
ಮಂಗಳೂರಿನ ವ್ಯಾಪಾರಿಗಳೂ ಸಹ ಬಂದಿಲ್ಲ. ಇಲ್ಲಿನ ರೈತರು ಬೆಳಕಿಗಾಗಿ ಸರ್ಕಾರದ ಖರೀದಿ ಕೇಂದ್ರದತ್ತ ಮುಖ ಮಾಡಿದರೆ ಅಲ್ಲಿಯೂ ಬಾಗಿಲು ಬಂದಾಗಿದೆ.

ಖರೀದಿ ಕೇಂದ್ರ ನಕಾರ: 2011-12 ನೇ ಸಾಲಿನ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಜ್ಯೋತಿ ತಳಿ ಬತ್ತವನ್ನು ಖರೀದಿಸದಿರಲು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮವು ಫೆ. 14 ರಂದು ಸುತ್ತೋಲೆ ಹೊರಡಿಸಿದೆ.
 
ಇದರಿಂದಾಗಿ ರೈತರಿಗೆ ದಿಕ್ಕು ತೋಚದಂತಾಗಿದೆ. ಈಚೆಗೆ ನಡೆದ ಆಹಾರ ಸಂಸ್ಕರಣ ಹಾಗೂ ತೋಟಗಾರಿಕೆ ಉತ್ಪನ್ನಗಳ ಬೆಲೆ ಸ್ಥಿರೀಕರಣ ಸಂಪುಟ ಉಪ ಸಮಿತಿ ಸಭೆಯ ನಡಾವಳಿಯನ್ನು ಆಧರಿಸಿ ನಿಗಮವು ಜಿಲ್ಲಾ ವ್ಯವಸ್ಥಾಪಕರಿಗೆ ಸುತ್ತೋಲೆಯನ್ನು ಹೊರಡಿಸಿದೆ.

ಭಾರತೀಯ ಆಹಾರ ನಿಗಮದವರು ಜ್ಯೋತಿ ತಳಿಯ ಬತ್ತವು (ಎಫ್‌ಎಕ್ಯೂ) ಫೇರ್ ಅವರೇಜ್ ಕ್ವಾಲಿಟಿ  ಗುಣಮಟ್ಟಕ್ಕೆ ಬರುತ್ತಿಲ್ಲವಾದ್ದರಿಂದ ಬೆಂಬಲ ಬೆಲೆ ಯೋಜನೆಯಡಿ ಖರೀದಿಸಲು ಸಾಧ್ಯವಿಲ್ಲ ಎಂದು ತಿಳಿಸಿದೆ.
ಈ ಹಿನ್ನೆಲೆಯಲ್ಲಿ ಬೆಂಬಲ ಬೆಲೆಯಲ್ಲಿ ಬತ್ತವನ್ನು ಖರೀದಿಸುವಾಗ ಜ್ಯೋತಿ ತಳಿಯ ಬತ್ತವನ್ನು ಮುಂದಿನ ಆದೇಶದವರಿಗೂ ಖರೀದಿಸಬಾರದು ಹಾಗೂ ಈ ತಳಿ ಬತ್ತವನ್ನು ಖರೀದಿಸಲು ಸಾಧ್ಯವಿಲ್ಲ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ನಿಗಮದ ಇಂತಹ ಸುತ್ತೋಲೆ ರೈತರಿಗೆ ಆಘಾತ ತಂದಿದೆ.  ಖರೀದಿ ಕೇಂದ್ರದಲ್ಲಿ ಕ್ವಿಂಟಲ್‌ಗೆ ರೂ. 1330 ನೀಡಲಾಗುತ್ತದೆ. ಆದರೆ ಮುಕ್ತ ಮಾರುಕಟ್ಟೆಯಲ್ಲಿ ರೂ. 850 ರಿಂದ 900 ಇದೆ. ಈ ಕಾರಣದಿಂದಲಾಗಿಯೇ ಕಳೆದ ಮೂರು ದಿನಗಳಿಂದ ನಂಜನಗೂಡು ಮತ್ತು ತಿ.ನರಸೀಪುರ ತಾಲ್ಲೂಕಿನ ರೈತರು  ಪ್ರತಿಭಟನೆ ಹಾದಿ ಹಿಡಿದಿದ್ದಾರೆ.

`ಬತ್ತ ಖರೀದಿ ಕೇಂದ್ರದಲ್ಲಿ ಖರೀದಿಸಿದ ಬತ್ತವನ್ನು ಮಿಲ್ ಮಾಡಿಸಿ ಅಕ್ಕಿಯನ್ನು ಪಡಿತರಚೀಟಿ ಹೊಂದಿರುವವರಿಗೆ ವಿತರಿಸಬೇಕು. ಆದರೆ, ಜ್ಯೋತಿ ತಳಿ ಬತ್ತವನ್ನು ಮಿಲ್ ಮಾಡಿಸಿದರೆ ನುಚ್ಚು ಮತ್ತು ಕೆಂಪುಬಣ್ಣದ ಅಕ್ಕಿ ಹೆಚ್ಚಾಗಿ ಬರುತ್ತಿದೆ. ಕೆಂಪುಬಣ್ಣದ ಅಕ್ಕಿಯನ್ನು ಹೆಚ್ಚಿನವರು ಬಳಸುವುದಿಲ್ಲ.
 
ಅಲ್ಲದೇ ಜ್ಯೋತಿ ಬತ್ತವನ್ನು ಖರೀದಿಸಲು ಅವಕಾಶವಿಲ್ಲ. ಆದರೆ ಮೈಸೂರು ಜಿಲ್ಲೆಯಲ್ಲಿ ಖರೀದಿಸಲಾಗಿದೆ. ಆದ್ದರಿಂದ ತಪ್ಪು ಮಾಡಿರುವ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದೆ. ತನಿಖೆ ನಡೆಸಿ ತಪ್ಪಿತಸ್ಥರಿಂದ ಹಣವನ್ನು ವಸೂಲಿ ಮಾಡಲಾಗುತ್ತದೆ~ ಎಂದು ನಿಗಮದ ಉಪ ಪ್ರಧಾನ ವ್ಯವಸ್ಥಾಪಕ  ನರಸಿಂಹಮೂರ್ತಿ ತಮ್ಮನ್ನು ಸಂಪರ್ಕಿಸಿದ `ಪ್ರಜಾವಾಣಿ~ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT