ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವಣ್ಣ– ನೀಲಮ್ಮ ದೇವಿ ರಥೋತ್ಸವ ಸಂಭ್ರಮ

Last Updated 13 ಡಿಸೆಂಬರ್ 2013, 6:47 IST
ಅಕ್ಷರ ಗಾತ್ರ

ಕಂಪ್ಲಿ:  ಪಟ್ಟಣದ ಆರಾಧ್ಯ ದೈವ ಇತಿಹಾಸ ಪ್ರಸಿದ್ಧ ಶ್ರೀ ಪೇಟೆ ಬಸವೇಶ್ವರ ಮತ್ತು ನೀಲಮ್ಮದೇವಿ ಜೋಡಿ ರಥೋತ್ಸವ ಗುರುವಾರ ಸಂಜೆ ವಿಜೃಂಭಣೆಯಿಂದ ಜರುಗಿತು. ಪಂಚ ಕಳಶಗಳನ್ನು ಹೊತ್ತು ಅಲಂಕೃತಗೊಂಡಿದ್ದ ಬೃಹತ್ ಜೋಡಿ ರಥಗಳು ಸಂಜೆ ಪಟ್ಟಣದ ಡಾ. ರಾಜ್‌ಕುಮಾರ ಮುಖ್ಯ ರಸ್ತೆ ಮೂಲಕ ಕೂಲಿಕಟ್ಟೆ ಬಸವೇಶ್ವರ, ರಾಮಲಿಂಗೇಶ್ವರ ದೇವಸ್ಥಾನದವರೆಗೆ ಸಾಗಿದವು.

ನೆರೆದಿದ್ದ ಸಾವಿರಾರು ಭಕ್ತರು ಎರಡು ತೇರುಗಳು ಸಾಗುವಾಗ ಉತ್ತತ್ತಿ ಎಸೆದು ಮನದ ಹರಕೆ ತೀರಿಸಿದ್ದು, ಈ ಬಾರಿ ಜಾತ್ರೆಯ ವಿಶೇಷವಾಗಿತ್ತು. ಡೊಳ್ಳು, ಕೋಲಾಟ ಕುಣಿತ, ವೀರಗಾಸೆ, ತಾಷಿ ರಾಂಡೋಲು, ಭಜನೆ, ಹರಪನಹಳ್ಳಿ ತಾಲ್ಲೂಕು ನಂದಿಬೇವೂರು ಗ್ರಾಮದ ಶ್ರೀ ವೀರಭದ್ರೇಶ್ವರ ಕಲಾ ಸಂಘದ ನಂದಿಕೋಲು ಕುಣಿತ, ಇನ್ನು ಅನೇಕ ಜನಪದ ವಾದ್ಯದವರು ರಥೋತ್ಸವದಲ್ಲಿ ಭಾಗವಹಿಸಿ ಕಲಾ ನೈಪುಣ್ಯತೆ ಮೆರೆದರು.

ಬಳ್ಳಾರಿ, ನೆರೆಯ ಕೊಪ್ಪಳ, ರಾಯಚೂರು ಜಿಲ್ಲೆ, ಕಂಪ್ಲಿ ಪಟ್ಟಣ ಸೇರಿದಂತೆ ಸುತ್ತಲಿನ 30ಕ್ಕೂ ಹೆಚ್ಚು ಹಳ್ಳಿಗಳ ಸಾವಿರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು. ಜಾತ್ರೆಯ ಅಂಗವಾಗಿ ಗುರುವಾರ ಬೆಳಿಗ್ಗೆ ದೇವಸ್ಥಾನದಲ್ಲಿ ವಿಶೇಷ ಪೂಜೆ, ರುದ್ರಾಭಿಷೇಕ ಮತ್ತು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಭಕ್ತರ ಸಮ್ಮುಖದಲ್ಲಿ ಶ್ರದ್ಧೆ ಹಾಗೂ ಭಕ್ತಿಯಿಂದ ಜರುಗಿದವು.

ಬೆಳಿಗ್ಗೆಯಿಂದಲೇ ಬಸವೇಶ್ವರ ಮತ್ತು ನೀಲಮ್ಮದೇವಿ ದರ್ಶನ ಪಡೆಯಲು ದೇವಸ್ಥಾನದಲ್ಲಿ ಭಕ್ತರು ಸಾಲುಗಟ್ಟಿ ನಿಂತು ಕಾಯಿ ಕರ್ಪೂರ ಮತ್ತು ಕಾಣಿಕೆ ಸಲ್ಲಿಸಿ ಮಂಗಳ ಆರತಿ ಪಡೆಯುತ್ತಿದ್ದ ದೃಶ್ಯ ಕಂಡು ಬಂತು. ಜಾತ್ರೆಯ ಹಿಂದಿನ ದಿನ ರಾತ್ರಿ ಚಳಿ ಲೆಕ್ಕಿಸದೆ ಹೂವಿನ ಅಡ್ಡಪಲ್ಲಕ್ಕಿ ಉತ್ಸವವನ್ನು ಭಕ್ತರೆಲ್ಲರೂ ಭಕ್ತಿ ಭಾವದಿಂದ ಆಚರಿಸಿದರು.

ಮುಖ್ಯ ರಸ್ತೆ ಸಂಪೂರ್ಣ ಬಂದ್: ರಥೋತ್ಸವದ ಅಂಗವಾಗಿ ಪಟ್ಟಣದ ಡಾ.ರಾಜ್‌ಕುಮಾರ್‌ ಮುಖ್ಯ ರಸ್ತೆಯಲ್ಲಿ ಬೃಹತ್ ಪರಸಿ ನಡೆಯುವದರಿಂದ ಸುಮಾರು ಒಂದು ವಾರ ಕಾಲ ಮುಖ್ಯ ರಸ್ತೆ ಸಂಪೂರ್ಣ ಬಂದ್ ಆಗುತ್ತದೆ. ರಸ್ತೆ ಇಕ್ಕೆಲಗಳಲ್ಲಿ ಬಳೆ, ಮಿಠಾಯಿ ಇತ್ಯಾದಿ ನೂರಾರು ಅಂಗಡಿಗಳು ತಾತ್ಕಾಲಿಕವಾಗಿ ತಾಳ ಊರಲಿದ್ದು, ಭರ್ಜರಿ ವ್ಯಾಪಾರ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT