ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರ:138 ಕೋಟಿ ಹಾನಿ ಅಂದಾಜು

Last Updated 14 ಅಕ್ಟೋಬರ್ 2011, 9:20 IST
ಅಕ್ಷರ ಗಾತ್ರ

ಕೊಪ್ಪಳ: ವಾಡಿಕೆ ಪ್ರಮಾಣದಲ್ಲಿ ಮಳೆ ಬೀಳದೇ ಇರುವ ಪರಿಣಾಮ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿಗೆ ಸಂಬಂಧಿಸಿದಂತೆ ಒಟ್ಟು 138.99 ಕೋಟಿ ರೂಪಾಯಿಗಳಷ್ಟು ಹಾನಿ ಸಂಭವಿಸಲಿದೆ ಎಂದು ಅಂದಾಜಿಸಲಾಗಿದೆ.

ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಒಟ್ಟು 1,76,015 ಹೆಕ್ಟೇರ್‌ನಷ್ಟು ಖುಷ್ಕಿ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಆದರೆ, ತೇವಾಂಶದ ಕೊರತೆ ಪರಿಣಾಮ 58,979 ಹೆಕ್ಟೇರ್ ಪ್ರದೇಶದಲ್ಲಿ ಶೇ 50ಕ್ಕಿಂತ ಕಡಿಮೆ ಪ್ರಮಾಣದಲ್ಲಿ ಹಾನಿಯಾಗಲಿದ್ದರೆ, 1,10,769 ಹೆಕ್ಟೇರ್ ಪ್ರದೇಶದಲ್ಲಿ ಶೇ 50ಕ್ಕಿಂತಲೂ ಅಧಿಕ ಪ್ರಮಾಣದಲ್ಲಿ ಹಾನಿ ಸಂಭವಿಸಲಿದೆ ಎಂದು ಜಿಲ್ಲಾಡಳಿತ ಅಂದಾಜಿಸಿದೆ.

ತಾಲ್ಲೂಕುವಾರು ಪರಿಗಣಿಸಿದರೆ, ಯಲಬುರ್ಗಾ ತಾಲ್ಲೂಕಿನಲ್ಲಿ ಹಾನಿಯ ಪ್ರಮಾಣ ಹೆಚ್ಚಾಗಲಿದ್ದರೆ, ನಂತರದ ಸ್ಥಾನಗಳಲ್ಲಿ ಕುಷ್ಟಗಿ ಹಾಗೂ ಕೊಪ್ಪಳ ತಾಲ್ಲೂಕುಗಳು ಬರಲಿವೆ ಎಂದೂ ಅಂದಾಜಿಸಲಾಗಿದೆ. `ಪ್ರಜಾವಾಣಿ~ಗೆ ಲಭ್ಯವಾಗಿರುವ ಮಾಹಿತಿಯಂತೆ, ಯಲಬುರ್ಗಾ ತಾಲ್ಲೂಕಿನಲ್ಲಿ 21,686 ಟನ್‌ಗಳಷ್ಟು  ಉತ್ಪಾದನೆ ನಷ್ಟವಾಗಲಿದ್ದು, ಒಟ್ಟು 45.55 ಕೋಟಿ ರೂಪಾಯಿಗಳಷ್ಟು ಹಾನಿಯಾಗಲಿದೆ ಎಂದು ಅಂದಾಜು ಮಾಡಲಾಗಿದೆ.

ಅದೇ ರೀತಿ ಕುಷ್ಟಗಿ ತಾಲ್ಲೂಕಿನಲ್ಲಿ 26,386 ಟನ್‌ಗಳಷ್ಟು ಉತ್ಪಾದನೆ ಕೈತಪ್ಪಲಿದ್ದು ಒಟ್ಟು 42.53 ಕೋಟಿ, ಕೊಪ್ಪಳ ತಾಲ್ಲೂಕಿನಲ್ಲಿ 32,574 ಟನ್‌ಗಳಷ್ಟು ಉತ್ಪಾದನಾ ಹಾನಿ ಹಾಗೂ 42.06 ಕೋಟಿ ರೂಪಾಯಿಗಳಷ್ಟು ಆರ್ಥಿಕ ಹಾನಿ ಸಂಭವಿಸಲಿದೆ ಎಂದು ಅಂದಾಜಿಸಲಾಗಿದೆ.

ಮಳೆ ಕೊರತೆ: ಅ. 12ಕ್ಕೆ ಅಂತ್ಯಗೊಂಡ ಅವಧಿಯಲ್ಲಿ ಜಿಲ್ಲೆಯಲ್ಲಿ ಒಟ್ಟು 101.08 ಮಿ.ಮೀ.ನಷ್ಟು ಮಳೆ ಕೊರತೆ ಕಂಡು ಬಂದಿದೆ. ಕೊಪ್ಪಳ ತಾಲ್ಲೂಕಿನಲ್ಲಿ 42.98 ಮಿ.ಮೀ., ಕುಷ್ಟಗಿ- 123.01 ಮಿ.ಮೀ., ಯಲಬುರ್ಗಾ- 86.22 ಮಿ.ಮೀ. ಹಾಗೂ ಗಂಗಾವತಿ ತಾಲ್ಲೂಕಿನಲ್ಲಿ 152.12 ಮಿ.ಮೀ.ನಷ್ಟು ಕಡಿಮೆ ಮಳೆ ಬಿದ್ದಿದೆ ಎಂದು ಕೃಷಿ ಇಲಾಖೆ ಮೂಲಗಳು ಹೇಳುತ್ತವೆ.

ಕೊಪ್ಪಳ ತಾಲ್ಲೂಕಿನ ಅಳವಂಡಿ, ಇರಕಲ್ಲಗಡ, ಕುಷ್ಟಗಿ ತಾಲ್ಲೂಕಿನ ಹನುಮನಾಳ, ಹನುಮಸಾಗರ, ತಾವರಗೇರಾ ಹಾಗೂ ಕುಷ್ಟಗಿ ಹೋಬಳಿಗಳಲ್ಲಿ ಕಡಿಮೆ ಮಳೆ ಬಿದ್ದಿದೆ.

 ಯಲಬುರ್ಗಾ ತಾಲ್ಲೂಕಿನ ಯಲಬುರ್ಗಾ, ಮಂಗಳೂರು, ಹಿರೇವಂಕಲಕುಂಟಾ, ಗಂಗಾವತಿ ತಾಲ್ಲೂಕಿನ ಕನಕಗಿರಿ, ನವಲಿ, ಹುಲಿಹೈದರ್, ಸಿದ್ದಾಪೂರ ಹಾಗೂ ಮರಳಿ ಹೋಬಳಿಗಳಲ್ಲಿ ಮಳೆ ಕೊರತೆ ಇರುವುದು ಕಂಡು ಬಂದಿದೆ ಎಂದು ಇವೇ ಮೂಲಗಳು  ಹೇಳುತ್ತವೆ.

ಮೇವು:  ಅ. 10ಕ್ಕೆ ಅಂತ್ಯಗೊಂಡ ಅವಧಿಯಂತೆ ಜಿಲ್ಲೆಯಲ್ಲಿ ಒಟ್ಟು 6,15,300 ಮೆಟ್ರಿಕ್ ಟನ್‌ಗಳಷ್ಟು ಮೇವು ಲಭ್ಯವಿದ್ದು, ಈ ಮೇವು ಮುಂದಿನ 51 ವಾರಗಳ ವರೆಗೆ ಸಾಕಾಗುತ್ತದೆ ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕ ಡಾ.ಪಿ.ಎಂ.ನಿಂಬರಗಿ `ಪ್ರಜಾವಾಣಿ~ಗೆ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 3,26,658 ಜಾನುವಾರುಗಳಿದ್ದು, ಈ ಜಾನುವಾರುಗಳಿಗೆ ವಾರಕ್ಕೆ 11,433 ಟನ್‌ಗಳಷ್ಟು ಮೇವು ಅಗತ್ಯವಿದೆ. ಹೀಗಾಗಿ ಜಿಲ್ಲೆಯಲ್ಲಿ ಮೇವಿನ ತೊಂದರೆ ಉದ್ಭವಿಸುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸುತ್ತಾರೆ.

ಕುಡಿಯುವ ನೀರು: ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಸಂಬಂಧಿಸಿದಂತೆ ಸಮಸ್ಯಾತ್ಮಕ ಗ್ರಾಮಗಳನ್ನು ಗುರುತಿಸಲಾಗಿದೆ. 

 ಈ ಗ್ರಾಮಗಳಿಗೆ ಕುಡಿಯುವ ನೀರು ಪೂರೈಸುವ ಸಂಬಂಧ ಈಗಾಗಲೇ 1.38 ಕೋಟಿ ರೂಪಾಯಿಗಳ ಕ್ರಿಯಾ ಯೋಜನೆಗೆ ಸರ್ಕಾರ ಅನುಮೋದನೆ ನೀಡಿದೆ ಎಂದು ಗ್ರಾಮೀಣ ನೀರು ಸರಬರಾಜು ಎಂಜಿನಿಯರಿಂಗ್ ವಿಭಾಗದ ಮೂಲಗಳು ಸ್ಪಷ್ಟಪಡಿಸಿವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT