ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದುಕಿನ ಶೈಲಿಯೇ ನಟನೆಯ ಶಕ್ತಿ

Last Updated 8 ಫೆಬ್ರುವರಿ 2011, 18:30 IST
ಅಕ್ಷರ ಗಾತ್ರ

ಬೆಂಗಳೂರು :  ಗುಡಿಗೇರಿ ಬಸವರಾಜ ಕನ್ನಡ ರಂಗಭೂಮಿಯ ವಿಶಿಷ್ಟ ನಟ. ಅವರ ಅಭಿನಯ ಮಾದರಿ ಮತ್ತೊಬ್ಬ ನಟನಲ್ಲಿ ಕಾಣಸಿಗುವುದಿಲ್ಲ. ಅವರಿಗೆ ಅವರೇ ಸಾಟಿ ಎನ್ನುವ ಹಾಗೆ ತಮ್ಮದೇ ಆದ ಶೈಲಿಯನ್ನು ರೂಢಿಸಿಕೊಂಡ ನಟ ದಿಗ್ಗಜ ಅವರು. ಮೈನವಿರೇಳಿಸುವ ಪಾತ್ರವೇ ಅವರಿಗೆ ಬೇಕು. ಪ್ರೇಕ್ಷಕರನ್ನು ಉನ್ಮತ್ತರಾಗಿಸಬೇಕು. ಅದು ಅವರ ಬದುಕಿನ ಶೈಲಿಯೂ ಹೌದು, ನಟನೆಯ ಶಕ್ತಿಯೂ ಹೌದು.

ನಟನೆ ಎಂದರೇನು? ಅವರ ಬಾಯಿಂದಲೇ ಕೇಳಿ: ‘ನಾನು ‘ಸೂಳೆಯ ಮಗ’ ನಾಟಕದ ಆಳು ಸುಂದರನ ಪಾತ್ರದಲ್ಲಿ ಅಭಿನಯಿಸುವಾಗ ರಂಗದ ಮೇಲೆ ಬರೋಬ್ಬರಿ ಒಂದು ಕ್ವಿಂಟಲ್ ಕಟಿಗಿ (ಸೌದೆ) ಒಡೀತಿದ್ದೆ. ಅವನ್ನ ತಲಿ ಮ್ಯಾಲ ಹೊತ್ತು ಒಳಗೊಯ್ದು ಹಾಕತಿದ್ದೆ. ಬೋರ್ಡಿಂಗ್‌ಗೆ (ಒಂದು ನಾಟಕ ಕಂಪೆನಿಯ 40-50 ಮಂದಿಯ ಊಟದ ಮನೆ) ಇಷ್ಟು ಕಟಿಗಿ ಸಾಕಾಗತಿದ್ದವು. ನನಗ ಐವತ್ತು ವರ್ಷ ಆದ ಮ್ಯಾಗೂ ಈ ದಗದ ಹಿಂಗ ಮುಂದುವರಿದಿತ್ತು. ನನ್ನ ಪಾತ್ರಕ್ಕ ಸಾವುಕಾರ 18 ಸರ್ತಿ ಬಾರಿಕೋಲಿನಿಂದ ಹೊಡೀಬೇಕಾಗಿತ್ತು. ಪ್ರತಿ ಹೊಡತಕ್ಕೂ ಬಾಸಾಳ ಮೂಡಬೇಕು, ರಕ್ತ ಹರೀಬೇಕು...’

ಹೌದು ಇಷ್ಟನ್ನೆಲ್ಲ ರಂಗದ ಮೇಲೆ ಸಹಿಸಿಕೊಳ್ಳುವ ಶಕ್ತಿ ಅವರಿಗೆ ಇತ್ತು. ಯಾಕೆಂದರೆ ಗರಡಿ ಮನೆಯಿಂದ ಸೀದಾ ರಂಗಸ್ಥಳಕ್ಕೆ ಬಂದಿದ್ದರು. ಧಾರವಾಡ ಜಿಲ್ಲೆ ಕುಂದಗೋಳ ತಾಲ್ಲೂಕು ಗುಡಗೇರಿಯ ಬಡರೈತ ಕುಟುಂಬದಲ್ಲಿ 1938ರಲ್ಲಿ ಜನಿಸಿದ ಬಸವರಾಜ 3ನೇ ಇಯತ್ತೆ ನಂತರ ಓದು ಮುಂದುವರಿಸಲಾಗದೇ ದನ ಕಾಯಲು ಹೋಗುತ್ತಿದ್ದ. ಕಟ್ಟುಮಸ್ತಾದ ಸ್ಫುರದ್ರೂಪಿ ಬಾಲಕ ಬಸವರಾಜನಿಗೆ ಗರಡಿಮನೆ ಆಕರ್ಷಿಸಿತು. 11ವರ್ಷದ ವರೆಗೆ ಅವರು ತಾಯಿಯ ಮೊಲೆ ಹಾಲು ಕುಡಿದಿದ್ದರು. ಬಸವರಾಜ ಸಾಮು(ಕಸರತ್ತು) ಮಾಡುವ ರೀತಿ ಅಲ್ಲಿಗೆ ಬರುತ್ತಿದ್ದ ಡಾ.ಭೋಪಾಲ್ ಬಸ್ತಿ ಎನ್ನುವವರಿಗೆ ಬಹಳ ಹಿಡಿಸಿಬಿಟ್ಟಿತು. ಬಸವರಾಜನನ್ನು ಕರ್ನಾಟಕದ ದೊಡ್ಡ ಪೈಲ್ವಾನನಾಗಿ ಮಾಡುವ ಕನಸು ಕಂಡ ಬಸ್ತಿ ಮಹಾರಾಷ್ಟ್ರದ ಕೊಲ್ಲಾಪುರಕ್ಕೆ ಕಳಿಸಿಕೊಟ್ಟರು. ಎರಡು ವರ್ಷ ಅಲ್ಲಿ ಕುಸ್ತಿ ಕಸರತ್ತು ಕಲಿತು ಊರಿಗೆ ವಾಪಸ್ ಬಂದ ನಂತರ ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ 253 ಕುಸ್ತಿ ಆಡಿ ಮನೆಮಾತಾದರು. ಮನೆಯಲ್ಲಿ ಅಣ್ಣ ತೀರಿ ಹೋಗಿದ್ದರಿಂದ ಹೊಲದ ಕೆಲಸದ ಹೊಣೆ ಬಿತ್ತು.

ಆಗ ಅಂದರೆ 1960ರ ದಶಕದಲ್ಲಿ ನಾಟಕ ಕಂಪೆನಿಗಳು ವೈಭವದಿಂದ ನಡೆಯುತ್ತಿದ್ದವು. ಹಾವೇರಿ, ಹಿರೇಕೆರೂರು, ದಾವಣಗೆರೆಗೆ ಗೆಳೆಯರೊಂದಿಗೆ ನಾಟಕ ನೋಡಲು ಹೋಗುತ್ತಿದ್ದ ಬಸವರಾಜ ಅದರಿಂದ ಭಾರಿ ಪ್ರಭಾವಿತರಾದರು. ಊರಲ್ಲಿ ನಾಟಕದ ತಾಲೀಮು ಹಚ್ಚಿ ಮುಖ್ಯ ಪಾತ್ರದಲ್ಲೂ ಅಭಿಯಿಸಿದರು. ನಾಟಕ ನೋಡಿದ ಜನ ಬಸವರಾಜನ ಪಾತ್ರವನ್ನು ಭಾರೀ ಹೊಗಳಿದರು. ಕುಸ್ತಿಗಿಂತ ಇಲ್ಲಿ ಹೆಚ್ಚು ಪ್ರಶಂಸೆ ಸಿಗುತ್ತದೆ ಎಂದು ಗೊತ್ತಾದ ಕೂಡಲೇ ‘ನಾನೇ ಏಕೆ ಒಂದು ನಾಟಕ ಕಂಪೆನಿ ಆರಂಭಿಸಬಾರದು’ ಎಂಬ ಆಲೋಚನೆ ಬಸವರಾಜರ ತಲೆ ಹೊಕ್ಕಿತು. ಇದ್ದ 9 ಎಕರೆ ಜಮೀನು ಮಾರಿ 1963ರಲ್ಲಿ ಶ್ರೀ ಸಂಗಮೇಶ್ವರ ನಾಟ್ಯ ಸಂಘ ಗುಡಿಗೇರಿ ಸ್ಥಾಪಿಸಿಯೇಬಿಟ್ಟರು.

ಆರೂವರೆ ಅಡಿ ಎತ್ತರದ, ಬಿಳಿಬಣ್ಣದ ಸ್ಪುರದ್ರೂಪಿ ಬಸವರಾಜ ತಾನು ಕುಸ್ತಿ ಆಡಿದ ಪೈಲ್ವಾನರನ್ನು ಎಷ್ಟು ಬೇಗ ‘ಚಿತ್’ ಮಾಡುತ್ತಿದ್ದರೋ, ಯಾವುದೇ ನಿರ್ಧಾರ ಕೈಗೊಳ್ಳುವಾಗಲೂ ಅಷ್ಟೇ ತ್ವರಿತ.
ಗುಡಿಗೇರಿಯಲ್ಲೇ ಮೊದಲ ಕ್ಯಾಂಪ್. ಪಿ.ಬಿ.ಧುತ್ತರಗಿಯವರ ‘ತಾಯಿ ಕರುಳು’ ನಾಟಕ ತುಂಬ ಜನಪ್ರಿಯವಾಯಿತು. ಅದರಲ್ಲಿ ಮಿಲಿಟರಿ ಸೇರಿದ ಮಹಾಂತೇಶನ ಪಾತ್ರ ಬಸವರಾಜ ಅವರದು. ಎತ್ತರದ ಮಂಚದ ಮೇಲಿನಿಂದ ಬಿದ್ದು ತಲೆ ಒಡೆದುಕೊಳ್ಳುತ್ತಿದ್ದ ಸೈನಿಕನ ಪಾತ್ರದಲ್ಲಿ ಆಜಾನುಬಾಹು ಬಸವರಾಜು ರಂಗದ ಮೇಲೆ ಪೋಷಾಕು ಹಾಕಿಕೊಂಡು ಬಂದರೆ, ನೋಡಿದ ಪ್ರೇಕ್ಷಕ ‘ವಾಹ್! ವಾರೆವಾಹ್! ಶಹಬ್ಬಾಸ್!’ ಎಂದು ಕೂಗುತ್ತಿದ್ದರು. ಅದನ್ನು ಕೇಳಿಸಿಕೊಂಡು ರೋಮಾಂಚನಗೊಳ್ಳುತ್ತಿದ್ದ ಗುಡಗೇರಿ ‘ಇಲ್ಲಿದೆ ನನ್ನ ದಾರಿ’ ಎಂದು ರಂಗಭೂಮಿಗೆ ತಮ್ಮನ್ನು ತಾವು ಸಂಪೂರ್ಣವಾಗಿ ಸಮರ್ಪಿಸಿಕೊಂಡುಬಿಟ್ಟರು.

ತಮ್ಮ ಅಭಿನಯ ಪ್ರೇಕ್ಷಕರ ಕರುಳು ಹಿಂಡಬೇಕು. ಹಾಗೆ ಅಭಿನಯಿಸಿದಾಗಲೇ ಅವರಿಗೆ ತೃಪ್ತಿ! ಅದುವರೆಗೆ ಲಭ್ಯವಿದ್ದ ನಾಟಕಗಳಲ್ಲಿ ಅಂತಹ ಪಾತ್ರ ಇಲ್ಲ ಎಂದು ಅವರಿಗೆ ಅನಿಸಿರಬೇಕು. ಭಾವೋದ್ರೇಕದ ಪಾತ್ರ ಸೃಷ್ಟಿಸಿಕೊಳ್ಳಲು ತಾವೇ ನಾಟಕ ರಚಿಸಲಾರಂಭಿಸಿದರು. ಹೀಗೆ ಹೊರಬಂದದ್ದೇ  ‘ಸೂಳೆಯ ಮಗ’ ನಾಟಕ. ನಾಟಕ ಭರ್ಜರಿ ಯಶಸ್ಸು ಪಡೆಯಿತು. ಅಲ್ಲಿಂದ ಗುಡಿಗೇರಿ ಬಸವರಾಜ ಹಿಂತಿರುಗಿ ನೋಡಿದ್ದೇ ಇಲ್ಲ.

ಸಿನಿಮಾದಲ್ಲಿ ಬೇಡಿಕೆ ಕಡಿಮೆಯಾದಾಗ ನಾಟಕ ಕಂಪೆನಿಯಲ್ಲಿ ಹೋಗಿ ಅಭಿನಯಿಸೋದು ಚಾಲ್ತಿಯಲ್ಲಿದ್ದ ಕಾಲ ಅದು. ಈ ನೆಪದಲ್ಲಿ ಬಸವರಾಜರ ಜೀವನದಲ್ಲಿ ಪ್ರವೇಶ ಪಡೆದವರೇ ಖ್ಯಾತ ಚಿತ್ರತಾರೆ ದಿವಂಗತ ಕಲ್ಪನಾ. ಜೋಡಿಯಾಗಿ ನಟಿಸಿದ ನಾಟಕಗಳು ಜಯಭೇರಿ ಭಾರಿಸಿದವು. ಇಬ್ಬರ ಅಭಿನಯ, ಜೀವನ ಶೈಲಿ- ಎಲ್ಲವೂ ಬಸವರಾಜ ಅವರು ಸೃಷ್ಟಿಸುತ್ತಿದ್ದ ಪಾತ್ರಗಳಂತೆಯೇ ರೋಚಕ.

ಮುಂದಿನದೆಲ್ಲಾ ಇತಿಹಾಸ. ಕಲ್ಪನಾ ಸತ್ತ ಎರಡು ತಿಂಗಳಿನಲ್ಲಿ ಬಸವರಾಜ ‘ರೈತನ ಮಕ್ಕಳು’ ನಾಟಕ ಬರೆದರು. ರೈತ ಕುಟುಂಬದ ಹಿರಿಯ ಮಗನ ಪಾತ್ರದಲ್ಲಿ ಅಭಿನಯಿಸುತ್ತಿದ್ದ ಬಸವರಾಜ ‘ಗಂಡ ನಿನ್ನನ್ನು ಮುಟ್ಟದೇ ಇದ್ದರೂ ನೀನು ಗರ್ಭಿಣಿ!’ ಎಂದು ಪತ್ನಿಗೆ ಹಂಗಿಸುವ ಸನ್ನಿವೇಶದಲ್ಲಂತೂ ಅಳದೇ ಇರುವ ಪ್ರೇಕ್ಷಕರೇ ಇಲ್ಲ ಎಂದರೂ ಆದೀತು. ಬಸವರಾಜ ತಾವೂ ಅತ್ತು ಪ್ರೇಕ್ಷಕರನ್ನು ಅಳಿಸುತ್ತಿದ್ದ ಪರಿ ಅದು. ಪತ್ನಿ, ಪತ್ರ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಪತಿ ಜೈಲಿಗೆ ಹೋಗುತ್ತಾನೆ. ಕಲ್ಪನಾ ಸಾವಿನ ನೆನಪು ಬಂದರೆ ಅಚ್ಚರಿ ಇಲ್ಲ.

ಮುಂದೆ ಬರೆಯುತ್ತ ಅಭಿನಯಿಸುತ್ತಲೇ ಹೋದರು. ‘ದುಡ್ಡಿನ ದರ್ಪ’, ‘ಸತ್ಯ ಸತ್ತಿತು’, ‘ನೀ ಹುಟ್ಟಿದ್ದು ಯಾರಿಗೆ?’ ಸೇರಿದಂತೆ 15ಕ್ಕೂ ಹೆಚ್ಚು ನಾಟಕಗಳನ್ನು ಅವರು ಬರೆದರು. ‘ಸಿಂಧೂರ ಲಕ್ಷ್ಮಣ’, ‘ರೈತನ ಮಕ್ಕಳು’ ಸಿನಿಮಾ ನಿರ್ಮಿಸಿದರು.

ನಾಟಕ ಕಂಪೆನಿಯ ಶಾಖೆಗಳು ಒಂದಲ್ಲ, ಎರಡಲ್ಲ, ಮೂರು. ಹುಬ್ಬಳ್ಳಿಯಲ್ಲಿ ಸತತ 12 ವರ್ಷ, ವಿಜಾಪುರದಲ್ಲಿ 6 ವರ್ಷ, ದಾವಣಗೆರೆಯಲ್ಲಿ ಮೂರೂವರೆ ವರ್ಷ, ಬೆಳಗಾವಿಯಲ್ಲಿ ಒಂದೂವರೆ ವರ್ಷ ಕ್ಯಾಂಪ್- ಒಂದರ ಮೇಲೆ ಒಂದು ದಾಖಲೆ. ಕನ್ನಡ ರಂಗಭೂಮಿಯ ಅತ್ಯುನ್ನತ ಗುಬ್ಬಿ ವೀರಣ್ಣ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಗುಡಿಗೇರಿ ಭಾಜನರಾಗಿದ್ದಾರೆ.

ಗುಡಿಗೇರಿ ಬಸವರಾಜ ಅವರ ಮೇಲಿನ ಜನರ ಅಭಿಮಾನ ಅಷ್ಟೇ ಉನ್ಮತ್ತವಾದುದು. ಕ್ಯಾನ್ಸರ್‌ನಿಂದ ಬೆಂಗಳೂರು ಆಸ್ಪತ್ರೆಗೆ ಸೇರಿದ ಮೇಲೆ ಉತ್ತರ ಕರ್ನಾಟಕದ ಹಲವು ಗುಡಿಗುಂಡಾರಗಳಲ್ಲಿ ಅವರ ಆರೋಗ್ಯ ಸುಧಾರಿಸಲಿ ಎಂದು ಭಜನೆ ಪ್ರಾರ್ಥನೆಗಳು ನಡೆದವು. ಮಾಧ್ಯಮಗಳ ಕಣ್ಣಿಗೆ ಇದು ಕಾಣಲಿಲ್ಲ!

ಸೆಟ್ಸ್‌ಗೆ ಅದ್ದೂರಿತನ ಬೇಕು, ಕಲಾವಿದರು ಸಂತೃಪ್ತಿಯಿಂದಿರಬೇಕು ಅನಿಸಿದರೆ ಆಗಲೇ ಆಗಿಬಿಡಬೇಕು. ಸ್ವತಃ ಬಸವರಾಜರು ಹಾಗೇ ಮೆರೆದರು. ‘ನನ್ನಷ್ಟು ವೃತ್ತಿ ರಂಗಭೂಮಿಯಲ್ಲಿ ಮೆರೆದವರೇ ಮತ್ತೊಬ್ಬರಿಲ್ಲ’ ಎಂದು ಬಾರಿ ಬಾರಿಗೂ ಅವರು ಹೇಳಿಕೊಳ್ಳುತ್ತಿದ್ದರು. ಅಂತೆಯೇ ಅವರ ಕಟ್ಟಾ ಅಭಿಮಾನಿಗಳು ಅವರನ್ನು ಉತ್ತರ ಕರ್ನಾಟಕದ ಹುಲಿ. ಗುಬ್ಬಿ ವೀರಣ್ಣನವರ ನಂತರ ಭಾರೀ ಮೆರೆದ ನಟ ಎಂದೂ ಬಣ್ಣಿಸುತ್ತಾರೆ. ಗುಬ್ಬಿ ವೀರಣ್ಣನವರ ಕನಸುಗಾರಿಕೆ, ದೂರದೃಷ್ಟಿ, ಸಂಘಟನೆಯ ಚಾಣಾಕ್ಷತನ ಬಸವರಾಜ ಅವರಲ್ಲಿ ಇರಲಿಲ್ಲವಾದರೂ, ಮೆರೆದದ್ದು ಮಾತ್ರ ಸುಳ್ಳಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT