ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರಪೀಡಿತ ಜಿಲ್ಲೆ ಘೋಷಣೆಗೆ ಆಗ್ರಹ

ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ನಿರ್ಣಯ
Last Updated 4 ಡಿಸೆಂಬರ್ 2013, 8:05 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯಲ್ಲಿ ಈ ಬಾರಿ ಉತ್ತಮ ಮಳೆಯಾಗಿಲ್ಲ. ಇದರಿಂದ ರೈತರು ತೊಂದರೆ ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಗಡಿ ಜಿಲ್ಲೆಯನ್ನು ಬರಪೀಡಿತ ಜಿಲ್ಲೆಯೆಂದು ಘೋಷಿಸ ಬೇಕು ಎಂದು ಆಗ್ರಹಿಸಿ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಲು ಜಿಲ್ಲಾ ಪಂಚಾಯಿತಿಯ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ನಗರದ ಕೆಡಿಪಿ ಸಭಾಂಗಣದಲ್ಲಿ ಮಂಗಳವಾರ ಸಾಮಾನ್ಯಸಭೆ ನಡೆಯಿತು. ಜಿಲ್ಲೆಯಲ್ಲಿ ಸಕಾಲದಲ್ಲಿ ಮಳೆ ಸುರಿಯದಿರುವ ಪರಿಣಾಮ ಬರಗಾಲ ಪರಿಸ್ಥಿತಿ ತಲೆದೋರಿರುವ ಬಗ್ಗೆ ಚರ್ಚಿಸಲಾಯಿತು. ಈಗ ಗುಂಡ್ಲುಪೇಟೆ ಮತ್ತು ಚಾಮರಾಜನಗರ ತಾಲ್ಲೂಕನ್ನು ಮಾತ್ರವೇ ಬರಪೀಡಿತ ಪಟ್ಟಿಗೆ ಸೇರಿಸಲಾಗಿದೆ. ಉಳಿದ 2 ತಾಲ್ಲೂಕುಗಳನ್ನು ಈ ಪಟ್ಟಿಗೆ ಸೇರಿಸಬೇಕು ಎಂದು ಸದಸ್ಯರು ಒಕ್ಕೊರಲಿನಿಂದ ಆಗ್ರಹಿಸಿದರು.

ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕೆ.ಎಚ್. ನರಸಿಂಹಮೂರ್ತಿ ಮಾತನಾಡಿ, `ಮಳೆ ಕೊರತೆ, ಬೆಳೆ ವೈಫಲ್ಯದ ಬಗ್ಗೆ ಸಮಗ್ರ ವರದಿ ಸಿದ್ಧಪಡಿಸಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸರ್ಕಾರಕ್ಕೆ ವರದಿ ಸಲ್ಲಿಸಲು ಕೂಡಲೇ ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ಕ್ರಮಕೈಗೊಳ್ಳಬೇಕು' ಎಂದು ಸೂಚಿಸಿದರು.

ಈ ಬಾರಿಯೂ ಮಳೆ ಸುರಿಯಲಿಲ್ಲ. ಇದರ ಪರಿಣಾಮ 90 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ವಿವಿಧ ಫಸಲು ಹಾನಿಗೀಡಾಗಿದೆ. ರೂ 130 ಕೋಟಿ ಬೆಳೆ ನಷ್ಟವಾಗಿದೆ.

ಅಕ್ಷರ ದಾಸೋಹದಲ್ಲಿ ಲೋಪ:
ಸದಸ್ಯ ಈಶ್ವರ್ ಮಾತನಾಡಿ, `ಶಾಲೆಗಳಲ್ಲಿ ಬಿಸಿಯೂಟ ಯೋಜನೆಗೆ ಸಂಗ್ರಹಿಸಿಡಲಾಗುವ ದಾಸ್ತಾನು ಹೆಚ್ಚುವರಿ ಪ್ರಮಾಣದಲ್ಲಿರುತ್ತದೆ. ಮಕ್ಕಳ ಸಂಖ್ಯೆಗೆ ಅನುಗುಣವಾಗಿ ದಾಸ್ತಾನು ಸಂಗ್ರಹವಾಗುವುದಿಲ್ಲ. ಮಕ್ಕಳಿಗೆ ಕಡಿಮೆ ಆಹಾರ ವಿತರಿಸಲಾಗುತ್ತಿದೆ. ಉಳಿದ ಆಹಾರ ಸಾಮಗ್ರಿಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡಿಕೊಳ್ಳಲಾಗುತ್ತಿದೆ' ಎಂದು ಆರೋಪಿಸಿದರು.

ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ನರಸಿಂಹಮೂರ್ತಿ ಮಾತನಾಡಿ, `ಸದಸ್ಯರು ಪರಿಶೀಲನೆ ನಡೆಸಿ ಲೋಪದೋಷ ಎತ್ತಿಹಿಡಿದಿರುವ ಶಾಲೆಗಳಿಗೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಇಂತಹ ಲೋಪವಾಗದಂತೆ ಎಚ್ಚರವಹಿಸಬೇಕು' ಎಂದು ಸೂಚಿಸಿದರು.

ಸಭೆಯಲ್ಲಿ ಅಧ್ಯಕ್ಷೆ ಯಶೋದಾ ಪ್ರಭುಸ್ವಾಮಿ, ಉಪಾಧ್ಯಕ್ಷ ಡಿ. ದೇವರಾಜು ಹಾಜರಿದ್ದರು.

ಲೈಂಗಿಕ ದೌರ್ಜನ್ಯ ತಡೆ ಸಮಿತಿ ರಚನೆ
ಚಾಮರಾಜನಗರ: ಶಾಲೆಗಳಲ್ಲಿ ಮಹಿಳಾ ಸಿಬ್ಬಂದಿ, ವಿದ್ಯಾರ್ಥಿನಿಯರು, ಶಿಕ್ಷಕಿಯರ ಮೇಲೆ ದೌರ್ಜನ್ಯ ನಡೆಸುವವರ ವಿರುದ್ಧ ಶಿಕ್ಷಣ ಇಲಾಖೆಯು ಕಠಿಣ ಕ್ರಮಕೈಗೊಳ್ಳಬೇಕು ಎಂದು ಸದಸ್ಯರು ಒತ್ತಾಯಿಸಿದರು.

ಸದಸ್ಯೆ ಜಿ.ಎಸ್. ನಿತ್ಯಾ ಮಾತನಾಡಿ, ತಾಲ್ಲೂಕಿನ ನಾಗವಳ್ಳಿಯಲ್ಲಿ ಪಾದ್ರಿಯೊಬ್ಬರು ತಮ್ಮದೇ ಶಾಲೆಯ ಶಿಕ್ಷಕಿ ಮೇಲೆ ಮಾನಭಂಗಕ್ಕೆ ಯತ್ನಿಸಿರುವ ಘಟನೆ ಬೆಳಕಿಗೆ ಬಂದಿದೆ. ಕೂಡಲೇ, ಜಿಲ್ಲಾ ಪಂಚಾಯಿತಿಯಿಂದ ತನಿಖೆಗೆ ಸಮಿತಿ ರಚಿಸಿ ಅಗತ್ಯ ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎನ್. ಚಂದ್ರೇಗೌಡ ಮಾತನಾಡಿ, `ನಾಗವಳ್ಳಿ ಶಾಲೆಯಲ್ಲಿ ನಡೆದಿರುವ ಲೈಂಗಿಕ ದೌರ್ಜನ್ಯ ಪ್ರಕರಣದ ಬಗ್ಗೆ ಸ್ಪಷ್ಟವಾದ ಮಾಹಿತಿ ಪಡೆದು ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲಾಗುವುದು' ಎಂದು ಸಭೆಗೆ ತಿಳಿಸಿದರು.

ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ನರಸಿಂಹಮೂರ್ತಿ ಮಾತನಾಡಿ, `ಮಹಿಳೆಯರ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ ಕೃತ್ಯಗಳನ್ನು ತಡೆಗಟ್ಟಲು ಕೂಡಲೇ ಜಿಲ್ಲಾಮಟ್ಟದಲ್ಲಿ ಲೈಂಗಿಕ ದೌರ್ಜನ್ಯ ತಡೆ ಸಮಿತಿ ರಚನೆ ಮಾಡಲಾಗುವುದು' ಎಂದು ಹೇಳಿದರು.

ಶಿಕ್ಷಕರ `ಅಡ್ಡ ನಿಯೋಜನೆ'ಗೆ ಆಕ್ಷೇಪ:
ಜಿಲ್ಲೆಯ ಕೆಲವು ಶಾಲೆಗಳಿಗೆ ನಿಯೋಜನೆಯಾಗುವ ಶಿಕ್ಷಕರನ್ನು ಆಯಾ ಶಾಲೆಯ ಮುಖ್ಯಶಿಕ್ಷಕರ ಮೂಲಕ ಇತರೇ ಶಾಲೆಗಳಿಗೆ ನಿಯೋಜನೆ ಮಾಡಲಾಗುತ್ತಿದೆ. ಜತೆಗೆ, ಜಿಲ್ಲೆಯಲ್ಲಿರುವ ಶಾಲೆಗಳಿಗೆ ಪಠ್ಯಪುಸ್ತಕ ವಿತರಣೆಗಾಗಿ ಸಿಆರ್‌ಪಿ ಹಾಗೂ ಇತರೇ ಶಿಕ್ಷಕರನ್ನು ನಿಯೋಜನೆ ಮಾಡಲಾಗಿದೆ. ಇದರಿಂದ ನಿಯೋಜನೆಗೊಂಡ ಶಿಕ್ಷಕರು ಶಾಲೆಗಳಿಗೆ ಹಾಜರಾಗದೆ ಮಕ್ಕಳಿಗೆ ತೊಂದರೆಯಾಗಿದೆ. ಕೂಡಲೇ, ಶಿಕ್ಷಕರ ಅಡ್ಡ ನಿಯೋಜನೆ ಬಗ್ಗೆ ಪರಿಶೀಲನೆ ನಡೆಸಬೇಕು ಎಂದು ಸದಸ್ಯೆ ನಿತ್ಯಾ ಒತ್ತಾಯಿಸಿದರು.

ಸ್ಥಾಯಿಸಮಿತಿ ಅಧ್ಯಕ್ಷೆ ಆರ್. ಕಾವೇರಿ ಮಾತನಾಡಿ, `ಹರದನಹಳ್ಳಿ ಹೋಬಳಿ ವ್ಯಾಪ್ತಿಯ ಕೆಲವು ಶಾಲೆಯ ವಿದ್ಯಾರ್ಥಿಗಳು ಒಲಂಪಿಯಾಡ್ ಪರೀಕ್ಷೆಯಿಂದ ವಂಚಿತರಾಗಿದ್ದಾರೆ. ಇದಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿಯೇ      ನೇರ ಹೊಣೆ. ಅವರು ಸಮರ್ಪಕವಾಗಿ ಮಾಹಿತಿ ಪಡೆದು ಶಿಕ್ಷಣ  ಇಲಾಖೆಗೆ ವರದಿ ನೀಡಿಲ್ಲ. ಈ ಕುರಿತು ಸೂಕ್ತ ತನಿಖೆ ನಡೆಸಿ ಕ್ಷೇತ್ರ ಶಿಕ್ಷಣಾಧಿಕಾರಿಯನ್ನು ಸೇವೆಯಿಂದ ಅಮಾನತುಗೊಳಸಬೇಕು ಎಂದು ಅವರು ಆಗ್ರಹಿಸಿದರು.

ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಚಂದ್ರೇಗೌಡ ಮಾತನಾಡಿ, `ಸಿಆರ್‌ಪಿ, ಶಿಕ್ಷಕರನ್ನು ವಿಶ್ವಾಸಕ್ಕೆ ಪಡೆದು ಪಠ್ಯಪುಸ್ತಕ ವಿತರಣೆಗೆ ನಿಯೋಜನೆ ಮಾಡಲಾಗಿದೆ. ಶಿಕ್ಷಕರ ಅಡ್ಡ ನಿಯೋಜನೆ ಕುರಿತು ಮೂರು ದಿನದಲ್ಲಿ ಮಾಹಿತಿ ನೀಡುತ್ತೇನೆ. ಕ್ಷೇತ್ರ ಶಿಕ್ಷಣಾಧಿಕಾರಿ ಅವರ ಕರ್ತವ್ಯಲೋಪ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮವಹಿಸಲಾಗುವುದು' ಎಂದು ಸಭೆಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT