ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವಳಿದ ಬಸವರಾಜಪುರ ಕೆರೆ

Last Updated 22 ಜುಲೈ 2012, 6:40 IST
ಅಕ್ಷರ ಗಾತ್ರ

ಕೆ.ಆರ್.ನಗರ: ತಾಲ್ಲೂಕಿನ ಬಸವರಾಜಪುರ ಮತ್ತು ಲಾಳಂದೇವನಹಳ್ಳಿ ಗ್ರಾಮಸ್ಥರ ಜೀವನಾಡಿಯಾಗಿದ್ದ ಬಸವರಾಜಪುರ ಕೆರೆ ಈಗ ಪಳೆಯುಳಿಕೆಯಂತಾಗಿದೆ. ಸ್ಥಳೀಯ ಜನಪ್ರತಿನಿಧಿ ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಈ ಜಲಮೂಲ ಇಂದು ಬತ್ತಿಹೋಗಿದೆ.

ಕೆ.ಆರ್.ನಗರ ತಾಲ್ಲೂಕು ಕೇಂದ್ರದಿಂದ 6 ಕಿ.ಮೀ. ದೂರವಿರುವ ಈ ಕೆರೆ 4 ಎಕೆರೆಗೂ ಹೆಚ್ಚು ವಿಸ್ತೀರ್ಣ ಹೊಂದಿದೆ. ಕೆಲವೇ ಕೆಲವು ವರ್ಷಗಳ ಹಿಂದೆ ಸಿಹಿ ನೀರಿನಿಂದ ತುಂಬಿರುತ್ತಿತ್ತು. ಗ್ರಾಮಸ್ಥರು ಕುಡಿಯಲು ಈ ಕೆರೆಯ ನೀರನ್ನೇ ಬಳಸುತಿದ್ದರು. ಅಲ್ಲದೇ ರೈತರ ಕೃಷಿ ಕಾರ್ಯಕ್ಕೆ, ದನಕರುಗಳಿಗೆ ಈ ಕೆರೆಯೇ ಮೂಲಾಧಾರವಾಗಿತ್ತು. ಕೆರೆಯಲ್ಲಿ ಮೀನು ಸಾಕಾಣಿಕೆ ಕೂಡ ಮಾಡಲಾಗಿತ್ತು. ಇದರಿಂದಾಗಿ ಬಸವರಾಜಪುರ ಮತ್ತು ಲಾಳಂದೇವನಹಳ್ಳಿ ಗ್ರಾಮಸ್ಥರಿಗೆ ಕುಡಿಯುವ ನೀರು, ಆಹಾರಕ್ಕೂ ಈ ಕೆರೆ ಸಹಕಾರಿಯಾಗಿತ್ತು.

ಸರಿಯಾದ ನಿರ್ವಹಣೆ ಇಲ್ಲದ್ದರಿಂದ ಕೆರೆ ದಿನದಿಂದ ದಿನಕ್ಕೆ ದಯನೀಯ ಸ್ಥಿತಿ ತಲುಪಿತು. ಇದನ್ನು ನೋಡಿಕೊಂಡೂ ಗ್ರಾಮದ ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ಕಣ್ಮುಚ್ಚಿ ಕುಳಿತುಕೊಂಡರು. ಈಗ ಕೆರೆಯ ಮಧ್ಯಭಾಗದಲ್ಲೇ ರಸ್ತೆ ಮಾಡಿದ್ದರಿಂದ ಕೆರೆ ಎರಡು ಭಾಗವಾಗಿದೆ. ಎಲ್ಲೆಂದರಲ್ಲಿ ಗಿಡಗಂಟಿಗಳು, ಹುಲ್ಲು, ಜೊಂಡು ಬೆಳೆದುಕೊಂಡಿದೆ. ಇದರೊಂದಿಗೆ ಬಸವರಾಜಪುರ ಮತ್ತು ಲಾಳಂದೇವನಹಳ್ಳಿ ಗ್ರಾಮದ ಸುಮಾರು 2 ಸಾವಿರಕ್ಕೂ ಹೆಚ್ಚು ರೈತರು ಹಾಗೂ ದನಕರುಗಳು ನೀರಿಗಾಗಿ ಪರಿತಪಿಸುವಂತಾಗಿದೆ.

ರಸ್ತೆಗೆ ಹೊಂದಿಕೊಂಡಂತೆ ಇರುವ ಕೆರೆಯ ಎರಡೂ ಬದಿಯಲ್ಲಿ ಆವರಣವನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ. ಒತ್ತುವರಿ ತೆರವು ಮಾಡಲು ಕೆರೆ ಪ್ರದೇಶ ಸರ್ವೆ ಮಾಡಿ ಸುತ್ತಳತೆ ಗುರುತಿಸಬೇಕು. ಕೆರೆಯ ಸುತ್ತ ಕಲ್ಲಿನ ಗೋಡೆ ಕಟ್ಟಬೇಕು. ಸೋಪಾನ ಕಟ್ಟೆ ನಿರ್ಮಿಸಬೇಕು. ಕೆರೆಯಲ್ಲಿನ ಹೂಳು ತೆಗೆಸಿ ಕಾಲುವೆಗಳ ಮೂಲಕ ಕೆರೆಗೆ ನೀರು ಹರಿದು ಬರುವಂತೆ ಮಾಡಬೇಕು. ಜಿಲ್ಲಾಡಳಿತ ಈಗ ಕೆರೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುತ್ತಿದೆ. ಇದರೊಂದಿಗೆ ಬಸವರಾಜಪುರದ ಕೆರೆಗೂ ಕಾಯಕಲ್ಪ ಕೂಡಿಬರುವುದೇ ಎಂಬ ನಿರೀಕ್ಷೆಯನ್ನು ಗ್ರಾಮಸ್ಥರು ವ್ಯಕ್ತಪಡಿಸುತ್ತಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT