ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರ ಸಿಡಿಲಿಗೆ ಅನಾಥವಾದ ಕುಟುಂಬ

Last Updated 20 ಅಕ್ಟೋಬರ್ 2011, 9:00 IST
ಅಕ್ಷರ ಗಾತ್ರ

ಶಿರಾ: ಮಳೆ- ಬೆಳೆ ಇಲ್ಲದೆ ಸಾಲ ತೀರಿಸಲು ಆಗುತ್ತಿಲ್ಲ ಎಂದು ಚೀಟಿ ಬರೆದಿಟ್ಟು ಕಳೆದ ಸೋಮವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡ ತಾಲ್ಲೂಕಿನ ಬಂದಕುಂಟೆ ಗ್ರಾಮದ ರೈತ ತಿಪ್ಪೇಸ್ವಾಮಿ (36) ಕುಟುಂಬ ಇದೀಗ ಅಕ್ಷರಶಃ ಬೀದಿಗೆ ಬಿದ್ದಿದೆ.

ಮಂಡಿ ವರ್ತಕರು, ಸ್ತ್ರೀಶಕ್ತಿ ಸಂಘ ಹಾಗೂ ಪಟ್ಟನಾಯಕನಹಳ್ಳಿ ಕೆನರಾ ಬ್ಯಾಂಕ್‌ನಲ್ಲಿ ಚಿನ್ನಾಭರಣ ಅಡವಿಟ್ಟು ಸುಮಾರು ರೂ. 2 ಲಕ್ಷ ಸಾಲ ಮಾಡಿದ್ದರು. ಆತನ ವೃದ್ಧೆ ತಾಯಿ ಗಂಗಮ್ಮನಾಗಲಿ, ಒಂದೂವರೇ ತಿಂಗಳ ಹಸುಗೂಸಿನ ಬಾಣಂತಿ ಪತ್ನಿ ಜುಂಜಮ್ಮನಾಗಲಿ ಸಾಲ ತೀರಿಸುವ ಮಾತಿರಲಿ ಮುಂದಿನ ಜೀವನ ಹೇಗೆ ಸಾಗಿಸಬೇಕಪ್ಪ ಎಂಬ ಆತಂಕದಲ್ಲಿದ್ದಾರೆ.

ಕಳೆದ 10-20 ವರ್ಷಗಳಿಂದಲೂ ಇಡೀ ಕುಟುಂಬದ ಮೇಲೆ ಬರಸಿಡಿಲು ಬಡಿದಂತೆ ಒಂದರ ಹಿಂದೆ ಒಂದರಂತೆ ಕಷ್ಟಗಳು ಎದುರಾಗುತ್ತಲೇ ಬಂದಿದೆ. ಕಳೆದ ಒಂದೂವರೆ ವರ್ಷದ ಹಿಂದೆ ತಿಪ್ಪೇಸ್ವಾಮಿ ಸಹೋದರ ರಂಗನಾಥ ಸಿಡಿಲು ಬಡಿದು ಮೃತಪಟ್ಟಿದ್ದ. ಅದಕ್ಕೂ ಮುನ್ನ 15-20 ವರ್ಷಗಳ ಹಿಂದೆ ತಿಪ್ಪೇಸ್ವಾಮಿ ತಂದೆ ಮನೆ ಬಿಟ್ಟು ಹೋದವರು ಈವರೆಗೂ ಹಿಂದಿರುಗಿಲ್ಲ.

ಅವರು ಎಲ್ಲಿದ್ದಾರೆ, ಹೇಗಿದ್ದಾರೆ ಅಥವಾ ಇದ್ದಾರೊ, ಇಲ್ಲವೋ ಎಂಬ ಸುಳಿವು ಈವರೆಗೂ ಪತ್ತೆ ಆಗಿಲ್ಲ. ನಾಲ್ಕು ಎಕರೆಯಷ್ಟು ಪಿತ್ರಾರ್ಜಿತ ಜಮೀನು ಇದ್ದು, ಅದು ತಾಯಿ ಜುಂಜಮ್ಮನ ಹೆಸರಿನಲ್ಲಿದೆ. ಆ ಜಮೀನಿನಲ್ಲಿ ಕಳೆದ 20-30 ವರ್ಷಗಳ ಹಿಂದೆ ತೆಗೆಸಿದ ಬಾವಿ ನೀರಿಲ್ಲದೆ ಪಾಳು ಬಿದ್ದಿದೆ.

ಈವರೆಗೆ ಜಮೀನಿನಲ್ಲಿ ಮಳೆ ಯಾಶ್ರಿತ ಬೆಳೆ ಮಾತ್ರ ಬೆಳೆಯ ಲಾಗುತ್ತಿದ್ದು, ಈ ವರ್ಷ ತಿಪ್ಪೇಸ್ವಾಮಿ ಮಂಡಿವರ್ತಕರು ಮತ್ತಿತರರ ಬಳಿ ಸಾಲ ಮಾಡಿ ಅರ್ಧದಷ್ಟು ಜಮೀನಿಗೆ ಶೇಂಗಾ ಬಿತ್ತನೆ ಮಾಡಿದ್ದರು. ಆದರೆ ಮಳೆರಾಯ ಕೈಕೊಟ್ಟ. ಶೇಂಗಾ ಬೆಳೆ ಸಂಪೂರ್ಣ ನೆಲಕಚ್ಚಿತು. ಆವರಿಸಿದ ಬರದಿಂದ ತೀವ್ರ ಕಂಗಾಲಾದ ತಿಪ್ಪೇಸ್ವಾಮಿ `ಸಾಲ ತೀರಿಸಲು ಆಗುತ್ತಿಲ್ಲ~ ಎಂದು ಚೀಟಿ ಬರೆದಿಟ್ಟು ತನ್ನದೇ ಜಮೀನಿನಲ್ಲಿದ್ದ ಮಾವಿನ ಮರಕ್ಕೆ ನೇಣು ಬಿಗಿದುಕೊಂಡು ಇಹಲೋಕ ತ್ಯಜಿಸಿದ.

ಈಗ ಉಳಿದವರು ವೃದ್ಧೆ ತಾಯಿ ಗಂಗಮ್ಮ, ಒಂದೂವರೇ ತಿಂಗಳ ಹೆಣ್ಣುಮಗುವಿನ ಬಾಣಂತಿ ಜುಂಜಮ್ಮ, ಎರಡು ವರ್ಷದ ಮಗ ವೇಣುಗೋಪಾಲ ಮಾತ್ರ.

ಜುಂಜಮ್ಮನಿಗೆ ಕಳೆದ ಒಂದೂವರೆ ತಿಂಗಳ ಹಿಂದೆ ಆಪರೇಷನ್ ಮೂಲಕ ಮಗುವನ್ನು ಹೊರತೆಗೆಯಲಾಗಿದ್ದು, ಆ ನೋವಿನಿಂದ ಇನ್ನು ಆಕೆ ಚೇತರಿಸಿಕೊಂಡಿಲ್ಲ. ಹೀಗಾಗಿ ತನ್ನ ತವರೂರು ಗೋವಿಂದನಹಳ್ಳಿಯ ತಾಯಿ ಮನೆಗೆ ಬಾಣಂತನಕ್ಕೆ ಹೋಗಿದ್ದಾರೆ.

ಆ ಮನೆಯಲ್ಲೂ ಬಡತನ ಹಾಸುಹೊದ್ದು ಮಲಗಿದೆ. ತನ್ನ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ತಿಳಿದು ತೀವ್ರ ಕಂಗಾಲಾದ ಜುಂಜಮ್ಮನನ್ನು ಪತಿಯ ಶವ ಸಂಸ್ಕಾರಕ್ಕೆ ಕರೆತರುವ ದೈರ್ಯವನ್ನು ಯಾರೂ ಮಾಡಲಿಲ್ಲ.
-ಪಿ.ಮಂಜುನಾಥ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT