ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರ ನಿರ್ವಹಣೆ: ತಾಲ್ಲೂಕಿಗೆ 50 ಲಕ್ಷ

Last Updated 16 ಫೆಬ್ರುವರಿ 2012, 5:55 IST
ಅಕ್ಷರ ಗಾತ್ರ

ಹಾವೇರಿ: `ಜಿಲ್ಲೆಯಲ್ಲಿ ಉಂಟಾಗಿರುವ ಬರ ಪರಿಸ್ಥಿತಿ ನಿಭಾಯಿಸಲು ಪ್ರತಿ ತಾಲ್ಲೂಕಿಗೆ 50 ಲಕ್ಷ ರೂ.ಗಳಂತೆ ಒಟ್ಟು 3.50 ಕೋಟಿ ರೂ.ಗಳಿಗೂ ಹೆಚ್ಚು ಹಣವನ್ನು ಮಂಜೂರಿ ಮಾಡಲಾಗಿದೆ~ ಎಂದು ಜಿಲ್ಲಾಧಿಕಾರಿ ಎಚ್.ಜಿ.ಶ್ರೀವರ ತಿಳಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಏಳು ತಾಲ್ಲೂಕುಗಳನ್ನು ಸರ್ಕಾರ ಬರ ಪೀಡಿತ ತಾಲ್ಲೂಕುಗಳೆಂದು ಗುರುತಿಸಿದೆ. ಆದರೆ, ಯಾವುದೇ ತಾಲ್ಲೂಕಿನಲ್ಲಿ ಈವರೆಗೆ ಕುಡಿಯುವ ನೀರು, ಉದ್ಯೋಗ ಹಾಗೂ ಜಾನುವಾರುಗಳಿಗೆ ಮೇವಿನ ಸಮಸ್ಯೆ ಎದುರಾಗಿಲ್ಲ. ಮುಂಜಾಗೃತ ಕ್ರಮವಾಗಿ ಜಿಲ್ಲಾಡಳಿತ ಪ್ರತಿ ತಾಲ್ಲೂಕಿಗೆ 50 ಲಕ್ಷ ರೂ. ಒದಗಿಸುತ್ತಲಿದೆ ಎಂದರು.

ಮೊದಲು ಬರ ಘೋಷಣೆಯಾದ ರಾಣೆಬೆನ್ನೂರ ತಾಲ್ಲೂಕಿನ 65 ಕುಡಿಯುವ  ನೀರಿನ ದುರಸ್ತಿ ಹಾಗೂ ಪುನಶ್ಚೇತನ ಕಾಮಗಾರಿಗಳಿಗಾಗಿ 55.22 ಲಕ್ಷ ರೂ. ನೀಡಿದ್ದರೆ, ಶಿಗ್ಗಾವಿ ತಾಲ್ಲೂಕಿನ 19 ಕಾಮಗಾರಿಗಳಿಗೆ 37.80 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ. ಅದರಲ್ಲಿ ಶೇ 75 ರಷ್ಟು ಹಣವನ್ನು ಈಗಾಗಲೇ ತಾಲ್ಲೂಕು ಆಡಳಿತಕ್ಕೆ ನೀಡಲಾಗಿದೆ ಎಂದು ತಿಳಿಸಿದರು.

ಆಯಾ ತಾಲ್ಲೂಕಿನ ಶಾಸಕರ ನೇತೃತ್ವದ ಟಾಸ್ಕ್‌ಫೋರ್ಸ್ ತಯಾರಿಸಿರುವ ಕ್ರಿಯಾಯೋಜನೆ ಹಾಗೂ ಅಂದಾಜು ಪತ್ರಿಕೆ ಆಧಾರದ ಮೇಲೆ ಹಣ ಬಿಡುಗಡೆ ಮಾಡಲಾಗುತ್ತದೆ. ಇತೀಚೆಗೆ ಬರ ಘೋಷಣೆಯಾದ ತಾಲ್ಲೂಕುಗಳ ಕ್ರಿಯಾ ಯೋಜನೆ ತಯಾರಿಸುವ ಕಾರ್ಯ ಕೆಲಸ ಪ್ರಗತಿಯಲ್ಲಿದೆ ಎಂದು ಹೇಳಿದರು.

294 ಹಳ್ಳಿಗಳಲ್ಲಿ ನೀರಿನ ಸಮಸ್ಯೆ: ಮುಂಬರುವ ಬೇಸಿಗೆ ದಿನಗಳಲ್ಲಿ ಜಿಲ್ಲೆಯ 294 ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಬುದೆಂದು ನಿರೀಕ್ಷಿಸಲಾಗಿದೆ. ಈ ಹಳ್ಳಿಗಳಲ್ಲಿನ ಈಗಾಗಲೇ 11.38 ಕೋಟಿ ರೂ.ಗಳಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವ ಮೂಲಕ ಸಮಸ್ಯೆ ಉಂಟಾಗದಂತೆ ಎಚ್ಚರಿಕೆ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಬರುವ ಬೇಸಿಗೆ ಸಂದರ್ಭದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಿಸುವ ಜಿಲ್ಲೆಯ 294 ಹಳ್ಳಿಗಳಲ್ಲಿ ಹಾವೇರಿ ತಾಲ್ಲೂಕಿನ 48 ಹಳ್ಳಿಗಳ ಕಾಮಗಾರಿಗೆ 1.67 ಕೋಟಿ ರೂ., ಹಾನಗಲ್ಲ ತಾಲ್ಲೂಕಿನಲ್ಲಿ 51 ಹಳ್ಳಿಗಳ ಕಾಮಗಾರಿಗೆ 1.64 ಕೋಟಿ ರೂ., ಹಿರೇಕೆರೂರ ತಾಲ್ಲೂಕಿನ 66 ಹಳ್ಳಿಗಳ ಕಾಮಗಾರಿಗೆ 2.52 ಕೋಟಿ ರೂ., ಬ್ಯಾಡಗಿ ತಾಲ್ಲೂಕಿನ 20 ಹಳ್ಳಿಗಳ ಕಾಮಗಾರಿಗೆ 1.19 ಕೋಟಿ, ಸವಣೂರು ತಾಲ್ಲೂಕಿನ 37 ಹಳ್ಳಿಗಳ ಕಾಮಗಾರಿಗೆ 2.31 ಕೋಟಿ ರೂ., ರಾಣೆಬೆನ್ನೂರ ತಾಲ್ಲೂಕಿನ 22 ಹಳ್ಳಿಗಳ ಕಾಮಗಾರಿಗೆ 1.13ಕೋಟಿ ರೂ. ಹಾಗೂ ಶಿಗ್ಗಾವಿ ತಾಲ್ಲೂಕಿನ 57 ಹಳ್ಳಿಗಳ ಕಾಮಗಾರಿಗೆ 1.35 ಕೋಟಿ ರೂ. ಸೇರಿ ಒಟ್ಟು 11.38 ಕೋಟಿ ರೂ. ನೀಡಲಾಗಿದೆ ಎಂದು ತಿಳಿಸಿದರು.

ಪ್ರಸಕ್ತ ಸಾಲಿನಲ್ಲಿ ಕುಡಿಯುವ ನೀರಿನ ಯೋಜನೆಗಾಗಿ ಒಟ್ಟು 51.61ಕೋಟಿ ರೂ.ಗಳ ಕ್ರಿಯಾ ಯೋಜನೆಗೆ ಸರ್ಕಾರದಿಂದ ಒಪ್ಪಿಗೆ ದೊರೆತಿತ್ತು. ಅದರಲ್ಲಿ ಈವರೆಗೆ 26.94 ಕೋಟಿ ರೂ. ಸರ್ಕಾರ ನೀಡಿದ್ದು, 18 ಕೋಟಿ ರೂ. ಖರ್ಚು ಮಾಡಲಾಗಿದೆ. ಉಳಿದ ಹಣವು ಕಾಮಗಾರಿ ಕೈಗೆತ್ತಿಕೊಂಡಂತೆ ಸರ್ಕಾರ ಬಿಡುಗಡೆ ಮಾಡಲಿದೆ ಎಂದ ಅವರು, ಈಗಾಗಲೇ ಈ ಯೋಜನೆಯಲ್ಲಿ ಜಿಲ್ಲೆಯಾದ್ಯಂತ 883 ಕಾಮಗಾರಿಗಳನ್ನು ಗುರುತಿಸಲಾಗಿದೆ. ಅವುಗಳಲ್ಲಿ 640 ಕಾಮಗಾರಿಗಳು ಪೂರ್ಣಗೊಂಡಿದ್ದು, 237 ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಹೇಳಿದರು.

ಆದರೆ ಈವರೆಗೆ ಜಿಲ್ಲೆಯ ಯಾವುದೇ ಹಳ್ಳಿಗಳಲ್ಲಿ ಟ್ಯಾಂಕರ್ ಮೂಲಕ ಕುಡಿಯುವ ನೀರಿ ಪೂರೈಕೆ ಮಾಡಬೇಕಾದಂತಹ ಸ್ಥಿತಿ ಇಲ್ಲ ಎಂದು ಸ್ಪಷ್ಟಪಡಿಸಿದರು.

ಸಮರ್ಪಕ ಮೇವಿನ ದಾಸ್ತಾನು:
ಜಿಲ್ಲೆಯಲ್ಲಿ ಬರವಿದ್ದಾಗಲೂ ಜಾನುವಾರುಗಳಿಗೆ ಮೇವಿನಕೊರತೆಯಿಲ್ಲ. ಇನ್ನೂ ನಾಲ್ಕು ತಿಂಗಳಿಗೆ ಆಗುವಷ್ಟು ಮೇವಿನ ಸಂಗ್ರಹ ಜಿಲ್ಲೆಯಲ್ಲಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಜಿಲ್ಲೆಯಲ್ಲಿ ಮೂರುವರೆ ಲಕ್ಷ ಟನ್ ಒಣ ಮೇವಿನ ಸಂಗ್ರಹವಿದ್ದು, ಹಸಿ ಮೇವು ಬೆಳೆಯಲು ಜಿಲ್ಲೆಯ ರೈತರಿಗೆ 8161 ಪಾಕೆಟ್ ಮೇವಿನ ಕಿಟ್ ಪೂರೈಸಲಾಗಿದೆ. ಮೇವಿನ ಕಿಟ್ ಹಾಗೂ ಜಾನುವಾರು ಔಷಧಿ ಖರೀದಿಗಾಗಿ ಸಿಆರ್‌ಎಫ್ ಅನುದಾನದಿಂದ 15 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.

ಉದ್ಯೋಗ ಖಾತ್ರಿಯಲ್ಲಿ ಉದ್ಯೋಗ: ಬರ ಪರಸ್ಥಿತಿ ಹಿನ್ನೆಲೆಯಲ್ಲಿ ಜನರು ಉದ್ಯೋಗ ಅರಸಿ ಬೇರೆ ಕಡೆ ಗುಳೇ ಹೋಗುವುದನ್ನು ತಪ್ಪಿಸಲು ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಎಲ್ಲ ಜನರಿಗೂ ಉದ್ಯೋಗ ಕಲ್ಪಿಸಲು ವ್ಯವಸ್ಥೆ ಮಾಡಲಾಗಿದೆ. ಯಾರೇ ಉದ್ಯೋಗ ಕೇಳಿ ಬಂದರೂ ಉದ್ಯೋಗ ನೀಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅವರು ಹೇಳಿದರು.

ಜಿಲ್ಲೆಯಲ್ಲಿ 1,74,467 ಕುಟುಂಬಗಳು ಉದ್ಯೋಗ ಖಾತ್ರಿ ಯೋಜನೆ ಕಾರ್ಡ್‌ಗಳ  ನ್ನು ಹೊಂದಿದ್ದು, 12,44,458 ಮಾನವ ದಿನಗಳ ಕೆಲಸ ಮಾಡಿಸಲಾಗಿದೆ. ಪ್ರಸಕ್ತ ವರ್ಷ 60.39 ಕೋಟಿ ರೂ.ಗಳ ಉದ್ಯೋಗ ನೀಡುವ ಗುರಿ ಇಟ್ಟುಕೊಳ್ಳಲಾಗಿತ್ತು. ಅದರಲ್ಲಿ ಈಗಾಗಲೇ 55.92 ಕೋಟಿ ರೂ. ವೆಚ್ಚ ಮಾಡಲಾಗಿದೆ. ಜನರ ಕೂಲಿಗಾಗಿಯೇ 32.60 ಕೋಟಿ ರೂ. ನೀಡಲಾಗಿದೆ.

ಈಗಲೂ ಜಿಲ್ಲೆಯಲ್ಲಿ 6754 ಕಾಮಗಾರಿಗಳು ಚಾಲ್ತಿಯಲ್ಲಿವೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಜಿ.ಪಂ.ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಉಮೇಶ ಕುಸುಗಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಚೇತನಸಿಂಗ್ ರಾಠೋರ್. ಉಪ ವಿಭಾಗಾಧಿಕಾರಿ ಚನ್ನಬಸಪ್ಪ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT