ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರ ಘೋಷಣೆಯಾದರೂ ಕೆಲಸ ಕೇಳೋರಿಲ್ಲ

Last Updated 5 ಡಿಸೆಂಬರ್ 2013, 6:54 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲೆಯ ಬಂಗಾರಪೇಟೆ, ಮುಳಬಾಗಲು ಮತ್ತು ಶ್ರೀನಿವಾಸಪುರ ತಾಲ್ಲೂಕುಗಳನ್ನು ಬರಗಾಲ ಪೀಡಿತ ಎಂದು ರಾಜ್ಯ ಸರ್ಕಾರ ಘೋಷಣೆ ಮಾಡಿ ಎರಡು ವಾರ ಕಳೆದರೂ ಈ ತಾಲ್ಲೂಕುಗಳಲ್ಲಿ ಬರ ಪರಿಹಾರದ ಯಾವುದೇ ಕಾಮಗಾರಿ ಆರಂಭವಾಗಿಲ್ಲ.
ಈ ತಾಲ್ಲೂಕುಗಳಲ್ಲಿ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕೆಲಸ ಕೇಳಿ­ಕೊಂಡು ಹೆಚ್ಚು ಮಂದಿ ಅರ್ಜಿಗಳನ್ನೂ ಸಲ್ಲಿಸಿಲ್ಲ. ಹೀಗಾಗಿ ಬರಗಾಲ ಪೀಡಿತ ಎಂಬ ಘೋಷಣೆಯ ಬಳಿಕವೂ ಈ ತಾಲ್ಲೂಕುಗಳಲ್ಲಿ ಬರ ಪರಿಹಾರದ ಪ್ರಸ್ತಾಪವೂ ಇಲ್ಲವಾಗಿದೆ.
ಜಿಲ್ಲಾಧಿಕಾರಿ ಡಿ.ಕೆ.ರವಿ ನಗರದಲ್ಲಿ ಬುಧವಾರ ಸುದ್ದಿಗಾರರೊಡನೆ ಮಾತ­ನಾ­­ಡುವ ಸಂದರ್ಭದಲ್ಲಿ ತಿಳಿಸಿದ ವಿಷಯವಿದು.

ಸರ್ಕಾರ ಬರಗಾಲದ ಘೋಷಣೆ ಮಾಡಿದ ಬಳಿಕ ಈ ತಾಲ್ಲೂಕುಗಳಲ್ಲಿ ಉದ್ಯೋಗಖಾತ್ರಿ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸುವವರ ಸಂಖ್ಯೆಯಲ್ಲಿ ಏರಿಕೆಯಾಗಿದೆಯೇ? ಎಂಬ ಪ್ರಶ್ನೆಗೆ ಉತ್ತರಿಸಿದ ಜಿಲ್ಲಾಧಿಕಾರಿ. ಅಂಥ ವಿಶೇ಼ಷ­ವೇನೂ ನಡೆದಿಲ್ಲ. ಸಂಖ್ಯೆಯಲ್ಲಿ ಏರಿಕೆಯಾಗಿಲ್ಲ. ಆದರೆ ಅರ್ಜಿ ನಂ 6 ಅನ್ನು ಸಲ್ಲಿಸಿದ ಎಲ್ಲರಿಗೂ ಕೆಲಸ ಕೊಡ­ಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಸೂಚಿಸ­ಲಾಗಿದೆ ಎಂದು ಹೇಳಿದರು.

ಮೂರು ತಾಲ್ಲೂಕುಗಳಲ್ಲಿ ಬರ ಪರಿಹಾರದ ಕಾರ್ಯ­ಕ್ರಮಗಳೇ­ನಾ­ದರೂ ನಡೆದಿವೆಯೇ? ಎಂಬ ಪ್ರಶ್ನೆಗೂ ಅವರು ‘ಇಲ್ಲ’ ಎಂದು ನುಡಿದರು.

ಮೇವಿಗೆ ಬರವಿಲ್ಲ: ಈ ಮೂರು ತಾಲ್ಲೂಕುಗಳೂ ಸೇರಿದಂತೆ ಜಿಲ್ಲೆಯಲ್ಲಿ ಎಲ್ಲಿಯೂ ಮೇವಿನ ಕಂಡು ಬಂದಿಲ್ಲ ಮೇವು ಕೇಂದ್ರ ತೆರೆಯುವ ಅಗತ್ಯವಿಲ್ಲ ಎಂದು ಪಶುಪಾಲನೆ ಇಲಾಖೆಯು ವರದಿ ನೀಡಿದೆ. ಮುಂದಿನ ನಾಲ್ಕು ತಿಂಗಳಿಗೆ ಆಗುವಷ್ಟು ಮೇವಿನ ಲಭ್ಯತೆ ಇರುವುದರಿಂದ ಮೇವು ಕೇಂದ್ರಗಳನ್ನು ತೆರೆಯುವ ಪ್ರಸ್ತಾಪವೂ ಇಲ್ಲ ಎಂದು ಹೇಳಿದರು.

27 ಹಳ್ಳಿಗೆ ಟ್ಯಾಂಕರ್ ನೀರು: ಜಿಲ್ಲೆಯ 27 ಹಳ್ಳಿಗಳಿಗೆ ಈಗಲೂ ಟ್ಯಾಂಕರ್ ನೀರನ್ನು ಪೂರೈಸಲಾಗುತ್ತಿದೆ. ಕೋಲಾರ ನಗರಸಭೆ ವ್ಯಾಪ್ತಿಯ ಕೆಲವು  ವಾರ್ಡ್‌­ಗ­ಳಲ್ಲೂ ಟ್ಯಾಂಕರ್ ನೀರು ಪೂರೈಸ­ಲಾಗು­ತ್ತಿದೆ. ನೀರಿನ ಸಮಸ್ಯೆ ಪರಿಹರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.

₨ 1.40 ಕೋಟಿ ಬಿಡುಗಡೆ: ಜಿಲ್ಲೆಯಲ್ಲಿ ಕಾಲುಬಾಯಿ ಜ್ವರ ಪ್ರಕರಣಗಳ ಹಿನ್ನೆಲೆ­ಯಲ್ಲಿ ಸಾವಿಗೀಡಾದ ಜಾನುವಾರುಗಳ ಮಾಲೀಕರಿಗೆ ನೀಡಲು ಮೂರು ತಾಲ್ಲೂಕುಗಳಿಗೆ ಈಗಾಗಲೇ ₨ 1.40 ಕೋಟಿ ಬಿಡುಗಡೆಯಾಗಿದೆ. ಕೋಲಾರ ಮತ್ತು ಮುಳಬಾಗಲು ತಾಲ್ಲೂಕುಗಳಿಗೆ ₨ 1.20 ಕೋಟಿ ಬಿಡುಗಡೆ­ಯಾಗಬೇಕಾಗಿದೆ. ಪರಿಹಾರ ಧನ ವಿತರಣೆಗೆ ಸಿದ್ಧತೆಗಳನ್ನು ನಡೆಸ­ಲಾಗುತ್ತಿದೆ ಎಂದು ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದರು.

1200 ಮಂದಿಗೆ ಉದ್ಯೋಗ: ಜಿಲ್ಲೆಯಲ್ಲಿ ಕಳೆದ ತಿಂಗಳು ನಡೆಸಿದ ಬೃಹತ್ ಉದ್ಯೋಗ ಮೇಳದಲ್ಲಿ ಪಾಲ್ಗೊಂಡು ಉದ್ಯೋಗಕ್ಕೆ ಕಾಯ್ದಿರಿಸಿದರ ಪಟ್ಟಿಗೆ  ಆಯ್ಕೆಯಾಗಿದ್ದ 6067 ಮಂದಿ ಪೈಕಿ 1200 ಮಂದಿಗೆ ಕೆಲಸ ದೊರೆತಿದೆ. ಇನ್ನೂ ಒಂದು ವಾರದಲ್ಲಿ ಬಹಳ ಮಂದಿಗೆ ಕೆಲಸ ದೊರಕುವ ನಿರೀಕ್ಷೆ ಇದೆ ಎಂದು ಅವರು ತಿಳಿಸಿದರು.

ಕಾರ್ಖಾನೆ ಸಭೆ: ತಾಲ್ಲೂಕಿನ ನರಸಾ­ಪುರ ಕೈಗಾರಿಕಾ ಪ್ರದೇಶದಲ್ಲಿ ಇತ್ತಿಚೆಗೆ ಕೈಗಾರಿಕೆಗಳ ಮುಖ್ಯಸ್ಥರೊಡನೆ ಸಭೆ ನಡೆಸಲಾಗಿದೆ. ಕೈಗಾರಿಕೆಗಳಿಗಾಗಿ ಜಮೀನು ನೀಡಿದ ರೈತ ಕುಟುಂಬದ ಒಬ್ಬರಿಗೆ ಕಡ್ಡಾಯವಾಗಿ ಉದ್ಯೋಗ ನೀಡಬೇಕು. ಕಾರ್ಮಿಕ ಕಾಯ್ದೆ ಅನ್ವಯ ವೇತನ ಮತ್ತಿತರ ಸೌಲಭ್ಯಗಳನ್ನು ನೀಡಬೇಕು ಎಂದು ಸೂಚಿಸಲಾಗಿದೆ.

ಕಾರ್ಖಾನೆಗಳ ವಿರುದ್ಧ ಪ್ರತಿಭಟನೆ­ಗಳನ್ನು ನಡೆಸುವುದು, ವಸ್ತುಗಳಿಗೆ ಹಾನಿ ಮಾಡುವುದು ಸರಿಯಲ್ಲ. ಸಮಸ್ಯೆಗಳನ್ನು ತಮ್ಮ ಗಮನಕ್ಕೆ ತಂದರೆ ಪರಿಹರಿಸ­ಲಾಗುವುದು ಎಂದು ಸ್ಥಳೀಯರಿಗೂ ಹೇಳಲಾಗಿದೆ ಎಂದು ತಿಳಿಸಿದರು.

ರಾಗಿ ಖರೀದಿ: ಹೆಚ್ಚು ಕೇಂದ್ರ ತೆರೆಯಲು ಸಿದ್ಧ
ರೈತರಿಗೆ ಬೆಂಬಲ ಬೆಲೆ ನೀಡಿ ರಾಗಿ ಖರೀದಿಸುವ ಕೇಂದ್ರಗಳನ್ನು ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲೂ ತೆರೆಯಲಾಗಿದೆ. ಮಾ.31ರವರೆಗೂ ಕೇಂದ್ರಗಳು ತೆರೆದಿರುತ್ತವೆ. ಕೇಂದ್ರಗಳಿರುವ ಆಯಾ ತಾಲ್ಲೂಕಿನ ಎಪಿಎಂಸಿ ಮಾರುಕಟ್ಟೆಗಳಿಂದ ಬಹಳ ದೂರವಿರುವ ಪ್ರದೇಶಗಳ ರೈತರಿಂದ ಬೇಡಿಕೆ ಬಂದರೆ ಹೆಚ್ಚು ಕೇಂದ್ರಗಳನ್ನು ಆದ್ಯತೆ ಮೇರೆಗೆ ತೆರೆಯಲಾಗುವುದು ಎಂದು ಜಿಲ್ಲಾಧಿಕಾರಿ ಡಿ.ಕೆ.ರವಿ ತಿಳಿಸಿದರು.

ನಗರದ ತಮ್ಮ ಕಚೇರಿಯಲ್ಲಿ ಕೃಷಿ ಇಲಾಖೆ ಹಾಗೂ ಎಪಿಎಂಸಿ ಖರೀದಿ ಕೇಂದ್ರಗಳ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಸುದ್ದಿಗಾರರೊಡನೆ ಮಾತನಾಡಿದ ಅವರು, ಶ್ರೀನಿವಾಸಪುರ ತಾಲ್ಲೂಕಿನ ರಾಯಲ್ಪಾಡು, ಗೌನಿಪಲ್ಲಿ, ದೊಡ್ಡ ತಾಲ್ಲೂಕಾದ ಬಂಗಾರಪೇಟೆಯ ಕ್ಯಾಸಂಬಳ್ಳಿ, ಬೇತಮಂಗಲ ಮೊದಲಾದ ಸ್ಥಳಗಳಲ್ಲೂ ಖರೀದಿ ಕೇಂದ್ರವನ್ನು ಬೇಡಿಕೆ ಆಧರಿಸಿ ತೆರೆಯಲಾಗುವುದು ಎಂದು ತಿಳಿಸಿದರು.

ಈ ವರ್ಷ ಜಿಲ್ಲೆಯಲ್ಲಿ 33 ಸಾವಿರ ಟನ್ ರಾಗಿ ಇಳುವರಿಯನ್ನು ನಿರೀಕ್ಷಿಸಲಾಗಿದೆ. ಪ್ರತಿ ಕ್ವಿಂಟಲ್ ರಾಗಿಗೆ ₨ 1800 ಬೆಲೆ ನಿಗದಿ ಮಾಡಲಾಗಿದೆ. ರಾಗಿಯನ್ನು ಸ್ವಚ್ಛಗೊಳಿಸಿ ಉತ್ತಮ ಚೀಲದಲ್ಲಿ ತರಬೇಕು. ಪ್ರತಿ ಚೀಲಕ್ಕೂ ₨ 13 ನೀಡಲಾಗುತ್ತದೆ ಎಂದು ತಿಳಿಸಿದರು.

ಎಪಿಎಂಸಿ ಮಾರುಕಟ್ಟೆಗಳಲ್ಲಿ ಗೋದಾಮು ಸೌಕರ್ಯ ಇಲ್ಲದಿರುವುದರಿಂದ ರಾಗಿ ದಾಸ್ತಾನು ಮಾಡಲು ಬೇರೆ ಸ್ಥಳಗಳನ್ನು ಗುರುತಿಸಲಾಗಿದೆ . ರಾಗಿ ನೀಡಿದ ಒಂದು ವಾರದ ಒಳಗೆ ರೈತರಿಗೆ ಹಣ ಸಂದಾಯ ಮಾಡಲಾಗುವುದು ಎಂದರು.

ರಾಗಿ ಜೊತೆಗೆ ಮೆಕ್ಕೆಜೋಳ ಖರೀದಿ ಕೇಂದ್ರವನ್ನು ತೆರೆಯಲು ಸರ್ಕಾರ ಸೂಚಿಸಿದೆ. ಆದರೆ ಜಿಲ್ಲೆಯಲ್ಲಿ ಜೋಳ ಬೆಳೆಯನ್ನು ಕೇವಲ 875 ಹೆಕ್ಟೇರಿನಲ್ಲಷ್ಟೇ ಬೆಳೆದಿರುವುದರಿಂದ ಜೋಳ ಖರೀದಿಕೇಂದ್ರವನ್ನು ತೆರೆದಿಲ್ಲ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT