ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಂಗ್ಲಾದೇಶ: 'ಮೀರ್ ಪುರ ಕೊಲೆಗಡುಕ' ಮುಲ್ಲಾಗೆ ಮರಣದಂಡನೆ

Last Updated 17 ಸೆಪ್ಟೆಂಬರ್ 2013, 12:57 IST
ಅಕ್ಷರ ಗಾತ್ರ

ಢಾಕಾ (ಪಿಟಿಐ): 'ಮೀರ್ ಪುರ ಕೊಲೆಗಡುಕ' ಎಂದೇ ಕುಖ್ಯಾತನಾಗಿದ್ದ ಮೂಲಭೂತವಾದಿ ಜಮಾತ್ -ಇ- ಇಸ್ಲಾಂ ನಾಯಕ ಅಬ್ದುಲ್ ಖಾದರ್ ಮುಲ್ಲಾಗೆ ಬಾಂಗ್ಲಾದೇಶ ಸುಪ್ರೀಂಕೋರ್ಟ್ ಮಂಗಳವಾರ 1971ರ ಯುದ್ಧಾಪರಾಧಗಳಿಗಾಗಿ ಮರಣದಂಡನೆ ವಿಧಿಸಿತು. ವಿಶೇಷ ಟ್ರಿಬ್ಯುನಲ್ ಜೀವಾವಧಿ ಶಿಕ್ಷೆ ವಿಧಿಸಿದ ಎಂಟು ತಿಂಗಳುಗಳ ಬಳಿಕ ಸುಪ್ರೀಂಕೋರ್ಟ್ ಈ ತೀರ್ಪು ನೀಡಿದೆ.

1971ರ ಪಾಕಿಸ್ತಾನ ವಿರೋಧಿ ವಿಮೋಚನಾ ಸಮರ ಕಾಲದಲ್ಲಿ ಮಾನವೀಯತೆ ವಿರೋಧಿ ಅಪರಾಧಗಳನ್ನು ಎಸಗಿದ್ದಕ್ಕಾಗಿ ನಡೆದ ಮೊದಲ ಮರುಪರಿಶೀಲನಾ ಪ್ರಕರಣದಲ್ಲಿ 'ತಪ್ಪಿತಸ್ಥ' ಎಂಬುದಾಗಿ ಘೋಷಿತರಾಗಿ ಸುಪ್ರೀಂಕೋರ್ಟಿನಿಂದ ಮರಣದಂಡನೆಗೆ ಒಳಗಾಗಿರುವ ಮೊತ್ತ ಮೊದಲ ರಾಜಕಾರಣಿ ಇವರಾಗಿದ್ದಾರೆ.

65ರ ಹರೆಯದ ಮುಲ್ಲಾ ತಪ್ಪಿತಸ್ಥ ಎಂಬುದಾಗಿ ಘೋಷಣೆಯಾದ ಜಮಾತ್ ನ ನಾಲ್ಕನೇ ಉನ್ನತ ನಾಯಕನಾಗಿದ್ದು, ಎಲ್ಲಾ ಆರೋಪಗಳಿಂದ ಮುಕ್ತಿ ನೀಡುವಂತೆ ಮಾಡಿದ್ದ ಮನವಿಯನ್ನು ಮುಖ್ಯ ನ್ಯಾಯಮೂರ್ತಿ ಎಂ. ಮುಝಾಮ್ಮೆಲ್ ಹುಸೇನ್ ನೇತೃತ್ವದ ಪೀಠವು ತಳ್ಳಿ ಹಾಕಿತು.

ಎರಡು ಮೇಲ್ಮನವಿಗಳನ್ನು ಪರಿಶೀಲಿಸಿದ ಉನ್ನತ ಮೇಲ್ಮನವಿ ನ್ಯಾಯಾಲಯಗಳಲ್ಲಿ ಒಂದಾದ ಅಂತರರಾಷ್ಟ್ರೀಯ ಅಪರಾಧಗಳ ಟ್ರಿಬ್ಯೂನಲ್ 4-1 ಬಹುಮತದಿಂದ ಜಮಾತ್ ಧುರೀಣನಿಗೆ ಮರಣದಂಡನೆ ವಿಧಿಸಿ ತೀರ್ಪು ನೀಡಿತು.

2010ರ ಜುಲೈ 13ರಂದು ಮುಲ್ಲಾ ಬಂಧನವಾಗಿತ್ತು. ಆರು ನಿರ್ದಿಷ್ಟ ಆಪಾದನೆಗಳಿಗೆ ಸಂಬಂಧಿಸಿದಂತೆ 2012ರ ಮೇ 28ರಂದು ಟ್ರಿಬ್ಯೂನಲ್ ಅವರನ್ನು ತಪ್ಪಿತಸ್ಥ ಎಂದು ತೀರ್ಮಾನಿಸಿತ್ತು. ಶಸ್ತ್ರಾಸ್ತ್ರ ರಹಿತ ನಾಗರಿಕರ ಮೇಲೆ ನಡೆಸಿದ ದಾಳಿಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡ, ಅನುಕೂಲ ಮಾಡಿಕೊಟ್ಟ, ನೆರವು ನೀಡುವ ಮೂಲಕ ಜನಾಂಗಹತ್ಯೆಗಳು, ಕೊಲೆಗಳು ಮತ್ತು ಅತ್ಯಾಚಾರಗಳಿಗೆ ಕಾರಣರಾದ ಆರೋಪಗಳಿಗಾಗಿ ಅವರನ್ನು ಶಿಕ್ಷೆಗೆ ಗುರಿ ಮಾಡಲಾಗಿತ್ತು.

ವಿಶೇಷ ಟ್ರಿಬ್ಯೂನಲ್ ತೀರ್ಪನ್ನು ವಿರೋಧಿಸಿ ರಾಷ್ಟ್ರವ್ಯಾಪಿ 48 ಗಂಟೆಗಳ ಹರತಾಳಕ್ಕೆ ಜಮಾತ್ -ಇ- ಇಸ್ಲಾಮಿ ಕರೆ ನೀಡಿತ್ತು.  ಇದನ್ನು 'ತಪ್ಪು ತೀರ್ಪು' ಮತ್ತು 'ಜಮಾತ್ ನಾಯಕರನ್ನು ಕೊಲ್ಲಲು ನಡೆಯುತ್ತಿರುವ ಸರ್ಕಾರಿ ಪ್ರೇರಿತ ಸಂಚು' ಎಂದೂ ಅದು ಟೀಕಿಸಿತ್ತು.

ರಾಜಧಾನಿ ಸೇರಿದಂತೆ ಬಾಂಗ್ಲಾದ್ಯಂತ ನಡೆದ ಪ್ರತಿಭಟನೆಗಳಲ್ಲಿ ನಾಲ್ವರು ಪೊಲೀಸರು ಸೇರಿದಂತೆ 30 ಮಂದಿ ಗಾಯಗೊಂಡಿದ್ದರು.
ಇದಕ್ಕೆ ಮುನ್ನ ಸಾಕ್ಷ್ಯ ನೀಡಿದ್ದ ಸಾಕ್ಷಿಗಳು ಮೀರ್ ಪುರ ಸೇರಿದಂತೆ ಹಲವಾರು ಕಡೆಗಳಲ್ಲಿ ಹಲವಾರು ಕುಟುಂಬಗಳ ಕಗ್ಗೊಲೆಗೆ ಮುಲ್ಲಾ ಕಾರಣರಾಗಿದ್ದುದನ್ನು ವಿವರಿಸಿದ್ದರು.

ಮೀರ್ ಪುರದಲ್ಲಿ ಕುಟುಂಬವೊಂದರ ಸದಸ್ಯರನ್ನು ಗುಂಡಿಟ್ಟು ಕೊಲ್ಲುತ್ತಿದ್ದ ಸಂದರ್ಭದಲ್ಲಿ ಮುಲ್ಲಾ ಕೊಲೆಗಡುಕರ ಗುಂಪು ಎರಡು ವರ್ಷದ ಮಗುವೊಂದನ್ನೂ ಗುಂಡು ಹಾರಿಸಿ ಕೊಂದಿತ್ತು. ಈ ಕಗ್ಗೊಲೆಯಿಂದಾಗಿ ಬಾಂಗ್ಲಾದೇಶದಲ್ಲಿ 'ಮೀರ್ ಪುರ ಕೊಲೆಗಡುಕ' ಎಂಬ ಕುಖ್ಯಾತಿ ಮುಲ್ಲಾಗೆ ಅಂಟಿಕೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT